More

    ಬೇಸಿಗೆ ಕಾವು, ನೀರಿಗೆ ತ್ರಾಸ

    ಬಿ.ರಾಘವೇಂದ್ರ ಪೈ ಗಂಗೊಳ್ಳಿ

    ಬೇಸಿಗೆ ಕಾವು ಹೆಚ್ಚುತ್ತಿದ್ದಂತೆ ನೀರಿನ ಅಭಾವದ ಭೀಕರತೆಯೂ ಹೆಚ್ಚುತ್ತಿದೆ. ಕೆರೆ, ಬಾವಿಗಳು ಬತ್ತುತ್ತಿದ್ದು, ಬೋರ್‌ವೆಲ್‌ಗಳಲ್ಲಿ ನೀರಿನ ಕೊರತೆ ಕಂಡುಬರುತ್ತಿದೆ. ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ನೀರಿನ ಬವಣೆ ಬಿಗಡಾಯಿಸುತ್ತಿದೆ. ಈಗಾಗಲೇ ಉಭಯ ತಾಲೂಕಿನ 8 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ಮನೆಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ.

    ಕುಂದಾಪುರ ತಾಲೂಕಿನ 7 ಗ್ರಾಮಗಳ 388 ಕುಟುಂಬಗಳಿಗೆ ಹಾಗೂ ಬೈಂದೂರು ತಾಲೂಕಿನ ಒಂದು ಗ್ರಾಮದ 50ಕ್ಕೂ ಮಿಕ್ಕಿ ಮನೆಗಳಿಗೆ ಟ್ಯಾಂಕರ್ ಎರಡು ದಿನಕ್ಕೊಮ್ಮೆ ಮೂಲಕ ನೀರು ಪೂರೈಸಲಾಗುತ್ತಿದೆ. ಎರಡೂ ತಾಲೂಕುಗಳಲ್ಲಿ 25ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಉಲ್ಬಣಗೊಳ್ಳುವ ಸಾಧ್ಯತೆಯಿದೆ.

    ಕುಂದಾಪುರ ತಾಲೂಕಿನ 69 ಗ್ರಾಮಗಳ ಪೈಕಿ 21 ಗ್ರಾಮಗಳಲ್ಲಿ ಈಗಾಗಲೇ ನೀರಿನ ಸಮಸ್ಯೆ ಆರಂಭಗೊಂಡಿದೆ. ಈ ಪೈಕಿ ಯಡಮೊಗೆ, ಸಿದ್ದಾಪುರ, ಶಂಕರನಾರಾಯಣ, ಕರ್ಕುಂಜೆ, ಅಂಪಾರು, ಗುಜ್ಜಾಡಿ ಹಾಗೂ ಕಮಲಶಿಲೆ ಗ್ರಾಮಗಳಲ್ಲಿ ಟ್ಯಾಂಕರ್ ನೀರು ಪೂರೈಸಲಾಗುತ್ತಿದೆ. ಇದಲ್ಲದೆ ಅಮಾಸೆಬೈಲು, ಕೆದೂರು, ಕೊರ್ಗಿ, 76 ಹಾಲಾಡಿ, ಆಜ್ರಿ, ಕೊಡ್ಲಾಡಿ, ಕೆರಾಡಿ, ಬೆಳ್ಳಾಲ, ವಂಡ್ಸೆ, ಕುಂದಬಾರಂದಾಡಿ, ನೂಜಾಡಿ, ಹಕ್ಲಾಡಿ, ಹೆಮ್ಮಾಡಿ, ಹೊಸಂಗಡಿ ಗ್ರಾಮಗಳಲ್ಲಿಯೂ ನೀರಿನ ಸಮಸ್ಯೆಯಿದ್ದು, ಸ್ಥಳೀಯವಾಗಿ ಪಂಚಾಯಿತಿಗಳು ನೀರು ಒದಗಿಸಲು ಪ್ರಯತ್ನಿಸುತ್ತಿದೆ.

    ಪರ್ಯಾಯ ವ್ಯವಸ್ಥೆ ಇಲ್ಲ

    ಬೈಂದೂರು ತಾಲೂಕಿನ 15 ಗ್ರಾಪಂಗಳ ಪೈಕಿ ಉಪ್ಪುಂದ ಗ್ರಾಮದ ಒಂದು ವಾರ್ಡ್‌ನಲ್ಲಿ ಟ್ಯಾಂಕರ್ ನೀರು ಕೊಡಲಾಗುತ್ತಿದೆ. ಇದನ್ನು ಹೊರತುಪಡಿಸಿದರೆ ಗೋಳಿಹೊಳೆ, ಶಿರೂರು, ಬಿಜೂರು, ಕೆರ್ಗಾಲು, ಮರವಂತೆ, ನಾವುಂದ ಗ್ರಾಪಂ ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ. ಇಲ್ಲಿನ ಪಂಚಾಯಿತಿ ಅಧೀನದ ನೀರಿನ ಮೂಲಗಳು ಬರಿದಾಗುತ್ತಿದ್ದು, ನಳ್ಳಿ ನೀರು ಮೂಲಕ ನೀರು ಪೂರೈಕೆಗೆ ಪರ್ಯಾಯ ವ್ಯವಸ್ಥೆ ಇಲ್ಲ. ಒಟ್ಟಾರೆ 15 ಗ್ರಾಪಂನ 22 ಗ್ರಾಮಗಳ 244 ವಸತಿ ಪ್ರದೇಶಗಳಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ.

    ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ 7 ಗ್ರಾಮಗಳ 388 ಕುಟುಂಬಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಇದಲ್ಲದೆ ಇನ್ನೂ 14 ಕಡೆಗಳಲ್ಲಿ ಪಂಚಾಯಿತಿಯಿಂದಲೇ ಪೂರೈಕೆ ಮಾಡಲಾಗುತ್ತಿದೆ. ಟ್ಯಾಂಕರ್ ನೀರಿನ ಬೇಡಿಕೆ ಇರುವ ಕಡೆಗಳಲ್ಲಿ ಟೆಂಡರ್ ಕರೆದು ವ್ಯವಸ್ಥೆ ಮಾಡಲಾಗಿದೆ. ಸಮಸ್ಯೆಯಾಗದಂತೆ ಎಲ್ಲ ರೀತಿಯಿಂದಲೂ ಸಾಧ್ಯವಾದಷ್ಟು ನೀರಿನ ಪೂರೈಕೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ.
    – ಕೆ.ಜಿ.ಶಶಿಧರ, ಕುಂದಾಪುರ ತಾಪಂ ಕಾರ್ಯನಿರ್ವಾಹಣಾಧಿಕಾರಿ

    ಬೈಂದೂರು ತಾಲೂಕಿನ ಒಂದು ಗ್ರಾಮದ ಒಂದು ವಾರ್ಡ್‌ನಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಎಲ್ಲ 15 ಗ್ರಾಪಂಗಳಲ್ಲಿ ಮಾಹಿತಿ ತರಿಸಿಕೊಳ್ಳಲಾಗಿದೆ. ನೀರಿನ ಬೇಡಿಕೆ ಇರಬಹುದಾದ ಕಡೆಗಳಲ್ಲಿ ಟೆಂಡರ್ ಕರೆಯಲಾಗಿದೆ. ಅಗತ್ಯವಿದ್ದರೆ ಟ್ಯಾಂಕರ್ ಮೂಲಕ ನೀರು ಕೊಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಪಂಚಾಯಿತಿಗಳಿಗೆ ಸ್ಥಳೀಯವಾಗಿ ಖಾಸಗಿ ಬಾವಿ, ಬೋರ್‌ವೆಲ್ ಗುರುತಿಸಲು ತಿಳಿಸಲಾಗಿದೆ.
    – ಆನಂದ ಎಸ್.ಬಡಕುಂದಿ, ಬೈಂದೂರು ತಾಪಂ ಕಾರ್ಯನಿರ್ವಾಹಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts