More

    ಅನುವಾದದಿಂದ ಮನಸ್ಸು ವಿಮೋಚನೆ

    ಕಲಬುರಗಿ: ಅನುವಾದ ಮನಸ್ಸನ್ನು ವಿಮೋಚನೆಗೊಳಿಸಲು ಮತ್ತು ವಸಾಹಾತುಶಾಹಿ ವಿಚಾರಗಳಿಂದ ಹೊರಬರಲು ಸಹಾಯ ಮಾಡುತ್ತದೆ. ಜತೆಗೆ ಇದು ಒಳಗೊಳ್ಳುವಿಕೆ, ಮಾನವತಾವಾದ ಮತ್ತು ಬಹುಸಂಸ್ಕೃತಿ ತರುತ್ತದೆ. ಪಿತೃಪ್ರಭುತ್ವ, ಏಕಸಂಸ್ಕೃತಿ, ಜನಾಂಗೀಯ ಮುರಿಯಲು ನೆರವಾಗುತ್ತದೆ ಎಂದು ನವದೆಹಲಿಯ ಜೆಎನ್‌ಯು ಪ್ರಾಧ್ಯಾಪಕಿ ಪ್ರೊ.ಇಂದ್ರಾಣಿ ಮುಖರ್ಜಿ ಹೇಳಿದರು.

    ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಮೈಸೂರಿನ ಸಿಐಐಎಲ್ ರಾಷ್ಟ್ರೀಯ ಅನುವಾದ ಮಿಷನ್ ಸಹಯೋಗದಡಿ ಸೋಮವಾರ ಆಯೋಜಿಸಿದ್ದ ಒಂದು ವಾರದ ಭಾರತೀಯ ಭಾಷೆಗಳಲ್ಲಿ ಭಾಷಾಂತರ ಕುರಿತು ಕೌಶಲ ಅಭಿವೃದ್ಧಿ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಾಮಾನ್ಯವಾಗಿ ನಮಗೆ ಆಸಕ್ತಿ ಇರುವ ವಿಷಯ ಅನುವಾದ ಮಾಡುತ್ತೇವೆ. ಕೆಲವೊಮ್ಮೆ ಪ್ರಾಯೋಜಿಸಿದ ವಿಷಯ ಕುರಿತು ಮಾಡಬೇಕಾಗುತ್ತದೆ. ಇದು ವಿಭಿನ್ನ ದೃಷ್ಟಿಕೋನ, ಪರಿಸ್ಥಿತಿ, ಆಲೋಚನೆಗಳಿಗೆ ಸಹಾಯ ಮಾಡುತ್ತದೆ. ಅನುವಾದಕ ಅನೇಕ ಸಂಸ್ಕೃತಿ ಮತ್ತು ಭಾಷೆ ತಿಳಿದುಕೊಳ್ಳುತ್ತಾನೆ. ಭಾಷೆ ಪರಮಾಣು ಬಾಂಬ್ ಇದ್ದಂತೆ. ಅದು ಅರ್ಥಗಳನ್ನು ಹೊರಸೂಸುತ್ತದೆ ಮತ್ತು ವಿಭಿನ್ನ ಸಂಸ್ಕೃತಿ ಹರಡುತ್ತದೆ ಎಂದರು.

    ಭಾರತೀಯ ಅನುವಾದ ಇತಿಹಾಸ ಕುರಿತು ತಿಳಿಸಿದ ಪ್ರೊ.ಇಂದ್ರಾಣಿ, ಭಾರತೀಯ ಕೃತಿಗಳ ಅನುವಾದ ಇತಿಹಾಸ ವ್ಯವಹಾರ ಮಾರ್ಗಕ್ಕೆ ಸಂಬAಧಿಸಿದೆ. ಭಾರತದ ಅಂತಾರಾಷ್ಟ್ರೀಯ ವ್ಯಾಪಾರದೊಂದಿಗೆ ಭಾರತೀಯ ಮಹಾಕಾವ್ಯಗಳಾದ ಮಹಾಭಾರತ, ರಾಮಾಯಣ ಮತ್ತು ಜಾತಕ ಕಥೆಗಳನ್ನು ಯುರೋಪಿಯನ್ ಮತ್ತು ಏಷ್ಯನ್ ಭಾಷೆಗಳಿಗೆ ಅನುವಾದಿಸಲಾಗಿದೆ. ಅನುವಾದದ ಮೂಲಕ ಚೆಸ್ ಕೂಡ ಸ್ಪೇನ್‌ಗೆ ಹೋಗಿದೆ ಎಂದು ಹೇಳಿದರು.

    ಮೈಸೂರಿನ ರಾಷ್ಟ್ರೀಯ ಅನುವಾದ ಮಿಷನ್ ಅಧಿಕಾರಿ ಡಾ.ತಾರೀಖ್ ಖಾನ್ ಮಾತನಾಡಿ, ಭಾರತದ ಆರ್ಥಿಕ ಶಕ್ತಿ ಮತ್ತು ಜ್ಞಾನ ಆಧಾರಿತ ಆರ್ಥಿಕತೆಗೆ ಅನುವಾದದ ಅಗತ್ಯವಿದೆ. ಭಾರತ ಬಹುಭಾಷಾ ದೇಶ. ಭಾಷಾಂತರದ ಪ್ರಾಮುಖ್ಯ ಅರ್ಥ ಮಾಡಿಕೊಳ್ಳುವುದು ಮತ್ತು ಮಾತೃಭಾಷೆಯಲ್ಲಿ ಉನ್ನತ ಶಿಕ್ಷಣ ಒದಗಿಸಲು ಭಾರತೀಯ ಜ್ಞಾನ ಆಯೋಗ ೨೦೦೮ರಲ್ಲಿ ರಾಷ್ಟ್ರೀಯ ಭಾಷಾಂತರ ಮಿಷನ್ ಸ್ಥಾಪಿಸುವಂತೆ ಸೂಚಿಸಿತು ಎಂದು ತಿಳಿಸಿದರು.

    ನಾವು ಉನ್ನತ ಶಿಕ್ಷಣ ಪಠ್ಯಪುಸ್ತಕ ಮತ್ತು ಓದುವ ಸಾಮಗ್ರಿಗಳನ್ನು ೨೨ ಭಾರತೀಯ ಭಾಷೆಗಳಲ್ಲಿ ಭಾಷಾಂತರಿಸುವ ಕೆಲಸ ಪ್ರಾರಂಭಿಸಿದ್ದೇವೆ. ನಮ್ಮ ವಿದ್ಯಾರ್ಥಿಗಳು ವಿಷಯಗಳಲ್ಲಿ ಉತ್ತಮವಾಗಿದ್ದರೂ ಇಂಗ್ಲಿಷ್ ಮಾಧ್ಯಮದಿಂದಾಗಿ ಉನ್ನತ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದು ಮತ್ತು ಅನುವಾದದ ವಿಶ್ವಾಸಾರ್ಹತೆ ಬಹಳ ಮುಖ್ಯ. ದೇಶದಲ್ಲಿ ಈ ವ್ಯವಸ್ಥೆ ಸೃಷ್ಟಿಸಲು ನಾವು ವಿವಿಧ ವಿಶ್ವವಿದ್ಯಾಲಯ, ಸಂಸ್ಥೆ ಮತ್ತು ಪ್ರಕಾಶಕರೊಂದಿಗೆ ಅರ್ಹ ಅನುವಾದಕರು ಸೇರಿ ವಿಶ್ವಾಸಾರ್ಹ ಓದುವ ಸಾಮಗ್ರಿ ರಚಿಸುವ ಕೆಲಸ ಮಾಡುತ್ತಿರುವುದಾಗಿ ಹೇಳಿದರು.

    ನಮ್ಮದು (ರಾಷ್ಟ್ರೀಯ ಭಾಷಾಂತರ ಮಿಷನ್) ಭಾರತದಲ್ಲಿನ ಅನುವಾದ ಕಾರ್ಯಗಳ ಅತ್ಯುನ್ನತ ಸಂಸ್ಥೆ. ಸರ್ಕಾರಿ ಏಜೆನ್ಸಿ, ಖಾಸಗಿ ಸಂಸ್ಥೆ ಮತ್ತು ಕಂಪನಿಗಳಿಗೆ ಕೆಲಸ ಮಾಡಲಾಗುತ್ತಿದೆ. ಈಗ ಭಾರತೀಯ ಸಂವಿಧಾನವನ್ನು ೧೧ ಭಾಷೆ, ವಿವಿಧ ಸರ್ಕಾರಿ ಕಾಯ್ದೆ ಮತ್ತು ನೀತಿ, ಪಠ್ಯ ಪುಸ್ತಕಗಳನ್ನು ೨೨ ಭಾರತೀಯ ಭಾಷೆಗಳಿಗೆ ಭಾಷಾಂತರಿಸಲಾಗುತ್ತಿದೆ. ಮಾತೃಭಾಷೆ ಮತ್ತು ಬಹುಶಿಸ್ತೀಯ ಸಂಶೋಧನೆಯಲ್ಲಿ ಶಿಕ್ಷಣ ಒದಗಿಸುವುದಕ್ಕೆ ಒತ್ತು ನೀಡುವ ಮೂಲಕ ಅನುವಾದದ ಮಹತ್ವ ಹೆಚ್ಚಿಸಿದೆ. ಎಲ್ಲ ಭಾಷೆಗಳಲ್ಲಿ ಅರ್ಹ ಅನುವಾದಕ ಪ್ರತಿಭೆಗಳನ್ನು ಸೃಷ್ಟಿಸಲು ದೇಶವ್ಯಾಪಿ ಇಂಥ ಕಾರ್ಯಾಗಾರ ನಡೆಸಲಾಗುತ್ತಿದೆ ಎಂದು ತಿಳಿಸಿದರು.

    ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಮಾತನಾಡಿ, ಬರೀ ಕಾದಂಬರಿಗಳನ್ನು ಅನುವಾದಿಸಿದರೆ ಸಾಲದು. ವೈಜ್ಞಾನಿಕ, ತಾಂತ್ರಿಕ ಆವಿಷ್ಕಾರ ಮತ್ತು ಬರಹಗಳು, ನ್ಯಾಯಾಲಯದ ಪ್ರಕ್ರಿಯೆ ಮತ್ತು ಆಡಳಿತಾತ್ಮಕ ನಿರ್ಧಾರ, ನೀತಿಗಳನ್ನು ಭಾಷಾಂತರಿಸಬೇಕು ಎಂದು ಸಲಹೆ ನೀಡಿದರು.
    ಮಾನವಿಕ ಮತ್ತು ಭಾಷಾ ನಿಕಾಯ ಡೀನ್ ಪ್ರೊ.ವಿಕ್ರಮ ವಿಸಾಜಿ ಮಾತನಾಡಿ, ಅನುವಾದವಿಲ್ಲದೆ ಯಾವುದೂ ಚಲಿಸುವುದಿಲ್ಲ. ಅನುವಾದಗಳಿಂದಾಗಿ ಭಾರತೀಯ ಮತ್ತು ಜಾಗತಿಕ ಬರಹಗಾರರನ್ನು ತಿಳಿದುಕೊಳ್ಳಲು ಸಾಧ್ಯವಾಗಿದೆ. ಸಿಯುಕೆ ಭಾಷಾಂತರ ಅಧ್ಯಯನ ವಿಭಾಗ ಪ್ರಾರಂಭಿಸಲು ಯೋಜಿಸುತ್ತಿದೆ. ಈ ಕಾರ್ಯಾಗಾರ ಆ ದಿಕ್ಕಿನಲ್ಲಿ ಒಂದು ಪ್ರಯತ್ನ ಎಂದು ಹೇಳಿದರು.

    ಸಂಯೋಜಕಿ ಡಾ.ಅಂಕಿತಾ ಸತ್ಪತಿ ಸ್ವಾಗತಿಸಿದರು. ಡಾ.ಕುಮಾರ್ ಮಂಗಲಂ ನಿರೂಪಣೆ ಮಾಡಿ ವಂದಿಸಿದರು. ಡಾ.ಸ್ವಪ್ನಿಲ್ ಚಾಪೇಕರ್ ಪ್ರಾರ್ಥನಾಗೀತೆ ಹಾಡಿದರು. ಪ್ರೊ.ಶಿವಗಂಗಾ ರುಮ್ಮಾ, ಪ್ರೊ.ಸುನಿತಾ ಮಂಜನಬೈಲ್, ಪ್ರೊ.ಭೀಮರಾವ ಭೋಸಲೆ ಇತರರಿದ್ದರು.

    ಮಾತೃಭಾಷೆಯಲ್ಲಿ ಸಾಹಿತ್ಯ ಲಭ್ಯವಾಗದ್ದರಿಂದ ಅನೇಕ ಜನ ಅದರ ಪ್ರಯೋಜನ ಮತ್ತು ನ್ಯಾಯದಿಂದ ವಂಚಿತರಾಗಿದ್ದಾರೆ. ಎಲ್ಲ ರಂಗಗಳಲ್ಲೂ ಮಾತೃಭಾಷೆ ಅಳವಡಿಸಿಕೊಂಡು ಹೇಗೆ ಪ್ರಗತಿ ಸಾಧಿಸಲಾಯಿತು ಎಂಬುದನ್ನು ಜರ್ಮನಿ, ಜಪಾನ್‌ಗಳಿಂದ ಕಲಿಯಬೇಕಿದೆ.
    | ಪ್ರೊ.ಬಟ್ಟು ಸತ್ಯನಾರಾಯಣ ಕುಲಪತಿ, ಸಿಯುಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts