More

    ಬ್ಯಾಟಿಂಗ್​-ಬೌಲಿಂಗ್​ನಲ್ಲಿ ಟೀಮ್​ ಇಂಡಿಯಾ ಯುವ ಪಡೆ ಮಿಂಚು: ಆಸೀಸ್​ಗೆ 2ನೇ ಸೋಲು, 2-0 ಸರಣಿ ಮುನ್ನಡೆ

    ತಿರುವನಂತಪುರಂ: ಇಲ್ಲಿನ ಗ್ರೀನ್​ಫೀಲ್ಡ್​ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಆತಿಥೇಯ ಭಾರತ ಮತ್ತು ಪ್ರವಾಸಿ ಆಸ್ಟ್ರೇಲಿಯಾ ನಡುವಿನ ಐದು ಟಿ20 ಪಂದ್ಯಗಳ ಸರಣಿಯ ಎರಡನೇ ಪಂದ್ಯದಲ್ಲಿ ಬ್ಯಾಟಿಂಗ್​ ಮತ್ತು ಬೌಲಿಂಗ್​ ವಿಭಾಗದಲ್ಲಿ ಸಂಘಟಿತ ಪ್ರದರ್ಶನ ತೋರಿದ ಟೀಮ್​ ಇಂಡಿಯಾದ ಯುವ ಪಡೆ ಆಸೀಸ್​ ಪಡೆಯವನ್ನು ರನ್​ಗಳ ಬೃಹತ್​ ಅಂತರದಿಂದ ಮಣಿಸಿ 2-0 ಅಂತರದಿಂದ ಸರಣಿ ಮುನ್ನಡೆಯನ್ನು ಸಾಧಿಸಿತು.

    ಟೀಮ್​ ಇಂಡಿಯಾ ನೀಡಿದ 236 ರನ್​ಗಳ ಬೃಹತ್​ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ನಿಗದಿತ 20 ಓವರ್​ಗಳಲ್ಲಿ 191 ರನ್​ಗಳಿಗೆ ಸರ್ವಪತನ ಕಂಡಿತು. ಆಸೀಸ್​ ಪರ ಮಾರ್ಕಸ್​ ಸ್ಟೋನಿಸ್​ (45), ಟಿಮ್​ ಡೇವಿಡ್​ (37) ಮತ್ತು ಮ್ಯಾಥೀವ್​ ವೇಡ್​ (ಅಜೇಯ 42) ಹೊರತುಪಡಿಸಿದರೆ ಉಳಿದ ಯಾವುದೇ ಆಟಗಾರರು ನಿರೀಕ್ಷಿತ ಪ್ರದರ್ಶನ ತೋರಲಿಲ್ಲ.

    ಟೀಮ್​ ಇಂಡಿಯಾ ಪರ ಮಿಂಚಿನ ಬೌಲಿಂಗ್​ ದಾಳಿ ಮಾಡಿದ ಕನ್ನಡಿಗ ಪ್ರಸಿದ್ಧ ಕೃಷ್ಣ ಮತ್ತು ರವಿ ಬಿಷ್ಣೋಯ್​ ತಲಾ ಮೂರು ಪಡೆದು ಮಿಂಚಿದರೆ, ಅರ್ಷದೀಪ್​ ಸಿಂಗ್​, ಅಕ್ಷರ್​ ಪಟೇಲ್​ ಮತ್ತು ಮುಕೇಶ್​ ಕುಮಾರ್​ ತಲಾ ಒಂದೊಂದು ವಿಕೆಟ್​ ಪಡೆದರು.

    ಇದಕ್ಕೂ ಮುನ್ನ ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ಭಾರತ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 235 ರನ್​ ಕಲೆಹಾಕಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್​ ಮತ್ತು ರುತುರಾಜ್​ ಗಾಯಕ್ವಾಡ್​ ಮೊದಲ ವಿಕೆಟ್​ಗೆ 77 ರನ್​ಗಳ ಜತೆಯಾಟವಾಡಿ ಉತ್ತಮ ಆರಂಭ ಒದಗಿಸಿದರು. ಸ್ಫೋಟಕ ಬ್ಯಾಟಿಂಗ್​ ಮಾಡಿದ ಜೈಸ್ವಾಲ್​ ಕೇವಲ 25 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್​ ನೆರವಿನಿಂದ 53 ರನ್​ ಗಳಿಸಿ ವಿಕೆಟ್​ ಒಪ್ಪಿಸಿದರು.

    ಮೂರನೇ ಕ್ರಮಾಂಕದಲ್ಲಿ ಕ್ರೀಸ್​ಗೆ ಬಂದ ಇಶಾನ್​ ಕಿಶಾನ್​ ಕೂಡ ವೇಗವಾಗಿ ಬ್ಯಾಟ್​ ಬೀಸಿದರು. ಕೇವಲ 32 ಎಸೆತಗಳನ್ನು ಎದುರಿಸಿದ ಕಿಶಾನ್​ 3 ಬೌಂಡರಿ ಮತ್ತು 4 ಸಿಕ್ಸರ್​ ನೆರವಿನಿಂದ 52 ರನ್​ ಗಳಿಸಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ನಾಯಕ ಸೂರ್ಯಕುಮಾರ್​ ಯಾದವ್​ 10 ಎಸೆತಗಳಲ್ಲಿ 1 ಸಿಕ್ಸರ್​ ನೆರವಿನಿಂದ 19 ರನ್​ ಗಳಿಸಿ ಔಟಾದರು.

    ಆರಂಭಿಕರಾಗಿ ಕಣಕ್ಕಿಳಿದು ಕೊನೆಯ ಓವರ್​ವರೆಗೂ ಕ್ರೀಸ್​ನಲ್ಲಿದ್ದ ರುತುರಾಜ್​ ಗಾಯಕ್ವಾಡ್​ ತಾಳ್ಮೆಯ ಆಟವಾಡಿದರು. 43 ಎಸೆತಗಳಲ್ಲಿ 3 ಬೌಂಡರಿ 2 ಸಿಕ್ಸರ್​ ನೆರವಿನೊಂದಿಗೆ 58 ರನ್​ಗಳಿಸಿ ಔಟಾದರು. 19ನೇ ಓವರ್​ನಲ್ಲಿ ಕ್ರೀಸ್​ಗೆ ಬಂದ ಭರವಸೆಯ ಆಟಗಾರ ರಿಂಕು ಸಿಂಗ್​ ಕೊನೆಯಲ್ಲಿ ಅಬ್ಬರಿಸಿ ಬೊಬ್ಬಿರಿದರು. ಕೇವಲ 9 ಎಸೆತಗಳನ್ನು ಎದುರಿಸಿದ ರಿಂಕು 4 ಬೌಂಡರಿ ಮತ್ತು 2 ಸಿಕ್ಸರ್​ ನೆರವಿನಿಂದ 31 ರನ್​ ಗಳಿಸಿ ಅಜೇಯರಾಗಿ ಉಳಿದರು. ತಿಲಕ್​ ವರ್ಮ ಸಹ 7 ರನ್​ಗಳ ಕಾಣಿಕೆ ನೀಡಿ ಅಜೇಯರಾಗಿ ಉಳಿದರು.

    ಆಸೀಸ್​ ಪರ ಮಾರ್ಕಸ್​ ಸ್ಟೋನಿಸ್ ಒಂದು ವಿಕೆಟ್​ ಪಡೆದರೆ, ನಾಥನ್​ ಎಲಿಸ್​ 3 ವಿಕೆಟ್​ ಪಡೆದು ಮಿಂಚಿದರು.

    IPL 2024| ಗುಜರಾತ್​ನಲ್ಲೇ​ ಉಳಿದ ಹಾರ್ದಿಕ್​: ಇಲ್ಲಿದೆ ರಿಟೇನ್​, ರಿಲೀಸ್​ ಆಟಗಾರರ ಸಂಪೂರ್ಣ ಪಟ್ಟಿ…

    IPL 2024| ಗುಜರಾತ್​ ಬಿಟ್ಟು ಮುಂಬೈಗೆ ಬರಲಿಲ್ಲ ಹಾರ್ದಿಕ್​! ರೋಹಿತ್​-ರಿತಿಕಾ ವಿರುದ್ಧ ನೆಟ್ಟಿಗರ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts