More

    ಕೋರ್ಟ್‌ ಮೊರೆಹೋದ ಗ್ಯಾಂಗ್‌ರೇಪ್‌ ಸಂತ್ರಸ್ತೆಯೇ ಅರೆಸ್ಟ್‌!

    ಬಿಹಾರ: ತನಗೆ ಅನ್ಯಾಯ ಆಗಿದ್ದು ನ್ಯಾಯಕೊಡಿಸಿ ಎಂದು ಕೋರ್ಟ್‌ ಮೊರೆ ಹೋಗಿದ್ದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿರುವ 22 ವರ್ಷದ ಸಂತ್ರಸ್ತೆಯೊಬ್ಬಳು ಬಂಧನಕ್ಕೆ ಒಳಗಾಗಿರುವ ಘಟನೆ ಬಿಹಾರದ ಅರೇರಿಯಾ ಜಿಲ್ಲೆಯಲ್ಲಿ ನಡೆದಿದೆ.

    ಕೋರ್ಟ್‌ ಕಲಾಪಕ್ಕೆ ಅಡ್ಡಿ ಪಡಿಸಿರುವ ‌ ಆರೋಪ ಸಂತ್ರಸ್ತೆಯ ಮೇಲಿದೆ. ಈಕೆಯ ಜತೆಗೆ ಕೋರ್ಟ್‌ನಲ್ಲಿ ಹಾಜರಿದ್ದ ಜನ್‌ಜಾಗರಣ್‌ ಸ್ವಯಂಸೇವಾ ಸಂಸ್ಥೆಯ ಕಲ್ಯಾಣಿ ಬಡೋಲಾ ಮತ್ತು ತನ್ಮಯ್ ನಿವೇದಿತಾ ಎಂಬ ಕಾರ್ಯಕರ್ತೆಯರನ್ನೂ ಬಂಧಿಸಲಾಗಿದೆ.

    ಸದ್ಯ ಮೂವರೂ ಅರಾರಿಯಾದಿಂದ 250 ಕಿ.ಮೀ ದೂರದಲ್ಲಿರುವ ಸಮಸ್ತಿಪುರ ಜಿಲ್ಲೆಯ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

    ಅಷ್ಟಕ್ಕೂ ಆಗಿದ್ದೇನೆಂದರೆ: ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವಾಗಿರುವ ಆರೋಪವಿದೆ. ಈ ಬಗ್ಗೆ ದೂರು ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಮುಂದೆ ಬಂದಿತ್ತು. ಅದಾಗಲೇ ಕೋರ್ಟ್‌ ಎದುರು ತನ್ನ ಮೇಲೆ ಅತ್ಯಾಚಾರ ಎಸಗಿರುವವರ ಪೈಕಿ ಒಬ್ಬಾತನ ಜತೆಯೇ ನಾಲ್ಕು ಗಂಟೆ ನಿಂತಿದ್ದ ಯುವತಿ ಕುಗ್ಗಿ ಹೋಗಿದ್ದಳು. ಮನಸ್ಸು ಜರ್ಜರಿತವಾಗಿತ್ತು.

    ಇದನ್ನೂ ಓದಿ: ಸನ್ಯಾಸಿನಿ ಮೇಲೆ ಅತ್ಯಾಚಾರ: ಆರೋಪಿ ಬಿಷಪ್‌ಗೆ ಕರೊನಾ ಸೋಂಕು

    ಅತ್ಯಾಚಾರ ಪ್ರಕರಣ ಆಗಿರುವ ಕಾರಣ, ನಿಯಮದ ಪ್ರಕಾರ ಮ್ಯಾಜಿಸ್ಟ್ರೇಟ್‌ ಕೊಠಡಿಯಲ್ಲಿ ವಿಚಾರಣೆ (ಇನ್‌ ಕ್ಯಾಮೆರಾ ಪ್ರೊಡೀಸಿಂಗ್‌) ನಡೆಯುತ್ತಿತ್ತು. ಇಂಥ ಸಮಯದಲ್ಲಿ ಕೋರ್ಟ್‌ ನಿಯಮದಂತೆ ಯಾರನ್ನೂ ಒಳಗೆ ಬಿಡುವುದಿಲ್ಲ. ಆದರೆ ಯುವತಿ, ತನ್ನ ಜತೆ ಸ್ವಯಂ ಸೇವಾ ಸಂಘದ ಸದಸ್ಯರೂ ಒಳಗಡೆ ಬರಬೇಕು ಎಂದು ಆಕೆ ಕೋರಿದಳು. ಆದರೆ ಕೋರ್ಟ್‌ ನಿಯಮದ ಪ್ರಕಾರ ಅದು ಸಾಧ್ಯವಿಲ್ಲ ಎಂದು ಆಕೆಗೆ ಹೇಳಲಾಯಿತು.

    ನಂತರ ನ್ಯಾಯಾಧೀಶರು ಆಕೆಯ ಹೇಳಿಕೆ ಪಡೆದರು. ಹೇಳಿಕೆಯನ್ನು ಟೈಪ್‌ ಮಾಡಿದ ನಂತರ ಸಹಿ ಹಾಕುವಂತೆ ಆಕೆಗೆ ಹೇಳಲಾಯಿತು. ಆದರೆ ಅದನ್ನು ಓದುವಷ್ಟು ಶಕ್ತಿ ತನಗೆ ಇಲ್ಲದ ಕಾರಣ, ಸ್ವಯಂ ಸೇವಾ ಸಂಸ್ಥೆಯ ಕಾರ್ಯಕರ್ತೆಯರನ್ನು ಒಳಗಡೆ ಬಿಡುವಂತೆ ಆಕೆ ಕೋರಿದಳು. ಆದರೆ ಆಗಲೂ ನಿರಾಕರಿಸಲಾಯಿತು.

    ಈ ನಡುವೆಯೇ ಕಾರ್ಯಕರ್ತೆಯರು ಒಳಗೆ ಬಂದು ತಾವು ಆ ಹೇಳಿಕೆಯನ್ನು ಓದಿದ ನಂತರ ಸಂತ್ರಸ್ತೆ ಸಹಿ ಮಾಡುವುದಾಗಿ ಹೇಳಿದರು. ಈ ನಡುವೆ ಅಲ್ಲಿದ್ದ ಸಿಬ್ಬಂದಿ ಜತೆ ಮಾತುಕತೆಯಾಗಿದೆ. ಈ ಸಂದರ್ಭದಲ್ಲಿ ಸಂತ್ರಸ್ತೆ ಹಾಗೂ ಕಾರ್ಯಕರ್ತೆಯರು ಕೆಲವು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತೆ ಸೇರಿದಂತೆ ಕಾರ್ಯಕರ್ತೆಯರನ್ನೂ ಬಂಧಿಸಲಾಗಿದೆ.

    ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸಂಸ್ಥೆ, ಕೋರ್ಟ್‌, ಸಂತ್ರಸ್ತೆಯ ನೋವನ್ನು ತಿಳಿಯಲು ವಿಫಲವಾಗಿದೆ. ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿರುವ ಯುವತಿಯೊಬ್ಬ ಮನಸ್ಥಿತಿ ಹೇಗಿರಬೇಡ? ಅಷ್ಟಕ್ಕೂ ಆಕೆಯ ಮೇಲೆ ಅತ್ಯಾಚಾರವಾದಾಗ ಕೆಲವು ಮಾಧ್ಯಮಗಳಲ್ಲಿ ಸಂತ್ರಸ್ತೆಯ ಗುರುತನ್ನೂ ತಿಳಿಸಲಾಗಿದೆ. ಇದರಿಂದಾಗಿಯೂ ಮಾನಸಿಕವಾಗಿ ಆಕೆ ಕುಗ್ಗಿದ್ದಾಳೆ, ಅಷ್ಟೇ ಅಲ್ಲದೇ ಅತ್ಯಾಚಾರಿಯ ಸಮೀಪವೇ ನಾಲ್ಕು ಗಂಟೆ ನಿಂತಿರುವ ಕಾರಣ, ತುಂಬಾ ನೊಂದು ಕಠಿಣ ಶಬ್ದಗಳ ಬಳಕೆ ಮಾಡಿದ್ದಾಳೆ. ಆದರೆ ಆಕೆಯನ್ನೇ ಬಂಧಿಸಿರುವುದು ಸರಿಯಲ್ಲ ಎಂದಿದೆ. ಜತೆಗೆ ಜೈಲಿನಲ್ಲಿ ಕರೊನಾ ವೈರಸ್‌ ತಗಲುವ ಸಾಧ್ಯತೆ ಇರುವ ಕಾರಣ, ಕೂಡಲೇ ಎಲ್ಲರನ್ನೂ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್‌)

    ಸಚಿವರ ಬುಡಕ್ಕೆ ಬೆಂಕಿಯಿಟ್ಟ ಅಂತಾರಾಷ್ಟ್ರೀಯ ‘ಸ್ಮಂಗ್ಲಿಂಗ್‌ ರಾಣಿ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts