More

    ಕಾಶ್ಮೀರಿ ಯುವಕರಿಗೆ ಪಾಕ್​ನ ವಿದ್ಯಾರ್ಥಿವೇತನ, ಭದ್ರತಾಪಡೆಗಳ ಹದ್ದಿನಕಣ್ಣು

    ನವದೆಹಲಿ: ಪಾಕಿಸ್ತಾನ ಅಥವಾ ಪಾಕ್​ ಆಕ್ರಮಿತ ಕಾಶ್ಮೀರದಲ್ಲಿರುವ ಇಂಜಿನಿಯರಿಂಗ್​ ಮತ್ತು ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡಲು 1,600 ಕಾಶ್ಮೀರಿ ಯುವಕರಿಗೆ ವಿದ್ಯಾರ್ಥಿವೇತನ ನೀಡುವ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಅವರ ಹುನ್ನಾರಕ್ಕೆ ಹಿನ್ನಡೆಯಾಗಿದೆ. ಈ ಯೋಜನೆಯ ಪ್ರಯೋಜನ ಪಡೆಯುವ ಕಾಶ್ಮೀರಿ ಯುವಕರ ಮೇಲೆ ಹದ್ದಿನಕಣ್ಣಿಡಲು ಭಾರತದ ಭದ್ರತಾಪಡೆಗಳು ಮುಂದಾಗಿರುವುದು ಇದಕ್ಕೆ ಕಾರಣ.

    ಪಾಕಿಸ್ತಾನದಲ್ಲಿನ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡಲು ವಾಘಾ-ಅಟ್ಟಾರಿ ಗಡಿದ್ವಾರದ ಮೂಲಕ ಹೋಗುವ ಯುವಕರು ಬಳಿಕ ಪಾಕ್​ನಲ್ಲಿ ಉಗ್ರಸಂಘಟನೆಗಳ ದುರ್ಬೋಧನೆಗೆ ಒಳಗಾಗಿ ಉಗ್ರರಾಗಿ ಮಾರ್ಪಟ್ಟು ಗಡಿ ನಿಯಂತ್ರಣ ರೇಖೆ ಮೂಲಕ ಭಾರತದೊಳಗೆ ನುಸುಳಿ ಭಯೋತ್ಪಾದನಾ ಚಟುವಟಿಕೆ ನಡೆಸಿದ ಸಾಕಷ್ಟು ನಿರ್ದಶನಗಳಿವೆ. ಈ ಹಿನ್ನೆಲೆಯಲ್ಲಿ ಭದ್ರತಾಪಡೆಗಳು ಪಾಕಿಸ್ತಾನದ ವಿದ್ಯಾರ್ಥಿವೇತನದ ಗಾಳಕ್ಕೆ ಸಿಲುಕುವ ಕಾಶ್ಮೀರಿ ಯುವಕರ ಮೇಲೆ ಕಣ್ಣಿಡಲು ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

    ಈ ವರ್ಷದ ಆರಂಭದಲ್ಲಿ ನಡೆದ ಪಾಕಿಸ್ತಾನದ ಸಂಸತ್​ ಅಧಿವೇಶನದಲ್ಲಿ ಪ್ರಧಾನಿ ಇಮ್ರಾನ್​ ಖಾನ್​ 1,600 ಎಂಬ ಯೋಜನೆಯನ್ನು ಘೋಷಿಸಿದ್ದರು. ಈ ಯೋಜನೆಯಡಿ ಕಾಶ್ಮೀರದ 1,600 ಯುವಕರಿಗೆ ಪಾಕಿಸ್ತಾನ ಇಲ್ಲವೇ ಪಾಕ್​ ಆಕ್ರಮಿತ ಕಾಶ್ಮೀರದಲ್ಲಿರುವ ಇಂಜಿನಿಯರಿಂಗ್​ ಅಥವಾ ವೈದ್ಯಕೀಯ ಕಾಲೇಜಿನಲ್ಲಿ ಅಧ್ಯಯನ ಮಾಡುವಂತೆ ಆಕರ್ಷಿಸುವುದು ಅವರ ಉದ್ದೇಶವಾಗಿತ್ತು. ಹಾಗೆ ಬರುವ ಯುವಕರ ತಲೆತಿಕ್ಕಿ, ಭಾರತದ ವಿರುದ್ಧ ಅವರೆಲ್ಲರನ್ನೂ ಎತ್ತಿಕಟ್ಟಿ ಛೂ ಬಿಡುವುದು ಅವರ ಹುನ್ನಾರವಾಗಿತ್ತು.

    ಇದನ್ನೂ ಓದಿ: ಏರುತ್ತಲೇ ಇದೆ ಪೆಟ್ರೋಲ್, ಡೀಸೆಲ್ ಬೆಲೆ: ಸತತ ಐದನೇ ದಿನವೂ ದಾಖಲಾಗಿದೆ ಏರಿಕೆ

    ಉನ್ನತ ಶಿಕ್ಷಣದ ಆಸೆಯಲ್ಲಿ 150ಕ್ಕೂ ಹೆಚ್ಚು ಕಾಶ್ಮೀರಿ ಯುವಕರು ಈ ಯೋಜನೆಯ ಲಾಭ ಪಡೆದು ಪಾಕಿಸ್ತಾನ ಮತ್ತು ಪಿಒಕೆಯಲ್ಲಿರುವ ಇಂಜಿನಿಯರಿಂಗ್​ ಮತ್ತು ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಆ ಶಿಕ್ಷಣ ಸಂಸ್ಥೆಗಳ ಪ್ರಮಾಣಪತ್ರಕ್ಕೆ ಭಾರತದಲ್ಲಿ ಮಾನ್ಯತೆ ಇಲ್ಲ ಎನ್ನಲಾಗಿದೆ.

    ವಿದ್ಯಾರ್ಥಿವೇತನ ಪಡೆಯಲು ಬೇಕು ಉಗ್ರರ ಶಿಫಾರಸು: ಪಾಕ್​ ಸರ್ಕಾರ ಘೋಷಿಸಿರುವ 1,600 ವಿದ್ಯಾರ್ಥಿವೇತನ ಪಡೆಯಲು ಕಾಶ್ಮೀರಿ ಯುವಕರು ಸಾಕಷ್ಟು ಕಷ್ಟಪಡಬೇಕಾಗುತ್ತದೆ. ಪ್ರತ್ಯೇಕತಾವಾದಿ ಸಂಘಟನೆ ಹುರಿಯತ್​ ನಾಯಕರು ಇಲ್ಲವೇ ಹಿಜ್ಬುಲ್​ ಮುಜಾಹಿದ್ದೀನ್​ನ ಪ್ರಮುಖ ಉಗ್ರ ಸೈಯದ್​ ಸಲಾಹುದ್ದೀನ್​ ನೇತೃತ್ವದ ಪಿಒಕೆಯ ಮುಜಾಫರಾಬಾದ್​ನಲ್ಲಿ ಇರುವ ಯುನೈಟೆಡ್​ ಜಿಹಾದ್​ ಕೌನ್ಸಿಲ್​ನ ಮುಖಂಡರಿಂದ ಶಿಫಾರಸು ಪತ್ರಗಳನ್ನು ಪಡೆಯುವುದು ಕಡ್ಡಾಯವಾಗಿದೆ.

    ಕೆಲದಿನಗಳ ಹಿಂದೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) ಹುರಿಯತ್​ ನಾಯಕ ನಯೀಂ ಖಾನ್​ ಮನೆಯ ಮೇಲೆ ದಾಳಿ ಮಾಡಿತ್ತು. ಉಗ್ರರಿಗೆ ಅಕ್ರಮವಾಗಿ ಧನಸಹಾಯ ಮಾಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಎನ್​ಐಎ ಈ ದಾಳಿಯನ್ನು ಕೈಗೊಂಡಿತ್ತು. 2018ರಲ್ಲಿ ಆತನ ವಿರುದ್ಧ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಆರೋಪಪಟ್ಟಿಯ ಪ್ರಕಾರ ನಯೀಂ ಖಾನ್​ ಮನೆಯಲ್ಲಿ ಪಿಒಕೆಯ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡಲು ಪ್ರವೇಶಾತಿ ನೀಡುವಂತೆ ಶಿಫಾರಸು ಮಾಡಿ ಯುವತಿಯೊಬ್ಬಳಿಗೆ ಕೊಟ್ಟಿದ್ದ ಪತ್ರದಲ್ಲಿ, ಈಕೆಯ ಕುಟುಂಬ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಕೊಂಡಿದ್ದು, ತುಂಬಾ ಕಷ್ಟದಲ್ಲಿದೆ. ಆದ್ದರಿಂದ, ಈಕೆಗೆ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡಲು ಅಗತ್ಯ ಸಹಾಯ ಮಾಡಬೇಕು ಎಂದು ಬರೆಯಲಾಗಿತ್ತು.

    ಆಡ್ತಾ ಆಡ್ತಾ ಗಿನ್ನೆಸ್​ ದಾಖಲೆ ಬರೆದ 90ರ ಅಜ್ಜಿ: ಈಕೆ ಆಡಿದ್ದಾದರೂ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts