More

    ಮುಂದುವರಿದ ಜಾನುವಾರುಗಳ ಮರಣ

    ಗುಂಡ್ಲುಪೇಟೆ: ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಜಾನುವಾರುಗಳ ಮರಣಮೃದಂಗ ಮುಂದುವರಿದಿರುವುದು ಸ್ಥಳೀಯರ ಆತಂಕವನ್ನು ಹೆಚ್ಚಿಸಿದೆ.

    ಪಶುಸಂಗೋಪನಾ ಇಲಾಖೆ ಸಚಿವರು ಉಸ್ತುವಾರಿ ಸಚಿವರಾಗಿರುವ ಜಿಲ್ಲೆಯಲ್ಲಿಯೇ ಜಾನುವಾರುಗಳು ಹಸಿವಿನಿಂದ ಬಳಲಿ ಸಾಯುತ್ತಿವೆ. ಆದರೆ, ಜಿಲ್ಲಾಡಳಿತ ಮಾತ್ರ ಯಾವುದೇ ಕ್ರಮವಹಿಸದೇ ಕಣ್ಮುಚ್ಚಿ ಕುಳಿತಿದೆ. ಇದುವರೆಗೂ 300ಕ್ಕೂ ಹೆಚ್ಚು ಜಾನುವಾರುಗಳು ಸಾವಿಗೀಡಾಗಿವೆ. ಇವುಗಳಲ್ಲಿ ಹಾಲು ಕೊಡುತ್ತಿದ್ದ ಅರ್ಧಕ್ಕೂ ಹೆಚ್ಚಿನ ಹಸುಗಳು ಕಾಡಂಚಿನ ಗ್ರಾಮಗಳಿಗೆ ಸೇರಿದ್ದಾಗಿವೆ.

    ಕಳೆದ ಕೆಲವು ದಿನಗಳಿಂದ ಬಂಡೀಪುರದ ಕಾಡಂಚಿನ ಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಡು ಮೇವು, ಕಟ್ಟೆನೀರು ಕುಡಿದು ಬದುಕುತ್ತಿದ್ದ ಜಾನುವಾರುಗಳು ಆಹಾರದ ಕೊರತೆಯಿಂದ ಸಾವಿಗೀಡಾಗುತ್ತಿವೆ. ಕೆರೆಕಟ್ಟೆಗಳು ಬತ್ತಿಹೋಗಿದ್ದು ಕುಡಿಯುವ ನೀರಿಗಾಗಿ ಗ್ರಾಮ ಪಂಚಾಯಿತಿಗಳು ಕಟ್ಟಿಸಿರುವ ನೀರಿನ ತೊಟ್ಟಿಯನ್ನೇ ಅವಲಂಬಿಸುವಂತಾಗಿದೆ. ಗೋಮಾಳಗಳು, ಬೆಟ್ಟಗುಡ್ಡಗಳಲ್ಲಿ ಸಮೃದ್ಧ್ದವಾಗಿ ಮೇದು ಆರೋಗ್ಯವಾಗಿದ್ದ ಹಸುಗಳು ಮೇವಿನ ಕೊರತೆಯಿಂದ ನಿತ್ರಾಣವಾಗುತ್ತಿವೆ. ಕೆರೆಗಳಲ್ಲಿ ನೀರು ಬರಿದಾಗಿದ್ದರಿಂದ ಬಿಸಿಲ ತಾಪ ತಾಳಲಾರದೆ ಎಮ್ಮೆಗಳು, ಹಸುಗಳು ಮೇವಿನ ಕೊರತೆಯಿಂದ ಸಾವಿಗೀಡಾಗಿವೆ.

    ಮೇವು ಸಾಗಣೆ ದುಬಾರಿ:
    ಇತ್ತೀಚೆಗೆ ಪಟ್ಟಣದ ಎಪಿಎಂಸಿ ಆವರಣದಲ್ಲಿ ಪಶುಪಾಲನಾ ಇಲಾಖೆಯು ಮೇವು ಕೇಂದ್ರ ತೆರೆದು ಜಾನುವಾರುಗಳಿಗೆ ಮೇವು ಮಾರಾಟ ಮಾಡುತ್ತಿದೆ. ಆದರೆ ಅಲ್ಲಿ ಖರೀದಿಸಿದ ಮೇವನ್ನು ಗ್ರಾಮಗಳಿಗೆ ಸಾಗಣೆ ಮಾಡಲು ಆಟೋಗಳಿಗೆ ಸಾವಿರಾರು ರೂ. ಬಾಡಿಗೆ ನೀಡಬೇಕಾಗಿದೆ. ಇದು ತುಂಬಾ ದುಬಾರಿಯಾಗಿ ಪರಿಣಮಿಸಿದ್ದರಿಂದ ಈ ಭಾಗದ ರೈತರು ಮೇವು ಖರೀದಿಗೆ ಹಿಂಜರಿಯುತ್ತಿದ್ದಾರೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿತರಣೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.

    ನಿತ್ರಾಣ ಹಸುಗಳಿಗೆ ಆರೈಕೆ:
    ಮೇವಿನ ಕೊರತೆಯಿಂದ ನಿತ್ರಾಣವಾದ ರಾಸುಗಳು ಆಹಾರ ಮತ್ತು ನೀರನ್ನು ಸೇವಿಸುವುದನ್ನು ಬಿಡುತ್ತವೆ. ಇವುಗಳಿಗೆ ಮನೆಗಳಲ್ಲಿ ಅಂಬಲಿ ಗಂಜಿ ತಯಾರಿಸಿ ಬಿದಿರಿನ ಕೊಟ್ಟೆಯಲ್ಲಿ ತುಂಬಿಸಿ ಬಲವಂತವಾಗಿ ಕುಡಿಸುತ್ತಿದ್ದಾರೆ. ನಾಲ್ಕು ಜನ ಸೇರಿ ಮಲಗಿದ ರಾಸನ್ನು ಮೇಲೆತ್ತಿ ನಿಲ್ಲಿಸಿದರೂ ಒಮ್ಮೊಮ್ಮೆ ಹಸುಗಳು ಚೇತರಿಸಿಕೊಳ್ಳುವುದಿಲ್ಲ. ಇದು ಜಾನುವಾರು ಮಾಲೀಕರನ್ನು ತೀವ್ರ ಹತಾಶೆಗೆ ದೂಡಿದೆ. ಕಳೆದ ಹತ್ತು ದಿನಗಳಿಂದ ಕಣಿಯನಪುರದ ಮಾದೇಶ್ ಎಂಬುವರ ಮನೆಯಲ್ಲಿ ಪ್ರತಿ ದಿನ ನಾಲ್ಕು ಲೀಟರ್ ಹಾಲು ಕೊಡುತ್ತಿದ್ದ ಎರಡು ಹಸುಗಳು ಸೇರಿ ಒಟ್ಟು 9 ರಾಸುಗಳು ಮರಣ ಹೊಂದಿವೆ. ಇದರಿಂದ ಕುಟುಂಬದ ಜೀವನೋಪಾಯಕ್ಕೆ ಆಧಾರವಿಲ್ಲದಂತಾಗಿದೆ ಎಂದು ನೋವು ತೋಡಿಕೊಂಡರು.

    ಆಸ್ಪತ್ರೆಯಿದ್ದರೂ ಉಪಯೋಗವಿಲ್ಲ:
    ಮಂಗಲ ಗ್ರಾಮಪಂಚಾಯಿತಿ ವ್ಯಾಪ್ತಿಯ ಜಕ್ಕಳ್ಳಿ ಗ್ರಾಮದಲ್ಲಿ ಪಶುಪಾಲನಾ ಇಲಾಖೆಯ ಆಸ್ಪತ್ರೆಯಿದ್ದರೂ ಅಲ್ಲಿಗೆ ವೈದ್ಯರಿಲ್ಲದೆ ಗ್ರೂಪ್ ಡಿ ನೌಕರ ರಾಸುಗಳಿಗೆ ಚಿಕಿತ್ಸೆ ನೀಡುವಂತಾಗಿದೆ. ನಿತ್ರಾಣಗೊಂಡ ರಾಸುಗಳಿಗೆ ಮನೆಗಳಲ್ಲಿ ಬೆಲ್ಲದ ನೀರು ಕುಡಿಸಿ ನಂತರ ಆಸ್ಪತ್ರೆಗೆ ಕರೆದೊಯ್ದು ಹಸುಗಳಿಗೆ ಗ್ಲೂಕೋಸ್ ಕಟ್ಟಿ ಸುಧಾರಿಸುವಂತೆ ಮಾಡಬೇಕಾಗಿದ್ದರೂ ಸಿಬ್ಬಂದಿಯ ಕೊರತೆಯಿಂದ ಇದು ಸಾಧ್ಯವಾಗುತ್ತಿಲ್ಲ.

    ರೋಗನಿರೋಧಕ ಶಕ್ತಿ ಹೆಚ್ಚಾಗಿರುವ ನಾಟಿ ಹಸುಗಳು:
    ಕಾಡು ಮೇವು ಕಟ್ಟೆನೀರು ಕುಡಿದು ಬದುಕುವ ನಾಟಿ ಹಸುಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ. ಇವು ಭಾರತೀಯ ಪರಿಸರ, ಹವಾಮಾನ ಗುಣಕ್ಕೆ ಹೊಂದಿಕೊಳ್ಳುವುದರಿಂದ ಇವುಗಳ ನಿರ್ವಹಣೆ ಸುಲಭವಾಗುತ್ತದೆ. ಇಂಡಿ- ಬೂಸಾ ಮುಂತಾದ ಕೃತಕ ಪೌಷ್ಟಿಕ ಆಹಾರ ಬದಲು ನೈಸರ್ಗಿಕವಾಗಿ ಬೆಳೆದ ಹುಲ್ಲು ತಿನ್ನುವ ನಾಟಿಹಸುಗಳು ಚುರುಕು ಬುದ್ಧಿಯಿಂದ ಕೂಡಿದ್ದು, ಶ್ರೇಷ್ಠ ಗುಣಮಟ್ಟದ ಹಾಲು ನೀಡುತ್ತವೆ. ಈ ಹಾಲು ಸತ್ವಯುತವಾಗಿರುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ಇವುಗಳ ಸಗಣಿಯಲ್ಲಿ ರಿಪೆಲ್ಲೆಂಟ್ ಎಂಬ ಅಂಶವಿದ್ದು ಅದು ಸೊಳ್ಳೆಗಳು ಬಾರದಂತೆ ತಡೆಯುತ್ತದೆ. ನಾಟಿ ಹಸುಗಳು ಆಹಾರ ಸಿಗದೆ ಸೊರಗಿದ್ದರೂ ಮತ್ತೆ ಆಹಾರ ದೊರಕಿದ ನಂತರ ಸುಧಾರಣೆಯಾಗುತ್ತವೆ. ಆದರೆ, ಇತ್ತೀಚೆಗೆ ಮೇವಿನ ಕೊರತೆಯಿಂದ ಸಂಪೂರ್ಣ ನಿತ್ರಾಣವಾಗುತ್ತಿದ್ದು, ಎಲ್ಲ ರಾಸುಗಳ ಮೈಯಲ್ಲಿಯೂ ಎಲುಬುಗೂಡುಗಳು ಕಾಣುತ್ತಿವೆ.

    ವನ್ಯಜೀವಿಗಳ ದಾಳಿಯಿಂದ ಕಾಡಂಚಿನ ಗ್ರಾಮಗಳ ಜಮೀನುಗಳಲ್ಲಿ ಯಾವುದೇ ಬೆಳೆಗಳನ್ನು ಬೆಳೆಯಲಾಗುತ್ತಿಲ್ಲ. ಇದರಿಂದ ರೈತರು ರೆಸಾರ್ಟ್‌ಗಳಿಗೆ ಕೆಲಸಕ್ಕೆ ಹೋಗುತ್ತಿದ್ದಾರೆ. ರೈತರ ಜಮೀನುಗಳನ್ನು ಗುತ್ತಿಗೆ ಪಡೆಯುವ ನೆರೆರಾಜ್ಯದ ಉದ್ಯಮಿಗಳು ಅಲ್ಲಿ ಶುಂಠಿ ಮುಂತಾದ ಬೆಳೆಗಳನ್ನು ಬೆಳೆಯುವುದರಿಂದ ಜಾನುವಾರುಗಳಿಗೆ ಅಗತ್ಯವಾದ ಮೇವಿನ ಉತ್ಪಾದನೆಯಾಗುತ್ತಿಲ್ಲ.
    ಅನಂದ್, ಮಂಗಲ ಗ್ರಾಮಸ್ಥ

    ಪಟ್ಟಣದ ಎಪಿಎಂಸಿ ಆವರಣದಲ್ಲಿ ಜಿಲ್ಲಾಡಳಿತ ಆರಂಭಿಸಿರುವ ಮೇವು ವಿತರಣಾ ಕೇಂದ್ರದಲ್ಲಿ ನೋಂದಾಯಿತ ರೈತರ ಜಾನುವಾರುಗಳಿಗೆ ಮಾತ್ರ ಮೇವು ನೀಡಲಾಗುತ್ತಿದೆ. ಇತ್ತೀಚೆಗೆ ಮಳೆ ಬಿದ್ದಿರುವುದರಿಂದ ಮೇವಿನ ಕೊರತೆ ನೀಗಲಿದೆ. ಜಾನುವಾರು ಸಾವಿಗೆ ರೈತರಿಗೆ ಪರಿಹಾರ ನೀಡಲಾಗುವುದು.
    ಡಾ.ಮೋಹನ್‌ಕುಮಾರ್, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts