More

    ಗುಂಪು-ಗುಂಪಾಗಿ ವ್ಯಾಪಾರ ವಹಿವಾಟು

    ಹುಕ್ಕೇರಿ: ಜಗತ್ತನ್ನು ತಲ್ಲಣಗೊಳಿಸಿರುವ ಮಾರಕ ಕರೊನಾ ಸಾಂಕ್ರಾಮಿಕ ರೋಗದ ಕುರಿತು ತಾಲೂಕಿನ ಜನರಲ್ಲಿ ಭಯ ಭೀತಿಯೇ ಇಲ್ಲ. ಸ್ಥಳೀಯ ಹಳೇ ಬಸ್ ನಿಲ್ದಾಣ ಬಳಿಯ ತರಕಾರಿ ಮಾರುಕಟ್ಟೆ ಹಾಗೂ ನೂತನ ಬಸ್ ನಿಲ್ದಾಣ ಬಳಿಯ ಕಿರಾಣಿ ಅಂಗಡಿಗಳ ಎದುರು ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ವ್ಯಾಪಾರ ವಹಿವಾಟಿನಲ್ಲಿ ತೊಡಗುವುದು ಸಾಮಾನ್ಯವಾಗಿದೆ.

    ತಾಲೂಕು ಆಡಳಿತ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್ ಧರಿಸುವಂತೆ ಸಾಕಷ್ಟು ಬಾರಿ ತಿಳಿವಳಿಕೆ ನೀಡಿದೆ. ಪೊಲೀಸ್ ಇಲಾಖೆ ಲಾಠಿ ಪ್ರಯೋಗಿಸಿದೆ. ಆದರೂ, ಜನರಲ್ಲಿ ಸಾಂಕ್ರಾಮಿಕ ರೋಗದ ಭಯ ಇಲ್ಲ. ಅಗತ್ಯ ವಸ್ತುಗಳಿಗೆ ಮಾರುಕಟ್ಟೆಗೆ ಆಗಮಿಸುವ ಜನರು ಗುಂಪು ಗುಂಪಾಗಿ ಸೇರಿ ಖರೀದಿಯಲ್ಲಿ ತೊಡಗುತ್ತಿದ್ದಾರೆ.

    ನೂರಕ್ಕೂ ಹೆಚ್ಚು ಬೈಕ್ ಸೀಜ್: ಅನವಶ್ಯಕವಾಗಿ ರಸ್ತೆಗಿಳಿದ ಯುವಕರ ಹಾಗೂ ಸಾರ್ವಜನಿಕರ ಬೈಕ್‌ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ರೋಗ ನಿಯಂತ್ರಣಕ್ಕಾಗಿ ಪುರಸಭೆ ದ್ರಾವಣ ಸಿಂಪಡಣೆಗೆ ಮುಂದಾಗಿದೆ.

    ಸಂಘ- ಸಂಸ್ಥೆಗಳಿಂದ ಊಟೋಪಚಾರದ ವ್ಯವಸ್ಥೆ: ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಹಾಗೂ ಬಡವರಿಗೆ ಸಮಾಜದ ವಿವಿಧ ಸಂಘಟನೆಗಳು ಹಾಗೂ ಕೆಲ ಸ್ಥಿತಿವಂತರು ನಿತ್ಯ ಉಪಾಹಾರ ಮತ್ತು ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. ಕೆಎಂಎಫ್‌ನಿಂದ ಬಡವರಿಗೆ ಉಚಿತವಾಗಿ ಹಾಲು ವಿತರಿಸಲಾಗುತ್ತಿದೆ.

    ಔಷಧ ಉಚಿತ ಸರಬರಾಜು: ಬಿಜೆಪಿ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪುತ್ರ ವಿಜಯೇಂದ್ರ ಅವರು ತಾಲೂಕಿನ ಬಡ ವರ್ಗಕ್ಕೆ ಲಾಕ್‌ಡೌನ್ ಅವಧಿಯಲ್ಲಿ ವೈದ್ಯರು ಶಿಫಾರಸಿಗೆ ಅನುಗುಣವಾಗಿ ಯುವ ಮೋರ್ಚಾ ಪದಾಧಿಕಾರಿಗಳ ಮೂಲಕ ಔಷಧಗಳನ್ನು ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ.

    ತಾಲೂಕು ಆಡಳಿತ ಹಲವು ಮುನ್ನೆಚ್ಚರಿಕೆ ತೆಗೆದುಕೊಂಡರೂ ಜನತೆ ಸಾಮಾಜಿಕ ಅಂತರ ಕಾಪಾಡಿಕೊಳ್ಳದಿರುವುದು, ಯುವಕರು ಅನವಶ್ಯಕವಾಗಿ ಬೈಕ್ ಮೇಲೆ ತಿರುಗಾಡುವುದು ಪ್ರಜ್ಞಾವಂತರಲ್ಲಿ ಬೇಸರ ಮೂಡಿಸಿದೆ. ತಾಲೂಕು ಆಡಳಿತ ಇಂತಹವರ ಮೇಲೆ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts