More

    ಹಾಂಕಾಂಗ್​ಗೆ ಮೂಗುದಾರ ಹಾಕುವ ಮಸೂದೆ

    ಬೀಜಿಂಗ್: ಅರೆ-ಸ್ವಾಯತ್ತ ಪ್ರದೇಶ ಹಾಂಕಾಂಗ್ ಮೇಲೆ ಹೆಚ್ಚಿನ ನಿಯಂತ್ರಣಕ್ಕೆ ಅವಕಾಶ ಕೊಡುವ ರಾಷ್ಟ್ರೀಯ ಭದ್ರತಾ ಮಸೂದೆಯನ್ನು ಚೀನಾ ಕಮ್ಯುನಿಸ್ಟ್ ಸರ್ಕಾರ ಸಂಸತ್​ನಲ್ಲಿ ಮಂಡಿಸಿದೆ. ಈ ಮೂಲಕ ಪ್ರಜಾಪ್ರಭುತ್ವ ಪರ ಹೋರಾಟವನ್ನು ದಮನಿಸಲು ಮುಂದಾಗಿದೆ. ಆದರೆ, ಈ ಮಸೂದೆಯನ್ನು ತೀವ್ರವಾಗಿ ಟೀಕಿಸಿರುವ ಹಾಂಕಾಂಗ್ ನಾಗರಿಕರು ಪ್ರಜಾಪ್ರಭುತ್ವ ಚಳವಳಿಗೆ ಇನ್ನೂ ದೊಡ್ಡ ಮಟ್ಟದಲ್ಲಿ ಮರುಚಾಲನೆ ನೀಡಲು ಮುಂದಾಗಿದ್ದಾರೆ.

    ಈ ಮಸೂದೆಯು ಚೀನಿ ನಾಯಕ ಕ್ಸಿ ಜಿನ್​ಪಿಂಗ್​ರ ‘ಒಂದು ದೇಶ, ಎರಡು ವ್ಯವಸ್ಥೆ’ಯ ಸೋಗನ್ನು ಕಳಚಿ ಹಾಕಿದೆ. ಕಮ್ಯುನಿಸ್ಟ್ ಪಕ್ಷದ ವಿರುದ್ಧ ಮಾತನಾಡುವ ಧೈರ್ಯ ತೋರುವ ಪ್ರತಿಯೊಂದು ಸಂಘಟನೆಯನ್ನು ನಿಷೇಧಿಸಲು ಅವರು ಪ್ರಯತ್ನಿಸುತ್ತಿದ್ದಾರೆ

    | ಲೀ ಚುಕ್-ಯಾನ್ ಮಾಜಿ ಸಂಸದ, ಪ್ರಜಾಪ್ರಭುತ್ವದ ಪರ ಹೋರಾಟಗಾರ

    ಮಸೂದೆ ಅಂಗೀಕರಿಸಲು ಸರ್ಕಾರ ಪ್ರಯತ್ನಿಸುತ್ತಿರುವುದನ್ನು ಹಾಂಕಾಂಗ್​ನ ಪ್ರಜಾಪ್ರಭುತ್ವ-ಪರ ಚಳವಳಿ ಬೆಂಬಲಿಸುವ ಸಂಸತ್ ಸದಸ್ಯರು ತೀವ್ರವಾಗಿ ವಿರೋಧಿಸಿದ್ದಾರೆ. ಪ್ರಸ್ತಾಪಿತ ಕಾನೂನು ಚೀನಾದ ‘ಒಂದು ದೇಶ, ಎರಡು ವ್ಯವಸ್ಥೆ’ ನಿಯಮವನ್ನು ಉಲ್ಲಂಘಿಸುತ್ತದೆ ಎಂದು ದೂರಿದ್ದಾರೆ. ಶುಕ್ರವಾರ ಆರಂಭಗೊಂಡ ಚೀನಾದ ರಾಷ್ಟ್ರೀಯ ಜನತಾ ಅಸೆಂಬ್ಲಿಯ (ಸಂಸತ್) ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗಿದ್ದು ಪ್ರತ್ಯೇಕತಾವಾದಿ ಹಾಗೂ ಬುಡಮೇಲು ಚಟುವಟಿಕೆಗಳ ನಿಷೇಧ ಅದರ ಉದ್ದೇಶವಾಗಿದೆ. ಹಾಂಕಾಂಗ್​ನಲ್ಲಿ ವಿದೇಶಿ ಹಸ್ತಕ್ಷೇಪ ಮತ್ತು ಭಯೋತ್ಪಾದನೆ ನಿರ್ಬಂಧವೂ ಮಸೂದೆಯ ಗುರಿಯಾಗಿದೆ. ಈ ಮಸೂದೆಯು ಚೀನಾದ ಸಂಸತ್ತಿನಲ್ಲಿ ಇತ್ತೀಚಿನ ವರ್ಷಗಳಲ್ಲೇ ಚರ್ಚೆಗೆ ಬರುತ್ತಿರುವ ಅತ್ಯಂತ ವಿವಾದಾತ್ಮಕ ಮಸೂದೆಯಾಗಿದೆ.

    ಇದನ್ನೂ ಓದಿ: #TTDForSale ಟ್ವಿಟರ್​ನಲ್ಲಿ ಟ್ರೆಂಡಿಂಗ್​: ಅನುಪಯುಕ್ತ ಆಸ್ತಿ ಮಾರಾಟಕ್ಕೆ ಟಿಟಿಡಿ ತೀರ್ಮಾನ

    ವಿದೇಶಗಳ ಖಂಡನೆ: ಹೊಸ ರಾಷ್ಟ್ರೀಯ ಭದ್ರತಾ ಕಾನೂನು ಏನೆಂಬುದು ಯಾರಿಗೂ ಇನ್ನೂ ಗೊತ್ತಿಲ್ಲ. ಹೀಗಾಗಿ ಅದು ಅಂಗೀಕಾರವಾದ ನಂತರ ಅದನ್ನು ಪ್ರಬಲವಾಗಿ ನಿಭಾಯಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇದು ಹಾಂಕಾಂಗ್​ನಲ್ಲಿ ಇದುವರೆಗೆ ಸ್ಥಾಪಿತವಾದ ಉತ್ತಮ ಸಂಸದೀಯ ನಿಯಮಗಳನ್ನು ಉಲ್ಲಂಘಿಸುತ್ತದೆ. ಅಲ್ಲಿನ ಜನತೆಯ ಇಚ್ಛೆಗೆ ವಿರೋಧವಾದುದಾಗಿದೆ ಎಂದು ಹೇಳಿದ್ದಾರೆ. ಚೀನಾದ ಪ್ರಸ್ತಾಪನೆಯಿಂದ ತಮಗೆ ‘ತೀವ್ರ ಕಳವಳವಾಗಿದೆ’ ಎಂದು ಬ್ರಿಟನ್, ಆಸ್ಟ್ರೇಲಿಯಾ ಮತ್ತು ಕೆನಡಾದ ವಿದೇಶಾಂಗ ಸಚಿವರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹಾಂಕಾಂಗ್ ಜನತೆಯ ನೇರ ಪಾಲ್ಗೊಳ್ಳುವಿಕೆಯಿಲ್ಲದೆ ಶಾಸಕಾಂಗ ಅಥವಾ ನ್ಯಾಯಾಂಗಕ್ಕೆ ಸಂಬಂಧಿಸಿದ ಕಾನೂನನ್ನು ರೂಪಿಸುವುದು ‘ಒಂದು ದೇಶ, ಎರಡು ವ್ಯವಸ್ಥೆ’ ನಿಯಮವನ್ನು ಉಲ್ಲಂಘಿಸುತ್ತದೆ’ ಎಂದವರು ಅಭಿಪ್ರಾಯಪಟ್ಟಿದ್ದಾರೆ.

    ‘ಹಾಂಕಾಂಗ್​ನಲ್ಲಿ ನಡೆದ ಪ್ರತಿಭಟನೆ ಮತ್ತು ಹಿಂಸಾಚಾರಗಳು ‘ಒಂದು ದೇಶ, ಎರಡು ವ್ಯವಸ್ಥೆ’ ಸಿದ್ಧಾಂತಕ್ಕೆ ಸವಾಲೆಸೆದಿವೆ. ದೇಶದ ಭದ್ರತೆಗೆ ಸಂಭಾವ್ಯ ಅಪಾಯವನ್ನು ತಡೆಯುವುದು ಕಾನೂನಿನ ಉದ್ದೇಶವಾಗಿದೆ.

    | ವಾಂಗ್ ಚೆನ್ ಚೀನಾ ಸಂಸತ್​ನ ಉಪಾಧ್ಯಕ್ಷ

    ಏನಿದು ಪ್ರಜಾಪ್ರಭುತ್ವ-ಪರ ಚಳವಳಿ?: 2019ರ ಮಧ್ಯಭಾಗದಲ್ಲಿ ಹಾಂಕಾಂಗ್​ನಲ್ಲಿ ಪ್ರತಿಭಟನೆಯ ಅಲೆ ಭುಗಿಲೆದ್ದಿತು. ಹಾಂಗ್​ಕಾಂಗ್​ನಲ್ಲಿ ಕ್ರಿಮಿನಲ್ ಅಪರಾಧವೆಸಗಿದವರನ್ನು ವಿಚಾರಣೆಗಾಗಿ ಚೀನಾದ ಮೇನ್​ಲ್ಯಾಂಡ್​ನಲ್ಲಿ ಹೋಗಿ ವಿಚಾರಣೆಗೆ ಗುರಿಪಡಿಸುವ ಕಾನೂನು ರೂಪಿಸಲು ಮುಂದಾಗಿದ್ದೇ ಈ ಪ್ರತಿಭಟನೆ ಹುಟ್ಟಿಕೊಳ್ಳಲು ಕಾರಣ. ಈ ಪ್ರತಿಭಟನೆಯು ನಂತರ ಪ್ರಜಾಪ್ರಭುತ್ವ ಪರ ಚಳವಳಿಯಾಗಿ ರೂಪಾಂತರಗೊಂಡಿತು. ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಹಿಂಸಾತ್ಮಕ ಸಂಘರ್ಷಗಳೂ ನಡೆದವು. ವಿವಾದಾತ್ಮಕ ಮಸೂದೆ ಅಂಗೀಕಾರವನ್ನು ಮುಂದೂಡಿದ್ದರಿಂದ ಸೆಪ್ಟಂಬರ್​ನಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. 1997ರ ವರೆಗೆ ಬ್ರಿಟನ್​ನ ವಸಾಹತು ಆಗಿದ್ದ ಹಾಂಕಾಂಗ್ ಒಪ್ಪಂದದನ್ವಯ ಪುನಃ ಚೀನಾದ ತೆಕ್ಕೆಗೆ ಬಂದಿತ್ತು. ‘ಒಂದು ದೇಶ, ಎರಡು ವ್ಯವಸ್ಥೆ’ ನಿಯಮದನ್ವಯ ಹಾಂಕಾಂಗ್​ಗೆ ಕೆಲವು ಸ್ವಾಯತ್ತೆ ಹಾಗೂ ಜನರಿಗೆ ಸ್ವಾತಂತ್ರ್ಯ ನೀಡಲಾಗಿತ್ತೆ.

    ಇದನ್ನೂ ಓದಿ: ಕ್ವಾರಂಟೈನ್​ನಲ್ಲಿದ್ದ ಗೆಳೆಯನಿಗೆ ಹಲ್ವಾ ತಗೊಂಡು ಹೋದವನನ್ನು ಹುಡುಕುತ್ತಿದ್ದಾರೆ ಪೊಲೀಸರು!

    ಚೀನಾ ರಕ್ಷಣಾ ಬಜೆಟ್ ಏರಿಕೆ: ರಕ್ಷಣಾ ವೆಚ್ಚ ವಿಚಾರದಲ್ಲಿ ಅಮೆರಿಕದ ನಂತರದ ಸ್ಥಾನದಲ್ಲಿರುವ ಚೀನಾ ತನ್ನ ರಕ್ಷಣಾ ಬಜೆಟ್​ಅನ್ನು 176.6 ಬಿಲಿಯನ್ ಡಾಲರ್​ನಿಂದ 179 ಬಿಲಿಯನ್ ಡಾಲರ್​ಗೆ ಹೆಚ್ಚಿಸಿಕೊಂಡಿದೆ. ಇದು ಭಾರತದ ರಕ್ಷಣಾ ವೆಚ್ಚದ ಮೂರು ಪಟ್ಟು ಅಧಿಕವಾಗಿದೆ. ಕೋವಿಡ್-19 ಹಾವಳಿಯಿಂದ ಆರ್ಥಿಕತೆಗೆ ನಷ್ಟ ಉಂಟಾಗಿರುವುದರಿಂದ ಇಷ್ಟು ಕಡಿಮೆ ಪ್ರಮಾಣದ ಏರಿಕೆ ಮಾಡಿರಬಹುದು ಎಂದು ಅಂದಾಜಿಸಲಾಗಿದೆ.

    PHOTOS/VIDEO| ಯುವತಿಯರ ಹೃದಯಚೋರ ಈ ಲಿಪ್​ಸ್ಟಿಕ್​ ಕಿಂಗ್​- ಈತನ ಸಿಂಗಲ್ಸ್​ ವಹಿವಾಟು 1,100 ಕೋಟಿ ರೂಪಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts