More

    ಫ್ರೆಂಚ್ ಸ್ಕಾರ್ಪೀನ್ ವರ್ಗದ ಸಬ್‌ಮರೀನ್ ಸಾಮರ್ಥ್ಯ ಅನಾವರಣ: ಸಾಗರವನ್ನಾಳಲು ಸಜ್ಜು ಭಾರತದ ಅತ್ಯಾಧುನಿಕ ಸಬ್‌ಮರೀನ್‌ಗಳು

    ಫ್ರೆಂಚ್ ಸ್ಕಾರ್ಪೀನ್ ವರ್ಗದ ಸಬ್‌ಮರೀನ್ ಸಾಮರ್ಥ್ಯ ಅನಾವರಣ: ಸಾಗರವನ್ನಾಳಲು ಸಜ್ಜು ಭಾರತದ ಅತ್ಯಾಧುನಿಕ ಸಬ್‌ಮರೀನ್‌ಗಳು| ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
    ಭಾರತೀಯ ಸೇನಾಪಡೆಗಳಿಗೆ ಅವಶ್ಯಕ ಆಯುಧಗಳನ್ನು ಖರೀದಿಸುವ ಜವಾಬ್ದಾರಿ ಹೊಂದಿರುವ ಭಾರತದ ರಕ್ಷಣಾ ಸ್ವಾಧೀನ ಸಮಿತಿ (ಡಿಫೆನ್ಸ್ ಅಕ್ವಿಸಿಶನ್ ಕೌನ್ಸಿಲ್ – ಡಿಎಸಿ) ಹಲವು ಪ್ರಮುಖ ಖರೀದಿ ಪ್ರಸ್ತಾವನೆಗಳಿಗೆ ತನ್ನ ಒಪ್ಪಿಗೆ ಸೂಚಿಸಿದೆ. ಇದರಲ್ಲಿ, ಭಾರತೀಯ ನೌಕಾಪಡೆಗಾಗಿ ಮೂರು ಸ್ಕಾರ್ಪೀನ್ ವರ್ಗದ ಸಬ್‌ಮರೀನ್‌ಗಳು ಮತ್ತು 26 ರಫೇಲ್ ಮರೀನ್ ಯುದ್ಧ ವಿಮಾನಗಳು ಸೇರಿವೆ.

    ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಎರಡು ದಿನಗಳ ಪ್ಯಾರಿಸ್ ಪ್ರವಾಸದ ವೇಳೆ, ರಕ್ಷಣಾ ಸ್ವಾಧೀನ ಸಮಿತಿ ಸಬ್‌ಮರೀನ್‌ಗಳ ಖರೀದಿಗೆ ತನ್ನ ಒಪ್ಪಿಗೆಯನ್ನು ಸೂಚಿಸಿತು.

    ಈ ಮೂರು ಹೆಚ್ಚುವರಿ ಸ್ಕಾರ್ಪೀನ್ ಸಬ್‌ಮರೀನ್‌ಗಳನ್ನು ‘ಬೈ ಇಂಡಿಯನ್’ ವರ್ಗದಲ್ಲಿ ಖರೀದಿಸಿ, ಬಳಿಕ ಅವುಗಳನ್ನು ಮುಂಬೈಯ ಮಳಗಾಂವ್ ಡಾಕ್ ಶಿಪ್ ಬಿಲ್ಡರ್ಸ್ ಲಿಮಿಟೆಡ್(ಎಂಡಿಎಲ್)ನಲ್ಲಿ ನಿರ್ಮಿಸಲಾಗುತ್ತದೆ.

    ಹೊಸ ಸಬ್‌ಮರೀನ್‌ಗಳು

    ಮಳಗಾಂವ್ ಡಾಕ್ ಶಿಪ್ ಬಿಲ್ಡರ್ಸ್ ಲಿಮಿಟೆಡ್ (ಎಂಡಿಎಲ್) ಈಗ ತನ್ನ ಪ್ರಾಜೆಕ್ಟ್-75 ಹೆಸರಿನ ಯೋಜನೆಯಡಿ ಆರು ಸ್ಕಾರ್ಪೀನ್ ವರ್ಗದ ಸಬ್‌ಮರೀನ್‌ಗಳನ್ನು ನಿರ್ಮಿಸುತ್ತಿದೆ. 3.75 ಬಿಲಿಯನ್ ಡಾಲರ್ ಮೌಲ್ಯ ಹೊಂದಿರುವ ಈ ಯೋಜನೆಯನ್ನು ಫ್ರೆಂಚ್ ರಕ್ಷಣಾ ಸಂಸ್ಥೆಯಾದ ನೇವಲ್ ಗ್ರೂಪ್ ಜೊತೆಗೆ 2005ರಲ್ಲಿ ತಂತ್ರಜ್ಞಾನ ವರ್ಗಾವಣೆ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಜಾರಿಗೆ ತರಲಾಯಿತು. ಈ ಆರು ಜಲಾಂತರ್ಗಾಮಿಗಳಲ್ಲಿ, ಐದು ಜಲಾಂತರ್ಗಾಮಿಗಳು ಈಗಾಗಲೇ ಸೇನೆಗೆ ಸೇರ್ಪಡೆಗೊಂಡಿವೆ. ಇನ್ನುಳಿದ ಆರನೆಯ, ಅಂತಿಮ ಜಲಾಂತರ್ಗಾಮಿ ಮುಂದಿನ ವರ್ಷಾರಂಭದಲ್ಲಿ ನೌಕಾಪಡೆಗೆ ಸೇರ್ಪಡೆಗೊಳ್ಳಲಿದೆ. ಮೊದಲ ಸಬ್‌ಮರೀನ್ 2012ರಲ್ಲಿ ಸಿದ್ಧವಾಗಬೇಕಿತ್ತು. ಆದರೆ, ಈ ಯೋಜನೆ ವಿವಿಧ ಕಾರಣಗಳಿಂದ ತಡವಾಗುತ್ತ ಬಂದಿತ್ತು.

    ಇದನ್ನೂ ಓದಿ: ನಾಚಿಕೆ-ಅವಮಾನ ಸಹಿಸಿಕೊಂಡು ಬಯಲಲ್ಲೇ ದೇಹದ ಒತ್ತಡ ನಿವಾರಿಸಿಕೊಂಡೆ: ಟಾಯ್ಲೆಟ್ ಇರದೆ ಪಟ್ಟ ಕಷ್ಟದ ಬಗ್ಗೆ ರಾಷ್ಟ್ರಪತಿಗೇ ಪತ್ರ ಬರೆದ ಮಹಿಳೆ

    ಐದನೇ ಸಬ್‌ಮರೀನ್ ಆದ ಐಎನ್ಎಸ್ ವಾಗಿರ್ ಈ ವರ್ಷದ ಜನವರಿ ತಿಂಗಳಲ್ಲಿ ಸೇವೆಗೆ ಸೇರ್ಪಡೆಗೊಂಡಿತು. ಈ ಮೊದಲ ನಾಲ್ಕು ಸಬ್‌ಮರೀನ್‌ಗಳಾದ ಐಎನ್ಎಸ್ ಕಲ್ವರಿ, ಐಎನ್ಎಸ್ ಖಂಡೇರಿ, ಐಎನ್ಎಸ್ ಕರಂಜ್ ಹಾಗೂ ಐಎನ್ಎಸ್ ವೇಲ 2017 ಮತ್ತು 2021ರ ನಡುವೆ ಸೇನೆಗೆ ಸೇರ್ಪಡೆಗೊಂಡವು. ಈ ವರ್ಷದ ಮೇ ತಿಂಗಳಲ್ಲಿ ಆರನೇ ಸಬ್‌ಮರೀನ್ ವಾಗ್‌ಶೀರ್ ತನ್ನ ಸಾಗರ ಪರೀಕ್ಷೆಗಳನ್ನು ಆರಂಭಿಸಿತು.

    ರಕ್ಷಣಾ ಖರೀದಿ ಸಮಿತಿ (ಡಿಎಸಿ) ಎಂಡಿಎಲ್ ಇನ್ನೂ ಮೂರು ಸ್ಕಾರ್ಪೀನ್ ಸಬ್‌ಮರೀನ್‌ಗಳನ್ನು ನಿರ್ಮಿಸಲು ಅನುಮತಿ ನೀಡಿದೆ. ಈ ಜಲಾಂತರ್ಗಾಮಿಗಳು ಈ ಮೊದಲು ನಿರ್ಮಿಸಿದ ಸಬ್‌ಮರೀನ್‌ಗಳ ವೈಶಿಷ್ಟ್ಯಗಳನ್ನೇ ಹೊಂದಿರಲಿವೆ.

    ಮೂರು ಹೆಚ್ಚುವರಿ ಜಲಾಂತರ್ಗಾಮಿಗಳ ಅವಶ್ಯಕತೆ

    ಪ್ರಾಜೆಕ್ಟ್-75 ಯೋಜನೆಯಡಿ ಜಲಾಂತರ್ಗಾಮಿಗಳ ಪೂರೈಕೆ ಸಾಕಷ್ಟು ತಡವಾಗಿರುವುದರಿಂದ, ಭಾರತದ ಇಳಿಕೆಯಾಗುತ್ತಿರುವ ಸಬ್‌ಮರೀನ್ ಬಲವನ್ನು ಹೆಚ್ಚಿಸಲು ಇನ್ನೂ ಮೂರು ಹೆಚ್ಚುವರಿ ಸಬ್‌ಮರೀನ್‌ಗಳ ಅವಶ್ಯಕತೆ ಇದೆ ಎಂದು ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.

    ಭಾರತೀಯ ನೌಕಾಪಡೆಯ ಬಳಿ 16 ಸಾಂಪ್ರದಾಯಿಕ ಸಬ್‌ಮರೀನ್‌ಗಳು ಸೇವೆ ಸಲ್ಲಿಸುತ್ತಿವೆ. ಇವುಗಳಲ್ಲಿ ಏಳು ಸಿಂಧುಘೋಷ್ ವರ್ಗ (ರಷ್ಯಾದ ಕಿಲೋ ವರ್ಗ), ನಾಲ್ಕು ಶಿಶುಮಾರ್ ವರ್ಗ (ಮಾರ್ಪಡಿಸಲಾದ ಜರ್ಮನ್ ಟೈಪ್ 209), ಹಾಗೂ ಐದು ಕಲ್ವರಿ ವರ್ಗದ (ಫ್ರೆಂಚ್ ಸ್ಕಾರ್ಪೀನ್ ವರ್ಗ) ಸಬ್‌ಮರೀನ್‌ಗಳು ಸೇರಿವೆ. ಆದರೆ, ಎಲ್ಲ ಕಾರ್ಯಾಚರಣೆಗಳನ್ನು ಪರಿಣಾಮಕಾರಿಯಾಗಿ ನಡೆಸಲು, ಭಾರತೀಯ ನೌಕಾಪಡೆಗೆ ಕನಿಷ್ಠ 18 ಸಬ್‌ಮರೀನ್‌ಗಳ ಅವಶ್ಯಕತೆ ಇದೆ.

    ಆದರೆ, ಬಹುತೇಕ 30% ಸಬ್‌ಮರೀನ್‌ಗಳು ಯಾವುದೇ ಸಮಯದಲ್ಲಾದರೂ ದುರಸ್ತಿ, ಮರುಜೋಡಣೆಗೆ ತೆರಳುವುದರಿಂದ, ಕಾರ್ಯಾಚರಣೆ ನಡೆಸುವ ಸಬ್‌ಮರೀನ್‌ಗಳ ಸಂಖ್ಯೆ ಕಡಿಮೆಯಾಗುತ್ತದೆ. ಇನ್ನೂ ಹೊಸದಾದ ಕಲ್ವರಿ ವರ್ಗದ ಸಬ್‌ಮರೀನ್‌ಗಳು ಸಹ ಸದ್ಯದಲ್ಲೇ ಮರುಜೋಡಣೆಗೆ ಒಳಗಾಗಲಿವೆ.

    ಇದನ್ನೂ ಓದಿ: ನೇರಳೆ ಹಣ್ಣುಗಳನ್ನು ಅತಿಯಾಗಿ ಸೇವಿಸಿದರೆ ಏನಾಗುತ್ತದೆ?: ಆರೋಗ್ಯಕ್ಕೇನು ತೊಂದರೆ?

    ರಕ್ಷಣಾ ಸಚಿವಾಲಯದ ಪ್ರಕಾರ, ಹೆಚ್ಚು ಸ್ವದೇಶಿ ನಿರ್ಮಾಣದ ಉಪಕರಣಗಳನ್ನು ಒಳಗೊಂಡಿರುವ ಹೆಚ್ಚಿನ ಸಬ್‌ಮರೀನ್‌ಗಳನ್ನು ಹೊಂದುವುದರಿಂದ ಎರಡು ರೀತಿಯ ಪ್ರಯೋಜನಗಳಿವೆ. ಮೊದಲನೆಯದಾಗಿ, ಇದು ನೌಕಾಪಡೆಗೆ ಅವಶ್ಯಕತೆ ಇರುವಷ್ಟು ಸಬ್‌ಮರೀನ್‌ಗಳನ್ನು ಒದಗಿಸಿ, ನೌಕಾಪಡೆಯ ಕಾರ್ಯಾಚರಣಾ ಸಿದ್ಧತೆಯನ್ನು ಕಾಪಿಡುತ್ತದೆ. ಎರಡನೆಯದಾಗಿ, ದೇಶೀಯ ಉದ್ಯಮದಲ್ಲಿ ಇದು ಸಾಕಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.

    ಅದರೊಡನೆ, ಈ ಖರೀದಿ ಪ್ರಕ್ರಿಯೆ ಮಳಗಾಂವ್ ಡಾಕ್ ಶಿಪ್ ಬಿಲ್ಡರ್ಸ್ ಲಿಮಿಟೆಡ್ (ಎಂಡಿಎಲ್) ಸಂಸ್ಥೆಗೆ ಸಬ್‌ಮರೀನ್ ನಿರ್ಮಾಣದಲ್ಲಿ ತನ್ನ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲು ನೆರವಾಗಲಿದೆ.

    ಸ್ಕಾರ್ಪೀನ್ ಸಬ್‌ಮರೀನ್‌ಗಳ ಸಾಮರ್ಥ್ಯವೇನು?

    ಸ್ಕಾರ್ಪೀನ್ ಸಬ್‌ಮರೀನ್‌ಗಳು ಸಾಂಪ್ರದಾಯಿಕ ದಾಳಿ ಸಬ್‌ಮರೀನ್‌ಗಳಾಗಿದ್ದು, ಶತ್ರುಗಳ ನೌಕಾಪಡೆಯ ಹಡಗುಗಳ ಮೇಲೆ ದಾಳಿ ನಡೆಸಿ, ಅವುಗಳನ್ನು ನಾಶಪಡಿಸಲು ವಿನ್ಯಾಸಗೊಳಿಸಲಾಗಿದೆ. ಅವುಗಳು ವಿವಿಧ ರೀತಿಯ ಟಾರ್ಪೆಡೋಗಳು ಹಾಗೂ ಕ್ಷಿಪಣಿಗಳನ್ನು ಉಡಾಯಿಸಬಲ್ಲ ಸಾಮರ್ಥ್ಯ ಹೊಂದಿದ್ದು, ವಿಚಕ್ಷಣೆ ನಡೆಸಲು ಮತ್ತು ಗುಪ್ತಚರ ಮಾಹಿತಿ ಕಲೆಹಾಕಲು ಬಳಕೆಯಾಗುತ್ತವೆ.

    ಸ್ಕಾರ್ಪೀನ್ ಸಬ್‌ಮರೀನ್‌ಗಳು ಬಹುತೇಕ 220 ಅಡಿ ಉದ್ದವಿದ್ದು, ಅಂದಾಜು 40 ಅಡಿ ಎತ್ತರವಿರುತ್ತವೆ. ಅವುಗಳು ನೀರಿನ ಮೇಲ್ಮೈಯಲ್ಲಿ 11 ನಾಟ್ (ಪ್ರತಿ ಗಂಟೆಗೆ 20 ಕಿಲೋಮೀಟರ್) ವೇಗದಲ್ಲಿ ಚಲಿಸಿದರೆ, ನೀರಿನಾಳದಲ್ಲಿ 20 ನಾಟ್ (ಪ್ರತಿ ಗಂಟೆಗೆ 37 ಕಿಲೋಮೀಟರ್) ವೇಗದಲ್ಲಿ ಚಲಿಸಬಲ್ಲವು.

    ಸ್ಕಾರ್ಪೀನ್ ವರ್ಗದ ಸಬ್‌ಮರೀನ್‌ಗಳು ಡೀಸೆಲ್ ಇಲೆಕ್ಟ್ರಿಕ್ ಪ್ರೊಪಲ್ಷನ್ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತವೆ. ಇವು ಅಂದಾಜು 50 ದಿನಗಳ ಕಾಲ ಇಂಧನ ಮರು ಪೂರೈಕೆಯ ಅವಶ್ಯಕತೆಯಿಲ್ಲದೆ ನೀರಿನಾಳದಲ್ಲಿ ಇರಬಲ್ಲವು. ಈ ಮಾದರಿಯ ಪ್ರೊಪಲ್ಷನ್ ವ್ಯವಸ್ಥೆ ನೀರಿನ ಮೇಲ್ಮೈಯ ಕಾರ್ಯಾಚರಣೆಗೆ ಡೀಸೆಲ್ ಮತ್ತು ನೀರಿನಾಳದ ಕಾರ್ಯಾಚರಣೆಗಳಿಗೆ ವಿದ್ಯುತ್ ಶಕ್ತಿಯನ್ನು ಬಳಸಿಕೊಳ್ಳುತ್ತದೆ.

    ಆದರೆ, ದೀರ್ಘಕಾಲದ ತನಕ ನೀರಿನಾಳದಲ್ಲಿ ಇದ್ದ ಬಳಿಕ, ಈ ಸಬ್‌ಮರೀನ್‌ಗಳ ವಿದ್ಯುತ್ ಬ್ಯಾಟರಿಗಳನ್ನು ಡೀಸೆಲ್ ಇಂಜಿನ್ ಬಳಸಿ ಮರುಪೂರಣ ನಡೆಸಬೇಕಾಗುತ್ತದೆ. ಈ ಕಾರಣಕ್ಕಾಗಿ, ತನ್ನ ಕಾರ್ಯಾಚರಣಾ ಸಾಮರ್ಥ್ಯವನ್ನು ಉಳಿಸಿಕೊಳ್ಳಲು ಸಬ್‌ಮರೀನ್ ನಿರ್ದಿಷ್ಟ ಅವಧಿಗೆ ನೀರಿನ ಮೇಲ್ಮೈಗೆ ಬರಬೇಕಾಗುತ್ತದೆ.

    ಫ್ರೆಂಚ್ ಸ್ಕಾರ್ಪೀನ್ ವರ್ಗದ ಸಬ್‌ಮರೀನ್ ಸಾಮರ್ಥ್ಯ ಅನಾವರಣ: ಸಾಗರವನ್ನಾಳಲು ಸಜ್ಜು ಭಾರತದ ಅತ್ಯಾಧುನಿಕ ಸಬ್‌ಮರೀನ್‌ಗಳು

    ನ್ಯೂಕ್ಲಿಯರ್ ಸಬ್‌ಮರೀನ್‌ಗಳಿಗೆ ಹೋಲಿಸಿದರೆ ಇವುಗಳ ಸಾಮರ್ಥ್ಯವೆಷ್ಟು?

    ನ್ಯೂಕ್ಲಿಯರ್ ಸಬ್‌ಮರೀನ್‌ಗಳು ಸಾಮಾನ್ಯವಾಗಿ ನೀರಿನ ಮೇಲ್ಭಾಗಕ್ಕೆ ಬರದೆ, ಬಹಳ ದೀರ್ಘಕಾಲ ಕಾರ್ಯಾಚರಿಸಬಲ್ಲವು. ಆದ್ದರಿಂದ ಅವು ಅತ್ಯಂತ ನೆಚ್ಚಿನ ಆಯ್ಕೆಯ ಸಬ್‌ಮರೀನ್‌ಗಳಾಗಿವೆ. ಬ್ಯಾಟರಿ ಚಾಲಿತ ಸಬ್‌ಮರೀನ್‌ಗಳ ರೀತಿಯಲ್ಲದೆ, ನ್ಯೂಕ್ಲಿಯರ್ ಸಬ್‌ಮರೀನ್‌ಗಳು ತಮ್ಮಲ್ಲಿ ನ್ಯೂಕ್ಲಿಯರ್ ರಿಯಾಕ್ಟರ್ ಹೊಂದಿರುತ್ತವೆ. ಈ ರಿಯಾಕ್ಟರ್ ಮೂವತ್ತು ವರ್ಷಗಳ ಕಾರ್ಯಾವಧಿಯನ್ನು ಹೊಂದಿದೆ. ಇವುಗಳು ಅತ್ಯಂತ ದೀರ್ಘಕಾಲ ನೀರಿನಾಳದಲ್ಲೇ ಇರಬಲ್ಲವಾಗಿದ್ದು, ಸಿಬ್ಬಂದಿಗೆ ಅವಶ್ಯಕ ಪೂರೈಕೆಗಳನ್ನು ಪಡೆಯಲು ಮಾತ್ರವೇ ನೀರಿನ ಮೇಲೆ ಬರುವ ಅಗತ್ಯ ಹೊಂದಿವೆ. ಅದರೊಡನೆ, ನ್ಯೂಕ್ಲಿಯರ್ ಸಬ್‌ಮರೀನ್‌ಗಳು ಸಾಂಪ್ರದಾಯಿಕ ಸಬ್‌ಮರೀನ್‌ಗಳಿಗೆ ಹೋಲಿಸಿದರೆ ಹೆಚ್ಚು ವೇಗವಾಗಿ ಚಲಿಸಬಲ್ಲವು.

    ಇದನ್ನೂ ಓದಿ: ಚಂದ್ರಯಾನದ ಗುಂಗಲ್ಲಿ ಬೆಂಗಳೂರು ಪೊಲೀಸರು; ವಿಶೇಷ ರೀತಿಯ ಜಾಗೃತಿ, ಅದಲ್ಲ.. ಇದು..!

    ನ್ಯೂಕ್ಲಿಯರ್ ಸಬ್‌ಮರೀನ್‌ಗಳು ಹೆಚ್ಚಿನ ಅನುಕೂಲತೆಗಳನ್ನು ಹೊಂದಿದ್ದರೂ ಇತರ ವಿಚಾರಗಳನ್ನೂ ಗಮನಕ್ಕೆ ತಂದುಕೊಳ್ಳುವುದು ಅವಶ್ಯಕವಾಗಿದೆ. ಮೊದಲನೆಯದಾಗಿ, ಅವುಗಳು ಹೆಚ್ಚು ವೆಚ್ಚದಾಯಕವಾಗಿದ್ದು, ಅವುಗಳನ್ನು ನಿರ್ವಹಿಸಲು ಹೆಚ್ಚಿನ ಪ್ರಾವೀಣ್ಯತೆ ಅವಶ್ಯಕವಾಗಿದೆ. ಎರಡನೆಯದಾಗಿ, ಡೀಸೆಲ್ ಇಲೆಕ್ಟ್ರಿಕ್ ತಂತ್ರಜ್ಞಾನ ಅಭಿವೃದ್ಧಿ ಹೊಂದಿದ್ದು, ಸಾಂಪ್ರದಾಯಿಕ ಸಬ್‌ಮರೀನ್‌ಗಳ ವ್ಯಾಪ್ತಿ ಮತ್ತು ಸ್ಟೆಲ್ತ್ ಸಾಮರ್ಥ್ಯವನ್ನು ವೃದ್ಧಿಸಿವೆ.

    ಯುಎಸ್ ನೇವಲ್ ಇನ್​ಸ್ಟಿಟ್ಯೂಟ್‌ನ ಪತ್ರಿಕೆಯೊಂದರ ಪ್ರಕಾರ, ಏರ್ ಇಂಡಿಪೆಂಡೆಂಟ್ ಪ್ರೊಪಲ್ಷನ್ (ಎಐಪಿ) ವ್ಯವಸ್ಥೆ ಅಳವಡಿಸಲಾಗಿರುವ ಸಬ್‌ಮರೀನ್‌ಗಳು, ಬ್ಯಾಟರಿಯಲ್ಲಿ ಚಲಿಸುವಾಗಲೂ ಅತ್ಯಂತ ನಿಶ್ಶಬ್ದವಾಗಿರುತ್ತವೆ. ಅವುಗಳಿಂದ ಬರುವ ಗಮನಿಸಬಹುದಾದ ಶಬ್ದಗಳೆಂದರೆ, ಕೇವಲ ಶಾಫ್ಟ್ ಬೇರಿಂಗ್‌ಗಳು, ಪ್ರೊಪೆಲ್ಲರ್ ಹಾಗೂ ಹಲ್‌ಗಳ ಚಲನೆಯದಾಗಿರುತ್ತದೆ. ಭಾರತೀಯ ನೌಕಾಪಡೆ 2024ರಿಂದ ತನ್ನ ಸ್ಕಾರ್ಪೀನ್ ವರ್ಗದ ಸಬ್‌ಮರೀನ್‌ಗಳಿಗೆ ಎಐಪಿ ವ್ಯವಸ್ಥೆಗಳನ್ನು ಅಳವಡಿಸುವ ಮೂಲಕ ಅವುಗಳ ಬಾಳ್ವಿಕೆ ಮತ್ತು ಸ್ಟೆಲ್ತ್ ಸಾಮರ್ಥ್ಯವನ್ನು ವೃದ್ಧಿಸುವ ಉದ್ದೇಶ ಹೊಂದಿದೆ.

    ಭಾರತ ಪ್ರಸ್ತುತ 2 ಅರಿಹಂತ್ ವರ್ಗದ ನ್ಯೂಕ್ಲಿಯರ್ ಚಾಲಿತ ಸಬ್‌ಮರೀನ್‌ಗಳನ್ನು ಹೊಂದಿದ್ದು, ಅವುಗಳನ್ನು ಎಸ್ಎಸ್‌ಬಿಎಂ (ಶಿಪ್ ಸಬ್‌ಮರ್ಸಿಬಲ್ ಬ್ಯಾಲಿಸ್ಟಿಕ್ ಮಿಸೈಲ್) ಸಬ್‌ಮರೀನ್ ಎಂದು ಕರೆಯಲಾಗುತ್ತದೆ.

    ಈತ ಗಂಡಸಿಯ ಸಾಹಸಿ: ಚಿರತೆಯನ್ನು ಹಿಡಿದು ಬೈಕ್​ಗೆ ಕಟ್ಟಿಕೊಂಡು ಹೋಗಿ ಅರಣ್ಯ ಇಲಾಖೆಗೆ ಒಪ್ಪಿಸಿದ!

    ಯಂಗ್​ ಆಗಿಯೇ ಇರಲು ಕೋಟ್ಯಂತರ ರೂ. ಖರ್ಚು ಮಾಡಿದ, ಮಗನ ರಕ್ತ ತನ್ನ ದೇಹಕ್ಕೆ ಸೇರಿಸಿಕೊಂಡ: ಕೊನೆಗೆ ಆಗಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts