More

    ಗಾಜಾ ನಗರವನ್ನು ಸುತ್ತುವರಿದ ಇಸ್ರೇಲ್​ ಸೇನೆ: ಕದನ ವಿರಾಮ ಪರಿಕಲ್ಪನೆ ಸದ್ಯಕ್ಕಿಲ್ಲ ಎಂದ ಸೇನಾ ವಕ್ತಾರ

    ನವದೆಹಲಿ: ಹಮಾಸ್​ ನಿಯಂತ್ರಣದಲ್ಲಿರುವ ಗಾಜಾ ನಗರವನ್ನು ಸಂಪೂರ್ಣ ಸುತ್ತುವರಿದಿರುವುದಾಗಿ ಇಸ್ರೇಲಿ ಸೇನಾ ಪಡೆ (ಐಡಿಎಫ್​) ಹೇಳಿಕೊಂಡಿದ್ದು, ಹಮಾಸ್​ ವಿರುದ್ಧ ಮತ್ತಷ್ಟು ಆಕ್ರಮಣ ಹೆಚ್ಚಿಸುವ ತವಕದಲ್ಲಿದೆ.

    ಹಮಾಸ್ ಭಯೋತ್ಪಾದಕ ಸಂಘಟನೆಯ ಕೇಂದ್ರವಾಗಿರುವ ಗಾಜಾ ನಗರದ ಸುತ್ತುವರಿಯುವಿಕೆಯನ್ನು ಇಸ್ರೇಲಿ ಭೂಸೇನೆಯ ಸೈನಿಕರು ಪೂರ್ಣಗೊಳಿಸಿದ್ದಾರೆ ಎಂದು ಇಸ್ರೇಲಿ ಸೇನೆಯ ವಕ್ತಾರ ಡೇನಿಯಲ್​ ಹಗಾರಿ ತಿಳಿಸಿದ್ದಾರೆ. ಅಲ್ಲದೆ, ಕದನ ವಿರಾಮ ಪರಿಕಲ್ಪನೆ ಸದ್ಯಕ್ಕೆ ನಮ್ಮ ಮೇಜಿನ ಮೇಲೆ ಇಲ್ಲ ಎನ್ನುವ ಮೂಲಕ ಮತ್ತಷ್ಟು ದಾಳಿಯ ಮುನ್ಸೂಚನೆಯನ್ನು ನೀಡಿದ್ದಾರೆ.

    ಇತ್ತೀಚಿನ ಬೆಳವಣಿಗೆಯಲ್ಲಿ ಯುಎಸ್ ಅಧ್ಯಕ್ಷ ಜೋ ಬೈಡೆನ್, ತಾತ್ಕಾಲಿಕ, ಸ್ಥಳೀಯ ಯುದ್ಧದ ನಿಲುಗಡೆಗಾಗಿ ಮಾನವೀಯ ಕದನ ವಿರಾಮಕ್ಕೆ ಕರೆ ನೀಡಿದ್ದಾರೆ. ಇದರ ನಡುವೆ ಯುಎಸ್​ ರಾಜ್ಯ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್, ಮತ್ತೊಮ್ಮೆ ಮಧ್ಯಪೂರ್ವ ರಾಷ್ಟ್ರಗಳಿಗೆ ರಾಜತಾಂತ್ರಿಕ ಪ್ರವಾಸ ಕೈಗೊಂಡಿದ್ದು, ಗಾಜಾದಲ್ಲಿ ಪುರುಷರು, ಮಹಿಳೆಯರು ಮತ್ತು ಮಕ್ಕಳ ಮೇಲಿನ ಹಾನಿಯನ್ನು ತಗ್ಗಿಸಲು ಮತ್ತು ತೆಗೆದುಕೊಳ್ಳಬೇಕಾದ ಸಮಗ್ರ ಕ್ರಮಗಳ ಬಗ್ಗೆ ನಾವು ಮಾತನಾಡುತ್ತೇವೆ ಎಂದಿದ್ದಾರೆ. ಇತ್ತ ಹಮಾಸ್​ ಸಹ ಪ್ರತಿಕ್ರಿಯೆ ನೀಡಿದ್ದು, ಇಸ್ರೇಲಿ ಸೈನಿಕರನ್ನು ಬ್ಯಾಗ್​ಗಳಲ್ಲಿ ತುಂಬಿ ವಾಸಪ್​ ಕಳುಹಿಸುತ್ತೇವೆ ಎಂದಿದೆ.

    ಉತ್ತರ ಗಾಜಾದಲ್ಲಿ ಇಸ್ರೇಲ್​ ಮತ್ತು ಹಮಾಸ್​ ನಡುವೆ ಯುದ್ಧ ಮುಂದುವರಿದಂತೆ, ನೂರಾರು ಗಾಯಗೊಂಡ ವಿದೇಶಿಯರು ಮತ್ತು ಸ್ಥಳೀಯ ಪ್ರಜೆಗಳು ರಫಾ ಬಾರ್ಡರ್ ಕ್ರಾಸಿಂಗ್ ಮೂಲಕ ಈಜಿಪ್ಟ್‌ ಪ್ರವೇಶಿಸುವುದರೊಂದಿಗೆ ಯುದ್ಧಪೀಡಿತ ಪ್ರದೇಶದಿಂದ ತಪ್ಪಿಸಿಕೊಂಡಿದ್ದಾರೆ. ಗಾಯಗೊಂಡ 21 ಪ್ಯಾಲೆಸ್ತೀನಿಯರು ಮತ್ತು 72 ಮಕ್ಕಳು ಸೇರಿದಂತೆ 344 ವಿದೇಶಿ ಪ್ರಜೆಗಳು ನಿನ್ನೆ ರಫಾ ಗಡಿಯನ್ನು ದಾಟಿದ್ದಾರೆ ಎಂದು ಈಜಿಪ್ಟ್‌ನ ಆರೋಗ್ಯ ಸಚಿವಾಲಯವು ಮಾಹಿತಿ ನೀಡಿದೆ.

    ವೆಸ್ಟ್​ ಬ್ಯಾಂಕ್​ ಪ್ರದೇಶದಲ್ಲಿ ಇಸ್ರೇಲಿ ನೆಲದ ಕಾರ್ಯಾಚರಣೆಯ ಸಮಯದಲ್ಲಿ ಇಬ್ಬರು ಪ್ಯಾಲೆಸ್ತೀನಿಯನ್ನರು ಕೊಲ್ಲಲ್ಪಟ್ಟರು. ಗುರುವಾರ ಇಸ್ರೇಲಿ ಗುಂಡಿನ ದಾಳಿಗೆ ಇತರೆ ಮೂವರು ಬಲಿಯಾದ ಬೆನ್ನಲ್ಲೇ ಈ ಸಾವುಗಳು ಸಹ ಸಂಭವಿಸಿವೆ. ಅಕ್ಟೋಬರ್ 7ರ ದಾಳಿಯ ಸಮಯದಲ್ಲಿ ಹಮಾಸ್ ವಶಪಡಿಸಿಕೊಂಡ ನಾಗರಿಕ ಮತ್ತು ಮಿಲಿಟರಿಯ ಸುಮಾರು 240 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಇಸ್ರೇಲಿ ಸೇನೆಯು ಒತ್ತಾಯಿಸುತ್ತಿದೆ. ಒತ್ತೆಯಾಳುಗಳನ್ನು ಹುಡುಕುವ ಪ್ರಯತ್ನದಲ್ಲಿ ಯುಎಸ್, ಗಾಜಾದ ಮೇಲೆ ಡ್ರೋನ್‌ಗಳನ್ನು ಹಾರಿಸುತ್ತಿದೆ.

    ಇನ್ನೊಂದೆಡೆ ಲೆಬನಾನ್‌ನ ಇರಾನ್ ಬೆಂಬಲಿತ ಹಿಜ್ಬುಲ್ಲಾ ಗುಂಪು ಗುರುವಾರ ತನ್ನ ನಾಯಕ ಹಸನ್ ನಸ್ರಲ್ಲಾ ಅವರ ಭಾಷಣಕ್ಕೂ ಮುನ್ನ ಗಡಿಯುದ್ದಕ್ಕೂ 19 ಇಸ್ರೇಲಿ ನೆಲೆಗಳ ಮೇಲೆ ದಾಳಿ ಮಾಡಿರುವುದಾಗಿ ಹೇಳಿಕೊಂಡಿದೆ. ಲೆಬನಾನಿನ ಭೂಪ್ರದೇಶದಿಂದ ನಡೆದ ಗುಂಡಿನ ದಾಳಿಗೆ ಪ್ರತಿಕ್ರಿಯೆಯಾಗಿ ಇಂದು ಮುಂಜಾನೆ ಯುದ್ಧವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ಹಿಜ್ಬುಲ್ಲಾ ಭಯೋತ್ಪಾದಕ ಸಂಘಟನೆಯನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿರುವುದಾಗಿ ಇಸ್ರೇಲಿ ಮಿಲಿಟರಿ ಹೇಳಿದೆ.

    ಇಸ್ರೇಲ್ ಎರಡು ದಿನಗಳಲ್ಲಿ ಎರಡು ಬಾರಿ ಗಾಜಾದ ಅತಿ ದೊಡ್ಡ ನಿರಾಶ್ರಿತರ ಶಿಬಿರವನ್ನು ಗುರಿಯಾಗಿರಿಸಿಕೊಂಡು ದಾಳಿ ಮಾಡಿದ್ದು, ನೂರಾರು ಜನರು ಬಲಿಯಾಗಿದ್ದಾರೆ. ಮಂಗಳವಾರ ಮತ್ತು ಬುಧವಾರ ನಡೆದ ವೈಮಾನಿಕ ದಾಳಿಯಲ್ಲಿ ಇಬ್ಬರು ಹಮಾಸ್ ಸೇನಾ ನಾಯಕರು ಸಹ ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ಹೇಳಿದೆ.

    ಅಕ್ಟೋಬರ್ 7ರಂದು ಇಸ್ರೇಲ್​ ಮೇಲೆ ಹಮಾಸ್​ 5 ಸಾವಿರ ರಾಕೆಟ್​ಗಳಿಂದ ದಿಢೀರ್​ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಇಸ್ರೇಲ್​ ಹಮಾಸ್​ ವಿರುದ್ಧ ನಿರಂತರವಾಗಿ ದಾಳಿ ಮಾಡುತ್ತಿದೆ. ಹಮಾಸ್​ ಮತ್ತು ಇಸ್ರೇಲ್​ ನಡುವಿನ ಯುದ್ಧ ಒಂದು ತಿಂಗಳು ಸಮೀಪಿಸುತ್ತಿದ್ದು, ಇನ್ನು ಕದನ ಕಾರ್ಮೋಡ ಮಾತ್ರ ತಿಳಿಯಾಗಿಲ್ಲ. ಈವರೆಗೂ ಯುದ್ಧದಲ್ಲಿ 3,760 ಮಕ್ಕಳು ಸೇರಿದಂತೆ 9,061 ಜನರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ನಡೆಸುತ್ತಿರುವ ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ. (ಏಜೆನ್ಸೀಸ್​)

    ಖಾರವಾದ್ರೂ ಹಸಿ ಮೆಣಸಿನಕಾಯಿ ತುಂಬಾ ಆರೋಗ್ಯಕರ: 15 ದಿನದಲ್ಲಿ ದೇಹದಲ್ಲಾಗುತ್ತೆ ಈ ಚಮತ್ಕಾರ!

    ವಕೀಲರು ಮೈ ಲಾರ್ಡ್​ ಎಂದು ಹೇಳುವುದನ್ನು ನಿಲ್ಲಿಸಿದ್ರೆ ಅರ್ಧ ಸಂಬಳ ಕೊಡ್ತೀನಿ ಅಂದ್ರು ಸುಪ್ರೀಂ ಕೋರ್ಟ್​ ಜಡ್ಜ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts