More

    ದಸರಾ ಜಂಬೂಸವಾರಿ ಯಶಸ್ವಿ: ನಾಡದೇವತೆ ಕಂಡು ಭಕ್ತಿ-ಭಾವದಲ್ಲಿ ಮಿಂದೆದ್ದ ಭಕ್ತರು, 4ನೇ ಬಾರಿ ಜವಾಬ್ದಾರಿ ನಿಭಾಯಿಸಿದ ಅಭಿಮನ್ಯು

    ಮೈಸೂರು: ದಸರಾ ಆಚರಣೆಯ ಕೇಂದ್ರ ಬಿಂದುವಾದ ಜಂಬೂ ಸವಾರಿಗೆ ವರ್ಣರಂಜಿತ ತೆರೆಬಿದ್ದಿದೆ. ದಸರಾ ಮತಹೋತ್ಸವದ ಅಂತಿಮ ಕ್ಷಣಕ್ಕೆ ಕಾಯುತ್ತಿದ್ದ ಅಸಂಖ್ಯಾತ ಭಕ್ತರು ಅಭಿಮನ್ಯು ಮೇಲಿನ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿ ಕುಳಿತಿದ್ದ ನಾಡದೇವತೆ ಚಾಮುಂಡೇಶ್ವರಿಯನ್ನು ಕಣ್ತುಂಬಿಕೊಂಡು ಭಕ್ತಿ-ಭಾವದಿಂದ ನಮಿಸುವ ಮೂಲಕ ಪುನೀತರಾದರು.

    ಜಂಬೂ ಸವಾರಿ ಸಾಗಿದ ಮಾರ್ಗದುದ್ದಕ್ಕೂ ಕಿಕ್ಕಿರಿದು ಸೇರಿದ್ದ ಜನಸ್ತೋಮ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು. ವಿವಿಧ ಕಲಾತಂಡಗಳು, ಸ್ಥಬ್ಧಚಿತ್ರಗಳು ನಾಡಿನ ಪರಂಪರೆಯನ್ನು ಅನಾವರಣಗೊಳಿಸಿದವು.

    9 ನಿಮಿಷ ತಡ
    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಗದಿತ ಸಮಯಕ್ಕಿಂತ ಕೊಂಚ ತಡವಾಗಿ ಜಂಬೂಸವಾರಿಗೆ ಪುಷ್ಪಾರ್ಚನೆ ಮಾಡಿದರು. ಸಂಜೆ 4.40 ರಿಂದ 5 ಗಂಟೆಯ ಒಳಗೆ ಸಲ್ಲುವ ಮೀನ ಲಗ್ನದಲ್ಲಿ ಪುಷ್ಪಾರ್ಚನೆಯನ್ನು ಮಾಡಬೇಕಿತ್ತು. ಆದರೆ 5 ಗಂಟೆ 9 ನಿಮಿಷಕ್ಕೆ ಪುಷ್ಪಾರ್ಚನೆ ಮಾಡಿದ್ದು, 9 ನಿಮಿಷ ತಡವಾಯಿತು.

    ಎಡಕ್ಕೆ ವಾಲಿದ ಚಿನ್ನದ ಅಂಬಾರಿ
    ಜಂಬೂ ಸವಾರಿ ಮೆರವಣಿಗೆಯಲ್ಲಿ ಈ ಬಾರಿಯೂ ಚಿನ್ನದ ಅಂಬಾರಿ ಎಡಕ್ಕೆ ವಾಲಿತ್ತು. ಅರಣ್ಯ ಇಲಾಖೆ ಉಸ್ತುವಾರಿಯಲ್ಲಿ ಸಿಬ್ಬಂದಿ ಆನೆಯ ಮೇಲೆ ಅಂಬಾರಿಯನ್ನು ಪ್ರತಿವರ್ಷ ಕಟ್ಟುತ್ತಾರೆ. ಈ ಹಿಂದೆ ಮೊದಲಿಗೆ ಅಂಬಾರಿಗೆ ಪುಷ್ಪಾರ್ಚನೆ ಮಾಡಿ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಲಾಗುತ್ತಿತ್ತು. ಆದರೆ ಮೆರವಣಿಯಲ್ಲಿ ಚಿನ್ನದ ಅಂಬಾರಿ ಕೊನೆಯಲ್ಲಿ ತೆರಳಬೇಕಾಗಿರುವುದರಿಂದ ಸ್ತಬ್ಧಚಿತ್ರ, ಕಲಾತಂಡಗಳ ಬೃಹತ್ ಮೆರವಣಿಗೆ ಸಾಗುವವರೆಗೂ 750 ಕೆ.ಜಿ. ತೂಕದ ಅಂಬಾರಿಯನ್ನು ಹೊತ್ತು ಆನೆ ನಿಲ್ಲಬೇಕಾಗಿತ್ತು. ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರಿಂದ ಮೆರವಣಿಗೆ ಅರ್ಧ ಸಾಗಿದ ಮೇಲೆ ಅಂಬಾರಿ ಕಟ್ಟಿ, ಕೊನೆಯಲ್ಲಿ ಪುಷ್ಪಾರ್ಚನೆ ಮಾಡುವುದು ಕೆಲ ವರ್ಷದಿಂದ ನಡೆದು ಬಂದಿದೆ. ಆದರೆ ಈ ಬಾರಿ ಮೆರವಣಿಯಲ್ಲಿ ಚಿನ್ನದ ಅಂಬಾರಿ ಹಸಿರು ಚಪ್ಪರ ದಾಟುವ ಮುನ್ನವೇ ವಾಲಿತು. ಬಳಿಕ ಬಲ ಭಾಗಕ್ಕೆ ಕಟ್ಟಿದ್ದ ದಾರದಿಂದ ಎಳೆದು ಸರಿ ಮಾಡಲಾಯಿತು. ಪಕ್ಕದಲ್ಲಿದ ಕುಮ್ಕಿ ಆನೆ ವರಲಕ್ಷೀ ಆನೆ ಭಾಗದಿಂದ ದಾರವನ್ನು ಎಳೆದೆ ಸಾಗಲಾಯಿತು. ಅಂಬಾರಿ ಎಡಕ್ಕೆ ವಾಲಿದ್ದು, ಮಾವುತರು, ಕಾವಾಡಿಗಳು ಆಗಾಗ್ಗೆ ಸರಿಪಡಿಸುತ್ತಿದ್ದರು.

    4ನೇ ಬಾರಿ ಅಂಬಾರಿ ಹೊತ್ತ ಅಭಿಮನ್ಯು
    ಕ್ಯಾಪ್ಟನ್ ‘ಅಭಿಮನ್ಯು’ವಿಗೆ ನಾಲ್ಕನೇ ಬಾರಿಗೆ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತ ಅನುಭವವಾಗಿದೆ. ‘ಅರ್ಜನ’ ಆನೆಯ ಉತ್ತರಾಧಿಕಾರಿಯಾಗಿ ಅಂಬಾರಿ ಹೊರುವ ಜವಾಬ್ದಾರಿ ನಿಭಾಯಿಸುತ್ತಿರುವ ಅಭಿಮನ್ಯು ಎರಡು ಬಾರಿ ಕರೊನಾದಿಂದ ಅರಮನೆ ಆವರಣದಲ್ಲಿಯೇ ಯಶಸ್ವಿಯಾಗಿ ಅಂಬಾರಿ ಹೊತ್ತು ಸೈ ಎನಿಸಿಕೊಂಡಿದ್ದ. ಕಳೆದ ವರ್ಷ ಮೂರನೇ ಬಾರಿ ಅದ್ದೂರಿ ದಸರಾದಲ್ಲಿ ಬನ್ನಿಮಂಟಪದವರೆಗೆ ಪ್ರಥಮ ಬಾರಿಗೆ ಭಾರಿ ತೂಕದ ಅಂಬಾರಿ ಹೊತ್ತು ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದ. ಈ ವರ್ಷ ನಾಲ್ಕನೇ ಬಾರಿಯಾಗಿದ್ದು, ತನ್ನ ಜವಾಬ್ದಾರಿಯನ್ನು ಅಭಿಮನ್ಯು ಯಶಸ್ವಿಯಾಗಿ ಪೂರೈಸಿದ್ದಾನೆ.

    ಬೆಚ್ಚಿದ ಕುದುರೆಗಳು
    ಮೆರವಣಿಗೆಯಲ್ಲಿ ಹೆಜ್ಜೆ ಹಾಕುವಾಗ ಕಲಾತಂಡಗಳ ತಮಟೆ, ನಗಾರಿ ಶಬ್ದಕ್ಕೆ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಕುದುರೆಗಳು ಬೆಚ್ಚಿದವು. ದೇವರಾಜ ಮಾರುಕಟ್ಟೆ ಬಳಿ ಬರುತ್ತಿದಂತೆ ಕಲಾ ತಂಡಗಳು ತಮಟೆ ಶಬ್ದವನ್ನು ಜಾಸ್ತಿ ಮಾಡಿದವು. ಇದಕ್ಕೆ ಕುದುರೆಗಳು ಕೆಲಕಾಲ ಬೆಚ್ಚಿ ಅತ್ತಿತ್ತ ಓಡಾಡಿದವು. ಬಳಿಕ ಅವುಗಳನ್ನು ಸವಾರರು ಸಮಾಧಾನಪಡಿಸಿದರು.

    ಮೇಯರ್​ಗೆ ಮತ್ತೇ ಕುದುರೆ ಸವಾರಿ ಭಾಗ್ಯ
    ಈ ಬಾರಿಯ ದಸರಾ ಮಹೋತ್ಸವದಲ್ಲಿ ಮೈಸೂರು ನಗರ ಪಾಲಿಕೆ ಮೇಯರ್ ಶಿವಕುಮಾರ್ ಅವರಿಗೆ ಮತ್ತೆ ಕುದುರೆ ಸವಾರಿ ಭಾಗ್ಯ ಲಭಿಸಿತು. ಶಿವಕುಮಾರ್ ಅವರ ಮೇಯರ್ ಅವಧಿ ಅಂತ್ಯಗೊಂಡಿದ್ದರೂ ಹೊಸದಾಗಿ ಯಾರು ಮೇಯರ್ ಆಗಿ ಅಧಿಕಾರ ಸ್ವೀಕರಿಸದೇ ಇರುವುದರಿಂದ ಶಿವಕುಮಾರ್ ಅವರೇ ಈ ಬಾರಿಯೂ ಜಂಬೂ ಸವಾರಿ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡಿದರು. ಮೆರವಣಿಗೆಯಲ್ಲಿ ಕಲಾ ತಂಡ, ಸ್ತಬ್ಧಚಿತ್ರಗಳ ಮೆರವಣಿಗೆಯೊಂದಿಗೆ ಮೇಯರ್ ಶಿವಕುಮಾರ್ ಅವರು ರಾಜ ಮಾರ್ಗದಲ್ಲಿ ಕುದುರೆ ಸವಾರಿ ಮಾಡಿದರು. ಮಾರ್ಗದುದ್ದಕ್ಕೂ ನೆರೆದಿದ್ದ ಲಕ್ಷಾಂತರ ಮಂದಿಗೆ ಕೈ ಬೀಸಿದರು.

    ಪೊಲೀಸ್​ಗೆ ಗಾಯ
    ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ರಾಜ್‌ಕುಮಾರ್ ಪಾರ್ಕ್ ಬಳಿ ವಿದ್ಯುತ್ ದೀಪ ಬಿದ್ದು, ಪೊಲೀಸ್ ಪೇದೆಯ ತಲೆಗೆ ಗಾಯವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

    ನಕಲಿ ಪಾಸ್
    ಕೆ.ಆರ್.ಆಸ್ಪತ್ರೆ ಬಳಿ ಜಂಬೂಸವಾರಿ ಮೆರವಣಿಗೆ ಸಾಗುತ್ತಿದ್ದ ವೇಳೆ, ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯನ್ನ ಗಮನಿಸಿದ ಡಿಸಿಪಿ ಎಂ.ಮುತ್ತುರಾಜ್ ಅವರು, ಪಾಸ್ ತೋರಿಸುವಂತೆ ಕೇಳಿದಾಗ, ಕಲರ್ ಜೆರಾಕ್ಸ್ ಪಾಸ್ ತೋರಿಸಿದ್ದಾನೆ. ನಕಲಿ ಪಾಸ್ ಎಂದು ಪತ್ತೆಯಾದ ಬಳಿಕ ಆತನನ್ನು ಮೆರವಣಿಗೆ ಆಚೆ ಕಳುಹಿಸಲಾಯಿತು.

    ಜಂಬೂಸವಾರಿಯಲ್ಲಿ ಭದ್ರತಾ ವೈಫಲ್ಯ
    ಜಂಬೂಸವಾರಿ ಮೆರವಣಿಗೆಯಲ್ಲಿ ಭದ್ರತಾ ವೈಫಲ್ಯ ಎದ್ದುಕಂಡಿತು. ಅಂಬಾರಿ ಮೆರವಣಿಗೆ ಆಗಮಿಸುವ ಮುನ್ನವೇ ಸಯ್ಯಜಿರಾವ್ ರಸ್ತೆಯಲ್ಲಿ ಜನರು ಓಡಾಡಲು ಪ್ರಾರಂಭಿಸಿದರು. ರಸ್ತೆಗೆ ಓಡಿ ಬರುತ್ತಿದ್ದ ಕೆಲವರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಹೆಜ್ಜೆ ಹೆಜ್ಜೆಗೂ ಪೊಲೀಸರನ್ನು ನಿಯೋಜಿಸಿದರೂ ಸಾರ್ವಜನಿಕರು ರಸ್ತೆಗೆ ಬರುವುದನ್ನು ತಡೆಯಲು ಸಾಧ್ಯವಾಗಲಿಲ್ಲ. ಅಂಬಾರಿ ಮೆರವಣಿಗೆ ಕೆ.ಆರ್. ವೃತ್ತ ದಾಟಿದ ನಂತರ ಸಾರ್ವಜನಿಕರು ರಸ್ತೆಗೆ ಬರುತ್ತಿರುವುದು ಹೆಚ್ಚಾಯಿತು. ಸಾರ್ವಜನಿಕರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವ ಪರಿಸ್ಥಿತಿ ನಿರ್ಮಾಣವಾಯಿತು. ಬಂಬೂ ಬಜಾರ್ ಬಳಿ‌ ಮಂಗಳಮುಖಿಯರ ತಂಡ ರಸ್ತಗೆ ಬಂದು ನೃತ್ಯ ಮಾಡುತ್ತಿದ್ದರು. ಬಳಕ ಅಂಬಾರಿ ಹೊತ್ತು ಬರುತ್ತಿದ್ದ ಅಭಿಮನ್ಯು ಬಳಿ ತೆರಳು ಮುಂದಾದರು. ಈ ವೇಳೆ ಅವರನ್ನು ದೂರ ಕಳಹಿಸಲಾಯಿತು.

    1 ಗಂಟೆ 35 ನಿಮಿಷದ ಮೆರವಣಿಗೆ
    ಸಂಜೆ 5.09ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 9 ನಿಮಿಷ ತಡವಾಗಿ ಅರಮನೆ ಮೈದಾನದಿಂದ ಬಂಬೂಸವಾರಿಗೆ ಚಾಲನೆ ನೀಡಿದರು. ರಾತ್ರಿ 7.25ರ ಸುಮಾರಿಗೆ ಜಂಬೂಸವಾರಿ ಮೆರವಣಿಗೆ ಬನ್ನಿಮಂಟಪ ತಲುಪಿತು. ಜಂಬೂಸವಾರಿಯಲ್ಲಿ 49 ಸ್ತಬ್ಧಚಿತ್ರಗಳು, ವಿವಿಧ ಕಲಾತಂಡಗಳು ಭಾಗಿಯಾದವು.

    ಜಂಬೂಸವಾರಿ ಮಾರ್ಗದಲ್ಲಿ ನೂಕುನುಗ್ಗಲು: ಜನರ ನಿಯಂತ್ರಣಕ್ಕೆ ಲಾಠಿ ಬೀಸಿದ ಪೊಲೀಸರು

    ವಿಜಯನಗರದಲ್ಲಿ ಎರಡು ಕಾಲುಗಳುಳ್ಳ ಕರು ಜನನ: ಏನಿದು ಅಚ್ಚರಿ ಎಂದ ಗ್ರಾಮಸ್ಥರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts