More

    ಸವಣೂರ ಪಟ್ಟಣದ ರಸ್ತೆಗಳಲ್ಲೆಲ್ಲ ಗುಂಡಿ

    ಸವಣೂರ: ಪಟ್ಟಣದ ಪ್ರಮುಖ ರಸ್ತೆಗಳು ಸಂಪೂರ್ಣ ಹದಗೆಟ್ಟು ಸಾರ್ವಜನಿಕರು ಪುರಸಭೆಗೆ ನಿತ್ಯ ಹಿಡಿಶಾಪ ಹಾಕುವಂತಾಗಿದೆ.

    ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆ ರಸ್ತೆ, ಹಳೇ ಕೋರ್ಟ್ ಎದುರಿನ ರಸ್ತೆ, ಅಂಚೆ ಕಚೇರಿ ರಸ್ತೆ, ಚಾವಡಿ ರಸ್ತೆ, ಶುಕ್ರವಾರ ಪೇಟೆ ರಸ್ತೆ, ಚಿತ್ರಗಾರ ಓಣಿ ರಸ್ತೆ, ಇಂದಿರಾ ಸರ್ಕಲ್ ಮಾರ್ಗ ಜಹಾಂಗೀರ ಸರ್ಕಲ್‌ವರೆಗೆ, ಮಾರ್ಕೆಟ್, ಪೊಲೀಸ್ ಠಾಣೆ ರಸ್ತೆ ಸೇರಿದಂತೆ ಬಹುತೇಕ ರಸ್ತೆಗಳಲ್ಲಿ ಎಲ್ಲಿ ನೋಡಿದರೂ ತಗ್ಗು ಗುಂಡಿಗಳು ಕಾಣುತ್ತವೆ.

    2010-11ರಲ್ಲಿ ನಿರ್ಮಿಸಿದ್ದ ಕಾಂಕ್ರೀಟ್ ರಸ್ತೆಗಳು ಕಿತ್ತು ಹಾಳಾಗಿ, ತಗ್ಗು ಗುಂಡಿಗಳು ನಿರ್ಮಾಣವಾಗಿವೆ. ಇದರಿಂದಾಗಿ ಸಂಚಾರಕ್ಕೆ ವಾಹನಗಳು ಸರ್ಕಸ್ ಮಾಡುವಂತಹ ಸ್ಥಿತಿಯಿದೆ. ಪಟ್ಟಣದ ಹೊರ ವಲಯದ ರೇಣುಕಾಚಾರ್ಯ ವೃತ್ತ (ಬಂಕಾಪೂರ ಕ್ರಾಸ್)ದಿಂದ ಶುಕ್ರವಾರ ಪೇಟೆಯ ಮೂಲಕ ಮುಖ್ಯ ಮಾರುಕಟ್ಟೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಹಾಳಾಗಿರುವ ಜತೆಗೆ ಒತ್ತುವರಿಗೊಂಡು ಭಾರಿ ವಾಹನಗಳು ಪಟ್ಟಣದ ಪ್ರವೇಶಕ್ಕೆ ಸಾಹಸ ಪಡುವಂತಾಗಿದೆ.

    ಬೈಕ್ ಸವಾರರು ಪಟ್ಟಣದ ಪ್ರಮುಖ ಬೀದಿಯಲ್ಲಿ ಸಂಚರಿಸಲು ಹಿಂಜರಿಯುತ್ತಾರೆ. ತಗ್ಗು ತಪ್ಪಿಸಲು ಮುಂದಾಗುವ ಬೈಕ್ ಸವಾರರು ಎಲ್ಲಿ ಅಪಘಾತ ಮಾಡಿಯೇ ಬಿಡುತ್ತಾರೆ ಎಂಬ ಆತಂಕದಲ್ಲಿ ಪಾದಚಾರಿಗಳು ಓಡಾಡುವಂತಾಗಿದೆ. ರಸ್ತೆಯಲ್ಲಿನ ತಗ್ಗು, ಗುಂಡಿ ಹಾಗೂ ರಸ್ತೆ ಪಕ್ಕದಲ್ಲಿ ನಿಲ್ಲುವ ಬಾರಿ ವಾಹನಗಳು ಸಾರ್ವಜನಿಕರು ನಿತ್ಯ ಪರದಾಡುವಂತೆ ಮಾಡುತ್ತಿವೆ.

    2022-23ನೇ ಸಾಲಿನ ಎಸ್‌ಎಫ್‌ಸಿ ವಿಶೇಷ ಅನುದಾನ 10 ಕೋಟಿ ರೂಪಾಯಿ ವೆಚ್ಚದಲ್ಲಿ ಪಟ್ಟಣದ ಪ್ರಮುಖ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳಲಾಗುವುದು ಎಂಬ ಹೇಳಿಕೆ ಬಹಳ ದಿನಗಳಿಂದ ಚಾಲ್ತಿಯಲ್ಲಿದೆ. ಆದರೆ, ಇದುವರೆಗೆ ಕಾಮಗಾರಿಗೆ ಚಾಲನೆ ದೊರೆಯುತ್ತಿಲ್ಲ ಎಂಬುದು ಸ್ಥಳೀಯರ ಆರೋಪ.

    ಒತ್ತುವರಿ ತೆರವಿಗಾಗಿ ಮತ್ತು ರಸ್ತೆ ನಿರ್ಮಾಣಕ್ಕಾಗಿ ಸಾರ್ವಜನಿಕರು ನಿತ್ಯ ಪುರಸಭೆಗೆ ಅಲೆದಾಡುವಂತಾಗಿದೆ. ರಸ್ತೆಗಳು ಸಂಪೂರ್ಣ ಹಾಳಾಗಿದ್ದರೂ ಪುರಸಭೆ ಅಧಿಕಾರಿಗಳು ಕಂಡೂ ಕಾಣದಂತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಮಾಜಿ ಮುಖ್ಯಮಂತ್ರಿ, ಶಾಸಕ ಬಸವರಾಜ ಬೊಮ್ಮಾಯಿ ಅವರ ನಿರ್ದೇಶನದ ಮೇರೆಗೆ ಪಟ್ಟಣದ ಬಹುತೇಕ ರಸ್ತೆ ಅಭಿವೃದ್ಧಿಗಾಗಿ ಕ್ರಿಯಾ ಯೋಜನೆ ತಯಾರಿಸಿ, ಟೆಂಡರ್ ಕರೆಯಲಾಗಿದೆ. ಜಿಲ್ಲಾಧಿಕಾರಿಗಳು ಟೆಂಡರ್‌ಗೆ ಅನುಮೋದನೆ ನೀಡಿದ ತಕ್ಷಣ ಕಾಮಗಾರಿ ಆರಂಭಿಸಲಾಗುವುದು.

    ರೇಣುಕಾ ದೇಸಾಯಿ, ಪುರಸಭೆ ಮುಖ್ಯಾಧಿಕಾರಿ

    ರಸ್ತೆ ಹದಗೆಟ್ಟಿರುವ ಹಿನ್ನೆಲೆಯಲ್ಲಿ ತಾಲೂಕಿನ ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ಆಗಮಿಸುವ ಜನರು, ವಾಹನ ಸವಾರರು ಪರದಾಡುವಂತಾಗಿದೆ. ಕೂಡಲೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕಾಮಗಾರಿ ಕೈಗೊಳ್ಳಬೇಕು.

    ರಮೇಶ ಅರಗೋಳ, ಮಂತ್ರೋಡಿ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts