More

    ರೋಜರ್ ಫೆಡರರ್‌ಗೆ ಮತ್ತೊಮ್ಮೆ ಶಸ್ತ್ರಚಿಕಿತ್ಸೆ, ಮುಗಿಯಿತೇ ಟೆನಿಸ್ ಜೀವನ?

    ಬಸೆಲ್: ಸ್ವಿಜರ್ಲೆಂಡ್ ಟೆನಿಸ್ ದಿಗ್ಗಜ ರೋಜರ್ ಫೆಡರರ್ ಮೂರನೇ ಬಾರಿಗೆ ಬಲ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದು, ಕೆಲ ತಿಂಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ. ಇದರಿಂದಾಗಿ ಅವರು ಆಗಸ್ಟ್ 30ರಿಂದ ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಯುಎಸ್ ಓಪನ್ ಗ್ರಾಂಡ್ ಸ್ಲಾಂ ಟೂರ್ನಿಯಿಂದ ಹೊರಗುಳಿಯಲಿದ್ದಾರೆ. ಈ ಶಸಚಿಕಿತ್ಸೆಯಿಂದಾಗಿ 40 ವರ್ಷದ ಫೆಡರರ್ ಮರಳಿ ಟೆನಿಸ್ ಕೋರ್ಟ್‌ಗೆ ಇಳಿಯುವ ಸಾಧ್ಯತೆಯೂ ಕ್ಷೀಣವಾಗಿದೆ ಎಂದು ಹೇಳಲಾಗುತ್ತಿದೆ.

    ‘ನನ್ನ ಮೊಣಕಾಲಿನ ಬಗ್ಗೆ ವೈದ್ಯರ ಬಳಿ ಸಾಕಷ್ಟು ಪರೀಕ್ಷೆಗಳನ್ನು ನಡೆಸಿರುವೆ. ವಿಂಬಲ್ಡನ್ ಮತ್ತು ಗ್ರಾಸ್ ಕೋರ್ಟ್ ಋತುವಿನ ವೇಳೆ ನನ್ನ ಗಾಯದ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ ಎಂಬ ಮಾಹಿತಿ ದೊರೆತಿದೆ. ದುರದೃಷ್ಟಕರವೆಂದರೆ, ನಾನು ಶಸ್ತ್ರಚಿಕಿತ್ಸೆಗೆ ಒಳಗಾಗುವ ಅಗತ್ಯವಿದೆ ಎಂದವರು ತಿಳಿಸಿದ್ದಾರೆ ಮತ್ತು ನಾನು ಅದಕ್ಕೆ ಒಪ್ಪಿದ್ದೇನೆ. ಇದರಿಂದಾಗಿ ನನಗೆ ಕೆಲವಾರಗಳ ಮಟ್ಟಿಗೆ ನಡೆಯಲು ಊರುಗೋಲಿನ ಆಸರೆ ಬೇಕಾಗುತ್ತದೆ ಮತ್ತು ಕೆಲ ತಿಂಗಳ ಕಾಲ ನಾನು ಆಟದಿಂದ ದೂರ ಉಳಿಯಬೇಕಾಗುತ್ತದೆ’ ಎಂದು 20 ಗ್ರಾಂಡ್ ಸ್ಲಾಂ ಪ್ರಶಸ್ತಿಗಳ ಒಡೆಯ ಫೆಡರರ್ ಇನ್‌ಸ್ಟಾಗ್ರಾಂ ವಿಡಿಯೋದಲ್ಲಿ ತಿಳಿಸಿದ್ದಾರೆ.

    ಇದನ್ನೂ ಓದಿ:ನ್ನಡಿಗ ರಾಹುಲ್ ದ್ರಾವಿಡ್‌ಗೆ ವಿಶೇಷ ಕೃತಜ್ಞತೆ ಸಲ್ಲಿಸಿದ ಶ್ರೀಲಂಕಾ ಕ್ರಿಕೆಟ್

    ಶಸ್ತ್ರಚಿಕಿತ್ಸೆಯ ಬಳಿಕ ಫೆಡರರ್ ಟೆನಿಸ್ ಕೋರ್ಟ್‌ಗೆ ಮರಳದೆಯೂ ಇರುವ ಸಾಧ್ಯತೆ ಇದೆ. ಆದರೆ ಪುನಶ್ಚೇತನದ ಬಳಿಕ ಪುನರಾಗಮನ ಕಾಣುವುದೇ ತಮ್ಮ ಗುರಿಯಾಗಿರುತ್ತದೆ ಎಂದು ಫೆಡರರ್ ಹೇಳಿದ್ದಾರೆ.

    ‘ನಾನು ಆರೋಗ್ಯವಾಗಿರಲು ಬಯಸುತ್ತೇನೆ. ಮತ್ತೆ ಕೋರ್ಟ್‌ಗೆ ಇಳಿದು ಓಡಾಡಲು ಬಯಸಿದ್ದೇನೆ. ಉತ್ತಮ ಲಯ ಮತ್ತು ಕ್ಷಮತೆಯೊಂದಿಗೆ ಟೆನಿಸ್ ಟೂರ್ನಿಗಳಿಗೆ ಮರಳುವ ಭರವಸೆಯನ್ನೂ ಹೊಂದಿದ್ದೇನೆ. ಈ ವಯಸ್ಸಿನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಮರಳಿ ಕಣಕ್ಕಿಳಿಯುವುದು ಕಠಿಣ ಸವಾಲು. ಆದರೆ ಆ ಪ್ರಯತ್ನವನ್ನಂತೂ ನಾನು ನಡೆಸುತ್ತೇನೆ’ ಎಂದು ಫೆಡರರ್ ಹೇಳಿದ್ದಾರೆ.

    ಫೆಡರರ್ ಈ ಮುನ್ನ 2020ರ ಆಸ್ಟ್ರೇಲಿಯನ್ ಓಪನ್ ಬಳಿಕ ಫೆಬ್ರವರಿಯಲ್ಲಿ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿ ಸುಮಾರು 1 ವರ್ಷ ಕಾಲ ಆಟದಿಂದ ದೂರ ಉಳಿದಿದ್ದರು. ಈ ವರ್ಷ ಮೇನಲ್ಲಿ ಫ್ರೆಂಚ್ ಓಪನ್ ಮೂಲಕ ಅವರು ಮರಳಿ ಕಣಕ್ಕಿಳಿದಿದ್ದರು. ಆದರೆ 3ನೇ ಸುತ್ತಿನ ಬಳಿಕ ಫಿಟ್ನೆಸ್ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದರು. ಬಳಿಕ ವಿಂಬಲ್ಡನ್‌ನಲ್ಲಿ ಆಡಿದ್ದ ಅವರು ಕ್ವಾರ್ಟರ್​ಫೈನಲ್‌ನಲ್ಲಿ ಸೋತಿದ್ದರು. ಮೊಣಕಾಲು ನೋವಿನಿಂದಾಗಿ ಟೋಕಿಯೊ ಒಲಿಂಪಿಕ್ಸ್‌ನಿಂದಲೂ ಅವರು ಹೊರಗುಳಿದಿದ್ದರು.

    ಫೆಡರರ್ 2003ರಿಂದ 2010ರ ನಡುವೆ 16 ಗ್ರಾಂಡ್ ಸ್ಲಾಂ ಪ್ರಶಸ್ತಿ ಜಯಿಸುವ ಮೂಲಕ ಪ್ರಾಬಲ್ಯ ಸಾಧಿಸಿದ್ದರು. ಬಳಿಕ 2017ರಲ್ಲಿ ಆಸ್ಟ್ರೇಲಿಯನ್ ಓಪನ್ ಮತ್ತು ವಿಂಬಲ್ಡನ್ ಗೆದ್ದು ಹಿಂದಿನ ಲಯ ಪ್ರದರ್ಶಿಸಿದ್ದರು. 2018ರಲ್ಲಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಕೊನೆಯದಾಗಿ ಅವರು ಗ್ರಾಂಡ್ ಸ್ಲಾಂ ಪ್ರಶಸ್ತಿ ಜಯಿಸಿದ್ದರು. ಬಳಿಕ 2019ರ ವಿಂಬಲ್ಡನ್‌ನಲ್ಲಿ ಫೈನಲ್‌ಗೇರಿದ್ದರೂ, ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.

    ಧೋನಿ ನಿವೃತ್ತಿ ಹೊಂದಿದ ದಿನವೇ ವಿದಾಯ ಹೇಳಿದ್ದಕ್ಕೆ ಕಾರಣ ವಿವರಿಸಿದ ಸುರೇಶ್ ರೈನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts