ಹರಪನಹಳ್ಳಿ: ವಿಜಯನಗರ ಜಿಲ್ಲೆಯಲ್ಲೇ ಅತಿ ಹೆಚ್ಚು ಕೂಸಿನ ಮನೆಗಳನ್ನು ತಾಲೂಕಿನಲ್ಲಿ ತೆರೆದಿದ್ದು, ಬಾಕಿ 27 ಮನೆಗಳನ್ನು ಶೀಘ್ರವೇ ಆರಂಭಿಸಬೇಕು ಎಂದು ಜಿಪಂ ಸಿಇಒ ಬಿ.ಸದಾಶಿವ ಪ್ರಭು ಸೂಚಿಸಿದರು.
ಇಲ್ಲಿನ ತಾಪಂ ರಾಜೀವಗಾಂಧಿ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಕೂಸಿನ ಮನೆ ಮಕ್ಕಳ ಆರೈಕೆದಾರರಿಗೆ ಮಂಗಳವಾರ ಹಮ್ಮಿಕೊಂಡಿದ್ದ ಮೂರನೇ ಹಂತದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪಂಚಾಯತ್ ರಾಜ್ ಇಲಾಖೆಯಿಂದ ಕೂಸಿನ ಮನೆ ಕಾರ್ಯಕ್ರಮ ನಡೆಯುತ್ತಿದ್ದು, ಇದು ಬಜೆಟ್‌ನಲ್ಲೂ ಘೋಷಣೆಯಾಗಿರುವ ಯೋಜನೆಯಾಗಿದೆ. ಹೀಗಾಗಿ ಸಮರ್ಪಕವಾಗಿ ಅನುಷ್ಠಾನಕ್ಕೆ ತರುವುದು ಪ್ರತಿ ಗ್ರಾಪಂ ಅಧಿಕಾರಿ, ನೋಡಲ್ ಅಧಿಕಾರಿ ಹಾಗೂ ತಾಪಂ ಇಒ ಜವಾಬ್ದಾರಿಯಾಗಿದೆ. ಮಾದರಿ ಕೂಸಿನ ಮನೆಗಳನ್ನು ಶೀಘ್ರವೇ ಎಲ್ಲೆಡೆ ಆರಂಭಿಸಬೇಕು. ಇಡೀ ರಾಜ್ಯಕ್ಕೆ ವಿಜಯನಗರ ಜಿಲ್ಲೆ ಮೊದಲ ಸ್ಥಾನದಲ್ಲಿ ಇರಬೇಕು. ಆರೈಕೆದಾರರೂ ತರಬೇತಿ ಪಡೆದು ಶ್ರದ್ಧೆ ಹಾಗೂ ಉತ್ಸಾಹದಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಆರೈಕೆದಾರರು ಕೂಸಿನ ಮನೆಗೆ ಹೋದಾಗ ಯಾವುದೇ ನಿರ್ಲಕ್ಷೃ ತೋರದೆ 6 ತಿಂಗಳಿಂದ 3 ವರ್ಷದೊಳಗಿನ ಮಕ್ಕಳನ್ನು ಉತ್ತಮವಾಗಿ ಆರೈಕೆ ಮಾಡಬೇಕು. ಮಕ್ಕಳ ಬೌದ್ಧಿಕ, ಮಾನಸಿಕ, ಆರೋಗ್ಯವಾಗಿ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಏಳು ದಿನ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಮಕ್ಕಳ ವಿಷಯದಲ್ಲಿ ಸೂಕ್ಷ್ಮತೆ, ಕಾಳಜಿ ವಹಿಸಬೇಕಿದ್ದು, ಆಸಕ್ತಿಯಿಂದ ತರಬೇತಿ ಪಡೆಯಬೇಕು.
ಯಾರೂ ಬೇಜವಾಬ್ದಾರಿ ತೋರಬಾರದು ಎಂದ ಅವರು, 37 ಪಂಚಾಯಿತಿ ವ್ಯಾಪ್ತಿಯಲ್ಲಿ ಸುಸಜ್ಜಿತ ಕಟ್ಟಡಗಳನ್ನು ಗುರುತಿಸಲಾಗಿದ್ದು, ತಾಲೂಕಿನಲ್ಲಿ ಈಗಾಗಲೇ 10 ಕೂಸಿನ ಮನೆ ಆರಂಭಿಸಲಾಗಿದೆ. ತರಬೇತಿ ಪಡೆದಿರುವವರೇ ಆರೈಕೆದಾರರಾಗಿದ್ದಾರೆ. ಅವರ ಅವಧಿ ಮುಗಿದ ಬಳಿಕ ನಿಮ್ಮ ಸರದಿ ಬಂದಾಗ ನೀವೂ ಕೂಡ ಮಕ್ಕಳನ್ನು ಉತ್ತಮ ರೀತಿಯಲ್ಲಿ ಆರೈಕೆ ಮಾಡಬೇಕು ಎಂದರು.
ಪಂಚಾಯತ್‌ರಾಜ್ ಇಲಾಖೆ ಸಹಾಯಕ ನಿರ್ದೇಶಕ ವೀರಣ್ಣ ಲಕ್ಕಣ್ಣನವರ್, ತಾಲೂಕು ನರೇಗಾ ಸಹಾಯಕ ನಿರ್ದೇಶಕ ಯು.ಎಚ್.ಸೋಮಶೇಖರ್, ತಾಪಂ ವ್ಯವಸ್ಥಾಪಕ ದಾದಾ ಖಲೀಲ್, ಐಇಸಿ ಸಂಯೋಜಕ ಕೆ.ವಸಿಗೇರಪ್ಪ ಚಾಗನೂರು, ಮೊಬೈಲ್ ಕ್ರಚಸ್ ಸಂಸ್ಥೆಯ ತರಬೇತುದಾರರಾದ ಜಗದೀಶ್, ಶಶಿಧರ್, ರಜನಿ, ಶೋಭಾ ಇತರರಿದ್ದರು.