ಯಡ್ರಾಮಿ: ಏಳನೇ ವೇತನ ಆಯೋಗದಿಂದ ಶೀಘ್ರ ವರದಿ ಪಡೆದು, ಭತ್ಯೆಗಳನ್ನು ಪರಿಷ್ಕರಿಸಿ ಆದೇಶ ಹೊರಡಿಸಬೇಕು. ಹಳೆಯ ಪಿಂಚಣಿ ಯೋಜನೆ ಜಾರಿ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಲವಂತ್ರಾಯ ಬಿರಾದಾರ ಒತ್ತಾಯಿಸಿದರು.
ಕಲಬುರಗಿಯಲ್ಲಿ ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಅವರಿಗೆ ಬುಧವಾರ ಮನವಿಪತ್ರ ಸಲ್ಲಿಸಿ, ರಾಜ್ಯದಲ್ಲಿ ೨.೫ ಲಕ್ಷ ಹುದ್ದೆಗಳು ಖಾಲಿ ಇವೆ. ಹೀಗಿದ್ದರೂ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಶ್ರಮಿಸುತ್ತಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರು ಸಮಾನವಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ವೇತನದಲ್ಲಿ ತಾರತಮ್ಯ ಸರಿಯಲ್ಲ. ಹೊಸ ಪಿಂಚಣಿ ವ್ಯವಸ್ಥೆ ರದ್ದುಪಡಿಸಿ, ಹಳೇ ಪಿಂಚಣಿ ಪದ್ಧತಿ ಮುಂದುವರಿಸಬೇಕು. ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.
ತಾಲೂಕು ವೈದ್ಯಾಧಿಕಾರಿ ಡಾ.ಸಿದ್ದು ಪಾಟೀಲ್, ಪ್ರಮುಖರಾದ ಭೀಮರಾಯ ಬಿಳವಾರ, ನಾಗೇಂದ್ರ ಗುಂಡಗುರ್ತಿ, ಶಾಂತಪ್ಪ ಬಿರಾದಾರ, ವಿಜಯಕುಮಾರ ಬಡಿಗೇರ, ಶಿವನಗೌಡ ಬಿರಾದಾರ, ಶಿವಕುಮಾರ ಡಂಬಳ, ಆನಂದ ತಂಗಾ, ಗುರುರಾಜ ಹಿರೇಮಠ, ಬಾಬು ಚಿತ್ತಾಪುರ, ಎಸ್.ಎಸ್.ಮಾಲಿಬಿರಾದಾರ, ಗುರುಬಸಪ್ಪ ಚಾಂದಕವಟೆ, ಗುರುಶಾಂತಪ್ಪ ಚಿಂಚೋಳಿ, ರಾಜಕುಮಾರ ದೊಡ್ಡಮನಿ, ಅನಂತರಡ್ಡಿ ಕೋಂಡಗುಳಿ ಇತರರಿದ್ದರು.