More

    ಸರ್ಕಾರಿ ನಿಯಮ ಉಲ್ಲಂಘನೆ, ವರ್ಗಾವಣೆ, ಜನರ ರೋದನೆ!

    | ರವಿ ಗೋಸಾವಿ ಬೆಳಗಾವಿ

    ಸ್ಮಾರ್ಟ್‌ಸಿಟಿ ಬೆಳಗಾವಿ ಅಭಿವೃದ್ಧಿ ವಿಷಯದಲ್ಲಿ ನಾಗಾಲೋಟದಲ್ಲಿ ಸಾಗುತ್ತಿದೆ. ದಿನೇದಿನೆ ಹೆಚ್ಚಿನ ಸಂಖ್ಯೆಯಲ್ಲಿ ಬಹು ಅಂತಸ್ತಿನ ಕಟ್ಟಡಗಳು ಎದ್ದು ನಿಲ್ಲುತ್ತಿವೆ. ಆದರೆ, ಬಹುತೇಕ ಕಟ್ಟಡಗಳು ನಿಯಮ ಮೀರಿ, ಒತ್ತುವರಿ ಮಾಡಿ ನಿರ್ಮಾಣಗೊಂಡಿರುವ ಪರಿಣಾಮ ಹಲವು ಸಮಸ್ಯೆ ಉಲ್ಬಣಿಸಿವೆ.

    ಇದುವರೆಗೂ ನಿಯಮ ಉಲ್ಲಂಘಿಸಿದ ಕಟ್ಟಡಗಳ ಮಾಲೀಕರ ವಿರುದ್ಧ ಮಹಾನಗರ ಪಾಲಿಕೆ ಮತ್ತು ಬುಡಾ ಅಧಿಕಾರಿಗಳು ಕ್ರಮ ಕೈಗೊಂಡ ಉದಾಹರಣೆ ಕಡಿಮೆ. ಒತ್ತುವರಿದಾರರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವ ಪಾಲಿಕೆ ಅಧಿಕಾರಿಗಳನ್ನು ಆಡಳಿತಾತ್ಮಕ ಇಕ್ಕಟ್ಟಿಗೆ ಸಿಲುಕಿಸುವ ಇಲ್ಲವೇ ವರ್ಗಾವಣೆ ಮಾಡಿಸುವ ಪರಿಪಾಟ ಬೆಳೆದಿದೆ. ಹೊಸದಾಗಿ ನಿರ್ಮಿಸಲಾಗುತ್ತಿರುವ ಕಟ್ಟಡಗಳಲ್ಲೂ ನಿಯಮ ಉಲ್ಲಂಘನೆ ಸಹಜ ಎನ್ನುವಂತಾಗಿದೆ. ಇದರಿಂದ ಕಟ್ಟಡಗಳಲ್ಲಿ ವಾಸಿಸುವವರ ಸುರಕ್ಷತೆಯ ಬಗ್ಗೆ ಆತಂಕ ಎದುರಾಗಿದೆ.

    ನಾಲಾ ಒತ್ತುವರಿ: ಬಹುತೇಕ ಭಾಗಗಳಲ್ಲಿ ಬಳ್ಳಾರಿ ನಾಲಾ ಸೇರಿ ಬೃಹತ್ ಕಾಲುವೆಗಳನ್ನೇ ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಿದ್ದಾರೆ. ಇದರಿಂದ ಮಳೆಗಾಲದಲ್ಲಿ ನೀರು ಸಹಜವಾಗಿ ಹರಿದು ಹೋಗದೆ ಹಲವು ಬಡಾವಣೆಗಳು ಜಲಾವೃತವಾಗಿ ಫಜೀತಿ ತಂದೊಡ್ಡುತ್ತಿದೆ. ಸಮಸ್ಯೆ ತಲೆದೋರಿದಾಗ ಮಾತ್ರ ಒತ್ತುವರಿದಾರರ ವಿರುದ್ಧ ಕಾನೂನು ಕ್ರಮ ಜರುಗಿಸುವ ಹೇಳಿಕೆ ನೀಡುವ ನಗರ ಪಾಲಿಕೆ ಅಧಿಕಾರಿಗಳು, ಜನಪ್ರತಿನಿಧಿಗಳು ನಂತರದ ದಿನಗಳಲ್ಲಿ ಮತ್ತೆ ಮೈಮರೆಯುತ್ತಾರೆ ಎನ್ನುವುದು ನಗರವಾಸಿಗಳ ಅಳಲು. ಕಟ್ಟಡ ನಿರ್ಮಿಸುವಾಗ ನೆಲಮಹಡಿ ಪಾರ್ಕಿಂಗ್ ಎಂದು ತೋರಿಸಿರುವ ಬಹುತೇಕ ಕಟ್ಟಡಗಳ ಮಾಲೀಕರು ನಂತರ ಆ ಸ್ಥಳವನ್ನು ಜನರೇಟರ್, ಕಚೇರಿ, ನಿರುಪಯುಕ್ತ ಸಾಮಗ್ರಿ ಸಂಗ್ರಹ, ಕ್ಯಾಂಟೀನ್, ಅಂಗಡಿ ಮುಂಗಟ್ಟುಗಳನ್ನಾಗಿಸಿಕೊಂಡು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುತ್ತಿದ್ದಾರೆ.

    ಸಂಚಾರಕ್ಕೆ ತೊಡಕು: ಇತ್ತೀಚೆಗೆ ಹೆಚ್ಚುತ್ತಿರುವ ಬೃಹತ್ ವಾಣಿಜ್ಯ ಮಳಿಗೆಗಳಂತೂ ನೆಲ ಮಹಡಿಯನ್ನೂ ಪಾರ್ಕಿಂಗ್‌ಗೆ ಬಿಟ್ಟಿಲ್ಲ. ಇದರಿಂದ ನಿತ್ಯವೂ ಮಾರುಕಟ್ಟೆಗೆ ಬರುವ ಸಾವಿರಾರು ಗ್ರಾಹಕರು ರಸ್ತೆ ಬದಿಯಲ್ಲೇ ವಾಹನ ನಿಲ್ಲಿಸುವ ಅನಿವಾರ್ಯತೆ ಎದುರಾಗಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಅಕ್ರಮ ಕಟ್ಟಡಗಳ ತೆರವಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕ್ರಮ ಕೈಗೊಂಡ ಅಧಿಕಾರಿಗಳನ್ನೂ ಎತ್ತಂಗಡಿ ಮಾಡುವ ಮೂಲಕ ಜನಪ್ರತಿನಿಧಿಗಳು ಅಕ್ರಮಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎನ್ನುತ್ತಾರೆ ನೆಹರು ನಗರದ ವಿಜಯ ಹಿರೇಮಠ.

    ಎಲ್ಲೆಲ್ಲಿ ಸಮಸ್ಯೆ?: ಖಡೇ ಬಜಾರ್, ಗಣಪತ್ ಗಲ್ಲಿ, ಬಾಂಧೂರ ಗಲ್ಲಿ, ಸಮಾದೇವಿ ಗಲ್ಲಿ, ಮಾರುತಿ ಗಲ್ಲಿ, ತಹಸೀಲ್ದಾರ್ ಗಲ್ಲಿ, ದರಬಾರ್ ಗಲ್ಲಿ, ಪಾಂಗೂಳ ಗಲ್ಲಿ, ರಾಮದೇವ ಗಲ್ಲಿ, ಖಡಕ್ ಗಲ್ಲಿ, ಖಂಜರ್ ಗಲ್ಲಿ, ಚವಾಟ್ ಗಲ್ಲಿ, ಬಡಕಲ್ ಗಲ್ಲಿ, ಮಾರ್ಕೆಟ್ ಸುತ್ತಲಿನ ಪ್ರದೇಶ, ನೆಹರು ನಗರ, ಸಾಯಿ ನಗರ, ಕಪಿಲೇಶ್ವರ ಕಾಲನಿ, ಹಿಂಡಲಗಾ, ಆರ್‌ಪಿಡಿ, ಟಿಳಕವಾಡಿ, ಹಳೆಯ ಪಿಬಿ ರಸ್ತೆ, ಶಹಾಪುರ, ಗೋವಾವೇಸ್, ಗಾಂಧಿನಗರ, ಕಣಬರಗಿ ಸೇರಿ ನಗರದ ಬಹುತೇಕ ಕಡೆ ನಿಯಮ ಮೀರಿ ಬೃಹತ್ ಕಟ್ಟಡಗಳು ತಲೆ ಎತ್ತಿದ್ದು, ನಗರವಾಸಿಗಳ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕಾಗಿ ಕಾನೂನು ಕ್ರಮ ಅತ್ಯಗತ್ಯ.

    ನಿಯಮಗಳೇನು?: ರಾಷ್ಟ್ರೀಯ ಕಟ್ಟಡ ನೀತಿ ಪ್ರಕಾರ ನೆಲ ಮಹಡಿ ಸೇರಿ ನಾಲ್ಕು ಅಂತಸ್ತಿನ ಅಥವಾ 15 ಮೀಟರ್‌ಗಿಂತ ಎತ್ತರದ ಕಟ್ಟಡ ನಿರ್ಮಿಸುವಾಗ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯ. ಒಂದು ಕಟ್ಟಡದ ಎತ್ತರ 11.5 ಮೀಟರ್‌ನಿಂದ 15 ಮೀ.ಇದ್ದರೆ, ಸುತ್ತಲೂ ಕಡ್ಡಾಯವಾಗಿ 4.5 ಮೀ. ಜಾಗ ಬಿಡಬೇಕು. ಕಟ್ಟಡ 50 ಮೀಟರ್‌ಗಿಂತ ಹೆಚ್ಚು ಎತ್ತರವಿದ್ದರೆ ಎತ್ತರದ ಶೇ.30ರಷ್ಟು ಸುತ್ತಲೂ ಖಾಲಿ ಜಾಗ ಇರಲೇಬೇಕು. ಇದು ಜಾರಿಯಲ್ಲಿರುವ ನಿಯಮ. ಆದರೆ, ಶೇ. 90ರಷ್ಟು ಕಟ್ಟಡಗಳು ಎತ್ತರಕ್ಕೆ ಅನುಗುಣವಾದ ಸುತ್ತಳತೆಯ ಖಾಲಿ ಜಾಗದ ನಿಯಮ ಪಾಲಿಸಿಲ್ಲ. ಅನೇಕ ಬಡಾವಣೆಗಳಲ್ಲಿ 30 ಅಡಿ ರಸ್ತೆಯಲ್ಲೂ ನಾಲ್ಕೈದು ಮಹಡಿ ಕಟ್ಟಡ ನಿರ್ಮಿಸಲಾಗಿದೆ.

    ವಾಣಿಜ್ಯ ಮಳಿಗೆಗಳ ಬೇಸ್‌ಮೆಂಟ್ ಸಮೀಕ್ಷೆ ನಡೆಸಿದ ಬಗ್ಗೆ ಮಾಹಿತಿ ಇಲ್ಲ. ಅಧಿಕಾರಿಗಳಿಂದ ವಿವರ ಪಡೆದು ಕ್ರಮ ಕೈಗೊಳ್ಳಲಾಗುವುದು. ಮಾರುಕಟ್ಟೆ ಪ್ರದೇಶಗಳಲ್ಲಿ ವಾಹನ ನಿಲುಗಡೆಗೆ ತೊಂದರೆಯಾಗುತ್ತಿರುವುದು ನಿಜ. ಸ್ಮಾರ್ಟ್ ಸಿಟಿ ಯೋಜನೆಯಡಿ ಪಾರ್ಕಿಂಗ್ ತಾಣ ನಿರ್ಮಿಸಲಾಗುವುದು.
    | ಕೆ.ಎಚ್. ಜಗದೀಶ್ ಆಯುಕ್ತರು, ಮಹಾನಗರ ಪಾಲಿಕೆ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts