More

    ನಾಳೆ ಜಂಬೂಸವಾರಿ : ಮನೆಯಲ್ಲೇ ಕುಳಿತು ದಸರಾ ಸಂಭ್ರಮ ವೀಕ್ಷಿಸಿ..

    ಮಂಜುನಾಥ ಟಿ.ಭೋವಿ

    ಮೈಸೂರು : ಸರಳ, ಸಾಂಪ್ರದಾಯಿಕ ಮತ್ತು ವರ್ಚುವಲ್ ಆಗಿ ನಡೆಯುತ್ತಿರುವ 410ನೇ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಅಂತಿಮ ಘಟ್ಟ ಪ್ರವೇಶಿಸಿದ್ದು, ಪ್ರಧಾನ ಆಕರ್ಷಣೆಯಾದ ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆಗೆ ಅರಮನೆ ನಗರಿ ಸಜ್ಜಾಗಿದೆ. ಆದರೆ, ಜನಮನ ಸೆಳೆಯುವ, ಕಣ್ಮನ ತಣಿಸುವ ಸಾಂಸ್ಕೃತಿಕ ಶ್ರೀಮಂತಿಕೆಗೆ ಸಾಕ್ಷಿಯಾಗುವ ಈ ಕ್ಷಣ ದಸರಾ ಚರಿತ್ರೆಯಲ್ಲಿ ಪ್ರಥಮ ಬಾರಿಗೆ ಸಾರ್ವಜನಿಕರ ಅನುಪಸ್ಥಿತಿಯಲ್ಲಿ ನೆರವೇರುತ್ತಿದೆ. ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಕರೊನಾ ವೈರಾಣು ವಿಜಯದಶಮಿ ಮೆರವಣಿಗೆಯ ಸಂಭ್ರಮವನ್ನೂ ಕಿತ್ತುಕೊಂಡಿದೆ. ಇತಿಮಿತಿ, ನಿಬಂಧನೆಗಳ ನಡುವೆ ಅ.26ರಂದು ಜಂಬೂಸವಾರಿ ನಡೆಯಲಿದೆ.

    ಜಂಬೂಸವಾರಿ ನೇರ ಪ್ರಸಾರ

    ಜಂಬೂಸವಾರಿ ಮೆರವಣಿಗೆಯನ್ನು ದೂರದರ್ಶನ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತಿದೆ. ಈ ಕಾರ್ಯಕ್ರಮವನ್ನು ದೂರದರ್ಶನದಲ್ಲಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಫೇಸ್​ಬುಕ್ ಪೇಜ್ ಲಿಂಕ್ – www.facebook.com/mysorevarthe/ ಹಾಗೂ ಯೂಟೂಬ್ ಲಿಂಕ್ –https://www.youtube.com/channel/UCoV9vX93FRgGVsFjNlKF9Aw ನೇರಪ್ರಸಾರ ಮಾಡಲಾಗುತ್ತಿದ್ದು, ಸಾರ್ವಜನಿಕರು ಮನೆಯಲ್ಲೆ ಕುಳಿತು ವೀಕ್ಷಿಸಬಹುದು.

    ಆನ್​ಲೈನ್​ನಲ್ಲಿ ವೀಕ್ಷಿಸಿ: ಈ ಐತಿಹಾಸಿಕ ಸಂಭ್ರಮಕ್ಕೆ ಸಾಕ್ಷಿಯಾಗಲು ಕೇವಲ 300 ಜನರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಹೀಗಾಗಿ, 750 ಕೆ.ಜಿ. ಚಿನ್ನದ ಅಂಬಾರಿ ಹೊತ್ತು ಸಾಗುವ ಕ್ಯಾಪ್ಟನ್ ಅಭಿಮನ್ಯು ಸಾರಥ್ಯದ ಗಜಪಡೆಯ ವಯ್ಯಾರವನ್ನು ಡಿಜಿಟಲ್ ಮಾಧ್ಯಮದ ಮೂಲಕವೇ ಜನರು ಕಣ್ತುಂಬಿಕೊಳ್ಳಬೇಕಾಗಿದೆ.

    ಮೈಸೂರಿನ ರಾಜಪಥದಲ್ಲಿ ಈ ಹಿಂದೆ ಅಂದಾಜು 5 ಕಿ.ಮೀ. ಕ್ರಮಿಸುತ್ತಿದ್ದ ಜಂಬೂಸವಾರಿ ಈ ಸಲ ಅರಮನೆ ಅಂಗಳಕ್ಕೆ ಮಾತ್ರ ಸೀಮಿತಗೊಂಡಿದ್ದು, ಸಾಗುವ ದಾರಿ 500 ಮೀಟರ್ ಕೂಡ ದಾಟುವುದಿಲ್ಲ. ಅರಮನೆ ಆವರಣದಲ್ಲಿನ ವರಹಸ್ವಾಮಿ ದೇವಾಲಯದ ಸಮೀಪದಿಂದ ಮೆರವಣಿಗೆ ಆರಂಭವಾಗಲಿದ್ದು, ಒಟ್ಟಾರೆ ಕೇವಲ 30ರಿಂದ 45 ನಿಮಿಷಗಳಲ್ಲಿ ಜಂಬೂಸವಾರಿ ಸಂಪನ್ನಗೊಳ್ಳಲಿದೆ.

    ನಾಡದೇವಿಗೆ ಪುಷ್ಪನಮನ: ಸೋಮವಾರ ಮಧ್ಯಾಹ್ನ 2.59ರಿಂದ 3.20ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆ ಬಲರಾಮ ದ್ವಾರದ ಬಳಿ ನಂದಿಧ್ವಜಕ್ಕೆ ಸಂಪ್ರದಾಯದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪೂಜೆ ನೆರವೇರಿಸುವರು. ಬಳಿಕ ಅಭಿಮನ್ಯು ಆನೆ ಹೊತ್ತ ಚಿನ್ನದ ಅಂಬಾರಿ ಮೇಲೆ ಪ್ರತಿಷ್ಠಾಪಿತ ನಾಡದೇವಿ ಚಾಮುಂಡಿದೇವಿಗೆ ಮಧ್ಯಾಹ್ನ 3.40ರಿಂದ 4.15ರವರೆಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಮುಖ್ಯಮಂತ್ರಿಗಳು ಪುಷ್ಪನಮನ ಸಲ್ಲಿಸುವರು.

    ಕೇವಲ 2 ಸ್ತಬ್ಧಚಿತ್ರ, 5 ಕಲಾ ತಂಡಗಳು ಈ ಸಲ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮೈಸೂರು ಅರಮನೆಯ ವೈಭವ ಬಿಂಬಿಸುವ ಸ್ತಬ್ಧಚಿತ್ರ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಕೋವಿಡ್-19ಗೆ ಸಂಬಂಧಿಸಿದ ಸ್ತಬ್ಧಚಿತ್ರ ಕಾಣಸಿಗಲಿವೆ. ಅಲ್ಲದೇ 5 ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಲಿದ್ದು, ಒಂದು ತಂಡದಿಂದ ತಲಾ 10 ಕಲಾವಿದರಿಗಷ್ಟೇ ಅವಕಾಶ ನೀಡಲಾಗಿದೆ.

    ಪಂಜಿನ ಕವಾಯತು, ವಜ್ರಮುಷ್ಟಿ ಕಾಳಗ ಇಲ್ಲ : ಅರಮನೆ ಆವರಣದಲ್ಲಿ ಪ್ರತಿ ವರ್ಷ 25 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ, ಈ ಸಲ ಆಸನ ವ್ಯವಸ್ಥೆ ಕಲ್ಪಿಸಿಲ್ಲ. ಅಲ್ಲದೆ, ಈ ವರ್ಷ ಗೋಲ್ಡ್​ಕಾರ್ಡ್ ಸೇರಿ ಯಾವುದೇ ಪಾಸ್, ವಿವಿಧ ದರದ ಟಿಕೆಟ್​ಗಳನ್ನು ಜಿಲ್ಲಾಡಳಿತದಿಂದ ಹಂಚಿಲ್ಲ. ಬನ್ನಿಮಂಟಪದಲ್ಲಿ ರೋಚಕ ಕ್ಷಣಗಳಿಗೆ ಸಾಕ್ಷಿಯಾಗುತ್ತಿದ್ದ ಪಂಜಿನ ಕವಾಯತು (ಟಾರ್ಚ್​ಲೈಟ್ ಪರೇಡ್) ಈ ಸಲ ಆಯೋಜಿಸಿಲ್ಲ್ಲ ಅರಮನೆ ಒಳಗೆ ಅ.25ರಂದು ಆಯುಧಪೂಜೆ ಸಂದರ್ಭದಲ್ಲಿ ವಿವಿಧ ಆಯುಧಗಳು, ಪಟ್ಟದಾನೆ, ಪಟ್ಟದ ಕುದುರೆ, ಪಟ್ಟದ ಹಸು, ವಿವಿಧ ವಾಹನಗಳಿಗೆ ಪೂಜೆ ಮತ್ತು ಸಂಜೆ ಶಮಿ ಪೂಜೆ ಜರುಗಲಿದೆ.

    ವಿಜಯದಶಮಿ ದಿನದಂದು(ಅ.26) ನಡೆಯುತ್ತಿದ್ದ ವಜ್ರಮುಷ್ಟಿ ಕಾಳಗವನ್ನು ಕೈಬಿಡಲಾಗಿದ್ದು, ಧಾರ್ವಿುಕ ಪೂಜಾ ಕಾರ್ಯಗಳು ನಡೆಯಲಿವೆ. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಈ ವರ್ಷದ ಕೊನೆ ಖಾಸಗಿ ದರ್ಬಾರ್ ನಡೆಸಿದ ನಂತರ ಬೆಳ್ಳಿರಥದಲ್ಲಿ ಮೆರವಣಿಗೆ ಹೊರಡುವ ಮೂಲಕ ಖಾಸಗಿ ದಸರೆಗೂ ತೆರೆಬೀಳಲಿದೆ.

    ಪರಂಪರೆಯ ಸತ್ವದೊಂದಿಗೆ ವಿಕಸನಗೊಂಡ ದಸರಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts