More

    ವೀರಶೈವ-ಲಿಂಗಾಯತ ಎರಡು ಒಂದೆ

    ಔರಾದ್: ಲಿಂಗಾಯತ, ವೀರಶೈವ ಎರಡು ಒಂದೆ. ಹೆಸರು ಬೇರೆಯಾದರೂ ಧರ್ಮ ಒಂದೇ ಆಗಿದೆ. ಆದ್ದರಿಂದ ಎಲ್ಲರೂ ಸೇರಿ ಧರ್ಮ ಪಾಲನೆ ಮಾಡಬೇಕು ಎಂದು ಗದಗ ಜಿಲ್ಲೆ ಮುಂಡರಗಿ ಸಂಸ್ಥಾನ ಮಠದ ಜಗದ್ಗುರು ನಾಡೋಜ ಶ್ರೀ ಡಾ.ಅನ್ನದಾನೇಶ್ವರ ಶಿವಯೋಗಿಗಳು ಹಿತೋಪದೇಶ ನೀಡಿದರು.

    ಹೆಡಗಾಪುರ ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ಶ್ರೀ ಶಿವಲಿಂಗೇಶ್ವರ ಸಂಸ್ಥಾನ ಮಠದ ಶ್ರೀ ಶಿವಲಿಂಗ ಶಿವಾಚಾರ್ಯರ ಗುರುವಂದನೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಲಿಂಗ ಧಾರಣೆ ಮಾಡುವವರೆಲ್ಲರೂ ಲಿಂಗಾಯತರು. ಇದರಲ್ಲಿ ವೀರಶೈವ, ಲಿಂಗಾಯತ ಎಂಬ ಪ್ರತ್ಯೇಕತೆ ಇಲ್ಲ. ಎಲ್ಲರೂ ಸೇರಿ ಧರ್ಮದ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.

    ಪ್ರತಿಯೊಬ್ಬರೂ ಇಷ್ಟಲಿಂಗ ಪೂಜೆ ಮಾಡುವ ಜತೆಗೆ ವಿಭೂತಿ ಹಚ್ಚಿಕೊಳ್ಳಬೇಕು. ರುದ್ರಾಕ್ಷಿ ಧಾರಣೆಯಿಂದ ನಮ್ಮ ಧರ್ಮದ ಸಂಸ್ಕೃತಿ ಪಾಲನೆಯಾಗುತ್ತದೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಭಾತಂಬ್ರಾ ನಿರಂಜನ ಸಂಸ್ಥಾನ ಮಠದ ಜಗದ್ಗುರು ಶ್ರೀ ಶಿವಯೋಗೀಶ್ವರ ಸ್ವಾಮೀಜಿ ಮಾತನಾಡಿ, ಮನುಷ್ಯ ತನ್ನ ದೇಹದ ಬಗ್ಗೆ ಅರಿಯದಿದ್ದರೆ ದೇವರ ಬಗ್ಗೆ ಎಂದಿಗೂ ಅರಿಯಲಾರ. ನಿತ್ಯ ಧ್ಯಾನ, ಪೂಜೆ, ಇಷ್ಟಲಿಂಗ ಸಂಧಾನ ಮಾಡಿ ದೇಹವೇ ದೇವಾಲಯ ಮಾಡಿಕೊಳ್ಳಬೇಕು ಎಂದು ತಿಳಿಹೇಳಿದರು.

    ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹುಲಸೂರಿನ ಶ್ರೀ ಡಾ.ಶಿವಾನಂದ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಚಿಟಗುಪ್ಪದ ಶ್ರೀ ಗುರುಲಿಂಗ ಶಿವಾಚಾರ್ಯ, ಹಲಬರ್ಗಾದ ಶ್ರೀ ಹಾವಗಿಲಿಂಗ ಶಿವಾಚಾರ್ಯ, ಹಣೆಗಾಂವದ ಶ್ರೀ ಶಂಕರಲಿಂಗ ಶಿವಾಚಾರ್ಯ, ಠಾಣಾಕುಶನೂರಿನ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಡಾಕುಳಗಿಯ ಶ್ರೀ ಚನ್ನಬಸವ ಸ್ವಾಮೀಜಿ, ಕೌಳಾಸದ ಶ್ರೀ ಬಸವಲಿಂಗ ಶಿವಾಚಾರ್ಯ, ರಟಕಲ್‌ನ ಶ್ರೀ ಸಿದ್ಧರಾಮ ಸ್ವಾಮೀಜಿ, ನಾಗೂರಿನ ಶ್ರೀ ಅಲ್ಲಮಪ್ರಭುಲಿಂಗೇಶ್ವರ ಸ್ವಾಮೀಜಿ, ಹುಡಗಿಯ ಶ್ರೀ ಚೆನ್ನಮಲ್ಲ ಸ್ವಾಮೀಜಿ, ಸಾಯಗಾಂವದ ಶ್ರೀ ಶಿವಾನಂದ ಸ್ವಾಮೀಜಿ, ಗಂಜಿಕಟ್ಟಿ ಶ್ರೀ ಶಿವಲಿಂಗ ಶಿವಾಚಾರ್ಯ, ಮಂಠಾಳ ಶ್ರೀ ಅಭಿನವ ಚೆನ್ನಬಸವ ಸ್ವಾಮೀಜಿ, ಚಿಟಗುಪ್ಪ ಶ್ರೀ ಗುರುಲಿಂಗ ಶಿವಾಚಾರ್ಯ ಮಾತನಾಡಿದರು.

    ಶಿವಕುಮಾರ ತರನಳ್ಳಿ ಉಪನ್ಯಾಸ ನೀಡಿದರು. ರಾಜಶ್ರೀ ಶ್ರೀಕಾಂತ ಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ಶ್ರೀ ಕೇದಾರಲಿಂಗ ದೇವರು, ಶ್ರೀ ಬೊಮ್ಮಲಿಂಗ ದೇವರು, ಶ್ರೀ ರವಿಕಿರಣ ದೇವರು, ಶ್ರೀ ಭೋಜಲಿಂಗ ದೇವರು, ಶ್ರೀ ಷಡಕ್ಷರಿ ದೇವರು, ಶ್ರೀ ಶಿವಬಸವ ದೇವರು, ಶ್ರೀ ರಾಚೋಟೇಶ್ವರ ದೇವರು, ಪ್ರಮುಖರಾದ ಶ್ರೀಮಂತ ಪಾಟೀಲ್, ರಾಜಶೇಖರ ಪಾಟೀಲ್, ಹಣಮಂತ ಪಾಟೀಲ್, ಸುರೇಶ ಶೆಟಕಾರ, ವಿಜಯಕುಮಾರ ಪಾಟೀಲ್, ಸೋಮಶೇಖರ ಪಾಟೀಲ್ ಗಾದಗಿ ಇತರರಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಶ್ರೀಕಾಂತ ಸ್ವಾಮಿ ಸ್ವಾಗತಿಸಿದರು. ನವಲಿಂಗ ಪಾಟೀಲ್ ನಿರೂಪಣೆ ಮಾಡಿದರು. ಶಿವಕಾಂತ ಸ್ವಾಮಿ ವಂದಿಸಿದರು.

    ಇಂದಿನ ಕಾರ್ಯಕ್ರಮ: ಸೋಮವಾರ ಬೆಳಗ್ಗೆ ೬ಕ್ಕೆ ಉಜ್ಜಯಿನಿ ಜಗದ್ಗುರು ಶ್ರೀ ಸಿದ್ಧಲಿಂಗರಾಜ ದೇಶಿಕೇಂದ್ರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಕೇದಾರಲಿಂಗ ದೇವರಿಗೆ ಷ.ಬ್ರ ೧೦೮ ದಾರುಕಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ಎಂಬ ನಾಮಾಂಕಿತ ನೀಡಿ ಗುರುಪಟ್ಟಾಧಿಕಾರ ಜರುಗಲಿದೆ. ದೇಶದ ವಿವಿಧ ಮಠಾಧೀಶರು ಭಾಗವಹಿಸಲಿದ್ದಾರೆ. ಬೆಳಗ್ಗೆ ೧೦ಕ್ಕೆ ಧರ್ಮಸಭೆ ಮತ್ತು ಪೀಠಾರೋಹಣ, ಸಂಜೆ ೭ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.

    ಲಡ್ಡು ಸವಿದ ಭಕ್ತರು: ಗುರುವಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾವಿರಾರು ಭಕ್ತರಿಗಾಗಿ ಲಡ್ಡು, ರೊಟ್ಟಿ, ಅನ್ನ, ಸಾಂಬಾರು ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಭಕ್ತರಿಗೆ ಸಮಸ್ಯೆಯಾಗದಂತೆ ಊಟದ ವ್ಯವಸ್ಥೆ ಮಾಡಿ ಗ್ರಾಮಸ್ಥರು ಮೆಚ್ಚುಗೆಗೆ ಪಾತ್ರವಾದರು.

    ಶ್ರೀ ಶಿವಲಿಂಗ ಶಿವಾಚಾರ್ಯರಿಗೆ ರುದ್ರಾಕ್ಷಿ ತುಲಾಭಾರ: ಗ್ರಾಮ ಹೊರವಲಯದ ವಿಶಾಲ ವೇದಿಕೆಯಲ್ಲಿ ಜಿಲ್ಲೆ ಸೇರಿ ನೆರ ರಾಜ್ಯಗಳ ಸಹಸ್ರಾರು ಭಕ್ತರ ಸಮ್ಮುಖ ಮುತ್ತೈದೆಯರಿಂದ ಶ್ರೀ ಶಿವಲಿಂಗ ಶಿವಾಚಾರ್ಯರ ತೊಟ್ಟಿಲು, ರುದ್ರಾಕ್ಷಿಯಿಂದ ತುಲಾಭಾರ ನೆರವೇರಿತು. ಶ್ರೀಗಳ ಕುರಿತು ಕರ್ನಾಟಕದ ಉತ್ತರ ಪ್ರಾಂತ ವಿಶ್ವ ಹಿಂದು ಪರಿಷತ್ ಕಾರ್ಯಕಾರಿಣಿ ಸದಸ್ಯ ರಾಮಕೃಷ್ಣನ್ ಸಾಳೆ ಹೊರತಂದಿರುವ ಶ್ರೇಷ್ಠ ಸಂತ ಶಿವಲಿಂಗ ಶಿವಾಚಾರ್ಯರು ಗ್ರಂಥ ಲೋಕಾರ್ಪಣೆ ಮಾಡಲಾಯಿತು. ಶ್ರೀ ಕೇದಾರಲಿಂಗ ದೇವರು ಸೇರಿ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts