More

    ಹೋಟೆಲ್ ಯುವ ಮನೀಶ್: ಕುಂದಾಪುರದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಉದ್ಘಾಟನೆ

    ವಿಜಯವಾಣಿ ಸುದ್ದಿಜಾಲ ಬೈಂದೂರು
    ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿದ್ದು, ಇಲ್ಲಿನ ಪ್ರಕೃತಿ ಸೌಂದರ್ಯ ದೇಶ-ವಿದೇಶಿಗರ ಆಕರ್ಷಣೆಗೆ ಒಳಗಾಗಿದೆ. ಪ್ರವಾಸೋದ್ಯಮ ಸಹಿತ ವಿವಿಧ ಕ್ಷೇತ್ರಗಳಲ್ಲಿ ಹೆಸರುವಾಸಿಯಾಗಿರುವ ಉತ್ಕಷ್ಟಮಟ್ಟದ ಹೋಟೆಲ್ ಮತ್ತು ರೆಸ್ಟೋರೆಂಟ್ ಸ್ಥಾಪಿಸುವ ಮೂಲಕ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಮುಂದಾಗಿರುವುದು ಶ್ಲಾಘನೀಯ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

    ಕುಂದಾಪುರದಲ್ಲಿ ನೂತನ ನಿರ್ಮಾಣವಾದ ಹೋಟೆಲ್ ಯುವ ಮನೀಶ್ ಅನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಧ್ಯಕ್ಷತೆವಹಿಸಿದ್ದರು.

    ಘಟಪ್ರಭಾ ಗುಬ್ಬಲಗುಡ್ಡ ಕೆಂಪಯ್ಯ ಸ್ವಾಮಿ ಮಠದ ಡಾ.ಮಲ್ಲಿಕಾರ್ಜುನ್ ಸ್ವಾಮೀಜಿ ಆಶೀರ್ವಚಿಸಿದರು. ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಶ್ರೀನಿವಾಸ, ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿ, ಗುರುರಾಜ ಗಂಟಿಹೊಳೆ, ಮಾಜಿ ಶಾಸಕರಾದ ಬಿ.ಎಂ.ಸುಕುಮಾರ ಶೆಟ್ಟಿ, ಕೆ.ಗೋಪಾಲ ಪೂಜಾರಿ, ಉದ್ಯಮಿಗಳಾದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಕೆ.ನಾಗರಾಜ್, ದಿನೇಶ್ ಹೆಗ್ಡೆ ಮೊಳಹಳ್ಳಿ, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಉಪಸ್ಥಿತರಿದ್ದರು.

    ಸಂಸ್ಥೆಯ ಆಡಳಿತ ಪಾಲುದಾರ ಎಚ್.ಜಯಶೀಲ ಎನ್.ಶೆಟ್ಟಿ ಸ್ವಾಗತಿಸಿದರು. ಪಾಲುದಾರ ಬೈಲೂರು ವಿನಕುಮಾರ್ ಶೆಟ್ಟಿ ಪ್ರಾಸ್ತಾವಿಸಿದರು. ಪತ್ರಕರ್ತ ಕೆ.ಸಿ.ರಾಜೇಶ ಕಾರ್ಯಕ್ರಮ ನಿರ್ವಹಿಸಿದರು.

    ರಾಜ್ಯದ ವಿವಿಧ ಭಾಗಗಳಲ್ಲಿ ನನ್ನದಾದ ಅನೇಕ ಉದ್ಯಮಗಳಿದ್ದರೂ ಹುಟ್ಟೂರಿನಲ್ಲಿ ಉದ್ಯಮ ಮಾಡಬೇಕೆಂಬ ಕನಸಿತ್ತು. ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಅತ್ಯಾಧುನಿಕ ಸೌಕರ್ಯವುಳ್ಳ ವಿಶೇಷ ವಿನ್ಯಾಸದ ರೆಸ್ಟೋರೆಂಟ್ ಮತ್ತು ವಸತಿಗೃಹವನ್ನು ಒಂದೇ ಸೂರಿನಡಿಯಲ್ಲಿ ನಿರ್ಮಿಸಿ ಕನಸು ನನಸಾಗಿಸಿಕೊಂಡ ಸಾರ್ಥಕ ಭಾವವಿದೆ. ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು.
    -ಎಚ್.ಜಯಶೀಲ ಎನ್.ಶೆಟ್ಟಿ, ಯುವ ಮನಿಶ್ ಆಡಳಿತ ಪಾಲುದಾರರು

    ಉಡುಪಿ ಪ್ರವಾಸೋದ್ಯಮಕ್ಕೆ ಸಹಕಾರ

    ಪ್ರತಿಯೊಬ್ಬರಿಗೂ ಒಂದು ಕನಸಿರಬೇಕು. ಅದನ್ನು ನನಸಾಗಿಸಿಕೊಳ್ಳಲು ಅಚಲವಾದ ಶ್ರದ್ಧೆ, ಪ್ರಾಮಾಣಿಕತೆ, ಗುರಿ ಮತ್ತು ಛಲವಿರಬೇಕು. ಆಗ ದೇವರ ಅನುಗ್ರಹದಿಂದ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕುತ್ತದೆ. ಉದ್ಯಮ ಕ್ಷೇತ್ರವು ನಿರೋದ್ಯೋಗ ಸಮಸ್ಯೆಯನ್ನು ನಿವಾರಿಸುವುದಾದರೂ ಕೂಡ ತುಂಬಾ ಪೈಪೋಟಿ ಇರುವ ಇಂದಿನ ಕಾಲಘಟ್ಟದಲ್ಲಿ ವಿಶೇಷ ಗಮನ ಹರಿಸುವುದು ಸೂಕ್ತ ಎಂದು ಸಲಹೆ ನೀಡಿದ ಸಚಿವರು, ಜಿಲ್ಲೆಯು ಆರ್ಥಿಕವಾಗಿ ಬೆಳೆಯುವ ನಿಟ್ಟಿನಲ್ಲಿ ಇಲ್ಲಿನ ಪ್ರವಾಸಿ ಸ್ಥಳಗಳ ಅಭಿವೃದ್ಧಿಗೆ ಪೂರಕವಾಗಿ ಸರ್ಕಾರದಿಂದ ಹೆಚ್ಚಿನ ಸಹಕಾರ ನೀಡಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

    ಪ್ರೀತಿಯ ಆತಿಥ್ಯದಿಂದ ಹೋಟೆಲ್ ಸಫಲ

    ಜಿಲ್ಲೆಯ ಜನರು ಪ್ರಜ್ಞಾವಂತರು ಹಾಗೂ ಅಪಾರ ದೈವಭಕ್ತರು. ಹೀಗಾಗಿ ಈ ಭಾಗದ ಜನರು ಪ್ರಪಂಚದ ಯಾವುದೇ ಮೂಲೆಯಲ್ಲಿ ಉದ್ಯಮ ಆರಂಭಿಸಿದರೂ ಯಶಸ್ಸು ಕಟ್ಟಿಟ್ಟ ಬುತ್ತಿ. ಉಡುಪಿ ಹೋಟೆಲಿನ ಶುದ್ಧ ಹಾಗೂ ಶುಚಿ-ರುಚಿಯಾದ ಆಹಾರಗಳು, ಗ್ರಾಹಕರಿಗೆ ಪ್ರೀತಿಯಿಂದ ನೀಡುವ ಆತಿಥ್ಯದಿಂದ ಪ್ರತಿಯೊಬ್ಬರ ಹೃದಯ ಗೆಲ್ಲುವಲ್ಲಿ ಸಫಲರಾಗುತ್ತಾರೆ. ಈಗಾಗಲೇ ವಿಶ್ವದಾದ್ಯಂತ ಉಡುಪಿ ಹೋಟೆಲ್‌ಗಳಿದ್ದು, ಎಲ್ಲಾ ಕಡೆಗಳಲ್ಲಿಯೂ ಪ್ರಸಿದ್ಧಿಯಾಗುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೊಂಡಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts