More

    ಧಾರಾವಿಗೆ ಬೇಕಿದೆ ಕಾಯಕಲ್ಪ: ಜನಮತ

    ಜಗತ್ತಿನ ಎರಡನೇ ಹಾಗೂ ಏಷ್ಯಾ ಖಂಡದಲ್ಲೇ ಅತಿದೊಡ್ಡ ಕೊಳೆಗೇರಿ ಮುಂಬೈಯ ‘ಧಾರಾವಿ’. 10 ಲಕ್ಷಕ್ಕೂ ಹೆಚ್ಚು ಬಡಜನರು ಈ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಮನೆಯಲ್ಲಿ ಜೋರಾಗಿ ಉಸಿರಾಡಿದರೆ ಅದರ ಸದ್ದು ಪಕ್ಕದ ಮನೆಗೂ ಕೇಳಿಸುವಷ್ಟು ಇಕ್ಕಟ್ಟಾದ ಪ್ರದೇಶ. ಇಂತಹ ಕ್ಲಿಷ್ಟಕರವಾದ ಪ್ರದೇಶದಲ್ಲಿ ಅಸಂಖ್ಯಾತ ಸಣ್ಣಪುಟ್ಟ ಕೈಗಾರಿಕೆಗಳು ತಲೆ ಎತ್ತಿವೆ. ಇಲ್ಲಿನ ಕೈಗಾರಿಕಾ ವಲಯದಲ್ಲಿ ತಯಾರಾಗುವ ಉತ್ಪನ್ನಗಳಿಗೆ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿಯೂ ಬೇಡಿಕೆಯಿದೆ. ಗಮನಾರ್ಹ ಸಂಗತಿ ಎಂದರೆ, ಮುಂಬೈನ ಒಟ್ಟು ಆರ್ಥಿಕತೆಯ ಶೇಕಡ 20 ಅಂದ್ರೆ 300 ಕೋಟಿಯಷ್ಟು ವಾರ್ಷಿಕ ವಹಿವಾಟು ಧಾರಾವಿಯಲ್ಲಿ ನಡೆಯುತ್ತದೆ. ಇದರ ಪರಿಣಾಮ ಮೀತಿ ಮೀರಿದ ವಾಯುಮಾಲಿನ್ಯ.

    ಧಾರಾವಿಯ ಪಶ್ಚಿಮ ಭಾಗದಲ್ಲಿ ಮಾಹಿಮ್ ಮತ್ತು ಬಾಂದ್ರಾ ಎಂಬ ಎರಡು ನಗರಗಳಿವೆ. ಬೆಂಗಳೂರಿನ ವೃಷಭಾವತಿ ನದಿ ಇಂದು ಹೇಗೆ ತನ್ನ ಅಸ್ತಿತ್ವ ಕಳೆದುಕೊಳ್ಳುವ ಅಂಚಿಗೆ ಬಂದು ನಿಂತಿದೆಯೋ ಅದೇ ಧಾರಾವಿಯ ಉತ್ತರ ಭಾಗದಲ್ಲಿ ಹರಿಯುವ ಮೀಠಿ ನದಿ ಕೈಗಾರಿಕೆಗಳಿಂದ ಹೊರಬರುವ ತ್ಯಾಜ್ಯವನ್ನು ಒಡಲಿಗೆ ತುಂಬಿಕೊಳ್ಳುತ್ತ ಸಂಪೂರ್ಣವಾಗಿ ಮಲಿನವಾಗಿದೆ.

    ಈ ಕೊಳಚೆ ಪ್ರದೇಶದಲ್ಲಿ ಹಿಂದಿ, ತೆಲುಗು, ತಮಿಳು, ಇಂಗ್ಲಿಷ್ ಸೇರಿ ಅನೇಕ ಭಾಷೆಗಳಲ್ಲಿ ಅದೆಷ್ಟೋ ಚಲನಚಿತ್ರಗಳ ಚಿತ್ರೀಕರಣ ನಡೆದಿದೆ. ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರ ‘ಸ್ಲಂ ಡಾಗ್ ಮಿಲಿಯನೇರ್’ ಕೂಡ ಇದೇ ಪ್ರದೇಶದಲ್ಲಿ ಚಿತ್ರೀಕರಣಗೊಂಡಿದೆ.

    ಮಹಾರಾಷ್ಟ್ರದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಧಾರಾವಿ ಅಭಿವೃದ್ಧಿಗೆ ಹಣದ ಹೊಳೆಯನ್ನೇ ಹರಿಸುತ್ತವೆ. 1960ರ ಹೊತ್ತಿನಲ್ಲಿ ಮಹಾರಾಷ್ಟ್ರ ಸರ್ಕಾರ ಧಾರವಿಯ ಮರುನಿರ್ಮಾಣಕ್ಕೆ ಆದೇಶ ಹೊರಡಿಸಿ, ಸ್ವಲ್ಪ ಹಣವನ್ನು ಕೂಡ ಮೀಸಲಿಟ್ಟಿತು. ಆದರೆ ಅಭಿವೃದ್ಧಿ ಮಾತ್ರ ಆಗಲೇ ಇಲ್ಲ. 1997ರಲ್ಲಿ ಅಲ್ಲಿನ ನಿವಾಸಿಗಳು ಮರು ನಿರ್ಮಾಣ ಹಾಗೂ ಅಭಿವೃದ್ಧಿಯ ಕುರಿತು ದನಿ ಎತ್ತಿದರು, ಇದರ ಫಲವಾಗಿ ಸರ್ಕಾರ  5000 ಕೋಟಿ ರೂ.ಮೀಸಲಿಟ್ಟಿತು, 2010ರ ಹೊತ್ತಿಗೆ ಮೀಸಲಿಟ್ಟ ಮೊತ್ತದ ಪ್ರಮಾಣ  15000 ಕೋಟಿಗೆ ರೂ.ಗೆ ಏರಿಕೆ ಕಂಡಿತು. ಜತೆಗೆ ಅಂತಾರಾಷ್ಟ್ರೀಯ ಕಂಪನಿ ಸಹಯೋಗದಲ್ಲಿ ಕ್ರಿಯಾಯೋಜನೆ ಕೂಡ ಸಿದ್ಧವಾಯಿತು ಆದರೆ ಪುನರ್ ನಿರ್ಮಾಣದ ಕಾರ್ಯ ಸಮರ್ಪಕವಾಗಿ ನಡೆಯಲಿಲ್ಲ.

    ನೂರಾರು ಕೋಟಿ ವ್ಯವಹಾರ ನಡೆಸುವ ಧಾರಾವಿಯಲ್ಲಿ ಅಭಿವೃದ್ಧಿ ಮರೀಚಿಕೆ ಆಗಿಯೇ ಉಳಿದಿದೆ. ಇನ್ನಾದರೂ ಮಹಾರಾಷ್ಟ್ರ ಸರ್ಕಾರ, ಕೇಂದ್ರ ಸರ್ಕಾರ ಧಾರಾವಿಯತ್ತ ಗಮನ ಹರಿಸಿ ಲಕ್ಷಾಂತರ ಬಡಜನರ ಜೀವನವನ್ನು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸುಧಾರಿಸಲು ಸೂಕ್ತ ಕ್ರಿಯಾಯೋಜನೆ ಸಿದ್ಧಪಡಿಸಬೇಕು. ಕೇವಲ ಸಿದ್ಧಪಡಿಸಿದರೆ ಸಾಲದು. ಅದನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತರಬೇಕು.

    | ಎಮ್​ಎಸ್.ಶರತ್ ಮೂಡ್ಕಣಿ (ಹೊನ್ನಾವರ ತಾಲೂಕು)

    108 ರಾಷ್ಟ್ರಗಳಿಗೆ ಸುಮಾರು 60 ಕೋಟಿಯಷ್ಟು ಮಾತ್ರೆಗಳನ್ನು ಪೂರೈಸಿ ದೊಡ್ಡಣ್ಣ ಎನ್ನಿಸಿಕೊಂಡ ಭಾರತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts