More

    ಆಲಿಕಲ್ಲು ಸಹಿತ ಮಳೆ, ಗಾಳಿ, ವಿಟ್ಲದಲ್ಲಿ ಅಡಕೆ ಮರಗಳು ಧರೆಗೆ

    ಮಂಗಳೂರು/ಉಡುಪಿ: ದ.ಕ. ಜಿಲ್ಲೆಯ ಗ್ರಾಮಾಂತರ ಭಾಗಗಳಲ್ಲಿ ಕಳೆದೊಂದು ವಾರದಿಂದ ಪ್ರತಿದಿನ ಎಂಬಂತೆ ಬೇಸಿಗೆ ಮಳೆ ತನ್ನ ಪ್ರತಾಪ ತೋರಿಸುತ್ತಿದೆ. ಭಾನುವಾರ ದ.ಕ, ಉಡುಪಿ ಜಿಲ್ಲೆಯ ಹಲವೆಡೆ ಆಲಿಕಲ್ಲು ಸಹಿತ ಉತ್ತಮ ಮಳೆ ಸುರಿದಿದೆ.

    ದ.ಕ ಜಿಲ್ಲೆಯಲ್ಲಿ ಮಧ್ಯಾಹ್ನವರೆಗೆ ಮೋಡ-ಬಿಸಿಲಿನ ವಾತಾವರಣವಿತ್ತು. ಮಧ್ಯಾಹ್ನ ಕಳೆಯುತ್ತಿದ್ದಂತೆ ದಟ್ಟವಾದ ಮೋಡ ಕವಿದು ಮಳೆ ಸುರಿಯಲು ಆರಂಭವಾಗಿದೆ. ಸುಳ್ಯ ತಾಲೂಕು ಹಾಗೂ ಬಂಟ್ವಾಳ ತಾಲೂಕಿನ ವಿವಿಧೆಡೆ, ಗುರುಪುರ, ಗಂಜಿಮಠ, ಮಳಲಿ, ಎಡಪದವು, ಮಿಜಾರು ಮತ್ತಿತರ ಪ್ರದೇಶಗಳಲ್ಲಿ ಆಲಿಕಲ್ಲು ಮಳೆಯಾಗಿದೆ. ಮೂಡುಬಿದಿರೆ, ಶಿರ್ತಾಡಿ, ಬೆಳ್ತಂಗಡಿಯ ವಿವಿಧೆಡೆ, ಪುತ್ತೂರು ಗ್ರಾಮಾಂತರ ಭಾಗದಲ್ಲಿ ಮಳೆಯಾಗಿದೆ. ವಿಟ್ಲ ಭಾಗದಲ್ಲಿ ಅಬ್ಬರಿಸಿದ ಗಾಳಿ-ಮಳೆಗೆ ಹಲವು ಅಡಕೆ ಮರಗಳು ಧರೆಗುರುಳಿವೆ.
    ಕಾಸರಗೋಡಿನಲ್ಲೂ ವಿವಿಧೆಡೆ ತುಂತುರು ಮಳೆಯಾಗಿದ್ದು, ಗುಡುಗು- ಸಿಡಿಲಿನ ಅಬ್ಬರವಿತ್ತು.

    ಮಂಗಳೂರು ನಗರದಲ್ಲಿ ಬೆಳಗ್ಗೆ ಮೋಡ ಕವಿದ ವಾತಾವರಣ ಕಂಡುಬಂದಿತ್ತು. ಬಳಿಕ ಬಿಸಿಲು ಕಾಣಿಸಿತಾದರೂ, ಸಾಯಂಕಾಲ ವೇಳೆ ಮತ್ತೆ ಆಕಾಶದಲ್ಲಿ ಮೋಡದ ಚಲನೆ ಹೆಚ್ಚಿತ್ತು. ನಗರ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಮಳೆಯಾಗಿಲ್ಲ. ದಿನದ ಗರಿಷ್ಠ ತಾಪಮಾನ 36.5 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 26.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಭಾನುವಾರ ಸಾಯಂಕಾಲ ಜಿಲ್ಲೆಯಲ್ಲಿ ಸರಾಸರಿ 25 ಮಿ.ಮೀ. ಮಳೆಯಾಗಿದೆ. ಇನ್ನೂ ಕೆಲವು ದಿನಗಳ ಕಾಲ ಸಾಯಂಕಾಲ-ರಾತ್ರಿ ವೇಳೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಉಡುಪಿ ಜಿಲ್ಲೆಯಲ್ಲಿ ಭಾನುವಾರ ಸಾಯಂಕಾಲ ಹಲವೆಡೆ ಗಾಳಿ ಮಳೆಯಾಗಿದೆ. ಗೋಳಿಯಂಗಡಿ, ಬೆಳ್ವೆ, ಆರ್ಡಿ, ಕಾರ್ಕಳ, ಅಜೆಕಾರು, ಬಜಗೋಳಿ, ಹೊಸ್ಮಾರು, ಕೊಕ್ಕರ್ಣೆ, ನಾಲ್ಕೂರು, ಮೂಡುಬೆಳ್ಳೆ ಭಾಗದಲ್ಲಿ ಗುಡುಗು ಗಾಳಿ ಸಹಿತ ಮಳೆ ಸುರಿದಿದೆ. ಕಾರ್ಕಳ ಶಿರ್ತಾಡಿಯಲ್ಲಿ ಆಲಿಕಲ್ಲು ಮಳೆಯಾಗಿದೆ. ಕೋಟ, ಬಾರ್ಕೂರು, ಬ್ರಹ್ಮಾವರ, ಪಡುಬಿದ್ರಿ, ಉಡುಪಿ ನಗರ ವ್ಯಾಪ್ತಿಯಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಹನಿಹನಿ ಮಳೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts