More

    ಹೆಗ್ಗೇರಿ ಕೆರೆಯಲ್ಲಿ ನೀರು ಗೊರವ ಹಕ್ಕಿಗಳ ಕಲರವ; ಕಣ್ಮನ ಸೆಳೆಯುತ್ತಿದೆ ಪಕ್ಷಿಗಳ ದೃಶ್ಯ

    ಹಾವೇರಿ: ಹೆಗ್ಗೇರಿ ಕೆರೆಯ ನೀರನ್ನು ಹಾವೇರಿ ನಗರದ ಜನತೆಯ ಬಳಕೆಗೆ ಬಳಕೆ ಮಾಡುತ್ತಿರುವ ಕಾರಣ ಕೆರೆಯ ನೀರು ದಿನದಿಂದ ದಿನಕ್ಕೆ ಬರಿದಾಗುತ್ತಿದೆ. ನೀರು ಕಡಿಮೆ ಇರುವ ಕಾರಣ ಕೆರೆಯಲ್ಲಿ ಜಲಚರಗಳು, ಮೀನು, ಶಂಕುಹುಳಗಳ ಬೇಟೆಯಾಡಲು ಸುಲಭವಾಗಿರುವ ಕಾರಣ ಕೆರೆಯಂಗಳದಲ್ಲಿ ನೀರು ಗೊರವ (ಬ್ಲಾಕ್ ವಿಂಗಡ್ ಸ್ಟಿಲ್ಟ್) ಪಕ್ಷಿಗಳ ಕಲರವ ಶುರುವಾಗಿದೆ.
    ಇಲ್ಲಿನ ಐತಿಹಾಸಿಕ ಹೆಗ್ಗೇರಿ ಕೆರೆ ನೂರಾರು ಸ್ಥಳೀಯ ಹಾಗೂ ವಲಸೆ ಪಕ್ಷಿಗಳಿಗೆ ಆಶ್ರಯ ನೀಡಿದ್ದು, ಕೆರೆಯಲ್ಲಿ ನಿತ್ಯ ಒಂದಿಲ್ಲ ಒಂದು ಬಗೆಯ ಹೊಸ ಹೊಸ ಪಕ್ಷಿಗಳು ಕಾಣಿಸುತ್ತಿರುತ್ತವೆ. ಈ ಹಲವಾರು ಪಕ್ಷಿಗಳ ನಡುವೆ ಗಮನ ಸೆಳೆದ ಪಕ್ಷಿ ನೀರು ಗೊರವ ಎಂಬ ಸುಂದರಿ.
    ನೀರು ಗೊರವ ಸದಾ ನಿಂತ ನೀರಿನ ದಡದಲ್ಲಿ ಹಾರುತ್ತಾ ಓಡುತ್ತಾ ತನ್ನ ಸುಂದರವಾದ ಗುಲಾಬಿ ಕಾಲುಗಳನ್ನು ಹಾಗೂ ನೀಳವಾದ ಕಪ್ಪು ಕೊಕ್ಕು ಎರಡೂ ಒಂದಕ್ಕೊಂದು ಸವಾಲು ಎಸೆಯುವಂತೆ ಜೋಡಿಯಾಗಿ ಆಹಾರ ಹುಡುಕಾಟದ ಸ್ಪರ್ಧೆಗೆ ಇಳಿದಿರುತ್ತವೆ. ಜಿಲ್ಲೆಯ ಕೆರೆ, ಹೊಂಡಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ನೀರು ಗೊರವ ಜೋಡಿಯಾಗಿರುತ್ತವೆ. ಪ್ರತ್ಯೇಕವಾಗಿ ಬೇಟೆಯನ್ನು ಆಡುತ್ತವೆ. ಇವುಗಳಿಗೆ ಸಿಗಡಿ ಮೀನು ಬಲು ಪ್ರಿಯವಾದ ಆಹಾರ. ಕಪ್ಪೆಚಿಪ್ಪು, ಶಂಕುಹುಳು, ಚಿಕ್ಕಮೀನುಗಳನ್ನು ಇವು ಹೆಕ್ಕಿ ತಿನ್ನುತ್ತವೆ.
    ಇವುಗಳಿಗೆ ಶುದ್ಧ ನೀರಾದರೂ ಸರಿ ಕೆಸರಾದರೂ ಸರಿ. ಒಟ್ಟಿನಲ್ಲಿ ನೀರು ಇರಬೇಕು. ರಾತ್ರಿಯೂ ಇವುಗಳ ದೃಷ್ಟಿ ಭಾರಿ ಚುರುಕು. ಹೀಗಾಗಿ ಮರಿಗಳಿಗೆ ಆಹಾರ ನೀಡುವುದು ಸುಲಭ. ಮೂರರಿಂದ ನಾಲ್ಕು ಮೊಟ್ಟೆಗಳಿಗೆ 25 ದಿನಗಳ ತನಕ ಕಾವು ನೀಡುತ್ತವೆ. ಶತ್ರುಗಳ ಕಣ್ಣು ತಪ್ಪಿಸಲು ಮರಿಗಳನ್ನು ನೀರಿನಲ್ಲಿ ಬಚ್ಚಿಡುತ್ತವೆ. ಕೇವಲ 24 ಗಂಟೆಯಲ್ಲಿಯೇ ಮರಿಗಳು ಈಜಲು, ನಡೆಯುವ ಸಾಮರ್ಥ್ಯ ಪಡೆಯುತ್ತವೆ.
    ಇವುಗಳು ಅಪಾಯ ಎದುರಾದಾಗ ಕೆಕ್..ಕೆಕ್.ಯಾಕ್..ಕಿಕ್..ಕಿಕ್…ಕಿಕ್.. ಎಂದು ಧ್ವನಿ ಹೊರ ಹಾಕುತ್ತವೆ. ಹಾರುವಾಗ ಕಾಲನ್ನು ನೇರವಾಗಿ ಮಾಡಿ, ಕುತ್ತಿಗೆಯನ್ನು ಒಂಚೂರು ತಗ್ಗಿಸುತ್ತವೆ. ಇದರ ನೀಳವಾದ ಕಾಲು, ಬಿಳಿ, ಕಡು ಕಂದು ಗರಿಗಳು ನೋಡಲು ಬಲು ಸೊಗಸು ಎನ್ನುತ್ತಾರೆ ವನ್ಯಜೀವಿ ಛಾಯಾಗ್ರಾಹಕ ಮಾಲತೇಶ ಅಂಗೂರ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts