More

    ಐಪಿಎಲ್ 14ನೇ ಆವೃತ್ತಿಗೆ ಹೊಸ ನಿಯಮಗಳನ್ನು ಪ್ರಕಟಿಸಿದ ಬಿಸಿಸಿಐ

    ನವದೆಹಲಿ: ಐಪಿಎಲ್ 14ನೇ ಆವೃತ್ತಿಗೆ ಬಿಸಿಸಿಐ, ಟೂರ್ನಿಯ ನಿಯಮಗಳಲ್ಲಿ ಕೆಲ ಮಹತ್ವದ ಬದಲಾವಣೆಗಳನ್ನು ತಂದಿದೆ. ಈ ಹಿಂದೆ ವಿವಾದಕ್ಕೆ ಗ್ರಾಸವಾಗಿದ್ದ ಕೆಲ ನಿಯಮಗಳಲ್ಲಿ ತಿದ್ದುಪಡಿಯನ್ನೂ ತಂದಿರುವ ಬಿಸಿಸಿಐ, ಟೂರ್ನಿಯ ವೇಳೆ ಸಮಯ ಮತ್ತು ಶಿಸ್ತುಪಾಲನೆ ಮತ್ತು ಅಂಪೈರ್ ತೀರ್ಪುಗಳಲ್ಲಿ ನಿಖರತೆಯನ್ನೂ ತರಲು ಈ ಬದಲಾವಣೆಗಳನ್ನು ಜಾರಿಗೊಳಿಸಿದೆ.

    ಐಪಿಎಲ್ ಇನಿಂಗ್ಸ್‌ಗೆ 90 ನಿಮಿಷಗಳ ಮಿತಿ
    ಟೂರ್ನಿಯ ವೇಳೆ ಪ್ರತಿ ತಂಡಕ್ಕೆ 90 ನಿಮಿಷಗಳ ಒಳಗಾಗಿ 20 ಓವರ್‌ಗಳ ಇನಿಂಗ್ಸ್ ಮುಗಿಸಲು ಬಿಸಿಸಿಐ ಪರಿಷ್ಕೃತ ನಿಯಮಾವಳಿಯಲ್ಲಿ ಸೂಚಿಸಿದೆ. ಈ ಮುನ್ನ 90ನೇ ನಿಮಿಷದ ವೇಳೆ 20ನೇ ಓವರ್ ಆರಂಭಗೊಂಡರೆ ದಂಡ ಶಿಕ್ಷೆಯಿಂದ ಪರಾಗಬಹುದಿತ್ತು. ಆದರೆ ಈ ಬಾರಿ 90 ನಿಮಿಷಗಳಲ್ಲಿ 20 ಓವರ್ ಪೂರ್ಣಗೊಳ್ಳಬೇಕು ಎಂಬ ಸಮಯಮಿತಿಯನ್ನು ನೀಡಲಾಗಿದೆ. ಐಪಿಎಲ್ ಪಂದ್ಯಗಳಲ್ಲಿ ಪ್ರತಿ ಗಂಟೆಗೆ 14.11 ಓವರ್‌ನಂತೆ ಓವರ್‌ಧಾರಣೆ ನಿಗದಿಪಡಿಸಲಾಗಿದೆ. ಇದು ಟೈಮ್‌ಔಟ್ ಹೊರತಾದ ಸಮಯವಾಗಿರುತ್ತದೆ. ಇದರನ್ವಯ, ಯಾವುದೇ ಅಡಚಣೆಗಳಿಗೆ ಒಳಗಾಗದ ಪಂದ್ಯದಲ್ಲಿ 5 ನಿಮಿಷಗಳ ಸಟ್ಯೆಾಟಜಿಕ್ ಟೈಮ್‌ಔಟ್ ಒಳಗೊಂಡಂತೆ 90 ನಿಮಿಷಗಳಲ್ಲೇ 20 ಓವರ್ ಪೂರ್ಣಗೊಳ್ಳಬೇಕು. ಇನ್ನು ತಡವಾದ ಮತ್ತು ಅಡಚಣೆಗೊಳಗಾದ ಪಂದ್ಯಗಳಲ್ಲಿ ಪ್ರತಿ ಓವರ್‌ಗೆ ಗರಿಷ್ಠ 4 ನಿಮಿಷ, 15 ಸೆಕೆಂಡ್‌ಗಳ ಮಿತಿಯನ್ನು ವಿಧಿಸಲಾಗಿದೆ. ಈ ಬಾರಿ ಓವರ್‌ಗತಿಯ ಮೇಲೆ ಕಣ್ಣಿಡುವ ಹೊಣೆಯನ್ನು 4ನೇ ಅಂಪೈರ್‌ಗೆ ನೀಡಲಾಗಿದೆ. ಇನಿಂಗ್ಸ್ ವೇಳೆ ಸಮಯವ್ಯರ್ಥ ಕಂಡುಬಂದಾಗ ತಂಡಗಳನ್ನು ಎಚ್ಚರಿಸುವ ಜವಾಬ್ದಾರಿಯನ್ನು 4ನೇ ಅಂಪೈರ್ ನಿಭಾಯಿಸಬೇಕಾಗಿದೆ. ತಂಡವೊಂದು ಮೊದಲ ಬಾರಿ ನಿಧಾನಗತಿ ಓವರ್ ತಪ್ಪೆಸಗಿದಾಗ ನಾಯಕನಿಗೆ 12 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. 2ನೇ ಬಾರಿ ನಾಯಕನಿಗೆ 24 ಲಕ್ಷ ರೂ. ಮತ್ತು ಇತರ ಆಟಗಾರರಿಗೆ ತಲಾ 6 ಲಕ್ಷ ರೂ. ದಂಡ ವಿಧಿಸಲಾಗುವುದು. 3ನೇ ಬಾರಿ ತಂಡದ ನಾಯಕನಿಗೆ 30 ಲಕ್ಷ ರೂ. ದಂಡದ ಜತೆಗೆ ಮುಂದಿನ ಲೀಗ್ ಪಂದ್ಯದಿಂದ ನಿಷೇಧ ಎದುರಾಗಲಿದೆ. ಅಲ್ಲದೆ ತಂಡದ ಇತರ ಆಟಗಾರರಿಗೆ ತಲಾ 12 ಲಕ್ಷ ರೂ. ದಂಡ ವಿಧಿಸಲಾಗುವುದು.

    ಇದನ್ನೂ ಓದಿ: ಕ್ರೀಡೆಯಲ್ಲೂ ಮಿಂಚುತ್ತಿದ್ದಾರೆ ಈ ಗ್ಲಾಮರ್ ನಟಿ, ಸರ್ಫಿಂಗ್‌ನಲ್ಲಿ ಚಿನ್ನದ ಪದಕ ಸಾಧನೆ!

    ಸಾಫ್ಟ್​ ಸಿಗ್ನಲ್ ರದ್ದು
    ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಮೈದಾನದ ಅಂಪೈರ್‌ಗಳ ‘ಸಾಫ್ಟ್​ ಸಿಗ್ನಲ್’ ಸಾಕಷ್ಟು ವಿವಾದಕ್ಕೆ ಗ್ರಾಸವಾಗಿತ್ತು. ಈ ನಿಯಮದ ಬಗ್ಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಅಸಮಾಧಾನವನ್ನೂ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಇದೀಗ, ಮುಂಬರುವ ಐಪಿಎಲ್ ಟೂರ್ನಿಯಿಂದ ‘ಸಾಫ್ಟ್​ ಸಿಗ್ನಲ್’ಅನ್ನು ಕೈಬಿಡಲಾಗಿದೆ. ಮೈದಾನದ ಅಂಪೈರ್‌ಗೆ ತೀರ್ಪಿನ ಬಗ್ಗೆ ಅನುಮಾನಗಳಿದ್ದಾಗ ತೃತೀಯ ಅಂಪೈರ್ ಅಭಿಪ್ರಾಯ ಕೇಳುವ ವೇಳೆ ತನ್ನ ನಿರ್ಧಾರವೇನೆಂದು ತಿಳಿಸುವುದನ್ನು ‘ಸಾಫ್ಟ್​ ಸಿಗ್ನಲ್’ ಎನ್ನುತ್ತಾರೆ. ತೃತೀಯ ಅಂಪೈರ್‌ಗೆ ವಿಡಿಯೋ ಮರುಪ್ರಸಾರದಲ್ಲಿ ಸ್ಪಷ್ಟತೆ ಸಿಗದಿದ್ದಾಗ ಈ ‘ಸಾಫ್ಟ್​ ಸಿಗ್ನಲ್’ ತೀರ್ಪು ಹಾಗೆಯೇ ಉಳಿದುಕೊಳ್ಳುತ್ತದೆ. ಆದರೆ ಐಪಿಎಲ್‌ನಲ್ಲಿ ಮೈದಾನದ ಅಂಪೈರ್ ‘ಸಾಫ್ಟ್​ ಸಿಗ್ನಲ್’ ನೀಡುವುದನ್ನೇ ಕೈಬಿಡಲಾಗಿದೆ. ಇದರಿಂದ ತೃತೀಯ ಅಂಪೈರ್‌ಗೆ ತಾನೇ ಸ್ವತಂತ್ರವಾಗಿ ತೀರ್ಪು ನೀಡಲು ಸಾಧ್ಯವಾಗಲಿದೆ.

    ಶಾರ್ಟ್ ರನ್ ನಿಯಮ ತಿದ್ದುಪಡಿ
    ‘ಶಾರ್ಟ್ ರನ್’ ನಿಯಮದಲ್ಲೂ ಬಿಸಿಸಿಐ ಬದಲಾವಣೆ ತಂದಿದೆ. ಕಳೆದ ವರ್ಷ ಪಂಜಾಬ್ ಮತ್ತು ಡೆಲ್ಲಿ ನಡುವಿನ ಪಂದ್ಯದ ವೇಳೆ ಮೈದಾನದ ಅಂಪೈರ್ ನೀಡಿದ್ದ ‘ಶಾರ್ಟ್ ರನ್’ ತೀರ್ಪು ಸಾಕಷ್ಟು ವಿವಾದಕ್ಕೆ ಗ್ರಾಸವಾಗಿತ್ತು. ಪಂಜಾಬ್ ಬ್ಯಾಟ್ಸ್‌ಮನ್‌ಗಳು 2 ರನ್ ಓಡಿದ್ದರೂ ಅಂಪೈರ್ ‘ಶಾರ್ಟ್ ರನ್’ ಎಂದು ಹೇಳಿ 1 ರನ್ ಮಾತ್ರ ನೀಡಿದ್ದರು. ಆದರೆ ಮರುಪ್ರಸಾರದಲ್ಲಿ ಬ್ಯಾಟ್ ಕ್ರೀಸ್‌ನ ಒಳಗಿದ್ದುದು ಕಂಡುಬಂದಿತ್ತು. ಕೊನೆಗೆ ಪಂಜಾಬ್ ತಂಡ ಈ 1 ರನ್‌ನಿಂದಾಗಿಯೇ ಸೋಲು ಕಂಡಿತ್ತು. ಅಂದರೆ ಪಂದ್ಯದಲ್ಲಿ ಟೈಗೆ ತೃಪ್ತಿಪಟ್ಟು ಬಳಿಕ ಸೂಪರ್ ಓವರ್‌ನಲ್ಲಿ ಸೋತಿತ್ತು. ಹೀಗಾಗಿ ಈ ಬಾರಿ ಮೈದಾನದ ಅಂಪೈರ್ ‘ಶಾರ್ಟ್ ರನ್’ ಎಂದು ತಪ್ಪಾಗಿ ತೀರ್ಪು ನೀಡಿದರೂ, ತೃತೀಯ ಅಂಪೈರ್‌ಗೆ ಮಧ್ಯ ಪ್ರವೇಶಿಸಿ ಆ ತೀರ್ಪು ಸರಿಪಡಿಸುವ ಅಧಿಕಾರ ನೀಡಲಾಗಿದೆ. ಇದಲ್ಲದೆ ಮೈದಾನದ ಅಂಪೈರ್ ನೀಡಿದ ನೋಬಾಲ್ ತೀರ್ಪನ್ನು ಬದಲಾಯಿಸುವ ಅಧಿಕಾರವನ್ನೂ ತೃತೀಯ ಅಂಪೈರ್‌ಗೆ ನೀಡಲಾಗಿದೆ.

    ಈ ಸಲ ಆರ್‌ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿಗೆ ಹೊಸ ಬ್ಯಾಟಿಂಗ್ ಕ್ರಮಾಂಕ!

    ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ನೂತನ ಸಾರಥಿ ನೇಮಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts