More

    ಕಿಡಿಗೇಡಿತನಕ್ಕೆ ಆಕ್ರೋಶ: ರಾಜ್ಯದ ವಾಹನಗಳ ಮೇಲೆ ಕಲ್ಲು ತೂರಾಟ, ಕನ್ನಡ ಸಂಘಟನೆಗಳ ಖಂಡನೆ; ಬೆಳಗಾವಿಯಲ್ಲಿ ಎಂಇಎಸ್, ಶಿವಸೇನೆ ದುಷ್ಕೃತ್ಯ

    ಬೆಳಗಾವಿ: ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಸಮಯದಲ್ಲೇ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಹಾಗೂ ಶಿವಸೇನೆಯ ಕೆಲ ಕಾರ್ಯಕರ್ತರು ಪುಂಡಾಟ ನಡೆಸಿದ್ದು, ಗಡಿನಾಡು ಉದ್ವಿಗ್ನಗೊಂಡಿದೆ. ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸಗೊಳಿಸಿದ ಎಂಇಎಸ್ ಬೆಂಬಲಿಗರು, ಕರ್ನಾಟಕದ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಕೃತ್ಯಕ್ಕೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಕರ್ಪ್ಯೂ ಹೇರಲಾಗಿದೆ.

    ಬೆಂಗಳೂರಿನಲ್ಲಿ ಶಿವಾಜಿ ಪುತ್ಥಳಿಗೆ ಮಸಿ ಬಳಿದ ಘಟನೆಯನ್ನು ಖಂಡಿಸಿ, ಎಂಇಎಸ್ ಹಾಗೂ ಶಿವಸೇನೆ ಕೆಲ ಬೆಂಬಲಿಗರು ಶುಕ್ರವಾರ ತಡರಾತ್ರಿ 11.30ರಿಂದ 2.30ರವರೆಗೆ ಏಕಾಏಕಿ ಪ್ರತಿಭಟನೆ ನಡೆಸಿದರು. ಬೆಳಗಾವಿ ಅಧಿವೇಶನಕ್ಕೆ ಬಂದಿರುವ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ವಾಹನಗಳು, ಪೊಲೀಸ್ ಇಲಾಖೆ ವಾಹನಗಳ ಮೇಲೆ ಕಲ್ಲುತೂರಾಟ ನಡೆಸಿ, ಪರಾರಿಯಾದರು.

    ಶನಿವಾರ ಬೆಳಗಿನ ಜಾವ ಎಂಇಎಸ್-ಶಿವಸೇನೆಯ ಕಿಡಿಗೇಡಿಗಳು ಬೆಳಗಾವಿಯ ಅನಗೋಳದ ಕನಕದಾಸ ಕಾಲನಿಯಲ್ಲಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನಗೊಳಿಸಿದರು. ರಾಯಣ್ಣನ ಎಡಗೈಯಲ್ಲಿದ್ದ ಗುರಾಣಿ, ಬಲಗೈಯಲ್ಲಿದ್ದ ಖಡ್ಗ ತುಂಡರಿಸಿ, ಮುಖ ವಿರೂಪಗೊಳಿಸಿದರು. ಸುಳಗಾ ಸಂಭಾಜಿ ಗಲ್ಲಿಯಲ್ಲಿರುವ ಸಂಗೊಳ್ಳಿ ರಾಯಣ್ಣ ಹೆಸರಿನ ನಾಮಫಲಕಕ್ಕೆ ಕಪ್ಪುಬಣ್ಣ ಎರಚಿದರು. ಈ ಸುದ್ದಿ ಹರಡುತ್ತಿದ್ದಂತೆ ಉದ್ವಿಗ್ನ ವಾತಾವರಣ ನಿರ್ವಣವಾಯಿತು.

    ಕರ್ನಾಟಕದ ವಾಹನಗಳಿಗೆ ಮಸಿ: ಮಹಾರಾಷ್ಟ್ರದಲ್ಲಿಯೂ ಎಂಇಎಸ್ ಹಾಗೂ ಶಿವಸೇನೆ ಕಾರ್ಯಕರ್ತರು ಕಿಡಿಗೇಡಿತನ ತೋರಿದ್ದು, ಮಹಾರಾಷ್ಟ್ರದಲ್ಲಿ ಸಂಚರಿಸುತ್ತಿದ್ದ ಬೆಳಗಾವಿ ಪಾಸಿಂಗ್ (ಕೆಎ 22) ವಾಹನಗಳನ್ನು ತಡೆದು ಜೈ ಶಿವಾಜಿ, ಜೈ ಮಹಾರಾಷ್ಟ್ರ ಎಂಬುದಾಗಿ ಕೇಸರಿ ಬಣ್ಣದಲ್ಲಿ ವಾಹನಗಳ ಮುಂಭಾಗದ ಗ್ಲಾಸ್​ಗೆ ಬರೆದು ಬಿಡುತ್ತಿದ್ದಾರೆ. ಇದಕ್ಕೆ ಪ್ರತಿರೋಧ ಮಾಡುವ ವಾಹನ ಚಾಲಕರಿಗೆ ಹಲ್ಲೆ ಮಾಡಲೂ ಮುಂದಾಗುತ್ತಿದ್ದಾರೆ.

    ಗೃಹ ಇಲಾಖೆಗೆ ಎಚ್ಚರಿಕೆಯ ಗಂಟೆ: ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವುದರಿಂದ ರಾಜ್ಯ ಗುಪ್ತಚರ, ಅಪರಾಧ, ಕಾನೂನು ಸುವ್ಯವಸ್ಥೆ ಹಿರಿಯ ಅಧಿಕಾರಿಗಳು, ಎಡಿಜಿಪಿ ಸೇರಿ ಇಡೀ ಬಟಾಲಿಯನ್ ಡಿಸೆಂಬರ್ 12ರಿಂದ ಬೆಳಗಾವಿಯಲ್ಲಿಯೇ ಠಿಕಾಣಿ ಹೂಡಿದ್ದರೂ, ಈ ಘಟನೆ ತಡೆಯಲು ಏಕೆ ಸಾಧ್ಯವಾಗಲಿಲ್ಲ ಎಂದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಮೊಂಡುತನ ಪ್ರದರ್ಶಿಸುವ ದುಷ್ಕರ್ವಿುಗಳನ್ನು ಜೈಲಿಗೆ ಅಟ್ಟದಿದ್ದರೆ, ನಾಳೆ ಪೊಲೀಸ್ ಠಾಣೆಗಳ ಮೇಲೆ ಕಲ್ಲು ಎಸೆಯಬಹುದು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಕಠಿಣ ಕ್ರಮ ಕೈಗೊಂಡು ಬೆಳಗಾವಿ ನಗರವನ್ನು ಸಹಜ ಸ್ಥಿತಿಗೆ ತರಬೇಕು ಎಂದು ಕನ್ನಡಪರ ಸಂಘಟನೆಗಳು ಒತ್ತಾಯಿಸಿವೆ.

    ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಗದ್ದಲ ಸೃಷ್ಟಿಸಿ, ಭಾಷೆ-ಗಡಿ ಕುರಿತಾಗಿ ವಿಷಬೀಜ ಬಿತ್ತಿ ಕಾನೂನು ಸುವ್ಯವಸ್ಥೆ ಹದಗೆಡಿಸಲು ಎಂಇಎಸ್ ಪುಂಡರು ಯತ್ನ ನಡೆಸುತ್ತಿದ್ದಾರೆ ಎಂದು ಕನ್ನಡ ಸಂಘಟನೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಲ್ಲು ತೂರಾಟ ನಡೆಸಿದ, ಸಂಗೊಳ್ಳಿ ರಾಯಣ್ಣ ಮೂರ್ತಿ ಭಗ್ನಗೊಳಿಸಿದವರ ಮೇಲೆ ಕ್ರಮಕ್ಕೆ ಆಗ್ರಹಿಸಿ ಕನ್ನಡ ಸಂಘಟನೆಗಳು ವಿವಿಧೆಡೆ ಪ್ರತಿಭಟನೆಯನ್ನೂ ಆರಂಭಿಸಿವೆ.

    ಕೆಲವರು ಪುಂಡಾಟಿಕೆ ಮಾಡಿದ್ದಾರೆ. ಕರ್ನಾಟಕದ ಕಾನೂನು ಸುವ್ಯವಸ್ಥೆ ರಕ್ಷಣೆ ನಮ್ಮ ಜವಾಬ್ದಾರಿ. ಮಹಾರಾಷ್ಟ್ರದಲ್ಲಿರುವ ಕನ್ನಡಿಗರು, ರಾಜ್ಯದ ವಾಹನಗಳ ರಕ್ಷಣೆ ಕುರಿತು ಅಲ್ಲಿನ ಗೃಹ ಸಚಿವರು, ಪೊಲೀಸ್ ಮಹಾನಿರ್ದೇಶಕರ ಜತೆ ಮಾತುಕತೆ ನಡೆಸಲಾಗುತ್ತದೆ. ಮೊದಲು ಅಧಿಕಾರಿಗಳು ಮಾತನಾಡುತ್ತಾರೆ. ನಂತರ ಅಗತ್ಯ ಬಿದ್ದರೆ ಅಲ್ಲಿನ ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇನೆ.

    | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

    ಬೆಳಗಾವಿಯಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿ ಪುಂಡಾಟಿಕೆ ನಡೆಸಿರುವುದು ಖಂಡನೀಯ. ಇಂತಹ ದುಷ್ಕರ್ವಿುಗಳ ವಿರುದ್ಧ ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಪ್ರಚೋದನೆ, ಪುಂಡಾಟಿಕೆಗೆ ಅವಕಾಶ ನೀಡದೆ ಸರ್ಕಾರ ಎಚ್ಚರಿಕೆಯ ಹೆಜ್ಜೆಯನ್ನಿಡಬೇಕು.

    | ಬಿ.ಎಸ್.ಯಡಿಯೂರಪ್ಪ ಮಾಜಿ ಸಿಎಂ

    27 ಜನರ ಬಂಧನ: ಮೂರು ಪ್ರಕರಣಗಳನ್ನು ದಾಖಲಿಸಿರುವ ಪೊಲೀಸರು, ಈವರೆಗೆ ಎಂಇಎಸ್ ಮುಖಂಡ ಶುಭಂ ಸೆಳಕೆ, ರಮಾಕಾಂತ ಕೊಂಡುಸ್ಕರ್ ಸೇರಿ 27 ಜನರನ್ನು ಬಂಧಿಸಿದ್ದಾರೆ. ನ್ಯಾಯಾಲಯ ಅವರಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಹಿಂಡಲಗಾ ಜೈಲಿಗೆ ಕಳಿಸಿದೆ. ಇನ್ನುಳಿದವರ ಪತ್ತೆಗೆ ಜಾಲ ಬೀಸಿದ್ದಾರೆ. ನಿಷೇಧಾಜ್ಞೆ ನಡುವೆಯೂ ಶಿವಾಜಿ ಉದ್ಯಾನದ ಬಳಿ ಪ್ರತಿಭಟನೆಗೆ ಬಂದಿದ್ದ ಎಂಇಎಸ್ ಮುಖಂಡರಾದ ಶಿವಾಜಿ ಸುಂಟಕರ, ಪ್ರಕಾಶ ಶಿರೋಳಕರ ಸೇರಿ ಐವರನ್ನು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಕರ್ಫ್ಯೂ ಜಾರಿ, ಬಸ್ ಬಂದ್: ಬೆಳಗಾವಿ ನಗರ ಸೇರಿ ತಾಲೂಕಿನಾದ್ಯಂತ ಸೋಮವಾರ ಬೆಳಗಿನ 6ವರೆಗೆ ಕರ್ಫ್ಯೂ ಜಾರಿಗೊಳಿಸಲಾಗಿದೆ. ಪೊಲೀಸರು ಕೆಎಸ್​ಆರ್​ಪಿ ತುಕಡಿಗಳೊಂದಿಗೆ ಕಟ್ಟೆಚ್ಚರ ವಹಿಸಿದ್ದಾರೆ. ಕರ್ನಾಟಕ-ಮಹಾರಾಷ್ಟ್ರ ಮಧ್ಯೆ ಸಾರಿಗೆ ಬಸ್​ಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.

    ಕ್ರೂರ ಅಭಿಮಾನ: ಟಗರು ತಲೆ ಕಟ್ ಮಾಡಿ ಕಟೌಟ್​ಗೆ ನೇತು ಹಾಕಿದ್ರು ಅಲ್ಲು ಅರ್ಜುನ್ ಫ್ಯಾನ್ಸ್!

    ಒಂದೇ ವಾರದಲ್ಲಿ ಮತ್ತೆ 30 ದೇಶಗಳಿಗೆ ವ್ಯಾಪಿಸಿದ ಒಮಿಕ್ರಾನ್​, ಮೂರೇ ದಿನಗಳೊಳಗೆ ದುಪ್ಪಟ್ಟಾಗುತ್ತಿರುವ ಸೋಂಕು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts