More

    ಅಕ್ಕನ ವಿಚಾರ ಸರ್ವಕಾಲಕ್ಕೂ ಪ್ರಸ್ತುತ

    ಭಾಲ್ಕಿ: ಅಕ್ಕಮಹಾದೇವಿ ಅವರ ವಿಚಾರಧಾರೆ, ಚಿಂತನೆಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ. ಅಕ್ಕನ ವಚನಗಳಲ್ಲಿ ಬದುಕಿನ ಮೌಲ್ಯತೆ ಅಡಗಿವೆ ಎಂದು ವಿಜಯಪುರದ ಅಕ್ಕಮಹಾದೇವಿ ವಿಶ್ವವಿದ್ಯಾಲಯ ಕುಲಪತಿ ತುಳಸಿಮಾಲಾ ಹೇಳಿದರು.

    ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಹಿರೇಮಠ ಸಂಸ್ಥಾನ ಸೋಮವಾರ ಆಯೋಜಿಸಿದ್ದ ವಚನ ಜಾತ್ರೆ, ಅಕ್ಕಮಹಾದೇವಿ ಜಯಂತಿ, ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ೨೫ನೇ ಸ್ಮರಣೋತ್ಸವ ಸಮಾರಂಭ ಉದ್ಘಾಟಿಸಿದ ಅವರು, ಅಕ್ಕಮಹಾದೇವಿ ಜೀವನ-ಸಾಧನೆ ನಮಗೆಲ್ಲ ಮಾದರಿ. ಅಕ್ಕ ಮಹಾ ತಪಸ್ವಿ, ಅಧ್ಯಾತ್ಮದ ಅರಿವು ಮೂಡಿಸುವ ಜ್ಯೋತಿ ಆಗಿದ್ದರು. ವೈಭವ, ಆಡಂಬರ, ಅರಸೊತ್ತಿಗೆ ಜೀವನವನ್ನು ಧಿಕ್ಕರಿಸಿ ದೈವದ ಕಡೆ ಸಾಗಿದ್ದರು. ವಚನ ಚಳವಳಿ ಮೂಲಕ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದ್ದರು ಎಂದರು.

    ಗಡಿಯಲ್ಲಿ ಹಿರೇಮಠ ಸಂಸ್ಥಾನದಿಂದ ಸಾಮಾಜಿಕ ಕ್ರಾಂತಿ ನಡೆದಿದೆ. ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ನೇತೃತ್ವದಲ್ಲಿ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಗಳ ಜತೆ ಕನ್ನಡ ಭಾಷೆ, ಸಂಸ್ಕೃತಿ, ಉಳಿಸಿ ಬೆಳೆಸುವ ಕೆಲಸ ನಡೆಯುತ್ತಿರುವುದು ಮಾದರಿ ಎನಿಸಿದೆ. ಅಕ್ಕಮಹಾದೇವಿ, ಡಾ.ಚನ್ನಬಸವ ಪಟ್ಟದ್ದೇವರ ಆದರ್ಶ ಎಲ್ಲರ ಜೀವನಕ್ಕೆ ಪ್ರೇರಣೆ ಆಗಲಿ ಎಂದು ಆಶಯ ವ್ಯಕ್ತಪಡಿಸಿದರು.

    ಬೆಂಗಳೂರಿನ ಖ್ಯಾತ ಚಿಂತಕ ಎಸ್.ಜಿ. ಸಿದ್ಧರಾಮಯ್ಯ ಮಾತನಾಡಿ, ಇಂದಿನ ಯುವ ಪೀಳಿಗೆಗೆ ವಚನ ಸಾಹಿತ್ಯ ಚಳವಳಿಯ ಇತಿಹಾಸ ತಿಳಿಹೇಳುವ ಕೆಲಸ ಆಗಬೇಕಿದೆ ಎಂದರು.

    ದಿವ್ಯ ಸಾನ್ನಿಧ್ಯ ವಹಿಸಿದ್ದ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿದರು. ಮಾಜಿ ಶಾಸಕ ಪ್ರಕಾಶ ಖಂಡ್ರೆ ಬಸವಗುರು ಪೂಜೆ ನೆರವೇರಿಸಿದರು.

    ಹುಲಸೂರು ಗುರುಬಸವೇಶ್ವರ ಸಂಸ್ಥಾನ ಮಠದ ಶ್ರೀ ಡಾ.ಶಿವಾನಂದ ಸ್ವಾಮೀಜಿ, ಜಹೀರಾಬಾದ್ ಮಲ್ಲಯ್ಯಗಿರಿ ಬೆಟ್ಟದ ಶ್ರೀ ಡಾ.ಬಸವಲಿಂಗ ಅವಧೂತರು, ಉತ್ತಂಗಿ ಕೊಟ್ಟೂರು ಗುರುಬಸವೇಶ್ವರ ಸಂಸ್ಥಾನ ಮಠದ ಜಗದ್ಗುರು ಶ್ರೀ ಸೋಮಶಂಕರ ಸ್ವಾಮೀಜಿ, ಬೆಂಗಳೂರು ಸರ್ಪಭೂಷಣ ಶಿವಯೋಗಿ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಅತ್ತಿವೇರಿಯ ಪೂಜ್ಯ ಬಸವೇಶ್ವರಿ ತಾಯಿ, ಪೂಜ್ಯ ಡಾ.ಮಹಾದೇವಮ್ಮ ತಾಯಿ, ಪೂಜ್ಯ ಮಾತೆ ಮೈತ್ರಾದೇವಿ ಸಾನ್ನಿಧ್ಯ ವಹಿಸಿದ್ದರು.

    ಕಲಬುರಗಿಯ ನಿವೃತ್ತ ಕೆಎಎಸ್ ಅಧಿಕಾರಿ ಎಸ್.ಎಸ್. ದಿವಾಕರ್, ಭಾರತೀಯ ಬಸವ ಬಳಗದ ರಾಜ್ಯಾಧ್ಯಕ್ಷ ಬಾಬು ವಾಲಿ, ಹಿರಿಯ ಮುಖಂಡ ಗುರುನಾಥ ಕೊಳ್ಳುರ್, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ಶಕುಂತಲಾ ಬೆಲ್ದಾಳೆ, ಶಿವರಾಜ ಗಂದಗೆ, ಮಲ್ಲಮ್ಮ ಆರ್.ಪಾಟೀಲ್ ಇತರರಿದ್ದರು. ಶಿವಕುಮಾರ ಪಂಚಾಳ ಮತ್ತು ಸಂಗಡಿಗರು ವಚನ ಸಂಗೀತ ನಡೆಸಿಕೊಟ್ಟರು. ನವಲಿಂಗ ಪಾಟೀಲ್ ನಿರೂಪಣೆ ಮಾಡಿದರು.

    ಗ್ರಂಥ ಬಿಡುಗಡೆ: ಲೇಖಕ ಎಸ್.ಜಿ. ಸಿದ್ಧರಾಮಯ್ಯ ಬರೆದ `ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣ’ ಗ್ರಂಥವನ್ನು ನಾರಾಂಜಾ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಡಿ.ಕೆ. ಸಿದ್ರಾಮ ಬಿಡುಗಡೆಗೊಳಿಸಿದರು. ಇದೇ ವೇಳೆ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಬರೆದ ವಚನ ಸಂಜೀವಿನಿ ಎರಡನೇ ಮುದ್ರಣ ಬಿಡುಗಡೆ ಮಾಡಲಾಯಿತು. ವಿಧಾನ ಪರಿಷತ್ ಸದಸ್ಯ, ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಎಂಎಲ್‌ಸಿ ಶಶೀಲ್ ನಮೋಶಿ, ಹಿರಿಯ ಪತ್ರಕರ್ತರಾದ ಅಪ್ಪಾರಾವ ಸೌದಿ, ಗುರುರಾಜ ಕುಲಕರ್ಣಿ, ಶಶಿಕಾಂತ ಶೆಂಬೆಳ್ಳಿ ಅವರನ್ನು ಶ್ರೀಮಠದ ಪರವಾಗಿ ಸನ್ಮಾನಿಸಲಾಯಿತು.

    ೨೦೨೫ರೊಳಗೆ ಕಾಮಗಾರಿ ಪೂರ್ಣ: ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ಕಾಮಗಾರಿ ಅತ್ಯಂತ ವೇಗದಿಂದ ಸಾಗಿದ್ದು, ೨೦೨೫ರೊಳಗೆ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು. ಬಸವಣ್ಣನವರ ನಂತರ ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ಮತ್ತು ಡಾ.ಭೀಮಣ್ಣ ಖಂಡ್ರೆ ಸೇರಿ ಅನುಭವ ಮಂಟಪ ನಿರ್ಮಿಸಿದ್ದರ ಪರಿಣಾಮ ಪ್ರಸ್ತುತ ಹೊಸ ಅನುಭವ ಮಂಟಪ ಕೆಲಸ ನಡೆಯುತ್ತಿದೆ ಎಂದರು. ಸಿದ್ದರಾಮಯ್ಯ ಈ ಮೊದಲು ಸಿಎಂ ಆಗಿದ್ದಾಗ ಅನುಭವ ಮಂಟಪ ಕಟ್ಟಡದ ನೀಲಿನಕ್ಷೆ ಸಿದ್ಧಪಡಿಸಿದರಿಂದ ಹಿಂದಿನ ಸರ್ಕಾರ ಅನುದಾನ ಬಿಡುಗಡೆಗೊಳಿಸಿತು. ಮತ್ತೆ ಇದೀಗ ಸಿಎಂ ಸಿದ್ದರಾಮಯ್ಯ ಅನುಭವ ಮಂಟಪ ಕಟ್ಟಡಕ್ಕೆ ಅನುದಾನ ಬಿಡುಗಡೆ ಮಾಡಿಸಿದ್ದಾರೆ. ಹೀಗಾಗಿ ಯಾವ ಕಾರಣಕ್ಕೂ ಅನುದಾನದ ಕೊರತೆ ಆಗುವುದಿಲ್ಲ. ನಿಗದಿತ ಅವಧಿಯಲ್ಲಿ ಕೆಲಸ ಪೂರ್ಣಗೊಂಡು ಉದ್ಘಾಟನೆಗೊಳ್ಳಲಿದೆ ಎಂದು ತಿಳಿಸಿದರು.

    ಬಸವಾದಿ ಶರಣರು ವಚನಗಳ ರಕ್ಷಣೆಗಾಗಿ ರಕ್ತದ ಕ್ರಾಂತಿ ಹರಿಸಿದ್ದಾರೆ. ಶರಣರ ತ್ಯಾಗ, ಬಲಿದಾನದ ಪರಿಣಾಮ ನಮಗೆ ವಚನಗಳು ಜೀವಂತಿಕೆಯಾಗಿ ಸಿಕ್ಕಿವೆ. ಅವುಗಳ ಮಹತ್ವವನ್ನು ನಾವೆಲ್ಲರೂ ತಿಳಿದುಕೊಂಡು ಅದರಂತೆ ನಡೆಯುವ ಪ್ರಯತ್ನ ಮಾಡಬೇಕಾಗಿದೆ.
    | ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts