More

    ಸರ್ಕಾರಿ ಯೋಜನೆ ಅನುಷ್ಠಾನಗೊಳಿಸಿ

    ಹುಕ್ಕೇರಿ: ಸರ್ಕಾರದ ಯೋಜನೆ ಅನುಷ್ಠಾನ ಮಾಡುವಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಅಧಿಕಾರಿಗಳು ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಸೂಚಿಸಿದ್ದಾರೆ.

    ಸ್ಥಳೀಯ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಪಿಡಿಒಗಳ ಜತೆ ವಿಡಿಯೋ ಕಾನ್ಫ್ ರನ್ಸ್ ನಡೆದ ತಾಲೂಕು ಮಟ್ಟದ ಸಭೆಯಲ್ಲಿ ಮಾತನಾಡಿ, ಪ್ರತಿ ಗ್ರಾಪಂ ಅಡಿ ಬರುವ ಹಳ್ಳಿಗಳ ಸಂಖ್ಯೆ, ಜನಸಂಖ್ಯೆ, ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಗಳ ಮಾಹಿತಿ, ಕುಡಿಯುವ ನೀರಿನ ಯೋಜನೆ, ಗ್ರಾಪಂ ಕ್ರಿಯಾಯೋಜನೆ ಸೇರಿ ಒಟ್ಟು ಫಲಾನುಭವಿಗಳ ಸಂಖ್ಯೆ ಹಾಗೂ ಪಡಿತರದಾರರಿಗೆ ಹಂಚಿದ ಧಾನ್ಯದ ಕುರಿತು ಅಧಿಕಾರಿಗಳಿಂದ ವಿವರವಾದ ಮಾಹಿತಿ ಪಡೆದರು.

    ಕುಡಿಯುವ ನೀರು ಪೂರೈಸುವ ತಾತ್ಕಾಲಿಕ ಯೋಜನೆ ಬದಲಿಗೆ ಶಾಶ್ವತ ಯೋಜನೆ ಅನುಷ್ಠಾನ ಮಾಡಲು ಸಾಧ್ಯವೇ ಎಂದು ಸಂಬಂಧಿಸಿದ ಅಧಿಕಾರಿಗಳಿಂದ ಕೇಳಿ ತಿಳಿದುಕೊಂಡರು. ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇ.90 ಅನುದಾನ ನೀಡಲಿವೆ. ಗ್ರಾಪಂನಿಂದ ಶೇ.10 ಅನುದಾನ ಭರಿಸಿ ಜನರಿಗೆ ಅನುಕೂಲ ಮಾಡಲು ಮಹಾಂತೇಶ ಕವಟಗಿಮಠ ಸಲಹೆ ನೀಡಿದರು.

    ತಾಲೂಕಿನ ಬೆಲ್ಲದಬಾಗೇವಾಡಿ ಗ್ರಾಮದ ಜನಸಂಖ್ಯೆ 13 ಸಾವಿರ ಇದೆ. ಸಂಬಂಧಿಸಿದ ಪಿಡಿಒಗಳು ಮುಂದಿನ 25 ವರ್ಷ ಗಮನಿಸಿ ಗ್ರಾಮಸ್ಥರಿಗೆ ನೆರವಾಗುವಂತೆ ಸಕಲ ಸೌಲಭ್ಯ ಒದಗಿಸಲು ಕ್ರಿಯಾ ಯೋಜನೆ ರೂಪಿಸಬೇಕು ಎಂದು ಸೂಚಿಸಿದರು. ಕರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಗ್ರೇಡ್-2 ತಹಸೀಲ್ದಾರ್ ಕಿರಣ ಬೆಳವಿ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಎಂ.ಎಸ್.ಬಿರಾದಾರ ಪಾಟೀಲ, ಸಹಾಯಕ ಕೃಷಿ ನಿರ್ದೇಶಕ ಮಹಾದೇವ ಪಟಗುಂದಿ, ಜಿಲ್ಲಾ ಪಂಚಾಯಿತಿ ಎಇಇ ಎ.ಬಿ.ಪಟ್ಟಣಶೆಟ್ಟಿ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ಪಾಟೀಲ, ಅಕ್ಷರ ದಾಸೋಹ ನಿರ್ದೇಶಕ ಶ್ರೀಶೈಲ ಹಿರೇಮಠ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಶಿವಾನಂದ ಗುಡಗನಟ್ಟಿ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಪರಗೌಡ ಪಾಟೀಲ, ವಿವಿಧ ಇಲಾಖೆ ಸಿಬ್ಬಂದಿ ಇತರರು ಇದ್ದರು.

    ಜನರಿಗೆ ಯೋಜನೆಗಳ ಅರಿವು ಮೂಡಿಸಿರಿ

    ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ 1 ಸಾವಿರ ರೂ. ಅನುದಾನ ನೀಡುತ್ತಿದೆ. ಕೇಂದ್ರ ಸರ್ಕಾರ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ, ಹಣಕಾಸು, ಆರೋಗ್ಯ ದೃಷ್ಟಿಯಿಂದ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅಧಿಕಾರಿಗಳು ಯೋಜನೆಗಳ ಕುರಿತು ಫಲಾನುಭವಿಗಳಿಗೆ ಅರಿವು ಮೂಡಿಸಬೇಕು ಎಂದು ಎಂಎಲ್‌ಸಿ ಕವಟಗಿಮಠ ಪಿಡಿಒಗಳಿಗೆ ಸೂಚಿಸಿದರು. ಕೇಂದ್ರದ ಉಜ್ವಲಾ ಯೋಜನೆಯಡಿ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಲಾಗುತ್ತಿದೆ. ಈ ಹಣವನ್ನು ಬ್ಯಾಂಕ್‌ನಿಂದ ಬಳಸಿದರೆ ಮಾತ್ರ ಮುಂದಿನ ಕಂತು ಜಮೆಯಾಗುವುದು. ಕರೊನಾ ಸಂಕಷ್ಟಕ್ಕೆ ಒಳಗಾದ ಬಡವರಿಗೆ ಎನ್‌ಆರ್‌ಇಜಿ ಯೋಜನೆಯಡಿ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಲು ಕವಟಗಿಮಠ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts