More

    ಸಖತ್ ಟ್ರೋಲ್ ಆಗುತ್ತಿದೆ ಪಂಜಾಬ್ ಕಿಂಗ್ಸ್ ತಂಡದ ಹೊಸ ಜೆರ್ಸಿ!

    ನವದೆಹಲಿ: ಕನ್ನಡಿಗರಾದ ಕೆಎಲ್ ರಾಹುಲ್ ನಾಯಕತ್ವದ ಮತ್ತು ಕೋಚ್ ಅನಿಲ್ ಕುಂಬ್ಳೆ ಸಾರಥ್ಯದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಐಪಿಎಲ್ 14ನೇ ಆವೃತ್ತಿಗೆ ಪಂಜಾಬ್ ಕಿಂಗ್ಸ್ ತಂಡವಾಗಿ ಬದಲಾಗಿದೆ. ಇದರ ಬೆನ್ನಲ್ಲೇ ತಂಡದ ಜೆರ್ಸಿ ಕೂಡ ಬದಲಾಗಿದ್ದು, ಮಂಗಳವಾರವಷ್ಟೇ ಪಂಜಾಬ್ ಕಿಂಗ್ಸ್ ತಂಡದ ಹೊಸ ಜೆರ್ಸಿ ಅನಾವರಣಗೊಂಡಿದೆ. ಆದರೆ, ಬಾಲಿವುಡ್ ನಟಿ ಪ್ರೀತಿ ಝಿಂಟಾ ಸಹ-ಮಾಲೀಕತ್ವದ ತಂಡದ ಹೊಸ ಜೆರ್ಸಿ ಅಭಿಮಾನಿಗಳ ಹೃದಯ ಗೆಲ್ಲುವುದಕ್ಕೆ ಬದಲಾಗಿ ಭಾರಿ ಟ್ರೋಲ್‌ಗಳಿಗೆ ಒಳಗಾಗಿದೆ! ಇದಕ್ಕೆ ಕಾರಣವೇನೆಂದು ಗೊತ್ತೇ?

    ಪಂಜಾಬ್ ಕಿಂಗ್ಸ್ ತಂಡದ ಹೊಸ ಜೆರ್ಸಿ, 2009ರ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡ ಧರಿಸಿದ್ದ ಜೆರ್ಸಿ ಜತೆಗೆ ಸಾಕಷ್ಟು ಹೋಲಿಕೆಗಳನ್ನು ಹೊಂದಿರುವುದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ಇದರಿಂದಾಗಿ ಈ ಹೊಸ ಜೆರ್ಸಿಯನ್ನು ‘ಆರ್‌ಸಿಬಿ 2.0’ ಎಂದೇ ಅಭಿಮಾನಿಗಳು ಛೇಡಿಸಿದ್ದಾರೆ. ಆರ್‌ಸಿಬಿ ತಂಡಕ್ಕೆ ಆ ಸಮಯದಲ್ಲಿ ಅನಿಲ್ ಕುಂಬ್ಳೆ ಅವರೇ ನಾಯಕರಾಗಿದ್ದರು ಎಂಬುದು ಕೂಡ ಗಮನಾರ್ಹ. ಜೆರ್ಸಿಯಲ್ಲಿ ಭುಜದ ಮೇಲಿರುವ ಚಿನ್ನದ ಬಣ್ಣದ ಸ್ಟ್ರಿಪ್‌ಗಳು 2009ರ ಆರ್‌ಸಿಬಿ ಜೆರ್ಸಿಯನ್ನೇ ಬಹುತೇಕ ಹೋಲುತ್ತಿದೆ.

    ಇದನ್ನೂ ಓದಿ: ಐಪಿಎಲ್ 14ನೇ ಆವೃತ್ತಿಗೆ ಹೊಸ ನಿಯಮಗಳನ್ನು ಪ್ರಕಟಿಸಿದ ಬಿಸಿಸಿಐ

    ಪಂಜಾಬ್ ತಂಡದ ಹೊಸ ಜೆರ್ಸಿಯ ಕೆಂಪು ಬಣ್ಣ ಕೂಡ ಆರ್‌ಸಿಬಿ ತಂಡದ 2009ರ ಜೆರ್ಸಿಯನ್ನೇ ಹೋಲುತ್ತಿದೆ. ಆರ್‌ಸಿಬಿ ತಂಡದ ಹಳೆಯ ಜೆರ್ಸಿಯನ್ನು ಕಾಪಿ ಮಾಡಿರುವುದು ಸರಿಯಲ್ಲ. ಮೊದಲಿಗೆ ಆರ್‌ಸಿಬಿ ತಂಡದ ಆಟಗಾರರನ್ನು ಪಡೆದುಕೊಂಡರು. ಇದೀಗ ಆರ್‌ಸಿಬಿ ತಂಡದ ಜೆರ್ಸಿಯನ್ನು ಕೂಡ ಕದ್ದಿದ್ದಾರೆ ಎಂದು ಕೆಲ ಅಭಿಮಾನಿಗಳು, ಪಂಜಾಬ್ ಕಿಂಗ್ಸ್ ಟೀಮ್ ಮ್ಯಾನೇಜ್‌ಮೆಂಟ್ ವಿರುದ್ಧ ಕಿಡಿಕಾರಿದ್ದಾರೆ. ಹಾಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿ ಈ ಹಿಂದೆ ಆರ್‌ಸಿಬಿ ಪರ ಆಡಿದ್ದ 9 ಆಟಗಾರರಿದ್ದಾರೆ ಎಂಬುದು ಗಮನಾರ್ಹ.

    ಪಂಜಾಬ್ ಕಿಂಗ್ಸ್ ತಂಡಕ್ಕೆ ತನ್ನದೇ ಸ್ವಂತ ಜೆರ್ಸಿ ತಯಾರಿಸಲು ಸಾಧ್ಯವಾಗಲಿಲ್ಲವೇ? ಆರ್‌ಸಿಬಿ ಜೆರ್ಸಿಯನ್ನೇಕೆ ಕದ್ದಿರಿ ಎಂದು ಇನ್ನು ಕೆಲವರು ಪ್ರಶ್ನಿಸಿದ್ದಾರೆ. ಪಂಜಾಬ್ ತಂಡ ಈ ಬಾರಿ ತನ್ನ 5 ಲೀಗ್ ಪಂದ್ಯಗಳನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೇ ಆಡಲಿದೆ. ಹೀಗಾಗಿ ಆರ್‌ಸಿಬಿ ಅಭಿಮಾನಿಗಳು ತಮ್ಮ ತಂಡವನ್ನು ಮಿಸ್ ಮಾಡಿಕೊಳ್ಳದಿರಲಿ ಎಂದು ಪಂಜಾಬ್ ಕಿಂಗ್ಸ್ ತಂಡದ ಮಾಲೀಕರು ಹೀಗೆ ಮಾಡಿರಬಹುದು ಎಂದೂ ಕೆಲವರು ಕಾಲೆಳೆದಿದ್ದಾರೆ.

    ಪಂಜಾಬ್ ಕಿಂಗ್ಸ್ ತಂಡ ಏಪ್ರಿಲ್ 12ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದ್ದು, ಸಾಕಷ್ಟು ಹೊಸ ಆಟಗಾರರನ್ನು ಕೆಎಲ್ ರಾಹುಲ್ ಬಳಗ ಈ ಬಾರಿ ಹೊಂದಿದೆ.

    ಕ್ರೀಡೆಯಲ್ಲೂ ಮಿಂಚುತ್ತಿದ್ದಾರೆ ಈ ಗ್ಲಾಮರ್ ನಟಿ, ಸರ್ಫಿಂಗ್‌ನಲ್ಲಿ ಚಿನ್ನದ ಪದಕ ಸಾಧನೆ!

    VIDEO: ಜೆರ್ಸಿಯಲ್ಲೂ ಬದಲಾವಣೆ ಮಾಡಿಕೊಂಡ ಪಂಜಾಬ್ ಕಿಂಗ್ಸ್

    ಬಯೋಬಬಲ್‌ನಲ್ಲಿ ಭಾರತ ಬಲಿಷ್ಠ; ವಿಂಡೀಸ್, ಆಸೀಸ್ ಪ್ರಾಬಲ್ಯ ನೆನಪಿಸಿದ ಕೊಹ್ಲಿ ಪಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts