More

    ಹೆಮ್ಮನಬೇತೂರು ಗ್ರಾಪಂ ಎದುರೇ ಶವ ಹೂಳಲು ಯತ್ನ; ಮನವೊಲಿಕೆ ಬಳಿಕ ಸೇಂದಿವನದಲ್ಲಿ ಅಂತ್ಯಕ್ರಿಯೆ

    ದಾವಣಗೆರೆ: ತಾಲೂಕಿನ ಹೆಮ್ಮನಬೇತೂರು ಮತ್ತು ಸುತ್ತಮುತ್ತಲ ಗ್ರಾಮದಲ್ಲಿ ಶವ ಸಂಸ್ಕಾರಕ್ಕೆ ಸ್ಮಶಾನ ಭೂಮಿ ಇಲ್ಲದ್ದರಿಂದ ಹತಾಶರಾದ ಗ್ರಾಮಸ್ಥರು ಶುಕ್ರವಾರ ಮೃತಪಟ್ಟ ರೇವಣಸಿದ್ದಪ್ಪ ಎಂಬುವರ ಶವವನ್ನು ಗ್ರಾಪಂ ಎದುರೇ ಹೂಳಲು ಯತ್ನಿಸಿದ ಪ್ರಸಂಗ ನಡೆಯಿತು.

    ಇಲ್ಲಿ ಸ್ಮಶಾನ ಇಲ್ಲದ ಕಾರಣ ಕೆರೆ ಅಂಗಳದಲ್ಲಿ ಹೂಳುತ್ತಿದ್ದುದು ವಾಡಿಕೆ. ಈ ಬಾರಿ ಮಳೆಯಿಂದಾಗಿ ಕೆರೆ ಅಂಗಳ ಜಲಾವೃತವಾಗಿದ್ದರಿಂದ ಶವ ಹೂಳಲು ಜಾಗವೇ ಇಲ್ಲದಂತಾಗಿದೆ. ಹೀಗಾಗಿ ಶುಕ್ರವಾರ ಗ್ರಾಮಸ್ಥರು ಗ್ರಾಪಂ ಮುಂದೆಯೇ ಗುಂಡಿ ತೆಗೆದು ಶವ ಸಂಸ್ಕಾರಕ್ಕೆ ಮುಂದಾಗುವ ಮೂಲಕ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದರು.

    ಈ ವೇಳೆ ಸ್ಥಳಕ್ಕೆ ಆಗಮಿಸಿದ ಆನಗೋಡು ಜಿಪಂ ಮಾಜಿ ಸದಸ್ಯ ಕೆ.ಎಸ್.ಬಸವಂತಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್ ಧಾವಿಸಿ ಗ್ರಾಮಸ್ಥರ ಮನವೊಲಿಸಿದರು. ಶವ ಹೂಳಲು ಜಾಗವಿಲ್ಲದ ಗ್ರಾಮಗಳ ಸಮೀಕ್ಷೆ ನಡೆಸಿ ಲಭ್ಯವಿರುವ ಸರ್ಕಾರಿ ಭೂಮಿ ಮಂಜೂರು ಮಾಡಬೇಕೆಂದು ಬಸವಂತಪ್ಪ ಆಗ್ರಹಿಸಿದರು.

    ಗ್ರಾಪಂ ಅಧ್ಯಕ್ಷೆ ಭಾರತಿ, ಸದಸ್ಯ ಶಿವಯ್ಯ ಅವರು ಗ್ರಾಮಸ್ಥರು ಹಾಗೂ ರಾಜಸ್ವ ನಿರೀಕ್ಷಕ ಚಂದ್ರಪ್ಪ, ಗ್ರಾಮ ಲೆಕ್ಕಾಧಿಕಾರಿ ಬಸಮ್ಮ, ಪಿಡಿಒ ನಾಗರಾಜ್ ಅವರೊಂದಿಗೆ ಚರ್ಚಿಸಿದರು. ಹೆಮ್ಮನಬೇತೂರು ಸಮೀಪದ ಸುಮಾರು 3 ಎಕರೆ ಸೇಂದಿವನ ಭೂಮಿಯನ್ನು ಸ್ಮಶಾನಕ್ಕಾಗಿ ಮಂಜೂರು ಮಾಡುವಂತೆ ತಿಳಿಸಿದರು.

    ಅಂತಿಮವಾಗಿ ಗ್ರಾಪಂ ಮುಂಭಾಗ ತೆಗೆದ ಗುಂಡಿ ಮುಚ್ಚಿಸಿ, ಉದ್ದೇಶಿತ ಸೇಂದಿ ವನದಲ್ಲಿ ರೇವಣಸಿದ್ದಪ್ಪ ಅವರ ಶವ ಹೂಳಲಾಯಿತು. ಗ್ರಾಪಂ ಸದಸ್ಯ ಎ.ಕೆ.ದುರುಗಪ್ಪ, ಮಾಸ್ಟರ್ ಶಿವಣ್ಣ, ಗ್ರಾಪಂ ಮಾಜಿ ಅಧ್ಯಕ್ಷ ರಾಜಪ್ಪ, ಮುಖಂಡರಾದ ಶೇಖರಪ್ಪ, ಮಾಲತೇಶ್, ರಂಗನಾಥ್, ಶಿವಕುಮಾರ್, ರೇವಣಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts