More

    ಹೆಬ್ಬಾಳ ಮೇಲ್ಸೇತುವೆಯ ವಾಹನ ಸಂಚಾರ ಸಮಸ್ಯೆಗಿಲ್ಲ ಪರಿಹಾರ; ನಿಂತಿತು ಹೆಚ್ಚುವರಿ ಪಥ ನಿರ್ಮಾಣ ಕಾಮಗಾರಿ

    ಬೆಂಗಳೂರು: ಹೆಬ್ಬಾಳ ದ ಮೇಲ್ಸೇತುವೆಯಲ್ಲಿನ ವಾಹನ ಸಂಚಾರ ಸಮಸ್ಯೆಗೆ ಪರಿಹಾರ ಕಲ್ಪಿಸಲು ಕೈಗೆತ್ತಿಕೊಂಡಿರುವ ಹೆಚ್ಚುವರಿ ಪಥ ನಿರ್ಮಾಣದ ಕಾಮಗಾರಿಯನ್ನು ದಿಢೀರ್ ಸ್ಥಗಿತಗೊಳಿಸಲಾಗಿದೆ.

    ಹೊಸ ಏರ್‌ಪೋರ್ಟ್ ರಸ್ತೆಯಲ್ಲಿ ವಾಹನ ದಟ್ಟಣೆ ನಿವಾರಿಸಲು ಸರ್ಕಾರದ ಸೂಚನೆ ಅನ್ವಯ ಬಿಡಿಎ ಹೆಬ್ಬಾಳದ ಬಳಿ ಹೆಚ್ಚುವರಿ ಪಥ ನಿರ್ಮಿಸುವ ಹೊಣೆಯನ್ನು ವಹಿಸಿದೆ. ಕಳೆದ ಜ.1ರಂದು ಬಿಡಿಎ ಅಧ್ಯಕ್ಷರು ಮೊದಲ ಹಂತದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಇದರ ಬೆನ್ನಲ್ಲೇ ಕಾಮಗಾರಿಗೆ ಚಾಲನೆ ದೊರೆತಿತ್ತು. ಈ ಹಿಂದೆಯೇ ಕೈಗೊಂಡಿದ್ದ ನೀಲಿನಕ್ಷೆಯಂತೆ ರಿಂಗ್ ರಸ್ತೆಯ ನಾಗವಾರ ಕಡೆಯಿಂದ ಬರುವ ವಾಹನಗಳ ಸರಾಗ ಸಂಚಾರಕ್ಕೆ ಎರಡು ಪಥಗಳುಳ್ಳ ಪ್ರತ್ಯೇಕ ಮಾರ್ಗ ನಿರ್ಮಿಸಲಾಗುತ್ತದೆ. ಇದೇ ರೀತಿ ಎಸ್ಟೀಮ್ ಮಾಲ್ ಕಡೆಯಿಂದ ನಗರದತ್ತ ಬರುವ ವಾಹನಗಳ ಸುಲಭ ಸಂಚಾರಕ್ಕೆ ಹೆಚ್ಚುವರಿ ಪಥ ನಿರ್ಮಿಸಲಾಗುತ್ತದೆ. ಈ ಎರಡೂ ಕಾಮಗಾರಿಗೆ ಸಂಬಂಧಿಸಿದಂತೆ ಹೆಬ್ಬಾಳದ ರೈಲ್ವೆ ಗೇಟ್‌ನಿಂದ ಪೊಲೀಸ್ ಠಾಣೆವರೆಗೆ ನೆಲದಡಿ ಪಿಲ್ಲರ್ ಅಳವಡಿಸುವ ಹಾಗೂ ಇತರ ತಾಂತ್ರಿಕ ಕೆಲಸಕ್ಕೆ ಚಾಲನೆ ನೀಡಲಾಗಿದೆ.

    ಇದನ್ನೂ ಓದಿ: ವಿಮಾ ಪಾಲಿಸಿ ಮಾಡಿಸುವ ಸೋಗಿನಲ್ಲಿ ಮನೆ ಕಳ್ಳತನ: ಹೆಬ್ಬಾಳ ಪೊಲೀಸರಿಂದ ಆರೋಪಿಯ ಬಂಧನ

    ಸುಮಾರು ಒಂದು ತಿಂಗಳ ಕಾಲ ಇಲ್ಲಿ ಪ್ರಾಥಮಿಕ ಹಂತದ ಸಿವಿಲ್ ಕೆಲಸವನ್ನು ಆರಂಭಿಸಲಾಗಿತ್ತು. ಮೇಲ್ಸೇತುವೆ ಬಳಿಯೇ ಕಾಮಗಾರಿ ಆರಂಭಿಸಿದ್ದರಿಂದ ಇಲ್ಲಿನ ಬಸ್ ನಿಲ್ದಾಣದಲ್ಲಿ ವಾಹನ ನಿಲುಗಡೆಗೆ ಸಮಸ್ಯೆಯಾಗಿದ್ದನ್ನು ಗಮನಿಸಿ ಟ್ರಾಫಿಕ್ ಪೊಲೀಸರು ಬಿಎಂಟಿಸಿ ಸಹಿತ ಲಘು ವಾಹನಗಳ ಸರಾಗ ಸಂಚಾರಕ್ಕೆ ಸರ್ವಿಸ್ ರಸ್ತೆಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಕಳೆದೊಂದು ವಾರದಿಂದ ಯಾವುದೇ ಕಾಮಗಾರಿ ನಡೆಸಲಾಗುತ್ತಿಲ್ಲ್ಲ. ತಾಂತ್ರಿಕ ಕೆಲಸಕ್ಕಾಗಿ ತಂದು ನಿಲ್ಲಿಸಿದ್ದ ಭಾರಿ ಯಂತ್ರಗಳನ್ನು ಕೂಡ ವಾಪಸ್ ಕಳುಹಿಸಲಾಗಿದೆ. ಈ ಕೆಲಸಕ್ಕಾಗಿ ಹಾಳುಗೆಡವಲಾಗಿದ್ದ ರಸ್ತೆ ಡಿವೈಡರ್‌ಅನ್ನು ಸರಿಪಡಿಸುವ ಕೆಲಸ ಆಗಿಲ್ಲ.

    ಬಸ್ ನಿಲುಗಡೆಯಿಂದ ಟ್ರಾಫಿಕ್ ಸಮಸ್ಯೆ:

    ಕಾಮಗಾರಿ ಕೈಗೊಳ್ಳಲು ಮೇಲ್ಸೇತುವೆಯ ಡೌನ್ ರ‌್ಯಾಂಪ್ ಬಳಿಯಿರುವ ಬಸ್ ನಿಲ್ದಾಣದತ್ತ ಬಿಎಂಟಿಸಿ ಬಸ್‌ಗಳು ಸಾಗದಂತೆ ಬ್ಯಾರಿಕೇಡ್ ಹಾಕಲಾಗಿದೆ. ನಿಲ್ದಾಣವನ್ನು ತಾತ್ಕಾಲಿಕವಾಗಿ ತುಸು ಮುಂದಕ್ಕೆ ಸ್ಥಳಾಂತರಗೊಳಿಸಲಾಗಿದೆ. ಆದರೆ, ಬಿಎಂಟಿಸಿ ಹಾಗೂ ಖಾಸಗಿ ಬಸ್‌ಗಳು ಸರ್ವಿಸ್ ರಸ್ತೆಯತ್ತ ಸಾಗದೆ ಮುಖ್ಯ ಕ್ಯಾರೇಜ್‌ನಲ್ಲೇ ನಿಲುಗಡೆ ಮಾಡುತ್ತಿವೆ. ಇದರಿಂದ ಇತರ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಠಾಣೆ ಎದುರಿನಲ್ಲೇ ವಾಹನ ದಟ್ಟಣೆ ಉಂಟಾಗುತ್ತಿದ್ದರೂ, ಸಂಚಾರ ಪೊಲೀಸರು ಸಮರ್ಪಕ ಕ್ರಮ ಕೈಗೊಳ್ಳುತ್ತಿಲ್ಲ. ಕೇವಲ ಗಣ್ಯರು ಸಂಚರಿಸುವ ವೇಳೆ ಪೊಲೀಸರು ರಸ್ತೆ ಬದಿ ನಿಂತು ವಾಹನ ನಿಯಂತ್ರಿಸಿದರೆ ಇತರ ಸಮಯದಲ್ಲಿ ಕಾಣಸಿಗುವುದಿಲ್ಲ ಎಂಬ ಆಕ್ಷೇಪ ವ್ಯಕ್ತವಾಗಿದೆ.

    ಹೆಬ್ಬಾಳ

    255 ಕೋಟಿ ರೂ. ಯೋಜನೆ:

    ಹೆಬ್ಬಾಳ ಮೇಲ್ಸೇತುವೆ ಒಳಗೊಂಡಂತೆ ಇಲ್ಲಿನ ರಿಂಗ್ ರಸ್ತೆಯ ಜಂಕ್ಷನ್‌ನಲ್ಲಿನ ಸಂಚಾರ ಸಮಸ್ಯೆಯನ್ನು ನಿವಾರಿಸಲು 255 ಕೋಟಿ ರೂ. ಮೊತ್ತದ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಎರಡು ಹಂತಗಳಲ್ಲಿ ಯೋಜನೆ ಜಾರಿಯಾಗಲಿದ್ದು, ಮೊದಲ ಹಂತದಲ್ಲಿ 80 ಕೋಟಿ ರೂ. ವೆಚ್ಚದಲ್ಲಿ ನಾಗವಾರದಿಂದ ನಗರದತ್ತ ಸಾಗಲು ಮೇಲ್ಮಟ್ಟದ ರ‌್ಯಾಂಪ್ ನಿರ್ಮಿಸಲಾಗುತ್ತದೆ. ಈ ಕಾಮಗಾರಿ ಪೂರ್ಣಗೊಂಡ ಬಳಿಕ ರಿಂಗ್ ರಸ್ತೆ ಜಂಕ್ಷನ್ ಕೆಳಸೇತುವೆ ನಿರ್ಮಿಸಲಾಗುತ್ತದೆ. ಆದರೀಗ ಮೊದಲ ಹಂತದ ಯೋಜನೆ ಕುಂಟುತ್ತಾ ಸಾಗುತ್ತಿರುವುದರಿಂದ ಈ ವರ್ಷಾಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವ ಬಿಡಿಎ ವಾಗ್ದಾನ ಈಡೇರುವ ಅನುಮಾನ ಮೂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts