More

    ಪದವೀಧರರಿಗೂ ‘ಖಾತ್ರಿ’ ಉದ್ಯೋಗ

    ಬೆಳಗಾವಿ: ಜಿಲ್ಲಾದ್ಯಂತ ಕರೊನಾ ಹಾವಳಿ, ಲಾಕ್‌ಡೌನ್‌ನಿಂದ ಉದ್ಯೋಗ ಹಾಗೂ ಆದಾಯವಿಲ್ಲದೆ ಅಲೆದಾಡುತ್ತಿದ್ದ ಪದವೀಧರರಿಗೆ ಇದೀಗ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಉದ್ಯೋಗ ಖಾತ್ರಿಗೊಳಿಸಿ ಭರವಸೆ ಮೂಡಿಸಿದೆ.

    ನರೇಗಾ ಯೋಜನೆಯಡಿ ಬೆಳಗಾವಿ ಜಿಲ್ಲೆಯ 506 ಗ್ರಾಪಂಗಳ ವ್ಯಾಪ್ತಿಯಲ್ಲಿ ನಿತ್ಯವೂ 1 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದು, ಅದರಲ್ಲಿ 23 ಸಾವಿರಕ್ಕೂ ಹೆಚ್ಚು ಪದವಿ ಮುಗಿಸಿದ ಯುವಕರು ಕೆಲಸ ಮಾಡುತ್ತಿರುವುದು ವಿಶೇಷ.

    ಲಾಕ್‌ಡೌನ್‌ನಿಂದ ನಗರ ಹಾಗೂ ಪಟ್ಟಣಗಳಿಂದ ತಮ್ಮ ಸ್ವಂತ ಊರಿಗೆ ವಲಸೆ ಬಂದಿರುವ ಕೂಲಿ ಕಾರ್ಮಿಕರು, ಪದವಿ ಓದುತ್ತಿರುವ ವಿದ್ಯಾರ್ಥಿಗಳು, ಖಾಸಗಿ ಉದ್ಯೋಗ ಕಳೆದುಕೊಂಡಿರುವವರಿಗೆ ನರೇಗಾ ನೆರವಾಗಿದೆ. ಕೆರೆಗಳು, ಹಳ್ಳ, ಕಾಲುವೆ ಅಭಿವೃದ್ಧಿ, ಬದು ನಿರ್ಮಾಣ ಸೇವಿ ವಿವಿಧ ಕಾಮಗಾರಿಗಳಲ್ಲಿ ಜನರು ದುಡಿಯುತ್ತಿದ್ದಾರೆ.
    1,09,089 ಕಾರ್ಮಿಕರು: ಸರ್ಕಾರ ನರೇಗಾ ಕೂಲಿಯನ್ನು 275 ರೂ.ಗೆ ಏರಿಕೆ ಮಾಡಿದ್ದರಿಂದ ಖಾತ್ರಿ ಉದ್ಯೋಗಕ್ಕೆ ಬೇಡಿಕೆ ಹೆಚ್ಚಾಗಿದೆ.

    ಸರ್ಕಾರವು 2020-21ನೇ ಸಾಲಿನಲ್ಲಿ ರಾಜ್ಯದ 6,021 ಗ್ರಾಪಂಗಳ ವ್ಯಾಪ್ತಿಯ ನರೇಗಾ ಯೋಜನೆಯಲ್ಲಿ 10 ಕೋಟಿ ಮಾನವ ದಿನ ಸೃಷ್ಟಿಸುವ ಗುರಿ ಹಾಕಿಕೊಂಡಿದೆ. ಲಾಕ್‌ಡೌನ್ ಅವಧಿಯಲ್ಲಿಯೇ ಸುಮಾರು 2 ಕೋಟಿಗಿಂತ ಹೆಚ್ಚು ಮಾನವ ದಿನ ಸೃಷ್ಟಿ ಮಾಡಿದೆ. ಬೆಳಗಾವಿ ಜಿಲ್ಲೆಯ 506 ಗ್ರಾಪಂ ವ್ಯಾಪ್ತಿಯಲ್ಲಿ ನಿತ್ಯ 1,09,089 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇದು ಬೆಳಗಾವಿ ಜಿಪಂ ಇತಿಹಾಸದಲ್ಲಿಯೇ ಹೊಸ ದಾಖಲೆಯಾಗಿದೆ.

    ಎಂದು ನರೇಗಾ ಯೋಜನೆಯ ನೋಡಲ್ ಅಧಿಕಾರಿಗಳು ತಿಳಿಸಿದ್ದಾರೆ. ಬಿಎ, ಬಿಎಸ್ಸಿ ಹಾಗೂ ಬಿಕಾಂ ಪದವೀಧರರು ಹಾಗೂ ಖಾಸಗಿ ಕಂಪನಿಗಳು ಸ್ಥಗಿತಗೊಂಡಿದ್ದರಿಂದ ಸ್ವಂತ ಊರುಗಳಿಗೆ ಮರಳಿದ ಉದ್ಯೋಗಿಗಳು ಮನೆಯಲ್ಲಿ ಖಾಲಿ ಕುಳಿತುಕೊಳ್ಳುವಂತಾಗಿದೆ. ಹೀಗಾಗಿ ಖಾತ್ರಿ ಕೆಲಸಕ್ಕೆ ಬಂದು ಜಮೀನುಗಳಲ್ಲಿ ಬದು ನಿರ್ಮಾಣ ಮಾಡುತ್ತಿದ್ದೇವೆ ಎಂದು ಪದವೀಧರರಾದ ಅಮೋಘ್ ಎಸ್. ಹಾಗೂ ಹರೀಶ ಗೌಡರ್ ತಿಳಿಸಿದ್ದಾರೆ.

    ತೋಟಗಾರಿಕೆ ಇಲಾಖೆ ಅಧಿಕಾರಿಗಳ ನಿರ್ಲಕ್ಷೃ: ನರೇಗಾ ಯೋಜನೆಯಡಿ ಜಿಲ್ಲೆಯ ಕೆರೆಗಳು, ಹಳ್ಳ ಮತ್ತು ಕಾಲುವೆಗಳ ಅಭಿವೃದ್ಧಿ ಹಾಗೂ ಬದು ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ. ಆದರೆ, ಸಣ್ಣ ಮತ್ತು ಅತಿ ಸಣ್ಣ ರೈತರು, ದ್ರಾಕ್ಷಿ, ದಾಳಿಂಬೆ ಹಾಗೂ ಬಾಳೆ ಬೆಳೆಗಾರರಿಗೆ ನರೇಗಾ ಯೋಜನೆಯಡಿ ತೋಟಗಾರಿಕೆ ಇಲಾಖೆ ಕೆಲಸ ನೀಡುತ್ತಿಲ್ಲ. ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಮೂಡಲಗಿ, ಅಥಣಿ ಹಾಗೂ ರಾಯಬಾಗ ತಾಲೂಕಿನ ಸಣ್ಣ ರೈತರು ಆರೋಪಿಸಿದ್ದಾರೆ.

    ಬೆಳಗಾವಿ ಜಿಪಂ ವ್ಯಾಪ್ತಿಯ ನರೇಗಾ ಯೋಜನೆಯಡಿ ನಿತ್ಯ 1.09 ಲಕ್ಷ ಕಾರ್ಮಿಕರು ದುಡಿಯುತ್ತಿದ್ದಾರೆ. ಲಾಕ್‌ಡೌನ್‌ನಿಂದಾಗಿ ನರೇಗಾ ಯೋಜನೆಗೆ ಹೆಚ್ಚಿನ ಬೇಡಿಕೆ ಬಂದಿದೆ. ಕಾರ್ಮಿಕರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ.
    |ಎಸ್.ಬಿ. ಮುಳ್ಳಳ್ಳಿ ಜಿಪಂ ಉಪಕಾರ್ಯದರ್ಶಿ (ಅಭಿವೃದ್ಧಿ)

    |ಮಂಜುನಾಥ ಕೋಳಿಗುಡ್ಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts