More

    ತುಳುನಾಡಿನವರಿಗೆ ಕನ್ನಡ ರಾಜ್ಯಭಾಷೆ, ತುಳು ಮಾತೃಭಾಷೆ: ಒಡಿಯೂರುಶ್ರೀ ಅಭಿಮತ

    ಬೆಂಗಳೂರು: ಹೃದಯದ ಭಾವನೆಗಳ ಇನ್ನೊಂದು ರೂಪವೇ ಆಗಿರುವ ಭಾಷೆಗೆ ಸೆಳೆಯುವಂತಹ ಶಕ್ತಿ ಇದೆ. ಅದರಲ್ಲೂ ತುಳುನಾಡಿನವರಿಗೆ ಎರಡು ಭಾಷೆ ಇದೆ. ಅವುಗಳಲ್ಲಿ ಕನ್ನಡ ರಾಜ್ಯಭಾಷೆಯಾದರೆ, ತುಳು ಮಾತೃಭಾಷೆಯಾಗಿದೆ. ಈ ಎರಡೂ ಭಾಷೆಗಳನ್ನು ಉಳಿಸುವ ಮತ್ತು ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಒಡಿಯೂರು ಶ್ರೀಗುರುದೇವಾನಂದ ಸ್ವಾಮೀಜಿ ಅವರು ಹೇಳಿದ್ದಾರೆ.

    ಬೆಂಗಳೂರಿನ ತುಳುವೆರೆ ಚಾವಡಿ 25ನೇ ವರ್ಷದ ಬೊಳ್ಳಿ ಪರ್ಬ ಕಾರ್ಯಕ್ರಮದಲ್ಲಿ ತುಳುನಾಡ್ದ್​ ಸಿರಿ ಪ್ರಶಸ್ತಿ ಮತ್ತು ಜೋಕುಲೆ ಉಜ್ಜಾಲ್​ ತುಳು ಪದಮಾಲೆ ಪುಸ್ತಕ ಹಾಗೂ ಸತ್ಯಪ್ಪೆ ಬಾಲೆಲು ಆಡಿಯೋ ಬಿಡುಗಡೆ ಮಾಡಿ ಮಾತನಾಡಿದ ಅವರು, ತುಳುಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ವಿಚಾರ ಕೂಡ ಹೋರಾಟದ ಹಾದಿಯಲ್ಲಿದೆ. ಆದರೆ ಅದಕ್ಕಿಂತ ಮುನ್ನ ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿಸಬೇಕು. ಈಗಾಗಲೇ ಸರ್ಕಾರ ಈ ಬಗ್ಗೆ ಅಧ್ಯಯನ ಸಮಿತಿ ರಚಿಸಿದ್ದು, ಇದು ಆದಷ್ಟು ಬೇಗ ಜಾರಿಯಾಗಲು ತುಳುನಾಡಿನವರು ಎಲ್ಲರೂ ಒಗ್ಗಟ್ಟಿನಿಂದ ಇರಬೇಕು ಎಂದು ಹೇಳಿದರು.

    ನಮ್ಮ ಮಾತೃಭಾಷೆಯನ್ನು ಎಲ್ಲರೂ ಉಳಿಸಿಕೊಳ್ಳಬೇಕು. ಕರಾವಳಿಯ ಜನರಲ್ಲಿ ನಾಯಕತ್ವದ ಗುಣವಿದೆ. ಸದಾ ಕ್ರೀಯಾಶೀಲತೆಯಿಂದ ಇರುವ ಜನ ಆತ್ಮವಿಶ್ವಾಸದಿಂದ ಇರುತ್ತಾರೆ. ಹಾಗೇ ತುಳುಭಾಷೆ ಜಾತಿ ಧರ್ಮವನ್ನು ಮೀರಿ ನಿಂತಿದೆ ಎಂದು ತುಳುಭಾಷೆಯಲ್ಲಿ ಅಡಗಿರುವ ಶಕ್ತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ರಾಜ್ಯ ಸರ್ಕಾರ ಈಗಾಗಲೇ ತುಳು ಭಾಷೆಯನ್ನು ಎರಡನೇ ಭಾಷೆಯನ್ನಾಗಿಸಲು ಅಧ್ಯಯನ ಸಮಿತಿಯನ್ನು ರಚಿಸಿದೆ. ಹಾಗೇ ತುಳು ಭಾಷೆಯ ಲಿಪಿಯೂ ಸರಿಯಾಗಬೇಕು. ಜೊತೆಗೆ ಶಾಲೆಗಳಲ್ಲಿ ತುಳು ಭಾಷೆಯನ್ನು ನಾಲ್ಕನೇ ತರಗತಿಯವರೆಗೆ ಆಯ್ಕೆಯ ಭಾಷೆಯನ್ನಾಗಿಸಬೇಕು ಎಂದು ಸಲಹೆ ನೀಡಿದರು.

    ಖ್ಯಾತ ಯಕ್ಷಗಾನ ಕಲಾವಿದರಾದ ಸೀತಾರಾಮ ಕುಮಾರ್ ಕಟೀಲ್, ಹಿರಿಯ ತುಳು ಸಾಹಿತಿ ಕುಶಲಾಕ್ಷಿ ವಿ. ಕಣ್ವತೀರ್ಥ, ಸಮಾಜ ಸೇವಕ ರವಿ ಕಟಪಾಡಿ, ಪ್ರಕಾಶ್ ಜೆ ಶೆಟ್ಟಿಗಾರ್ ಇವರಿಗೆ ಇದೇ ವೇಳೆ ತುಳುನಾಡ್ದ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

    ಬೆಳ್ಳಿ ಹಬ್ಬ ಸಂಭ್ರಮದ ಪ್ರಯುಕ್ತ ಹಿರಿಯ ತುಳು -ಕನ್ನಡ ಸಾಹಿತಿ ಡಿ.ಕೆ. ಚೌಟ ಇವರ ಸಂಸ್ಮರರ್ಣಾಥವಾಗಿ ಹಿರಿಯ ತುಳು ಸಾಹಿತಿ ಉಗಪ್ಪ ಪೂಜಾರಿಯವರಿಗೆ ಪ್ರಶಸ್ತಿ ಮತ್ತು ಸಾಮಾಜಿಕ ಚಿಂತಕ, ತುಳು ಹೋರಾಟಗಾರ ಡಾ.ಉದಯ ಧರ್ಮಸ್ಥಳ ಇವರ ಸಂಸ್ಮರರ್ಣಾಥವಾಗಿ ತುಳು ಸೇವೆಗಾಗಿ ಯುವ ಪ್ರತಿಭೆ ಸತೀಶ್ ಅಗ್ಪಲ್ ಅವರಿಗೆ ಪ್ರಶಸ್ತಿ ನೀಡಲಾಯ್ತು. ವಿಶೇಷ ಚೇತನರಾದ ಉಲ್ಲಾಸ್ ಯು ನಾಯಕ್​, ಲಿಖಿತ ಮತ್ತು ಶ್ರಾವ್ಯ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

    ಕಾರ್ಯಕ್ರಮದಲ್ಲಿ ತುಳುವೆರೆ ಚಾವಡಿ ಸಂಘದ ಅಧ್ಯಕ್ಷ ಪುರುಷೋತ್ತಮ್ ಚೇಂಡ್ಲಾ, ಉಮೇಶ್ ಪೂಂಜಾ, ವಸಂತ್​ ಶೆಟ್ಟಿ ಬೆಳ್ಳಾರೆ, ಪ್ರೊ. ರಾಧಾಕೃಷ್ಣ ಸೇರಿದಂತೆ ಕಾರ್ಯಕ್ರಮದಲ್ಲಿ ತುಳುವೆರೆ ಚಾವಡಿ ಸಂಘದ ಪದಾಧಿಕಾರಿಗಳು, ಸದಸ್ಯರು ಭಾಗಿಯಾಗಿದ್ದರು.

    ಮದುವೆ ದಿನವೇ ಫಿಸಿಯೋಥೆರಪಿ ಎಕ್ಸಾಂ; ವಿವಾಹದ ದಿರಿಸಿನಲ್ಲೇ ಪರೀಕ್ಷೆಗೆ ಬಂದ ವಧು

    ಸಿಟ್ಟು ಸಿಕ್ಕಾಪಟ್ಟೆ ಹೆಚ್ಚಾಗಲೆಂದು 2 ತಿಂಗಳು ಔಷಧ ಬಿಟ್ಟಿದ್ದ; ಸಚಿವರನ್ನು ಕೊಂದ ಎಎಸ್​ಐ ಬಾಯ್ಬಿಟ್ಟ ರಹಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts