More

    ಫ್ರೆಂಚ್ ಓಪನ್‌ನಿಂದ ಆಶ್ಲೆಗ್ ಬಾರ್ಟಿ ಔಟ್; 3ನೇ ಸುತ್ತಿಗೆ ಜೋಕೊವಿಕ್, ಫೆಡರರ್

    ಪ್ಯಾರಿಸ್: ವಿಶ್ವ ನಂ. 1 ಆಟಗಾರ್ತಿ ಆಸ್ಟ್ರೇಲಿಯಾದ ಆಶ್ಲೆಗ್ ಬಾರ್ಟಿ ಗಾಯದ ಸಮಸ್ಯೆಯಿಂದಾಗಿ ಫ್ರೆಂಚ್ ಓಪನ್ ಕ್ಲೇಕೋರ್ಟ್ ಟೆನಿಸ್ ಟೂರ್ನಿಯ ಎರಡನೇ ಸುತ್ತಿನಲ್ಲೇ ಹೊರಬಿದ್ದಿದ್ದರೆ, ವಿಶ್ವ ನಂ. 1 ಆಟಗಾರ ನೊವಾಕ್ ಜೋಕೊವಿಕ್ ಮತ್ತು ಸ್ವಿಸ್ ದಿಗ್ಗಜ ರೋಜರ್ ಫೆಡರರ್ ಸುಲಭ ಜಯದೊಂದಿಗೆ 3ನೇ ಸುತ್ತಿಗೇರಿದರು. ಮಾಜಿ ವಿಶ್ವ ನಂ. 1 ಕ್ಯಾರೊಲಿನಾ ಪ್ಲಿಸ್ಕೋವಾ ಕೂಡ ಮಹಿಳಾ ಸಿಂಗಲ್ಸ್‌ನಲ್ಲಿ 2ನೇ ಸುತ್ತಿನಲ್ಲಿ ಆಘಾತ ಎದುರಿಸಿದರು. 5ನೇ ಶ್ರೇಯಾಂಕಿತೆ ಎಲಿನಾ ಸ್ವಿಟೋಲಿನಾ, 4ನೇ ಶ್ರೇಯಾಂಕಿತೆ ಅಮೆರಿಕದ ಸೋಫಿಯಾ ಕೆನಿನ್ ಮೂರನೇ ಸುತ್ತಿಗೇರಿದ್ದಾರೆ. ಪುರುಷರ ವಿಭಾಗದಲ್ಲಿ ವಿಶ್ವ ನಂ. 2 ಆಟಗಾರ ಡೆನಿಲ್ ಮೆಡ್ವೆಡೇವ್ ಮುನ್ನಡೆ ಕಂಡರು.

    25 ವರ್ಷದ ಬಾರ್ಟಿ ಪೋಲೆಂಡ್‌ನ ಮಗ್ದ ಲಿನೆಟ್ ವಿರುದ್ಧ ಮೊದಲ ಸೆಟ್‌ನಲ್ಲಿ 1-6ರಿಂದ ಸೋತು, 2ನೇ ಸೆಟ್‌ನಲ್ಲಿ 2-2 ಸಮಬಲದಲ್ಲಿದ್ದಾಗ ಸೊಂಟ ನೋವಿನಿಂದ ಬಳಲಿ ಪಂದ್ಯದಿಂದ ನಿವೃತ್ತಿ ಹೊಂದಿದರು. 2019ರ ಚಾಂಪಿಯನ್ ಬಾರ್ಟಿ ಮೊದಲ ಸೆಟ್‌ನಲ್ಲೂ ಗಾಯದ ನಡುವೆ ಹೋರಾಡಿದ್ದರು. ಬಾರ್ಟಿ ನಿರ್ಗಮನದಿಂದ ಟೂರ್ನಿಯಲ್ಲಿ ಈಗ ವಿಶ್ವದ ಅಗ್ರ 3 ಆಟಗಾರ್ತಿಯರಿಲ್ಲದಂತಾಗಿದೆ. ನಂ. 2 ನವೊಮಿ ಒಸಾಕ ಸುದ್ದಿಗೋಷ್ಠಿ ವಿವಾದದಿಂದ ಹೊರನಡೆದಿದ್ದರೆ, ನಂ. 3 ಸಿಮೋನಾ ಹಲೆಪ್ ಗಾಯದಿಂದಾಗಿ ಟೂರ್ನಿ ಆರಂಭಕ್ಕೂ ಮೊದಲೇ ಹೊರಬಿದ್ದಿದ್ದರು. 9ನೇ ಶ್ರೇಯಾಂಕಿತೆ ಜೆಕ್ ಗಣರಾಜ್ಯದ ಪ್ಲಿಸ್ಕೋವಾ 5-7, 1-6ರಿಂದ ಅಮೆರಿಕದ ಸ್ಲೋವನ್ ಸ್ಟೀಫನ್ಸ್ ವಿರುದ್ಧ ಸೋಲುಂಡರು.

    ಜೋಕೋ, ಫೆಡರರ್ ಮುನ್ನಡೆ
    ಸೆರ್ಬಿಯಾ ತಾರೆ ನೊವಾಕ್ ಜೋಕೊವಿಕ್ 2ನೇ ಸುತ್ತಿನಲ್ಲಿ ಉರುಗ್ವೆಯ ಪ್ಯಾಬ್ಲೊ ಕ್ಯುವಾಸ್ ವಿರುದ್ಧ 6-3, 6-2, 6-4 ನೇರಸೆಟ್‌ಗಳಿಂದ 2 ಗಂಟೆಗಳಲ್ಲೇ ಜಯ ಸಾಧಿಸಿದರು. 20 ಗ್ರಾಂಡ್ ಸ್ಲಾಂಗಳ ಒಡೆಯ ಫೆಡರರ್ ಕ್ರೊವೇಷಿಯಾದ ಮರಿನ್ ಸಿಲಿಕ್ ವಿರುದ್ಧ ಸ್ವಲ್ಪ ಪ್ರತಿರೋಧ ಎದುರಿಸಿ 6-2, 2-6, 7-6, 6-2ರಿಂದ ಗೆದ್ದರು. ಸಿಂಗಲ್ಸ್ ಡ್ರಾದ ಅತ್ಯಂತ ಹಿರಿಯ ಆಟಗಾರ ಎನಿಸಿರುವ 39 ವರ್ಷದ ಫೆಡರರ್, ಪಂದ್ಯದ ನಡುವೆ ಚೇರ್ ಅಂಪೈರ್ ತೀರ್ಪಿನ ವಿರುದ್ಧ ಅಸಮಾಧಾನಗೊಂಡು ವಾಗ್ವಾದ ನಡೆಸಿದ ಪ್ರಸಂಗವೂ ನಡೆಯಿತು.

    ಸ್ವಿಟೋಲಿನಾ, ಕೆನಿನ್‌ಗೆ ಜಯ
    ಉಕ್ರೇನ್ ತಾರೆ ಸ್ವಿಟೋಲಿನಾ ಗುರುವಾರ ನಡೆದ 2ನೇ ಸುತ್ತಿನ ಕಾದಾಟದಲ್ಲಿ ಅಮೆರಿಕದ ಆ್ಯನ್ ಲೀ ವಿರುದ್ಧ 6-0, 6-4 ನೇರಸೆಟ್‌ಗಳಿಂದ ಜಯ ಸಾಧಿಸಿದರೆ, ಕಳೆದ ವರ್ಷದ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಸೋಫಿಯಾ ಕೆನಿನ್ ದೇಶಬಾಂಧವೆ ಹೈಲಿ ಬಾಪ್ಟಿಸ್ಟೆ ವಿರುದ್ಧ 7-5, 6-3ರಿಂದ ಗೆಲುವು ದಾಖಲಿಸಿದರು. ಟುನೀಷಿಯಾದ ಒನ್ಸ್ ಜಬೇರ್ 6-2, 6-4ರಿಂದ ಭಾರತ ಮೂಲದ ಆಸೀಸ್ ಆಟಗಾರ್ತಿ ಆಸ್ಟ್ರಾ ಶರ್ಮ ಅವರನ್ನು ಪರಾಭವಗೊಳಿಸಿದರು. ಜೆಕ್ ಗಣರಾಜ್ಯದ ಕ್ಯಾರೊಲಿನಾ ಮುಚೋವಾ ಅಮೆರಿಕದ ವರ್ವರ ಲೆಪ್ಚೆಂಕೋಗೆ 6-3, 6-4ರಿಂದ ಸೋಲುಣಿಸಿದರು.

    ಬೋಪಣ್ಣ ಮುನ್ನಡೆ
    ಭಾರತದ ರೋಹನ್ ಬೋಪಣ್ಣ ಮತ್ತು ಕ್ರೊವೇಷಿಯಾದ ಫ್ರಾಂಕೊ ಸ್ಕುಗರ್ ಪುರುಷರ ಡಬಲ್ಸ್ ವಿಭಾಗದಲ್ಲಿ 3ನೇ ಸುತ್ತಿಗೇರಿದೆ. ಬೋಪಣ್ಣ ಜೋಡಿ 2ನೇ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಮೊನ್ರೋ-ಟಿಯಾೊಯಿ ಜೋಡಿಗೆ 6-4, 7-5 ನೇರಸೆಟ್‌ಗಳಿಂದ ಸೋಲುಣಿಸಿತು. ಭಾರತದ ಮತ್ತೋರ್ವ ಆಟಗಾರ ದಿವಿಜ್ ಶರಣ್ ಅರ್ಜೆಂಟೀನಾದ ಜತೆಗಾರ ಫೆಡೆರಿಕೊ ಡೆಲ್ಬೊನಿಸ್ ಅವರೊಂದಿಗೆ ಮೊದಲ ಸುತ್ತಿನಲ್ಲೇ ಮುಗ್ಗರಿಸಿದರು.

    ಟೂರ್ನಿಗೆ ಕರೊನಾತಂಕ!
    ಪುರುಷರ ಡಬಲ್ಸ್ ಜೋಡಿಯೊಂದು ಪಾಸಿಟಿವ್ ಆಗುವುದರೊಂದಿಗೆ ಫ್ರೆಂಚ್ ಓಪನ್‌ನಲ್ಲಿ ಕರೊನಾತಂಕ ಮೂಡಿದೆ. ಮೇ 24ರಿಂದ ಇದುವರೆಗೆ ನಡೆಸಿದ 2,446 ಕೋವಿಡ್ ಟೆಸ್ಟ್‌ಗಳಲ್ಲಿ 2 ಪಾಸಿಟಿವ್ ವರದಿ ಬಂದಿದೆ. ಈ ಆಟಗಾರರಿಬ್ಬರನ್ನೂ ಕ್ವಾರಂಟೈನ್‌ನಲ್ಲಿಡಲಾಗಿದ್ದು, ಅವರ ಬದಲಿಗೆ ಬೇರೆ ಜೋಡಿಯನ್ನು ಕಣಕ್ಕಿಳಿಸಿ ಸ್ಪರ್ಧೆ ಮುಂದುವರಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

    PHOTO | ಕ್ರಿಕೆಟ್ ಜನಕರ ನಾಡಿನಲ್ಲಿ ಟೀಮ್ ಇಂಡಿಯಾ ಕ್ವಾರಂಟೈನ್

    ಭಾರತದ ದಿಗ್ಗಜನ 125 ವರ್ಷ ಹಿಂದಿನ ದಾಖಲೆ ಮುರಿದ ದ್ವಿಶತಕವೀರ ಕಾನ್‌ವೇ

    PHOTO | ಟೋಕಿಯೊ ಒಲಿಂಪಿಕ್ಸ್‌ಗೆ ಭಾರತದ ಬಲಿಷ್ಠ ತಂಡ, ಕ್ರೀಡಾಪಟುಗಳ ಸಮವಸ್ತ್ರ ಅನಾವರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts