More

    ಹೋಂ ಕ್ವಾರಂಟೈನ್ ಕಡ್ಡಾಯ- ಡಿಸಿ ಮಹಾಂತೇಶ ಜಿ.ಹಿರೇಮಠ

    ಬೆಳಗಾವಿ: ಕರೊನಾ ನಿಯಂತ್ರಿಸುವುದಕ್ಕೆ ಸರ್ಕಾರದಿಂದ ಹೋಂ ಕ್ವಾರಂಟೈನ್ ಹೊಸ ನಿಯಮಾವಳಿ ಜಾರಿಗೆ ತರಲಾಗಿದೆ. ಅಧಿಕಾರಿಗಳು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಡಿಸಿ ಮಹಾಂತೇಶ ಜಿ.ಹಿರೇಮಠ ತಾಕೀತು ಮಾಡಿದ್ದಾರೆ.

    ಕೋವಿಡ್ ಹೊಸ ಮಾರ್ಗಸೂಚಿ ಅನುಷ್ಠಾನ ಕುರಿತಂತೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಹೋಂ ಕ್ವಾರಂಟೈನ್ ಅನ್ನು 14 ದಿನ ಕಡ್ಡಾಯವಾಗಿ ಅನುಸರಿಸುವಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

    ಜಿಲ್ಲೆಯ ಕರೊನಾ ಚೆಕ್‌ಪೋಸ್ಟ್ ಹಾಗೂ ಸೀಲ್‌ಡೌನ್ ಪ್ರದೇಶಗಳ ಮೇಲೆ ಅಧಿಕಾರಿಗಳು ಹದ್ದಿನ ಕಣ್ಣಿಡಬೇಕು. ಅನ್ಯರಾಜ್ಯದಿಂದ ಬರುವ ಪ್ರವಾಸಿಗರು, ಕಾರ್ಮಿಕರು, ಚಾಲಕರ ಮೇಲೆ ವಿಶೇಷ ನಿಗಾ ವಹಿಸಬೇಕು. ಯಾವುದೇ ಕಾರಣಕ್ಕೂ ಕರೊನಾ ಶಂಕಿತರ ಪ್ರವೇಶಕ್ಕೆ ಅನುಮತಿ ನೀಡಬಾರದು ಎಂದು ಸೂಚಿಸಿದರು.
    ಕರೊನಾ ನಿಯಂತ್ರಣಕ್ಕೆ ಸಹಕರಿಸಿ: ಕರೊನಾ ತಡೆಗಟ್ಟಲು ಖಾಸಗಿ ಆಸ್ಪತ್ರೆಗಳು ಸಹಕಾರ ನೀಡಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಶೇ.50 ಹಾಸಿಗೆಯನ್ನು ಕರೊನಾ ರೋಗಿಗಳ ಚಿಕಿತ್ಸೆಗೆ ಮೀಸಲಿಡಬೇಕು ಎಂದು ಸಭೆಯಲ್ಲಿ ಹಾಜರಿದ್ದ ಖಾಸಗಿ ಆಸ್ಪತ್ರೆ ಅಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾದಾಗ ಹಾಸಿಗೆ ಕೊರತೆ ಆಗಬಾರದು. ಖಾಸಗಿ ಆಸ್ಪತ್ರೆಗಳು ಈ ನಿಟ್ಟಿನಲ್ಲಿ ತಯಾರಿ ಮಾಡಿಕೊಳ್ಳಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳು, ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುವುದು. ಆದರೆ, ಕರೊನಾ ಸೋಂಕಿತರನ್ನು ಆಸ್ಪತ್ರೆಗಳಲ್ಲಿ ದಾಖಲು ಮಾಡಿಕೊಳ್ಳುವುದರಿಂದ ಇತರೆ ರೋಗಿಗಳಿಗೆ ಸಮಸ್ಯೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಕಡಿಮೆ ಕರೊನಾ ಪ್ರಕರಣಗಳಿದ್ದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲು ಮಾಡಬೇಕು. ಅವರಿಗೆ ಖಾಸಗಿ ಆಸ್ಪತ್ರೆಗಳ ವೈದ್ಯರೇ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

    ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ವಿ.ಮುನ್ಯಾಳ ಮಾತನಾಡಿ, ಜಿಲ್ಲೆಯ 9 ಆಸ್ಪತ್ರೆಗಳಲ್ಲಿ ಈಗಾಗಲೇ 450 ಹಾಸಿಗೆಗಳಿವೆ. ಆದರೆ, ಖಾಸಗಿಯವರನ್ನು ಒಳಗೊಂಡರೆ ಎಲ್ಲರಿಗೂ ಚಿಕಿತ್ಸೆ ನೀಡಲು ಸಾಧ್ಯವಿದೆ. ಕೆಎಲ್ಇ, ಮಿಲಟರಿ ಆಸ್ಪತ್ರೆ ಹಾಗೂ ಅನೇಕ ಆಸ್ಪತ್ರೆಗಳು ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಮುಂದೆ ಬಂದಿವೆ ಎಂದರು.
    ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ., ಡಿಸಿಪಿ ಸೀಮಾ ಲಾಟ್ಕರ್, ಜಿಪಂ ಉಪಕಾರ್ಯದರ್ಶಿ (ಅಭಿವೃದ್ಧಿ) ಡಾ.ಎಸ್.ಬಿ.ಮುಳ್ಳೊಳ್ಳಿ, ಎಡಿಸಿ ಅಶೋಕ ದುಡಗುಂಟಿ, ಪಾಲಿಕೆ ಆಯುಕ್ತ ಕೆ.ಎಚ್.ಜಗದೀಶ ಇದ್ದರು.

    ಡಿಸಿ ಕಚೇರಿಯಲ್ಲಿ ಸರ್ಜರಿ !: ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಶಾಖೆಯಲ್ಲಿ ಶಿರಸ್ತೇದಾರರಾಗಿ ಕಾರ್ಯನಿರ್ವನಿರ್ವಹಿಸುತ್ತಿದ್ದ ಮೌಲಾಲ್‌ಅಲಿ ನದಾಫ್ ಅವರನ್ನು ಟಪಾಲು ವಿಭಾಗ (ಪತ್ರಶಾಖೆ)ಕ್ಕೆ ವರ್ಗಾವಣೆ ಮಾಡಲಾಗಿದೆ. ತೆರವಾದ ಶಿರಸ್ತೇದಾರ ಸ್ಥಾನಕ್ಕೆ ಲತಾ ಕರಬಳಣ್ಣವರ ಅವರನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಮಹಾಂತೇಶ.ಜಿ.ಹಿರೇಮಠ ಆದೇಶ ಹೊರಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts