More

    5 ತಿಂಗಳು ಸಂಚು ರೂಪಿಸಿದ, ಹಾವಿನಿಂದ 2 ಬಾರಿ ಕಚ್ಚಿಸಿ ಪತ್ನಿಯ ಕೊಂದ

    ಕೊಲ್ಲಂ: ಆತ ಎರಡು ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದ. ದಾಂಪತ್ಯದ ಕುರುಹು ಆಗಿ ಒಂದು ವರ್ಷದ ಪುತ್ರನೂ ಇದ್ದ. ಸುಖವಾಗಿ ಸಂಸಾರ ನಡೆಸುವುದನ್ನು ಬಿಟ್ಟು, ಮತ್ತೊಬ್ಬಳ ಪ್ರೇಮಪಾಶಕ್ಕೆ ಸಿಲುಕಿದ. ಆಕೆಯನ್ನು ಮದುವೆಯಾಗುವ ಉದ್ದೇಶದಿಂದ ಹಾವಿನಿಂದ ಎರಡು ಬಾರಿ ಕಚ್ಚಿಸಿ ಪತ್ನಿಯನ್ನು ಕೊಂದು ಈಗ ಪೊಲೀಸರ ಅತಿಥಿಯಾಗಿದ್ದಾನೆ.

    ಅಡೂರ್​ನ ಪರಕೋಡೆಯ ನಿವಾಸಿ ಉತ್ತರಾ (25) ಕೊಲೆಯಾದಾಕೆ. ಹಾವಿನಿಂದ ಕಚ್ಚಿಸಿ ಪತ್ನಿಯನ್ನು ಕೊಂದ ಆರೋಪದಲ್ಲಿ ಸೂರಜ್​ ಹಾಗೂ ಈತನಿಗೆ ಸಹಾಯ ಮಾಡಿದ ಇಬ್ಬರು ಹಾವಾಡಿಗರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಸೂರಜ್​ ಮತ್ತು ಉತ್ತರಾ ಅಡೂರ್​ನ ಪರಕೋಡೆಯಲ್ಲಿ ಸಂಸಾರ ನಡೆಸುತ್ತಿದ್ದರು. ಎರಡು ವರ್ಷದ ಹಿಂದೆ ಮದುವೆಯಾಗಿದ್ದ ಇವರ ದಾಂಪತ್ಯಕ್ಕೆ ಪುತ್ರನೂ ಜನಿಸಿದ್ದ. ಆದರೆ, ಸೂರಜ್​ ಇತ್ತೀಚೆಗೆ ಮತ್ತೊಬ್ಬಾಕೆಯಲ್ಲಿ ಅನುರಕ್ತನಾಗಿದ್ದ. ಆಕೆಯನ್ನು ಮದುವೆಯಾಗಬೇಕು ಎಂದು ನಿರ್ಧರಿಸಿದ್ದ ಆತ, ಉತ್ತರಾಳನ್ನು ಕೊಲೆ ಮಾಡಲು ನಿರ್ಧರಿಸಿದ್ದ.

    ಇದನ್ನೂ ಓದಿ: Video: ಹೃದಯಾಘಾತಕ್ಕೆ ಒಳಗಾಗಿದ್ದ ಬೀದಿನಾಯಿಗೆ ಮರುಜೀವ ನೀಡಿದ ಯುವಕ

    ಆದರೆ, ತಾನೇ ಕೊಲೆ ಮಾಡಿದರೆ ಜೈಲಿಗೆ ಹೋಗಬೇಕಾಗುತ್ತದೆ ಎಂದು ತಿಳಿದ ಆತ, ಆಕೆಯ ಸಾವು ಆಕಸ್ಮಿಕವೆಂಬಂತೆ ಮಾಡಲು 5 ತಿಂಗಳಿಂದ ಸಂಚು ರೂಪಿಸಿದ್ದ. ಇದಕ್ಕಾಗಿ ಹಾವಾಡಿಗರನ್ನು ಸಂಪರ್ಕಿಸಿದ್ದ ಆತ ವಿಷವಿರುವ ಹಾವನ್ನು ಕೊಡುವಂತೆ ಕೇಳಿದ್ದ. ಅದರಂತೆ ಹಾವಾಡಿಗರು ಮಂಡಲದ ಹಾವನ್ನು ಕೊಟ್ಟಿದ್ದರು.

    ಈ ಹಾವನ್ನು ಮಾರ್ಚ್​ 2ರಂದು ಮನೆಗೆ ತೆಗೆದುಕೊಂಡು ಹೋಗಿದ್ದ ಸೂರಜ್​, ಅದರಿಂದ ಪತ್ನಿಯನ್ನು ಕಚ್ಚಿಸಿದ್ದ. ಆದರೆ, ಆ ಹಾವಿನಲ್ಲಿ ಹೆಚ್ಚು ವಿಷ ಇರದಿದ್ದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ಉತ್ತರಾ ಬದುಕುಳಿದಿದ್ದಳು. ಬಳಿಕ ವಿಶ್ರಾಂತಿ ಪಡೆಯಲೆಂದು ಆಂಚಲ್​ನ ಇರಂನಲ್ಲಿರುವ ತವರಿಗೆ ಬಂದಿದ್ದಳು.

    ಮೊದಲ ಪ್ರಯತ್ನ ವಿಫಲವಾಗಿದ್ದರಿಂದ ಹತಾಶನಾಗಿದ್ದ ಸೂರಜ್​ ಈ ಬಾರಿ ಹೆಚ್ಚು ವಿಷವಿರುವ ಹಾವನ್ನು ಕೊಡುವಂತೆ ಹಾವಾಡಿಗರನ್ನು ಕೇಳಿದ್ದ. ಅದಕ್ಕಾಗಿ 10 ಸಾವಿರ ರೂಪಾಯಿ ಕೊಟ್ಟಿದ್ದ. ಅದರಂತೆ ಹಾವಾಡಿಗರು ಈ ಬಾರಿ ನಾಗರಹಾವನ್ನು ತಂದುಕೊಟ್ಟಿದ್ದರು.
    ಚೀಲದಲ್ಲಿ ಹಾವನ್ನು ಹಾಕಿಕೊಂಡು ಯಾರಿಗೂ ಗೊತ್ತಾಗದಂತೆ ಅತ್ತೆ ಮನೆಗೆ ಕೊಂಡೊಯ್ದಿದ್ದ ಸೂರಜ್​, ಮೇ 7ರ ರಾತ್ರಿ ಅದನ್ನು ಪತ್ನಿಯ ಮೇಲೆ ಬಿಟ್ಟು, ಕಚ್ಚುವಂತೆ ಮಾಡಿದ್ದ. ಮರುದಿನ ಬೆಳಗ್ಗೆ ಉತ್ತರಾ ಎಷ್ಟೊತ್ತಾದರೂ ಕೋಣೆಯಿಂದ ಹೊರಬರದಿದ್ದಾಗ ಅನುಮಾನಗೊಂಡ ಆಕೆಯ ಪಾಲಕರು ಹೋಗಿ ನೋಡಿದಾಗ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದಳು. 

    ಇದನ್ನೂ ಓದಿ: ಬೊಗಳಿತೆಂದು ನಾಯಿಯ ಕೊಲ್ಲಲು ಹೋದವ ತಾನೇ ಶವವಾದ!

    ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಿಸದೆ ಆಕೆ ಮೃತಪಟ್ಟಳು. ಆಕೆಯ ಸಾವಿಗೆ ಹಾವಿನ ಕಡಿತವೇ ಕಾರಣ ಎಂದು ವೈದ್ಯರು ಹೇಳಿದ್ದರು. ಅನುಮಾನಗೊಂಡು ಸೂರಜ್​ನನ್ನು ವಿಚಾರಿಸಿದಾಗ, ಹಾವಿನ ಕಡಿತದ ಬಗ್ಗೆ ತನಗೇನೂ ಗೊತ್ತಿಲ್ಲ ಎಂದು ನಾಟಕವಾಡಿದ್ದ. ಕೊನೆಗೆ ಕೋಣೆಯನ್ನು ಶೋಧಿಸಿದಾಗ ನಾಗರಹಾವು ಪತ್ತೆಯಾಗಿತ್ತು. ಅದನ್ನು ಹೊಡೆದು ಸಾಯಿಸಲು ಸೂರಜ್​ ಸಹಕರಿಸಿದ್ದ.

    ಆದರೆ ಅದು ಎಸಿ ಕೋಣೆಯಾಗಿದ್ದು, ಕಿಟಕಿಗಳು ಮುಚ್ಚಿದ್ದರೂ ಹಾವು ಒಳಬಂದದ್ದು ಹೇಗೆ ಎಂಬ ಅನುಮಾನ ಮೂಡಿತ್ತು. ಈ ಹಿನ್ನೆಲೆಯಲ್ಲಿ ಸೂರಜ್​ನ ಉತ್ತರಾಳನ್ನು ಕೊಲೆ ಮಾಡಿರಬಹುದು ಎಂದು ಶಂಕಿಸಿದ ಉತ್ತರಾಳ ಪಾಲಕರು ಪೊಲೀಸರಿಗೆ ದೂರು ನೀಡಿದ್ದರು.

    ಪೊಲೀಸರ ವಿಚಾರಣೆ ವೇಳೆ ಆಸ್ತಿಯನ್ನು ಲಪಟಾಯಿಸುವ ಉದ್ದೇಶದಿಂದ ಉತ್ತರಾಳ ಸಹೋದರನೇ ಹಾವನ್ನು ತಂದು, ಆಕೆಗೆ ಕಚ್ಚಿಸಿ ಸಾಯಿಸಿರಬಹುದು ಎಂದು ಸೂರಜ್​ ಹೇಳಿಕೆ ನೀಡಿದ್ದ. ಆದರೆ ಈತನ ಮಾತನ್ನು ನಂಬದ ಪೊಲೀಸರು ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಆಗ ಉತ್ತರಾಳನ್ನು ಕೊಲ್ಲಲು ನಾಗರಹಾವನ್ನು ತಾನೇ ತಂದಿದ್ದಾಗಿ ತಪ್ಪೊಪ್ಪಿಕೊಂಡ ಎಂದು ಪೊಲೀಸರು ತಿಳಿಸಿದ್ದಾರೆ.

    ಊರಲ್ಲಿ ಓಡಾಡಿಕೊಂಡಿದ್ದ ಹಸು ಮೃತಪಟ್ಟಿತು…ಆ ಹಳ್ಳಿಯ 150 ಮಂದಿ ವಿರುದ್ಧ ಪ್ರಕರಣ ದಾಖಲಾಯ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts