ಬೆಂಗಳೂರು: ಐಪಿಎಲ್ ಫ್ರಾಂಚೈಸಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾಜಿ ಮುಖ್ಯಕೋಚ್ ಟಾಮ್ ಮೂಡಿ ವಿಶ್ವ ಟಿ20 ಇಲೆವೆನ್ ತಂಡ ಪ್ರಕಟಿಸಿದ್ದಾರೆ. 54 ವರ್ಷದ ಟಾಮ್ ಮೂಡಿ ತಂಡಕ್ಕೆ ನಿರೀಕ್ಷಿತ ಆಟಗಾರರಿದ್ದರೂ ನಾಯಕತ್ವ ಮಾತ್ರ ಭಾರತದ ರೋಹಿತ್ ಶರ್ಮಗೆ ಒಲಿದಿದೆ. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಡೇವಿಡ್ ವಾರ್ನರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಟೀಮ್ ಇಂಡಿಯಾ ಮುಖ್ಯಕೋಚ್ ಹುದ್ದೆಗೆ ಪ್ರಮುಖ ಆಕಾಂಕ್ಷಿಯಾಗಿದ್ದ ಮೂಡಿ, ರೋಹಿತ್ ಶರ್ಮ ಜತೆ ಇದುವರೆಗೂ ಕಾರ್ಯನಿರ್ವಹಿಸಿಲ್ಲ.
ಇದನ್ನೂ ಓದಿ: ಭಾರತ ಮಹಿಳಾ ಕ್ರಿಕೆಟ್ ತಂಡ ಯಾಕೆ ವಿಶ್ವಕಪ್ ಗೆಲ್ಲಲಿಲ್ಲ ಗೊತ್ತೇ?
ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮ, ಡೇವಿಡ್ ವಾರ್ನರ್ ಜತೆಗೂಡಿ ಇನಿಂಗ್ಸ್ ಆರಂಭಿಸುವರು. ಟಿ20 ಕ್ರಿಕೆಟ್‌ನಲ್ಲಿ ಇದುವರೆಗೂ 82 ಪಂದ್ಯಗಳಿಂದ 2794 ರನ್ ಗಳಿಸಿರುವ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗಿಳಿದರೆ, ಸ್ಫೋಟಕ ಬ್ಯಾಟ್ಸ್‌ಮನ್ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಹಾಗೂ ನಿಕೋಲಸ್ ಪೂರನ್ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿದ್ದಾರೆ. ಆಂಡ್ರೆ ರಸೆಲ್ ತಂಡದ ಪ್ರಮುಖ ಆಲ್ರೌಂಡರ್ ಆಗಿದ್ದರೆ, ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ಸುನೀಲ್ ನಾರಾಯಣ್ ಹಾಗೂ ರಶೀದ್ ಖಾನ್‌ಗೆ ಸ್ಥಾನ ನೀಡಿದ್ದರೆ, ವೇಗದ ಬೌಲಿಂಗ್ ವಿಭಾಗದಲ್ಲಿ ಮಿಚೆಲ್ ಸ್ಟಾರ್ಕ್, ಜಸ್‌ಪ್ರೀತ್ ಬುಮ್ರಾ, ಜೋಫ್ರ ಆರ್ಚರ್‌ಗೆ ಸ್ಥಾನ ನೀಡಿದ್ದಾರೆ. ಭಾರತದ ರವೀಂದ್ರ ಜಡೇಜಾ ಅವರನ್ನು 12ನೇ ಆಟಗಾರನಾಗಿ ಆಯ್ಕೆ ಮಾಡಿದ್ದಾರೆ.
ಟಾಮ್ ಮೂಡಿ ವಿಶ್ವ ಇಲೆವೆನ್: ರೋಹಿತ್ ಶರ್ಮ (ನಾಯಕ), ಡೇವಿಡ್ ವಾರ್ನರ್, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ನಿಕೋಲಸ್ ಪೂರನ್ (ವಿಕೀ), ಆಂಡ್ರೆ ರಸೆಲ್, ಸುನೀಲ್ ನಾರಾಯಣ್, ಮಿಚೆಲ್ ಸ್ಟಾರ್ಕ್, ರಶೀದ್ ಖಾನ್, ಜಸ್‌ಪ್ರೀತ್ ಬುಮ್ರಾ, ಜೋಫ್ರ ಆರ್ಚರ್. ರವೀಂದ್ರ ಜಡೇಜಾ (12ನೇ ಆಟಗಾರ).