More

    ಗುಣಮುಖರಾಗಿದ್ದಾರೆ 106 ಸೋಂಕಿತರು ; ಶನಿವಾರ 25 ಜನರಿಗೆ ಸೋಂಕು ದೃಢ

    ತುಮಕೂರು: ಜಿಲ್ಲೆಯ 25 ಜನರಿಗೆ ಶನಿವಾರ ಕರೊನಾ ಸೋಂಕು ದೃಢವಾಗಿದೆ. ತುಮಕೂರು ನಗರದಲ್ಲಿಯೇ 12, ಶಿರಾದಲ್ಲಿ 6, ಪಾವಗಡ 3 ಹಾಗೂ ಗುಬ್ಬಿ, ಕುಣಿಗಲ್, ಮಧುಗಿರಿ ಹಾಗೂ ತಿಪಟೂರು ತಾಲೂಕಿನಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ. ಚಿಕ್ಕನಾಯಕನಹಳ್ಳಿ, ಕೊರಟಗೆರೆ ಹಾಗೂ ತುರುವೇಕೆರೆಯಲ್ಲಿ ಯಾವುದೇ ಪ್ರಕರಣ ದಾಖಲಾಗದಿರುವುದು ಸ್ಥಳೀಯರಿಗೆ ನೆಮ್ಮದಿ ತಂದಿದೆ.

    ಪ್ರಸ್ತುತ ಜಿಲ್ಲೆಯಲ್ಲಿ 453 ಜನರಿಗೆ ಸೋಂಕು ತಗುಲಿದ್ದು, ಈವರೆಗೆ 106 ಜನ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ, 334 ಸಕ್ರಿಯ ಪ್ರಕರಣಗಳಿದ್ದು, 4 ಜನ ತೀವ್ರ ನಿಗಾ ಘಟಕದಲ್ಲಿದ್ದಾರೆ, 13 ಸಾವಾಗಿದೆ. ತುಮಕೂರು ತಾಲೂಕು ವಕ್ಕೋಡಿ ಹೊಸಬಡಾವಣೆ 58 ವರ್ಷದ ಮಹಿಳೆ, ನಗರದ ಮಹಾಲಕ್ಷ್ಮೀನಗರದ 58 ವರ್ಷದ ಪುರಷ, ಎಸ್‌ಐಟಿ ಬಡಾವಣೆಯ 42 ವರ್ಷದ ಪುರುಷ, ವಿಜಯನಗರದ 61 ವರ್ಷದ ವೃದ್ಧ, ಪೂರ್‌ಹೌಸ್ ಕಾಲನಿ 52 ವರ್ಷದ ಪುರುಷ ಹಾಗೂ ಮಲ್ಲಸಂದ್ರದ ವೃದ್ಧ ದಂಪತಿಗೆ ಸೋಂಕು ದೃಢವಾಗಿದೆ.

    ಸೋಂಕಿತರ ಜತೆ ಸಂಪರ್ಕದಲ್ಲಿದ್ದ ಸದಾಶಿವನಗರದ 36 ವರ್ಷದ ಮಹಿಳೆ, ಎಸ್‌ಎಸ್ ಪುರಂ 39 ವರ್ಷದ ಮಹಿಳೆ, ರಾಘವೇಂದ್ರ ನಗರದ 40 ವರ್ಷದ ಮಹಿಳೆ, ಕೋತಿತೋಪು 26 ವರ್ಷದ ಮಹಿಳೆ, ವಿನಾಯಕ ನಗರ 37 ವರ್ಷದ ಪುರುಷನಿಗೆ ಸೋಂಕು ದೃಢವಾಗಿದ್ದು ಅವರೆಲ್ಲರಿಗೂ ರೋಗಲಕ್ಷಣ ಕಾಣಿಸಿಲ್ಲ.

    ಗುಬ್ಬಿ ತಾಲೂಕು ನಿಟ್ಟೂರಿನ ಖಾಸಗಿ ಕ್ಲಿನಿಕ್ 45 ವರ್ಷದ ಸಿಬ್ಬಂದಿ, ಕುಣಿಗಲ್ ತಾಲೂಕು ಗಿಡ್ಡದಪಾಳ್ಯದ 55 ವರ್ಷದ ಪುರುಷ, ಮಧುಗಿರಿ 55 ವರ್ಷದ ಪುರುಷ, ಪಾವಗಡ ತಾಲೂಕು ವೈ.ಎನ್.ಹೊಸಕೋಟೆ 37 ವರ್ಷದ ಪುರುಷ, ಪಳವಳ್ಳಿ 34 ವರ್ಷದ ಯುವಕ, 41 ವರ್ಷದ ಮಹಿಳೆಗೆ ಸೋಂಕು ಕಾಣಿಸಿದೆ.

    ಶಿರಾ ತಾಲೂಕು ಗಿಡ್ಡಗನಹಳ್ಳಿ 24 ವರ್ಷದ ಯುವತಿ, 34 ವರ್ಷದ ಪುರುಷ, ಪುರಲೆಹಳ್ಳಿ 70 ವರ್ಷ ವೃದ್ಧ, 12 ವರ್ಷದ ಬಾಲಕಿ, ಕದಿರೆಕಂಬದ 30 ವರ್ಷ ಮಹಿಳೆ, ಚಿಕ್ಕನಹಳ್ಳಿ 30 ವರ್ಷದ ಪುರುಷ ಹಾಗೂ ತಿಪಟೂರು ಗಾಂಧಿನಗರದ 53 ವರ್ಷದ ಪುರುಷನಿಗೆ ಸೋಂಕು ದೃಢವಾಗಿದೆ.

    ಪಾರ್ಟಿ ತಂದ ಆಪತ್ತು!: ಕರೊನಾ ಮಹಾಸ್ಫೋಟದ ಹಿಂದೆ ತೋಟದ ಮನೆಯೊಂದರಲ್ಲಿ ನಡೆದ ‘ಪಾರ್ಟಿ’ ಕಾರಣವೂ ಇದೆ ಎನ್ನಲಾಗಿದೆ. ಎಸ್‌ಐಟಿ ಬಡಾವಣೆ, ಮಾರುತಿನಗರದ ಕೆಲವು ಸಮಾನಮನಸ್ಕರು ಕೂಡಿ ಪಾಲಸಂದ್ರದ ಬಳಿ ತೋಟದ ಮನೆಯಲ್ಲಿ ಇತ್ತೀಚೆಗೆ ನಡೆಸಿದ ಗುಂಡುತುಂಡಿನ ಪಾರ್ಟಿ ‘ಕರೊನಾ ಸೋಂಕಿನ ಮೂಲ’ ಎಂಬುದು ಬೆಳಕಿಗೆ ಬಂದಿದೆ. ಯುವಕರು, ವ್ಯಾಪಾರಿಗಳು, ಉದ್ಯಮಿಗಳು ಜತೆಗೆ ಸರ್ಕಾರಿ ಅಧಿಕಾರಿಗಳು ಸೇರಿ 40ಕ್ಕೂ ಹೆಚ್ಚು ಮಂದಿ ಈ ಪಾರ್ಟಿಯಲ್ಲಿ ಭಾಗವಹಿಸಿದ್ದು , ನಗರದಲ್ಲಿ ವ್ಯಾಪಕವಾಗಿ ಸೋಂಕು ಹರಡಲು ಕಾರಣವಾಗಿದೆ.

    ಸಕ್ಕರೆ ಕಾಯಿಲೆಯಿದ್ದವರಿಗೆ ಹೆಚ್ಚು: ತುಮಕೂರು ನಗರದಲ್ಲಿ ಪತ್ತೆಯಾಗಿರುವ 7 ಪ್ರಕರಣಗಳಲ್ಲಿ ಸಕ್ಕರೆ ಹಾಗೂ ರಕ್ತದೊತ್ತಡದಿಂದ ಬಳಲುತ್ತಿರುವವರು ಹೆಚ್ಚು. ಅದರಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿಗೆ ಸೋಂಕು ತಗುಲಿದೆ. ಶಿರಾ ಆಸ್ಪತ್ರೆಯಲ್ಲಿ ಹೆರಿಗೆ ಆಗಿರುವ ಮಹಿಳೆಗೆ ಸೋಂಕು ದೃಢವಾಗಿದ್ದು ಮಗು, ತಾಯಿ ಆರೋಗ್ಯವಾಗಿದ್ದಾರೆ, ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಶಿರಾ ತಾಲೂಕು ಆಸ್ಪತ್ರೆ ಸ್ಯಾನಿಟೈಸ್ ಮಾಡಲಾಗಿದೆ. ಶನಿವಾರ ಪತ್ತೆಯಾಗಿರುವ ಸೋಂಕಿತರಲ್ಲಿ 4 ಜನರಲ್ಲಿ ರೋಗ ಲಕ್ಷಣ, 21 ರೋಗಲಕ್ಷಣ ವಿಲ್ಲದ ಪ್ರಕರಣಗಳಿವೆ, ಸೋಂಕಿತರ ಸಂಪರ್ಕದಲ್ಲಿದ್ದ 9 ಜನರಿಗೆ ದೃಢವಾಗಿದೆ. ಎಲ್ಲರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆಹಚ್ಚಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts