More

    ಕಾಪು ಪಿಲಿ ಕೋಲ ಸಂಪನ್ನ : ದೈವ ನರ್ತಕನ ಪ್ರಥಮ ಸೇವೆ : ಸಾವಿರಾರು ಭಕ್ತರು ಭಾಗಿ

    ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

    ಕಾಪು ಪಡುಗ್ರಾಮದ ಶ್ರೀ ಬ್ರಹ್ಮಮುಗ್ಗೇರ್ಕಳ ಹುಲಿಚಂಡಿ ದೈವಸ್ಥಾನದಲ್ಲಿ ದ್ವೈವಾರ್ಷಿಕವಾಗಿ ನಡೆಯುವ ಪಿಲಿಕೋಲ ಸಾವಿರಾರು ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ಶನಿವಾರ ಸಂಪನ್ನಗೊಂಡಿತು.

    ಪಿಲಿಕೋಲಕ್ಕೆ ಪೂರ್ವಭಾವಿಯಾಗಿ ಏ.30ರಿಂದ ಬಬ್ಬರ್ಯ, ಕೊಡಮಣಿತ್ತಾಯ, ನಂದಿಕೇಶ್ವರ, ಪಿದಾಯಿ ಪಿಲ್ಚಂಡಿ, ಬ್ರಹ್ಮರ ನೇಮ, ಮುಗ್ಗೇರ್ಕಳ ಮತ್ತು ಶಕ್ತಿ ಸ್ವರೂಪಿಣಿ ತನ್ನಿಮಾನಿಗ, ಮದುಮಗ ಹಾಗೂ ಪರಿವಾರ ದೈವಗಳ ನೇಮ, ಉರಿ ಚೌಂಡಿ ದೈವ, ಕಡುಂಜಿ ಬಂಟ, ಗುಳಿದ ದೈವದ ನೇಮ ಹಾಗೂ ಬಂಕಿನಾಯಕ, ಪೊಲೀಸ್ ಮತ್ತು ಪಠೇಲ್, ಬಲಾಯಿಮಾರ, ತಿಗಮಾರ, ಪುರುಷ ಕೋಲ ಸಹಿತ ಪರಿವಾರ ದೈವಗಳ ನೇಮೋತ್ಸವ. ಶನಿವಾರ ಮಧ್ಯಾಹ್ನ ಹುಲಿಚಂಡಿ ದೈವದ ನೇಮ(ಕಾಪುದ ಪಿಲಿ ಕೋಲ) ನಡೆಯಿತು.

    ನೇಮದ ಪ್ರಯುಕ್ತ ಬೆಳಗ್ಗೆ ಪಿಲಿಭೂತದ ನರ್ತಕನಿಗೆ ಎಣ್ಣೆ ವೀಳ್ಯ ನೀಡಿ, ಬಳಿಕ ಊರವರು ಜತೆ ಸೇರಿ ಸ್ನಾನಕ್ಕೆ ಕರೆದೊಯ್ಯಲಾಯಿತು. ಬಳಿಕ ದೈವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ, ಕಾಪು ಬೈರುಗುತ್ತಿನಾರ್ ಮೂಲಕ ಸಂಪ್ರದಾಯದಂತೆ ಹುಲಿಚಂಡಿ ದೈವಕ್ಕೆ ಗಂಡು ಕರುವನ್ನು ಬಂಟ ರೂಪದಲ್ಲಿ ಸಲ್ಲಿಸಿ, ಬಣ್ಣಗಾರಿಕೆಗಾಗಿ ದೈವ ನರ್ತಕನನ್ನು ಪಂಜರದೊಳಗೆ ಕಳುಹಿಸಿ ಕೊಡಲಾಯಿತು.

    ಸುಮಾರು ಎರಡು ಗಂಟೆಯ ಬಣ್ಣಗಾರಿಕೆ ಹಾಗೂ ವಿಧಿವಿಧಾನ ಬಳಿಕ ಹುಲಿಚಂಡಿ ದೈವ ಆವೇಶಭರಿತವಾಗಿ ಅಬ್ಬರದೊಂದಿಗೆ ಪಂಜರದೊಳಗಿಂದ ಹೊರಗೆ ಬರುವ ಮೂಲಕ ಪಿಲಿಕೋಲ ಆರಂಭಗೊಂಡಿತು. ಪಂಜರದೊಳಗಿಂದ ಹೊರ ಬಂದ ಹುಲಿಚಂಡಿ ದೈವ ಬ್ರಹ್ಮರ ಗುಂಡಕ್ಕೆ ಮೂರು ಸುತ್ತು ಪ್ರದಕ್ಷಿಣೆ ಬಂದ ಬಳಿಕ, ಹಳೆಮಾರಿಯಮ್ಮ ಗುಡಿಯ ಮುಂಭಾಗದಲ್ಲಿ ನೆಡಲಾಗುವ ಬಂಟ ಕಂಬವನ್ನೇರಿ ಜೀವಂತ ಕೋಳಿ ಬಲಿಯಾಗಿ ಸ್ವೀಕರಿಸಿ ಮುಂದೆ ಗ್ರಾಮ ಭೇಟಿಗೆ ತೆರಳಿತು. ಪಿಲಿ ಕೋಲ ಸಂಚಾರದ ವೇಳೆ ಹುಲಿ ಕೈಗೆ ಸಿಗುವುದರಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ನೆರೆದಿರುವ ಭಕ್ತರು ಚದುರಿ ಓಡುತ್ತಿರುವುದು ಕಂಡು ಬಂತು.

    ಸಂಪ್ರದಾಯಬದ್ಧ ಆಚರಣೆ

    ದ್ವೈವಾರ್ಷಿಕವಾಗಿ ನಡೆಯುವ ಪಿಲಿಕೋಲವನ್ನು ಈ ಬಾರಿ ಹಿಂದಿಗಿಂತಲೂ ಹೆಚ್ಚಿನ ಭಕ್ತರು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ವಿವಿಧೆಡೆ ಸಾಲುಗಟ್ಟಿ ನಿಂತು ವೀಕ್ಷಿಸಿದರು. ಕಾಪು ಪಡು ಗ್ರಾಮದ ಭೈರುಗುತ್ತು, ದೊರೆಗಳಗುತ್ತು, ಅಯೋಧ್ಯಾ ಮನೆ, ಮಾತೃಛಾಯ ಮನೆ, ಸಾನದಮನೆ, ಗರಡಿಮನೆ, ಪಿಲಿಚಂಡಿ ಮನೆ ಸಹಿತವಾಗಿ 16 ಕಾಣಿಕೆ ಮನೆತನದರು, ಆರಾಧಕರಾದ ಮಾರ ಗುರಿಕಾರ ವರ್ಗದವರು, ಸರ್ಕಾರದ ಪ್ರತಿನಿಧಿಗಳು ಪಿಲಿಕೋಲಕ್ಕೆ ಸಂಬಂಧಪಟ್ಟ ಧಾರ್ಮಿಕ ಮತ್ತು ಜನಪದ ಸಂಪ್ರದಾಯಬದ್ಧ ಆಚರಣೆಯ ವೇಳೆ ಉಪಸ್ಥಿತರಿದ್ದರು. ತಹಸೀಲ್ದಾರ್ ಪ್ರತಿಭಾ, ಉಪತಹಸೀಲ್ದಾರ್ ದೇವಕಿ, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಕಾಪು ಮಹತೋಭಾರ ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ಅರುಣ್ ಕುಮಾರ್ ಬಿ.ಕೆ. ಪ್ರಮುಖರು ಪಾಲ್ಗೊಂಡಿದ್ದರು.

    ಹೊಸ ತಲೆಮಾರಿನ ಸೇವೆ

    ಹಳೇ ಮಾರಿಯಮ್ಮ ದೇವಿಯ ಸನ್ನಿಧಿಯಲ್ಲಿ ನಿರ್ಧರಿಸಿದಂತೆ ಈ ಹಿಂದೆ ದೈವನರ್ತಕರಾಗಿದ್ದ ಗುಡ್ಡ ಪಾಣಾರ ಅವರ ಪುತ್ರ ಸುಧಾಕರ್ ಪಿಲಿಕೋಲದ ಪ್ರಥಮ ಸೇವೆ ಸಲ್ಲಿಸಿದರು. ಪಿಲಿಕೋಲಕ್ಕೆ ಮೊದಲ ಮಂಗಳವಾರ ಕಾಪುವಿನ ಮೂರೂ ಮಾರಿಗುಡಿಗಳಲ್ಲಿ ಪಿಲಿ ಕೋಲ ಕಟ್ಟಲು ಅವರಿಗೆ ಮಾರಿಯಮ್ಮ ದೇವಿಯ ಅಭಯ ಪ್ರಸಾದ ದೊರಕಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts