More

    ಹರ್​ದೀಪ್ ನಿಜವಾಗಿ ಆರಿದ್ದು ಹೇಗೆ?; ಟ್ರೂಡೋ ತರಲೆಯಾಟ ಭಾಗ 2

    ಹರ್​ದೀಪ್ ನಿಜವಾಗಿ ಆರಿದ್ದು ಹೇಗೆ?; ಟ್ರೂಡೋ ತರಲೆಯಾಟ ಭಾಗ 2ಹರ್​ದೀಪ್ ಸಿಂಗ್ ನಿಜ್ಜರ್ ತನ್ನ 20ನೇ ವಯಸ್ಸಿನಲ್ಲಿ 1997ರಲ್ಲಿ ರವಿ ಶರ್ಮಾ ಎಂಬ ಸುಳ್ಳು ಹೆಸರಿನಲ್ಲಿ ನಕಲಿ ಪಾಸ್​ಪೋರ್ಟ್​ನೊಂದಿಗೆ ಕೆನಡಾ ಪ್ರವೇಶಿಸಿ, ಭಾರತದಲ್ಲಿ ತನಗೆ ಅಪಾಯವಿರುವ ಕಾರಣ ಕೆನಡಾದಲ್ಲಿ ವಾಸ್ತವ್ಯದ ಪರವಾನಗಿ ನೀಡಬೇಕೆಂದು ಅರ್ಜಿ ಹಾಕಿಕೊಂಡ. ಆತ ಪಂಜಾಬ್ ಪೊಲೀಸರಿಂದ ಕಿರುಕುಳ ಅನುಭವಿಸಿದ್ದರೂ ಕೆನಡಾದಲ್ಲಿ ಆಶ್ರಯ ಪಡೆಯಲು ಅದಷ್ಟೇ ಸೂಕ್ತ ಕಾರಣವಾಗುವುದಿಲ್ಲ ಎಂದು ಹೇಳಿ ಅಲ್ಲಿನ ಸರ್ಕಾರ ಆತನ ಬೇಡಿಕೆಯನ್ನು ತಿರಸ್ಕರಿಸಿತು. ಮುಂದಿನ ಹನ್ನೊಂದೇ ದಿನಗಳಲ್ಲಿ ನಿಜ್ಜರ್ ಕೆನಡಾದ ನಾಗರಿಕಳೊಬ್ಬಳನ್ನು ಮದುವೆಯಾದ ಮತ್ತು ಅದರ ಆಧಾರದ ಮೇಲೆ ಮತ್ತೆ ಕೆನಡಾದ ವೀಸಾಗಾಗಿ ಅರ್ಜಿ ಹಾಕಿದ. ಆದರೆ ಈ ವಿವಾಹ ಕೆನಡಾದಲ್ಲಿ ವಾಸ್ತವ್ಯ ಪರವಾನಗಿ ಪಡೆದುಕೊಳ್ಳಲು ನಿಜ್ಜರ್ ಮಾಡಿಕೊಂಡ ಒಂದು ಅನುಕೂಲಸಿಂಧು ವಿವಾಹವಷ್ಟೇ ಎಂದೆಣಿಸಿದ ಸರ್ಕಾರ ಅವನ ವೀಸಾ ಅರ್ಜಿಯನ್ನು ಮತ್ತೆ ತಿರಸ್ಕರಿಸಿತು. ಆಮೇಲೆ ಆತನಿಗೆ ಕೆನಡಾದ ಪೌರತ್ವ ಯಾವಾಗ? ಹೇಗೆ? ಸಿಕ್ಕಿತು ಎನ್ನುವುದು ಸ್ಪಷ್ಟವಾಗಿಲ್ಲ. ಪ್ರಸಕ್ತ ವಿವಾದ ಆರಂಭವಾದ ನಂತರ ಬಾಯಿ ತೆರೆದ ಟ್ರೂಡೋ ಸರ್ಕಾರದಲ್ಲಿನ ವಲಸೆ ಮಂತ್ರಿ ಮಾರ್ಕ್ ಮಿಲ್ಲರ್, ಆತ 2014ರಲ್ಲಿ ಪೌರತ್ವ ಪಡೆದುಕೊಂಡ ಎಂದು ಹೇಳಿದರು. ಆದರೆ ಒಂದೇ ದಿನದಲ್ಲಿ ತಮ್ಮ ಹೇಳಿಕೆ ಬದಲಾಯಿಸಿ ನಿಜ್ಜರ್ 2007ರಲ್ಲೇ ಕೆನಡಾದ ನಾಗರಿಕನಾದ ಅಂದರು! ಹಾಗಿದ್ದರೆ ಭಾರತದ ತನಿಖಾದಳಗಳ ಮನವಿಯ ಮೇಲೆಗೆ ನಿಜ್ಜರ್​ನ ಬಂಧನಕ್ಕಾಗಿ ಇಂಟರ್​ಪೋಲ್ 2016ರಲ್ಲಿ ಜಾರಿ ಮಾಡಿದ ರೆಡ್ ಕಾರ್ನರ್ ನೋಟೀಸ್​ನಲ್ಲಿ ಆತ ಭಾರತೀಯ ನಾಗರಿಕ ಎಂದು ನಮೂದಾಗಿದ್ದುದೇಕೆ? ಎಂಬ ಪ್ರಶ್ನೆ ಏಳುತ್ತದೆ. ಮತ್ತೆಮತ್ತೆ ಕೇಳಿಕೊಂಡಾಗಲೂ ಆತನ ಕುರಿತಾದ ಸರಿಯಾದ ವಿವರಗಳನ್ನು ಕೆನಡಾ ಸರ್ಕಾರ ಭಾರತಕ್ಕೆ ನೀಡಿರಲಿಲ್ಲವೇ? ಯಾಕಾಗಿ?.

    ಈಗ ನಮ್ಮ ವಿಶ್ಲೇಷಣೆಯನ್ನು ಸರಿಯಾದ ಜಾಡಿನಲ್ಲಿ ಕೊಂಡೊಯ್ಯುವುದಕ್ಕಾಗಿ ನಿಜ್ನರ್​ನ ಕುರಿತಾಗಿ ಇಂಟರ್​ಪೋಲ್ ಜಾರಿ ಮಾಡಿದ ನೋಟೀಸ್ ಮೇಲೆ ಕ್ಷಕಿರಣ ಬೀರೋಣ. ಅಕ್ಟೋಬರ್ 14, 2007ರಂದು ಪಂಜಾಬ್​ನ ಲುಧಿಯಾನಾ ನಗರದ ಶಿಂಗಾರ್ ಸಿನೆಮಾ ಹೌಸ್​ನಲ್ಲಿ ಜನಮ್ ಜನಮ್ ಕೆ ಸಾಥ್ ಎಂಬ ಭೋಜ್​ಪುರಿ ಚಲನಚಿತ್ರ ಪ್ರದರ್ಶಿತವಾಗುತ್ತಿದ್ದಾಗ ಬಾಂಬ್ ಸ್ಪೋಟವಾಗಿ ಆರು ಜನ ಮೃತಪಟ್ಟು ಮೂವತ್ತೇಳು ಜನ ಗಾಯಗೊಂಡರು. ನಂತರ ತನಿಖಾದಳ ಬಂಧಿಸಿದ ನಾಲ್ವರು ಹೇಳಿದ್ದು ಈ ಭಯೋತ್ಪಾದಕ ಕೃತ್ಯದ ಸಂಚುಗಾರ ಕೆನಡಾದಲ್ಲಿ ನೆಲೆ ಹೊಂದಿರುವ ಖಲಿಸ್ತಾನ್ ಟೈಗರ್ ಫೋರ್ಸ್​ನ ಸ್ವಘೊಷಿತ ನಾಯಕ ಹರ್​ದೀಪ್ ಸಿಂಗ್ ನಿಜ್ಜರ್ ಎಂದು. ಇದರರ್ಥ 1997ರಲ್ಲಿ ಕೆನಡಾಗೆ ಅಕ್ರಮವಾಗಿ ಪ್ರವೇಶಿಸಿ ನಾಗರಿಕತ್ವ ಪಡೆಯಲು ಎರಡು ಬಾರಿ ವಿಫಲನಾಗಿ, ಇಂದು ಮಂತ್ರಿ ಮಿಲ್ಲರ್ ಹೇಳಿಕೆಯಂತೆ 2007ರಲ್ಲಿ ಆ ದೇಶದ ನಾಗರಿಕತ್ವ ಗಳಿಸಿಕೊಳ್ಳುವ ಹೊತ್ತಿಗೆ ನಿಜ್ನರ್ ಭಾರತ-ವಿರೋಧಿ ಖಲಿಸ್ತಾನಿ ಭಯೋತ್ಪಾದಕನಾಗಿ ಬೆಳೆದಿದ್ದ. ಅದೂ ಇದೆಲ್ಲವನ್ನೂ ಅವನು ಮಾಡುತ್ತಿದ್ದುದು ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ವ್ಯಾಂಕ್ಯೂವರ್ ನಗರದ ಉಪನಗರ ಸರ್ರೆಯಲ್ಲಿ ಹಗಲೆಲ್ಲಾ ಕೊಳಾಯಿಗಾರನ ವೃತ್ತಿ ಮಾಡುತ್ತಾ!

    ಶಿಂಗಾರ್ ಬಾಂಬ್ ಸ್ಪೋಟದ ತನಿಖೆ ಯುಪಿಎ ಕಾಲದಲ್ಲಿ ನಡೆಯುತ್ತಿದ್ದ ಬಹುತೇಕ ತನಿಖೆಗಳಂತೆ ಹಳ್ಳ ಹಿಡಿಯಿತು. ಮೂವರು ಆರೋಪಿಗಳು ಖುಲಾಸೆಗೊಂಡರು, ನಾಲ್ಕನೆಯಾತ ವಿಚಾರಣಾವಧಿಯಲ್ಲೇ ಮೃತಪಟ್ಟಿದ್ದ. ನಂತರ ಎನ್​ಡಿಎ ಸರ್ಕಾರ ಈ ಕುರಿತಾಗಿ ಆಸಕ್ತಿ ವಹಿಸಿತು. ಜತೆಗೇ ಇತರ ಕೆಲವು ಕಾನೂನುಬಾಹಿರ ಕೃತ್ಯಗಳಲ್ಲೂ ನಿಜ್ನರ್​ನ ಕೈ ಇರುವ ಸುಳಿವುಗಳು ದೊರೆತವು. ಆತನ ಬಂಧನಕ್ಕೆ ಇಂಟರ್​ಪೋಲ್ ನೋಟೀಸ್ ಜಾರಿ ಮಾಡಿದ್ದು ಈ ಸಂದರ್ಭದಲ್ಲಿ. ಆದರೆ ಇದನ್ನು ಕೆನಡಾ ಅಲಕ್ಷ್ಯ ಮಾಡಿದ್ದು ಸ್ಪಷ್ಟ. ಫೆಬ್ರವರಿ 2018ರಲ್ಲಿ ಜಸ್ಟಿನ್ ಟ್ರೂಡೋ ಭಾರತಕ್ಕೆ ಭೇಟಿ ನೀಡಿದಾಗ ಅವರಿಗೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಕೆನಡಾದಲ್ಲಿ ನೆಲೆಸಿರುವ ಹತ್ತು ಖಲಿಸ್ತಾನಿ ಭಯೋತ್ಪಾದಕರು ಹಾಗೂ ಅಪರಾಧಿಗಳ ಪಟ್ಟಿಯಲ್ಲಿ ನಿಜ್ಜರ್​ನ ಹೆಸರೂ ಇತ್ತು. ಆ ಕಾರಣದಿಂದಲೇ ಕೆನಡಾ ಸರ್ಕಾರ ನಿಜ್ಜರ್​ನನ್ನು ಕೆಲಕಾಲ ಗೃಹಬಂಧನದಲ್ಲಿರಿಸಿ, ನಂತರ ಖುಲಾಸೆ ಮಾಡಿತು. ಅನಂತರವೂ ಆತನ ಬಂಧನಕ್ಕಾಗಿ ಆಟ್ಟಾವಾ ಸರ್ಕಾರಕ್ಕೆ ಭಾರತ ಹದಿನಾರು ಸಲ ಮನವಿ ಮಾಡಿಕೊಂಡಿದೆ. ಆದರೆ ಟ್ರೂಡೋ ಮಹಾಶಯ ಆ ಬಗ್ಗೆ ತಲೆಕೆಡಿಸಿಕೊಳ್ಳಲೇ ಇಲ್ಲ.

    ಈ ನಡುವೆ ಪಾಕಿಸ್ತಾನ, ಪಂಜಾಬ್ ಮತ್ತು ಕೆನಡಾಗಳಲ್ಲಿನ ಮಾದಕವಸ್ತುಗಳ ಕಳ್ಳಸಾಗಾಣಿಕೆದಾರರು ಮತ್ತು ಖಲಿಸ್ತಾನಿ ಆತಂಕವಾದಿಗಳ ನಡುವೆ ಪರಸ್ಪರ ವೈಷಮ್ಯ ಬೆಳೆಯುತ್ತಾ ಹೋಯಿತು. 2016ರಲ್ಲಿ ಪಾಕಿಸ್ತಾನಕ್ಕೆ ಹೋಗಿ ಭಯೋತ್ಪಾದನೆ ಮತ್ತು ಮಾರಕಾಸ್ತ್ರ ಬಳಕೆಯಲ್ಲಿ ತರಬೇತಿ ಪಡೆದಿದ್ದ ಮತ್ತು ನಂತರ ಸರ್ರೆಯಲ್ಲಿನ ಗುರುನಾನಕ್ ಸಿಖ್ ಗುರುದ್ವಾರದ ಮುಖ್ಯಸ್ಥನೂ ಆಗಿಬಿಟ್ಟ ನಿಜ್ಜರ್ ಸಹಜವಾಗಿಯೇ ಈ ಗ್ಯಾಂಗ್​ವಾರ್​ಗಳ ಅವಿಭಾಜ್ಯ ಅಂಗವಾದ. ಸದ್ಯಕ್ಕೆ ಅವನ ಕೈ ಇರುವ ಬಗ್ಗೆ ಸ್ಪಷ್ಟ ಮಾಹಿತಿ ಇರುವುದು ಒಂದು ಹತ್ಯೆಯ ಬಗ್ಗೆ. ಜೂನ್ 1985ರ ಕನಿಷ್ಕ ವಿಮಾನ ಸ್ಪೋಟದ ಆಪಾದಿತನಾಗಿ ಬಂಧಿತನಾಗಿ ನಂತರ ಖುಲಾಸೆಗೊಂಡು ಭಾರಿ ವ್ಯವಹಾರಸ್ಥನಾಗಿ ಬೆಳೆಯುವುದರ ಜತೆಗೇ ಪ್ರಧಾನಿ ಮೋದಿಯವರ ಅಭಿಮಾನಿ ಹಾಗೂ ಸಮರ್ಥಕನೂ ಆದ ರಿಪುದಮನ್ ಮಲಿಕ್​ನ ಹತ್ಯೆಯಾದದ್ದು ನಿಜ್ಜರ್​ನ ಆದೇಶದ ಮೇಲೇ. ಜತೆಗೆ ಇದೇ ಮೇ ತಿಂಗಳಲ್ಲಿ ಲಂಡನ್​ನಲ್ಲಿನ ಬಾರತೀಯ ದೂತಾವಾಸದ ಧ್ವಜಸ್ಥಂಭವನ್ನು ಹತ್ತಿ ತ್ರಿವರ್ಣವನ್ನು ಅವಮಾನಿಸಿದ ದೃಢಕಾಯ ಆರೋಗ್ಯವಂತ ಅವತಾರ್ ಸಿಂಗ್ ಖಾಂಡಾ ಕೆಲವೇ ದಿನಗಳಲ್ಲಿ ತೀವ್ರ ಅಸ್ವಸ್ಥನಾಗಿ ಮೃತಪಟ್ಟದ್ದು ವಿಷಪ್ರಾಶನದಿಂದ, ಅದರ ಹಿಂದಿದ್ದದ್ದು ನಿಜ್ಜರ್ ಎಂಬ ಮಾತೂ ಇದೆ. ಇದೆಲ್ಲವೂ ಹೇಳುವುದು ನಿಜ್ಜರ್ ಖಲಿಸ್ತಾನಿ ಭಯೋತ್ಪಾದಕನಷ್ಟೇ ಅಲ್ಲ, ದುಷ್ಟಕೂಟಗಳ ನಡುವಿನ ರಕ್ತಸಂಘರ್ಷಗಳ ಪ್ರಮುಖ ರೂವಾರಿಯೂ ಆಗಿದ್ದ ಎಂದು. ಅವನಿಗೆ ವಿರೋಧಿ ಕೂಟಗಳಿಂದ ಅಪಾಯವಿದೆಯೆಂದೂ, ಹೊರಗೆ ಹೋಗುವಾಗ ಎಚ್ಚರಿಕೆಯಿಂದಿರಬೇಕೆಂದೂ ಕೆನಡಾದ ಬೇಹುಗಾರಿಕಾ ಸಂಸ್ಥೆ ಸಿಎಸ್​ಐಎಸ್ ಅಧಿಕಾರಿಗಳೂ ಖುದ್ದಾಗಿ ಭೇಟಿಯಾಗಿ ಎಚ್ಚರಿಸಿತ್ತೆಂದು ಆತನ ಮಗ ಬಲರಾಜ್ ಸಿಂಗ್ ಹೇಳುತ್ತಾನೆ. ಅಷ್ಟೇ ಅಲ್ಲ, ಅಂತಹ ಕೆಲವು ಭೇಟಿಗಳಲ್ಲಿ ತನ್ನ ತಂದೆಯ ಜತೆ ತಾನೂ ಇದ್ದುದಾಗಿಯೂ ಬಲರಾಜ್ ಕೆನಡಾದ ಮಾಧ್ಯಮಗಳ ಮುಂದೆಯೇ ಹೇಳಿದ್ದಾನೆ. ನಿಜ್ಜರ್​ನ ಅಂತ್ಯ ಗ್ಯಾಂಗ್ ವಾರ್​ನ ಪರಿಣಾಮ ಎಂದು ಹತ್ತೆಯಾದ ಸರಿಸುಮಾರು ಎರಡು ತಿಂಗಳ ನಂತರ ಕೆನಡಾ ಪೊಲೀಸರು ಪತ್ರಿಕಾಗೋಷ್ಠಿಯಲ್ಲೇ ಹೇಳಿದ್ದಾರೆ. ಇದೆಲ್ಲವೂ ಪ್ರಧಾನಿ ಟ್ರೂಡೊಗೆ ಗೊತ್ತೇ ಇದೆ. ಆದರೂ ಅವರು ಹತ್ತೆಯ ಆರೋಪವನ್ನು ಭಾರತ ಸರ್ಕಾರದ ಮೇಲೆ ಹೊರಿಸಿಬಿಟ್ಟರು! ಅದೇಕೆ ಹಾಗೇ? ಈಗ ಅದನ್ನಿಷ್ಟು ಶೋಧಿಸೋಣ.

    ಯಾವುದೇ ನಿರ್ದಿಷ್ಟ ಆಧಾರವನ್ನೂ ಮುಂದಿಡದೇ ಭಾರತದ ಮೇಲೆ ಹರ್​ದೀಪ್ ಸಿಂಗ್ ನಿಜ್ಜರ್​ನ ಭಾರತ ಸರ್ಕಾರದ ಮೇಲೆ ಹತ್ಯೆಯ ಆರೋಪ ಹೊರಿಸಿ, ಎರಡು ವಾರಗಳ ನಂತರ ಭಾರತದ ಮುಂದೆ ಮಂಡಿಯೂರತೊಡಗಿದ ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರೂಡೋರ ನಡವಳಿಕೆಯಲ್ಲಿನ ಉಬ್ಬರವಿಳಿತಗಳು ಅವರು ಮತ್ತಾರದೋ ಮರ್ಜಿಗನುಗುಣವಾಗಿ ಅಖಾಡಕ್ಕಿಳಿದು, ಉದ್ದೇಶ ಸಾಧನೆಯಾದ ಮೇಲೆ ಕಣದಿಂದ ಹಿಂದೆ ಸರಿಯುತ್ತಿರಬಹುದಾದುದಕ್ಕೆ ಅವಕಾಶ ಮಾಡಿಕೊಡುತ್ತವೆ. ಏನು ನಡೆದಿರಬಹುದು ಎನ್ನುವುದನ್ನು ಸಾಂರ್ದಭಿಕ ಸಾಕ್ಷ್ಯಗಳ ಆಧಾರದ ಮೇಲೆ ಊಹಿಸುವ ಒಂದು ಪ್ರಯತ್ನವನ್ನಿಲ್ಲಿ ಮಾಡುತ್ತಿದ್ದೇನೆ.

    ಸೆಪ್ಟೆಂಬರ್ 18-22ರಂದು ಸಂಸತ್​ನ ವಿಶೇಷಾಧಿವೇಶವನ್ನು ಕರೆಯುವ ಕೇಂದ್ರ ಸರ್ಕಾರದ ತೀರ್ವನದ ಕುರಿತಾದ ಘೊಷಣೆ ಆಗಸ್ಟ್ ಅಂತ್ಯದಲ್ಲಿ ಹೊರಬಿತ್ತು ಸಂಸತ್​ನ ವಿಶೇಷ ಅಧಿವೇಶನವನ್ನು ಕರೆಯುವುದು ವಿಶೇಷ ಸಂದರ್ಭಗಳಲ್ಲಿ, ಸರ್ಕಾರದ ಅಭಿಪ್ರಾಯದಲ್ಲಿ ರಾಷ್ಟ್ರಹಿತಕ್ಕಾಗಿ ಅತ್ಯಗತ್ಯವೆನಿಸುವ ವಿಶೇಷ ವಿಷಯಗಳ ಕುರಿತಾಗಿನ ಮಸೂದೆಗಳನ್ನು ಮಂಡಿಸಿ ಸಂಸತ್​ನ ಅನುಮೋದನೆ ಪಡೆದುಕೊಂಡು ಕಾನೂನುಗಳನ್ನಾಗಿಸಿ ತುರ್ತಾಗಿ ಅನುಷ್ಟಾನಗೊಳಿಸುವ ಉದ್ದೇಶದಿಂದ. ಇಂತಹದೊಂದು ವಿಶೇಷ ಅಧಿವೇಶನವನ್ನು ಪ್ರಸಕ್ತ ಕೇಂದ್ರ ಸರ್ಕಾರದ ಕರೆದದ್ದು ಆಗಸ್ಟ್ 5, 2019ರಂದು, ಜಮ್ಮು ಮತ್ತು ಕಾಶ್ಮೀರದ ಕುರಿತಾಗಿನ ಸಂವಿಧಾನದ 370 ಮತ್ತು 35ಎ ವಿಧಿಗಳ ರದ್ದತಿಯಂತಹ ಅತ್ಯಂತ ಮಹತ್ವದ ಹಾಗೂ ವಿವಾದಾತ್ಮಕ ವಿಷಯಕ್ಕಾಗಿ. ಅಂದಿನಿಂದ ಜಮ್ಮು ಮತ್ತು ಕಾಶ್ಮೀರದ ವಾಸ್ತವಗಳು ಪೂರ್ಣವಾಗಿ ಬದಲಾಗಿಹೋದವು. ಜತೆಗೇ ಭಾರತೀಯ ಉಪಖಂಡದ ಸಾಮರಿಕ ಮತ್ತು ಭೂ-ರಾಜಕೀಯ ವಾಸ್ತವಗಳೂ ಸಹಾ.

    ಈ ಹಿನ್ನೆಲೆಯಲ್ಲಿ, ಈ ಬಾರಿಯ ವಿಶೇಷ ಅಧಿವೇಶನವೂ ಅತಿ ಮಹತ್ವದ ವಿಷಯ ಕುರಿತಾದ ಮಸೂದೆಯ ಮಂಡನೆ ಮತ್ತು ಅಂಗೀಕಾರಕ್ಕಾಗಿ ಎಂಬ ನಿರೀಕ್ಷೆ ಸಹಜವಾಗಿಯೇ ಎಲ್ಲೆಡೆ ದೊಡ್ಡದಾಗಿಯೇ ಹರಿದಾಡತೊಡಗಿತು. ಸಮಾನ ನಾಗರಿಕ ಸಂಹಿತೆ ಮಸೂದೆ ಮಂಡನೆಯಾಗಬಹುದು, ಜಿ20 ಸಮಾವೇಶದಲ್ಲಿ ಇಂಡಿಯಾಗೆ ಬದಲು ಭಾರತ ಎಂಬ ಹೆಸರಿಗೆ ದೊರೆತ ಪ್ರಾಮುಖ್ಯತೆಯಿಂದಾಗಿ ರಾಷ್ಟ್ರದ ಹೆಸರನ್ನು ಅಧಿಕೃತವಾಗಿ ಭಾರತ ಎಂದು ಬದಲಾಯಿಸುವ ಮಸೂದೆ ಮಂಡನೆಯಾಗಬಹುದು ಎನ್ನುವುದು ಕೆಲವು ಮುಖ್ಯ ಊಹೆಗಳು. ಆ ಕುರಿತಾಗಿ ಸಂವಿಧಾನದ ಪ್ರಸ್ತಾವೆಗೆ ತಿದ್ದುಪಡಿ ತರುವ ಅಗತ್ಯವಿರುವುದರಿಂದ ಅದರ ಭಾಗವಾಗಿಯೇ ದೇಶದ ಹೆಸರಿನಿಂದ ಸೋಶಿಯಲಿಸ್ಟ್ ಮತ್ತು ಸೆಕ್ಯೂಲರ್ ಎಂಬ ಪದಗಳನ್ನೂ ಕಿತ್ತುಹಾಕುವ ಸಾಧ್ಯತೆಯೂ ಇತ್ತು. 1947-49ರಲ್ಲಿ ಕಾಂಗ್ರೆಸ್ ಸೂಚಿಸಿದ ಈ ಎರಡು ಪದಗಳನ್ನು ಬಾಬಾಸಾಹೇಬ್ ಅಂಬೇಡ್ಕರ್ ತಿರಸ್ಕರಿಸಿದ್ದನ್ನೂ, ಆದರೆ ತುರ್ತಪರಿಸ್ಥಿತಿಯ ಸಂದರ್ಭದಲ್ಲಿ ನಲವತ್ತೆರಡನೆಯ ತಿದ್ದುಪಡಿಯ ಮೂಲಕ ಆ ಪದಗಳನ್ನು ಕಾಂಗ್ರೆಸ್ ಸರ್ಕಾರ ಸೇರಿಸಿಯೇಬಿಟ್ಟದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಸೆಪ್ಟೆಂಬರ್ 21 ರೆಡ್ ಲೆಟರ್ ಡೇ ಆಗಲಿದೆ, ಅಂದು ಅತ್ಯಂತ ಮಹತ್ವದ ಮಸೂದೆಯೊಂದು ಮಂಡನೆಯಾಗಲಿದೆ ಎನ್ನುವ ಮಾತು ಕೇಳಿಬಂದದ್ದು ಆ ಎರಡು ಪದಗಳ ಕುರಿತಾಗಿಯೇ ಇರಬಹುದು. ಆದರೆ ಆದದ್ದೇನು? ಸಂಸತ್​ನ ವಿಶೇಷ ಅಧಿವೇಶನದಲ್ಲಿ ಮಂಡಿತವಾದದ್ದು ನಾರಿಶಕ್ತಿ ವಂದನ ಅಧಿನಿಯಮ ಅಷ್ಟೇ!

    ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ಒದಗಿಸುವ ಮಸೂದೆ ಸರಿಸುಮಾರು ಮೂರೂವರೆ ದಶಕಗಳಿಂದಲೂ ಸಂಸತ್​ನಲ್ಲಿ ಮತ್ತೆ ಮತ್ತೆ ಮಂಡನೆಯಾಗುತ್ತಿತ್ತು, ರಾಜ್ಯಸಭೆಯಲ್ಲಿ ಅನುಮೋದನೆ ಪಡೆದರೂ ಲೋಕಸಭೆಯಲ್ಲಿ ಮತ್ತೆಮತ್ತೆ ತಿರಸ್ಕೃತಗೊಂಡಿತ್ತು. ಆದರೆ ಇಂದು ಆಡಳಿತಾರೂಢ ಎನ್​ಡಿಎಗೆ ಬಹುಮತವಿರುವುದರಿಂದ ಹಾಗೂ ಬಹುತೇಕ ವಿರೋಧಪಕ್ಷಗಳೂ ಮಹಿಳಾ ಮೀಸಲಾತಿಯ ಪರವಾಗಿದ್ದುದರಿಂದ ಆ ಕುರಿತಾಗಿನ ಮಸೂದೆ ಸಂಸತ್​ನ ಸಾಮಾನ್ಯ ಅಧಿವೇಶನಗಳಲ್ಲೇ ಅನುಮೋದನೆ ಪಡೆದುಕೊಳ್ಳುವುದು ನಿಶ್ಚಿತವೇ ಆಗಿತ್ತು. ಅದಕ್ಕಾಗಿ ವಿಶೇಷಾಧಿವೇಶನದ ಅಗತ್ಯವೇ ಇರಲಿಲ್ಲ. ಅಲ್ಲದೇ ಈಗ ಮಂಡನೆಯಾಗಿ ಅನುಮೋದನೆ ಪಡೆದುಕೊಂಡಿದೆ. ಆದರೆ ದೇಶದ ಮಹಿಳೆಯರಿಗೆ ಮೀಸಲಾತಿ ತಕ್ಷಣಕ್ಕೇ ದೊರೆಯುವುದಿಲ್ಲ. ಅದರ ತಯಾರಿಯ ಹಾದಿ ದೀರ್ಘವಿದೆ. ಮೊದಲಿಗೆ, ಜನಗಣತಿಯಾಗಬೇಕು, ಅದರ ಆಧಾರದ ಮೇಲೆ ಕ್ಷೇತ್ರಗಳ ಡಿಲಿಮಿಟೇಷನ್ ಆಗಬೇಕು. ಇದೆಲ್ಲವೂ ತಕ್ಷಣಕ್ಕೆ ನಡೆದು ಮುಂದಿನ ವರ್ಷದ ಚುನಾವಣೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಸಿಗುವುದು ಕನಸಿನ ಮಾತು. ಲೋಕಸಭೆಯಲ್ಲಿನ ಮೀಸಲಾತಿಯನ್ನಷ್ಟೇ ತೆಗೆದುಕೊಳ್ಳುವುದಾದರೆ ಭಾರತೀಯ ಮಹಿಳೆಯರು ಅದಕ್ಕಾಗಿ ಕನಿಷ್ಟ 2029ರ ಚುನಾವಣೆಗಳಿಗಾಗಿಯಾದರೂ ಕಾಯಬೇಕು. ವಸ್ತುಸ್ಥಿತಿ ಹೀಗಿರುವಾಗ ಈ ಮಸೂದೆಯನ್ನು ಇನ್ನು ಮೂರು ತಿಂಗಳಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಬಹುದಾಗಿತ್ತು. ವಿಶೇಷ ಅಧಿವೇಶನದ ಅಗತ್ಯ ಲವಲೇಶವೂ ಇರಲಿಲ್ಲ.

    ಅಲ್ಲದೇ ಹಲವರು ಎದುರುನೋಡುತ್ತಿದ್ದ ಧಮಾಕಾ ಸೆಪ್ಟೆಂಬರ್ 21ರಂದು ಆಗಲೇ ಇಲ್ಲ! ಇನ್ನೂ ಅಚ್ಚರಿಯ, ಅರ್ಥಕ್ಕೆ ನಿಲುಕದ ವಿಷಯವೆಂದರೆ ಐದು ದಿನಗಳ ವಿಶೇಷ ಅಧಿವೇಶನ ನಾಲ್ಕನೆಯ ದಿನಕ್ಕೇ ಮುಗಿದುಹೋಯಿತು! ಈ ಬಾರಿಯ ವಿಶೇಷ ಅಧಿವೇಶನವನ್ನು ನಾಲ್ಕು ವರ್ಷಗಳ ಹಿಂದೆ ನಡೆದ ವಿಶೇಷ ಅಧಿವೇಶನದ ಮುಂದೆ ನಿವಾಳಿಸಿ ಒಗೆಯಬೇಕು! ಹೆಸರಿಗೆ ಮಾತ್ರ ಇದು ವಿಶೇಷ ಅಧಿವೇಶನ. ಯಾವುದೇ ವಿಶೇಷ ಇಲ್ಲಿ ಕಂಡುಬರಲಿಲ್ಲ. ಹೀಗೇಕಾಯಿತು?

    ಮೋದಿ ಸರ್ಕಾರದ ಮುಂದೆ ಯಾವುದೇ ವಿಶೇಷ ಯೋಜನೆ ಇರಲಿಲ್ಲ, ಗಣೇಶ ಚತುರ್ಥಿಯ ಶುಭದಿನ ಹೊಸ ಸಂಸತ್ತಿನಲ್ಲಿ ಕಾರ್ಯಕಲಾಪ ಆರಂಭಿಸುವುದಷ್ಟೇ ಅದರ ವಿಶೇಷ ಯೋಜನೆಯಗಿತ್ತು, ಇಲ್ಲಿ ಮಹಿಳಾ ಮೀಸಲಾತಿ ಒಂದು ನೆಪವಷ್ಟೇ ಎನ್ನಲೂ ಆಗುವುದಿಲ್ಲ. ಇದನ್ನು ಅಕ್ಟೋಬರ್ 24ರಂದು ವಿಜಯದಶಮಿಯ ದಿನವೂ ಮಾಡಬಹುದಾಗಿತ್ತು. ನವರಾತ್ರಿ ಮೋದಿಯವರಿಗೆ ವೈಯುಕ್ತಿಕವಾಗಿಯೂ ತುಂಬ ಮುಖ್ಯ ಎನ್ನುವುದನ್ನು ದೇಶ ಕಂಡೇ ಇದೆ. ಅಥವಾ, ಈ ಬಾರಿ ಗಣೇಶ ಚತುರ್ಥಿ ಮಂಗಳವಾರ ಬಂದಿರುವುದರಿಂದ ಆ ಸಂದರ್ಭ ಮಂಗಳಕರ ಎನ್ನಲೂ ಆಗುವುದಿಲ್ಲ. ಈ ಬಾರಿ ವಿಜಯದಶಮಿ ಬರುವುದೂ ಮಂಗಳವಾರವೇ.

    ಇದೆಲ್ಲವನ್ನೂ ಲೆಕ್ಕಹಾಕಿದರೆ ಏಳುವ ಪ್ರಶ್ನೆಗಳು- ಯಶಸ್ವಿ ಜಿ20 ಸಮಾವೇಶ ಸಾಧನೆಯ ಬೆನ್ನಲ್ಲೇ ಮತ್ತೊಂದು ವಿಶೇಷ ಸಾಧನೆಗಾಗಿ ಮೋದಿ ಸರ್ಕಾರ ಯೋಜನೆ ಹಾಕಿಕೊಂಡಿತ್ತೇ? ಆದರೆ ನಮಗೆ ಗೊತ್ತಾಗದ ಕಾರಣಗಳಿಗಾಗಿ ಆ ಯೋಜನೆಯನ್ನು ಕೈಬಿಡುವ ಒತ್ತಡಕ್ಕೆ ಸರ್ಕಾರ ಒಳಗಾಯಿತೇ? ಈ ಒತ್ತಡ ನಿರ್ವಣದಲ್ಲಿ ದೂರದ ಕೆನಡಾದ ಪ್ರಧಾನಮಮಂತ್ರಿ ಜಸ್ಟಿನ್ ಟ್ರೂಡೋರ ಪಾತ್ರ ಇರಬಹುದೇ? ಮೋದಿ ಸರ್ಕಾರದ ವಿಶೇಷ ಯೋಜನೆಯಿಂದ ಆತಂಕಗೊಂಡ ಭಾರತದಲ್ಲಿನ ಮೋದಿ ವಿರೋಧಿಗಳು ಟ್ರೂಡೋರನ್ನು ಉಪಯೋಗಿಸಿಕೊಂಡು ಮೋದಿಯವರ ಕೈಗಳನ್ನು ಕಟ್ಟಿಹಾಕಿದರೇ? ಮೋದಿಯವರ ವಿರುದ್ಧ ತಮ್ಮನ್ನು ಉಪಯೋಗಿಸಿಕೊಳ್ಳಬಹುದು ಎಂದು ಈಗಾಗಲೇ ಒಮ್ಮೆ ದೊಡ್ಡದಾಗಿ ತೋರಿಸಿಕೊಂಡಿರುವ ಟ್ರೂಡೋ ಅವರಿಗಿಂತ ಪ್ರಶಸ್ತವಾದ ಅಸ್ತ್ರ ಮೋದಿ-ವಿರೋಧಿಗಳಿಗೆ ಬೇರೇನು ಸಿಗಲು ಸಾಧ್ಯ?

    ಇದನ್ನು ಮುಂದಿನ ವಾರ ನೋಡೋಣ. ಈಗ ಆದದ್ದೇನು, ಮುಂದೇನು ಎನ್ನುವುದುನ್ನೂ ವಿವರವಾಗಿ ನೋಡೋಣ.

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ನಿಧನದ ವಿಚಾರದಲ್ಲಿರಲಿ ನಿಧಾನ: ಸುಳ್ಳೇ ಏಕೆ ಸಾಯಿಸುವರೋ!; ಇನ್ನಿಲ್ಲ ಎಂಬ ಸುದ್ದಿ ಬಂದಾಗ ಇನ್ನೇನು ಮಾಡಬೇಕು?

    ಪೊದೆಯಲ್ಲಿ ಯುವ ಜೋಡಿ, ಫೋಟೋ ವೈರಲ್​: ಅಷ್ಟಕ್ಕೂ ಅಲ್ಲಿ ಆಗಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts