More

    ಹೆಬ್ರಿಗೆ ಬೇಕು ಪೊಲೀಸ್ ಔಟ್‌ಪೋಸ್ಟ್

    ಹೆಬ್ರಿ ತಾಲೂಕು ಕೇಂದ್ರವಾಗಿ ಬದಲಾಗಿದ್ದು, ಪೇಟೆಯಲ್ಲಿ ಟ್ರಾಫಿಕ್ ನಿರ್ವಹಣೆ, ಸಕಾಲದಲ್ಲಿ ಸ್ಪಂದಿಸಲು ಪೊಲೀಸ್ ಔಟ್‌ಪೋಸ್ಟ್ ಅಗತ್ಯ. ಈ ಕುರಿತು ಬೆಳಕು ಚೆಲ್ಲುವ ವಿಶೇಷ ವರದಿ ಇಲ್ಲಿದೆ.

    ನರೇಂದ್ರ ಎಸ್.ಮರಸಣಿಗೆ ಹೆಬ್ರಿ

    ಹೆಬ್ರಿ ಪೇಟೆಯಲ್ಲಿ ಟ್ರಾಫಿಕ್ ನಿರ್ವಹಣೆ, ಸಕಾಲದಲ್ಲಿ ಸ್ಪಂದಿಸಲು, ಅವಘಡಗಳನ್ನು ತಡೆಯಲು ಪೊಲೀಸ್ ಔಟ್‌ಪೋಸ್ಟ್ ಅಗತ್ಯವಿದೆ. ಹೆಬ್ರಿ ತಾಲೂಕು ಕೇಂದ್ರವಾಗಿ ಬದಲಾಗಿದ್ದು, ಪೇಟೆ ಕ್ಷಿಪ್ರವಾಗಿ ಅಭಿವೃದ್ಧಿ ಹೊಂದುತ್ತಿದೆ. ಜನಸಂಖ್ಯೆ ಹೆಚ್ಚುತ್ತಿರುವಂತೆಯೇ ವಾಹನಗಳ ಸಂಖ್ಯೆಯೂ ಹೆಚ್ಚುತ್ತಿದ್ದು, ಇದಕ್ಕೆ ತಕ್ಕಂತೆ ಮೂಲಸೌಕರ್ಯ ಅಭಿವೃದ್ಧಿಯಾಗಬೇಕೆಂದು ಜನ ಒತ್ತಾಯಿಸುತ್ತಿದ್ದಾರೆ.

    ಇತ್ತೀಚೆಗೆ ಹೊಸ ಪೊಲೀಸ್ ಸ್ಟೇಷನ್ ಕಾರ್ಯಾರಂಭಿಸಿದೆ. ಆದರೆ ಹೆಬ್ರಿ ಪೇಟೆಯಲ್ಲಿ ಔಟ್‌ಪೋಸ್ಟ್ ಸ್ಥಾಪಿಸಿಲ್ಲ. ಈ ಹಿಂದೆ ಪೊಲೀಸ್ ಸ್ಟೇಷನ್ ಹೆಬ್ರಿ ಪೇಟೆಯಲ್ಲಿ ಇದ್ದ ಕಾರಣ ಔಟ್‌ಪೋಸ್ಟ್‌ನ ಅಗತ್ಯ ತಲೆದೋರಿರಲಿಲ್ಲ. ಪ್ರತಿಯೊಂದಕ್ಕೂ ಪೊಲೀಸ್ ಠಾಣೆವರೆಗೆ ಹೋಗಲು ಜನಸಾಮಾನ್ಯರಿಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ ಪೇಟೆಯಲ್ಲಿ ಔಟ್‌ಪೋಸ್ಟ್ ಸ್ಥಾಪಿಸಿ ಎಂದು ಆಗ್ರಹಿಸುತ್ತಿದ್ದಾರೆ.

    ಪೊಲೀಸ್ ಔಟ್‌ಪೋಸ್ಟ್ ನಿರ್ಮಾಣ ಬೇಡಿಕೆ

    ಹೆಬ್ರಿ ಪೇಟೆಯಲ್ಲಿ ನಿತ್ಯ ಟ್ರಾಫಿಕ್ ಜಾಮ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ವಾರಂತ್ಯದ ದಿನ ಟ್ರಾಫಿಕ್ ಕಿರಿಕಿರಿ ಹೇಳತೀರದು. ಬೆಳಗ್ಗೆ ಹಾಗೂ ಸಂಜೆ ಹೊತ್ತಿನಲ್ಲಿ ವಾಹನ ದಟ್ಟಣೆ ಸಿಕ್ಕಾಪಟ್ಟೆ ಇರುತ್ತದೆ. ನಾಲ್ಕು ದಿಕ್ಕುಗಳಿಂದ ವಾಹನಗಳು ಅಡ್ಡಾದಿಡ್ಡಿಯಾಗಿ ಸಂಚರಿಸುತ್ತಿರುತ್ತವೆ. ಹೀಗಾಗಿ ಆಗಾಗ ಸಣ್ಣಪುಟ್ಟ ಅಪಘಾತಗಳು ಸಂಭವಿಸಿ ವಾಹನಗಳು ಜಖಂ ಆದ ನಿದರ್ಶನಗಳಿವೆ.

    ಪೇಟೆಯ ಸರ್ಕಲ್‌ನಲ್ಲಿ ಪೊಲೀಸ್ ಔಟ್ ಪೋಸ್ಟ್ ನಿರ್ಮಾಣ ಮಾಡಿದರೆ ಟ್ರಾಫಿಕ್ ಸಮಸ್ಯೆಯನ್ನು ನಿಭಾಯಿಸಬಹುದು ಎನ್ನುವುದು ಜನರ ಅಭಿಪ್ರಾಯ.

    ದನ ಕಳ್ಳರ ಹಾವಳಿ

    ಈ ಭಾಗದಲ್ಲಿ ಅನೇಕ ದನ ಕಳ್ಳತನದ ಪ್ರಕರಣಗಳು ಸಂಭವಿಸಿವೆ. ಹೊರ ಜಿಲ್ಲೆಗಳಿಂದ ಬಂದ ಕಳ್ಳರು ಸೋಮೇಶ್ವರ ಚೆಕ್‌ಪೋಸ್ಟ್ ಮೂಲಕ ದನಳನ್ನು ಕೊಂಡೊಯ್ಯುತ್ತಾರೆ. ಹಿಂದೆ ಪೊಲೀಸ್ ಠಾಣೆ ಪೇಟೆಯಲಿದ್ದ ಕಾರಣ ತೀವ್ರ ನಿಗಾ ಇಡಲು ಸಾಧ್ಯವಾಗುತ್ತಿತ್ತು. ಆದರೆ ಈಗ ಠಾಣೆ ಪೇಟೆಗೆ ದೂರದಲ್ಲಿರುವುದರಿಂದ ದನ ಕಳ್ಳತನ ತಡೆಯುವುದು ಕಷ್ಟವಾಗುತ್ತಿದೆ.

    ರಾಷ್ಟ್ರೀಯ ಹೆದ್ದಾರಿ 169ಎ ಹೆಬ್ರಿ ಪೇಟೆಯಲ್ಲಿ ಹಾದುಹೋಗಿದೆ. ಈ ಹೆದ್ದಾರಿಯಲ್ಲಿ ಅಪಘಾತ ಅವಘಡ ಸಂಭವಿಸಿದರೆ ತುರ್ತು ಕಾರ್ಯಾಚರಣೆಗೆ ಕೆಲವೊಮ್ಮೆ ಪೊಲೀಸರೇ ಇರುವುದಿಲ್ಲ.

    ಪೇಟೆಯಲ್ಲಿದ್ದ ಠಾಣೆ ಕಾಡಿಗೆ

    ಈ ಹಿಂದೆ ಹೆಬ್ರಿ ಪೊಲೀಸ್ ಠಾಣೆ ಪೇಟೆಯ ಹೃದಯ ಭಾಗದಲ್ಲಿತ್ತು. ಆದರೆ ಹೊಸ ಪೊಲೀಸ್ ಠಾಣೆ ಕಾಡಿನ ಅಂಚಿನಲ್ಲಿ ನಿರ್ಮಾಣವಾಗಿದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಬಾರಿ ಚರ್ಚೆ, ಆಕ್ರೋಶ, ವ್ಯಂಗ್ಯ ವ್ಯಕ್ತವಾಗಿದೆ. ಜನರ ಹಿತದೃಷ್ಟಿಯಿಂದ ಪೇಟೆಯಲ್ಲಿ ಔಟ್‌ಪೋಸ್ಟ್ ಆದರೂ ಸ್ಥಾಪಿಸಿ ಎಂದು ಬೇಡಿಕೆ ಇಟ್ಟಿದ್ದಾರೆ.

    ಹೆಬ್ರಿಯಲ್ಲಿ ಪೊಲೀಸ್ ಔಟ್‌ಪೋಸ್ಟ್ ಬೇಡಿಕೆಯ ಕುರಿತು ಯಾವುದೇ ಮಾಹಿತಿ ಇಲ್ಲ. ಸಂಬಂಧಪಟ್ಟವರಿಂದ ಮಾಹಿತಿ ಪಡೆದು ಅಗತ್ಯವಾಗಿದ್ದರೆ ಸೂಕ್ತ ಕ್ರಮ ಜರುಗಿಸಲಾಗುವುದು. ಜನರು ಸಹಕಾರ ನೀಡಬೇಕು.

    ಅಕ್ಷಯ್ ಎಂ.ಹಾಕೆ, ಪೊಲೀಸ್ ಅಧೀಕ್ಷಕರು ಉಡುಪಿ ಜಿಲ್ಲೆ

    ಹೆಬ್ರಿ ಪೇಟೆಯಲ್ಲಿದ್ದ ಹಳೇ ಪೊಲೀಸ್ ಠಾಣೆಯಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತಿದ್ದು. ಆದರೆ ಪೇಟೆಯಲ್ಲಿದ್ದ ಪೊಲೀಸ್ ಠಾಣೆಯನ್ನು ಕಾಡಿನಲ್ಲಿ ನಿರ್ಮಾಣ ಮಾಡಿ ಜನಸಾಮಾನ್ಯರಿಗೆ ತೊಂದರೆಯಾಗಿದೆ. ಜನರು ನಡೆದುಕೊಂಡು ಅಥವಾ ಆಟೋ ಮಾಡಿಕೊಂಡು ಹೋಗಬೇಕು, ಬಸ್ ವ್ಯವಸ್ಥೆ ಇಲ್ಲ. ಅಪಘಾತ, ಟ್ರಾಫಿಕ್, ಹಾಗೂ ಶೀಘ್ರ ಸ್ಪಂದನೆಗೆ ಪೊಲೀಸ್ ಔಟ್‌ಪೋಸ್ಟ್ ಅಗತ್ಯ.

    ಸುಧೀರ್, ಸ್ಥಳೀಯರು, ಹೆಬ್ರಿ

    ಪೇಟೆಯಲ್ಲಿ ಔಟ್ ಪೋಸ್ಟ್ ನಿರ್ಮಾಣ ಅತ್ಯಗತ್ಯ. ಸಂಜೆ ಹೊತ್ತಿನಲ್ಲಿ ತುಂಬ ಟ್ರಾಫಿಕ್ ಇರುತ್ತದೆ. ಜನಸಾಮಾನ್ಯರಿಗೆ ಉತ್ತಮ ಸೇವೆ ನೀಡಬೇಕಾದರೆ ಇಲಾಖೆ ಶೀಘ್ರ ಸ್ಪಂದಿಸಬೇಕು. ಅಪಘಾತ, ದರೋಡೆ ನಡೆದಾಗ ಪೊಲೀಸರು ನೆರವಾಗಲು ಸಾಧ್ಯವಾಗುತ್ತದೆ.

    ದಿವಾಕರ ಶೆಟ್ಟಿ, ಸ್ಟುಡಿಯೋ ಮಾಲೀಕರು ಹೆಬ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts