More

    ಮಂಡ್ಯದಲ್ಲಿ ನೈಸರ್ಗಿಕ ಕೃಷಿಕನ ತೋಟಕ್ಕೆ ಬೆಂಕಿ ಹಾಕಿದ ದುಷ್ಕರ್ಮಿಗಳು: ಅಗ್ನಿಯ ನರ್ತನಕ್ಕೆ ಆಗಿರುವ ನಷ್ಟ ಎಷ್ಟು ಗೊತ್ತಾ?

    ನಾಗಮಂಗಲ: ತಾಲೂಕಿನ ಸಾತೇನಹಳ್ಳಿ ಗ್ರಾಮದ ಪ್ರಗತಿಪರ ರೈತ ಕುಮಾರಸ್ವಾಮಿ ಅವರ ತೋಟಕ್ಕೆ ಶನಿವಾರ ದುಷ್ಕರ್ಮಿಗಳು ಬೆಂಕಿ ಹಾಕಿದ ಪರಿಣಾಮ ಸಾವಿರಾರೂ ಗಿಡಗಳು ಹಾಗೂ ಲಕ್ಷಾಂತರ ರೂ ಮೌಲ್ಯದ ಹನಿ ನೀರಾವರಿ ಪೈಪ್‌ಗಳು ನಾಶವಾಗಿದೆ.
    ಗ್ರಾಮದಿಂದ ಸುಮಾರು ಒಂದು ಕಿ.ಮೀ ದೂರದಲ್ಲಿ ಕುಮಾರಸ್ವಾಮಿ ಅವರ ಜಮೀನಿದೆ. ಒಂದು ಮುಕ್ಕಾಲು ಎಕರೆ ಭೂಮಿಯಲ್ಲಿ 100 ತೆಂಗಿನ ಮರಗಳಿವೆ. ಈ ಪೈಕಿ 25 ರಿಂದ 30 ಮರ ಐವತ್ತೂ ಹೆಚ್ಚು ವರ್ಷವಾಗಿದೆ. ಇದಲ್ಲದೆ ಒಂದು ಸಾವಿರ ಬಾಳೆ ಗಿಡ ಹಾಗೂ 200 ಅಡಿಕೆ ಮರಗಳು ಬೆಳೆಯುತ್ತಿದ್ದವು. ಬೇಸಾಯಕ್ಕೆಂದು ಅಂದಾಜು ಎರಡೂವರೆ ಲಕ್ಷ ರೂ ಖರ್ಚು ಮಾಡಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದರು.
    ಬರಗಾಲದ ನಡುವೆಯೂ ಬೋರ್‌ವೆಲ್‌ನಲ್ಲಿ ನೀರಿನ ಕೊರತೆ ಇರಲಿಲ್ಲ. ಪ್ರತಿದಿನ ಹನಿ ನೀರಾವರಿ ಪದ್ಧತಿ ಮೂಲಕ ನೀರು ಹಾಯಿಸುತ್ತಿದ್ದರು. ಗಿಡ ಮತ್ತು ಮರಗಳು ಕೂಡ ಚೆನ್ನಾಗಿ ಬೆಳೆಯುತ್ತಿದ್ದವು. ವಿಶೇಷವೆಂದರೆ ಇವರು ಜಮೀನಿನ ಉಳುಮೆ ಮಾಡುವ ಬದಲು ಕಳೆ ಸಹಿತ ಗಿಡಗಳನ್ನು ಭೂಮಿಯಲ್ಲಿಯೇ ಕೊಳೆಸಿ ಗೊಬ್ಬರ ಮಾಡುತ್ತಿದ್ದರು. ಶನಿವಾರ ಮಧ್ಯಾಹ್ನ ಯಾರೋ ದುಷ್ಕರ್ಮಿಗಳು ತೋಟಕ್ಕೆ ಬೆಂಕಿ ಹಾಕಿದ್ದಾರೆ. ಪರಿಣಾಮ ಕೆಲವೊತ್ತಿನಲ್ಲಿಯೇ ಬೆಂಕಿಯ ಕೆನ್ನಾಲಗೆ ತೋಟವನ್ನು ಆವರಿಸಿಕೊಂಡು ಗಿಡ, ಮರ ಹಾಗೂ ಪೈಪ್‌ಗಳು ಸುಟ್ಟು ಹೋಗಿವೆ. ಸಂಜೆ ವೇಳೆಗೆ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಕುಮಾರಸ್ವಾಮಿ ಸ್ಥಳಕ್ಕೆ ಹೋಗಿದ್ದಾರೆ. ಅಷ್ಟರಲ್ಲಾಗಲೇ ಎಲ್ಲವೂ ನಾಶವಾಗಿತ್ತು.
    ಕೃಷಿಯಲ್ಲಿ ಹೊಸ ವಿಧಾನ ಅಳವಡಿಸಿಕೊಂಡು ಮಾದರಿಯಾಗಿದ್ದ ಕುಮಾರಸ್ವಾಮಿ ಅವರು ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಗೆ ತೆರಳಿ ರೈತರಿಗೆ ಸಲಹೆ ನೀಡುತ್ತಿದ್ದರು. ತಮ್ಮ ಜಮೀನಿಗೆ ಬಂದವರಿಗೂ ಅಗತ್ಯ ಮಾಹಿತಿ ಕೊಡುತ್ತಿದ್ದರು. ತಮ್ಮ ಪಾಡಿಗೆ ಕೃಷಿ ಮಾಡಿಕೊಂಡು ನೆಮ್ಮದಿ ಜೀವನ ಕಟ್ಟಿಕೊಂಡಿರುವ ಕುಮಾರಸ್ವಾಮಿ ಕುಟುಂಬಕ್ಕೆ ಬೆಂಕಿ ಅವಘಡ ದಿಕ್ಕು ತೋಚದಂತಾಗಿದೆ.

    ಮಂಡ್ಯದಲ್ಲಿ ನೈಸರ್ಗಿಕ ಕೃಷಿಕನ ತೋಟಕ್ಕೆ ಬೆಂಕಿ ಹಾಕಿದ ದುಷ್ಕರ್ಮಿಗಳು: ಅಗ್ನಿಯ ನರ್ತನಕ್ಕೆ ಆಗಿರುವ ನಷ್ಟ ಎಷ್ಟು ಗೊತ್ತಾ?

    ನಾವು ಯಾರ ವಿಷಯಕ್ಕೂ ಹೋಗುವುದಿಲ್ಲ. ಆದರೂ ನಮ್ಮ ಮೇಲೆ ಯಾರಿಗೆ ದ್ವೇಷ ಗೊತ್ತಿಲ್ಲ. ಕಳೆದ ವರ್ಷವೂ ಇದೇ ರೀತಿ ಬೆಂಕಿ ಹಾಕಿದಾಗ ತ್ವರಿತ ಕ್ರಮ ತೆಗೆದುಕೊಂಡಿದ್ದಕ್ಕೆ ಅವಘಡ ಆಗಿರಲಿಲ್ಲ. ಈ ಬಾರಿ ಎಲ್ಲವೂ ನಾಶವಾಗಿದ್ದು, ಸಾಕಷ್ಟು ಬೇಸರ ತರಿಸಿದೆ. ಬೆಂಕಿ ಹಾಕಿರುವ ಸಂಬಂಧ ಪೊಲೀಸರಿಗೆ ಮಾ.24ರಂದು ದೂರು ಸಲ್ಲಿಸುತ್ತೇನೆ ಎಂದು ಕುಮಾರಸ್ವಾಮಿ ವಿಜಯವಾಣಿಗೆ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts