More

    ತರಕಾರಿ ಬೇಸಾಯದಲ್ಲೇ ಲಕ್ಷ ಲಕ್ಷ ಸಂಪಾದಿಸುತ್ತಿರುವ ಮಾಜಿ ಯೋಧ!

    ಕಾರವಾರ: ಇತ್ತೀಚಿನ ದಿನಗಳಲ್ಲಿ ಕೃಷಿ ಅಂದ್ರೆ ಸಾಗುವಳಿ ಸಮಸ್ಯೆ, ಸಾಲದ ಬಾಧೆ ಅಂತ ಕೃಷಿಯಿಂದ ವಿಮುಖರಾಗುತ್ತಿರುವವರ ಸಂಖ್ಯೆಯೆ ಹೆಚ್ಚಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ ನೌಕರಿ ಮಾಡಿದ ಮಂದಿ ಕೂಡ ನಿವೃತ್ತಿ ಹೊಂದಿದ ಬಳಿಕ ಆರಾಮಾಗಿ ಇರಲು ಬಯಸುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಸ್ವಯಂ ನಿವೃತ್ತಿ ಪಡೆದು ಊರಿಗೆ ಬಂದ ಮೇಲೆ ಮಾದರಿ ಕೃಷಿ ಮಾಡ್ತಿದ್ದಾರೆ. ಇವರು ಅಪ್ಪಟ ಮಣ್ಣಿನ ಮಗನಾಗಿ ರೂಪುಗೊಂಡಿದ್ದಾರೆ.

    ಯೌವನದಲ್ಲಿ ಗಡಿ ಮಧ್ಯೆ ನಿಂತು ಹೋರಾಡಿದ ಯೋಧರು ನಿವೃತ್ತರಾದ ಬಳಿಕ ಕೃಷಿ ಕಾಯಕ ಮಾಡೋರು ಬಹಳ ಕಡಿಮೆ. ಆದ್ರೆ ಇವರು ಎಲ್ಲರಿಗಿಂತ ಭಿನ್ನ. ಹೆಸರು ಅಚ್ಯುತ್ ನಾಗಪ್ಪ ನಾಯ್ಕ. ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಡೀನ ಗ್ರಾಮದವರು. ಬಡ ಕುಟುಂಬದಲ್ಲಿ ಜನಿಸಿದ ಅಚ್ಯುತ್ ನಾಯ್ಕ ಐದು ವರ್ಷಗಳ ಹಿಂದೆ ಗಡಿ ಭದ್ರತಾ ಪಡೆಯಲ್ಲಿ ಯೋಧನಾಗಿ ಸೇವೆ ಸಲ್ಲಿಸಿದವರು. ಇದೀಗ ತಮ್ಮ ಊರಿನ ಆಸುಪಾಸಿನಲ್ಲಿ ಬಂಗಾರದಂಥ ಬೆಳೆ ಬೆಳೆದು ಎಲ್ಲರ ಗಮನ ಸೆಳೆಯುತ್ತಿದ್ದಾರೆ.

    ಅಚ್ಯುತ್ ನಾಯ್ಕ ಗ್ರಾಮದ ರೈತಾಪಿ ಕುಟುಂಬದವರು. ತಮ್ಮ ಪಿಯುಸಿ ಶಿಕ್ಷಣವನ್ನು 1992ರಲ್ಲಿ ಧರ್ಮಸ್ಥಳದ ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಮುಗಿಸಿದ್ದಾರೆ. ನಂತರ ತಾತ್ಕಾಲಿಕ ಕೆಲಸ ಅಂತ ಭಟ್ಕಳದ ಸೂಸಗಡಿಯ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಪತ್ರಿಕೆಯೊಂದರಲ್ಲಿ ಗಡಿಭದ್ರತಾ ಪಡೆಯಲ್ಲಿ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಿರುವ ಸುದ್ದಿ ನೋಡಿದ್ದರು. ದೇಶಸೇವೆ ಮಾಡಬೇಕೆಂಬ ಆಸೆಯಿಂದ ಶಿವಮೊಗ್ಗದಲ್ಲಿ ನಡೆಯುವ ಗಡಿಭದ್ರತಾ ಪಡೆಯ ನೇರ ನೇಮಕಾತಿ ಆಯ್ಕೆ ಪ್ರಕ್ರಿಯೆಗೆ ಹೋಗಿ ಬರುವ ಮನಸ್ಸಾಯಿತು. 1994ರಲ್ಲಿ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿ ಆಯ್ಕೆ ಕೂಡ ಆದರು. ಆಯ್ಕೆಯಾದ ಬಳಿಕ ಬೆಂಗಳೂರಿಗೆ ತೆರಳಬೇಕಾಯಿತು. ನಂತರ ಕೆಲ ಕಾಲ ಕಾಶ್ಮಿರದಲ್ಲಿ ಭದ್ರತಾ ಪಡೆಯ ತರಬೇತಿ ಮುಗಿಸಿದರು. ಒಟ್ಟು 23 ವರ್ಷಗಳ ಕಾಲ ಗಡಿಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸಿದ್ದಾರೆ.

    ಗಡಿಭದ್ರತಾ ಪಡೆ ಅಂದ್ರೆ ದೇಶದ ಗಡಿಭಾಗದಲ್ಲಿ ಹದ್ದಿನ ಕಣ್ಣಿಟ್ಟು ಕಾಯಬೇಕು. ಶತ್ರು ಪಡೆಗಳು ಮುನ್ನುಗ್ಗದಂತೆ ಜಾಗ್ರತೆ ವಹಿಸಬೇಕು. ಭಾರತದ ಗಡಿ ಭಾಗಗಳಾದ ಪಾಕಿಸ್ತಾನ, ಬಾಂಗ್ಲಾ, ಬರ್ಮಾ ದೇಶದ ಗಡಿಯಲ್ಲಿ ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ದೇಶದ ಗಡಿಭಾಗವಾದ ರಾಜಸ್ತಾನ, ಅಸ್ಸಾಂ, ಪಶ್ಚಿಮ ಬಂಗಾಳ, ಪಂಜಾಬ್ನಲ್ಲೂ ಸೇವೆ ಸಲ್ಲಿಸಿದ್ದಾರೆ. ಈ ಮಧ್ಯೆ ವಾಘಾ ಗಡಿಯ ಆಟಾರಿಯಲ್ಲಿ ಬಾಂಬ್ ಸ್ಕ್ವಾಡ್ ಆಗಿ ಕಮಾಂಡರ್ ಅಡಿಯಲ್ಲಿ ಕೆಲಸ ಮಾಡಿದ್ದರು. ಒಟ್ಟು 23 ವರ್ಷಗಳ ಕಾಲ ಬಿಎಸ್‌ಎಫ್‌ನಲ್ಲಿ ಸೇವೆ ಸಲ್ಲಿಸಿದ್ದಾರೆ.

    ಕೃಷಿ ಕಾಯಕಕ್ಕೆ ಪತ್ನಿಯ ಸಾಥ್: 2017ರಲ್ಲಿ ಸ್ವಯಂ ನಿವೃತ್ತಿ ಪಡೆದು ಊರಿಗೆ ಬಂದ ಅಚ್ಯುತ್ ನಾಯ್ಕ ಗಡಿ ಸೇವೆ ಸಾಕೆಂದು ಮನೆಯಲ್ಲಿ ಖಾಲಿ ಕುಳಿತುಕೊಳ್ಳಲಿಲ್ಲ. ಬದಲಾಗಿ ತಮ್ಮ ತಂದೆಯವರು ಮಾಡುತ್ತಿದ್ದ ಕೃಷಿಯನ್ನು ಶುರು ಮಾಡಿದ್ರು. ಆರಂಭದಲ್ಲಿ ಮನೆಯ ಪಕ್ಕದಲ್ಲಿಯೇ ಮಲ್ಲಿಗೆಯನ್ನ ಬೆಳೆಯಲು ಶುರು ಮಾಡಿದ್ರು. ಮಲ್ಲಿಗೆ ಕೃಷಿಯಿಂದ ಕೊಂಚ ಆದಾಯ ಬರಲು ಆರಂಭವಾಯಿತು. ಇನ್ನಷ್ಟು ಆದಾಯ ಪಡೆಯಬೇಕೆಂಬ ಹಂಬಲದಿಂದ ಮಲ್ಲಿಗೆಯ ಜೊತೆಗೆ ಸ್ವಲ್ಪ ಪ್ರಮಾಣದ ತರಕಾರಿ ಬೆಳೆಯುವ ಮನಸ್ಸು ಮಾಡಿ ಆ ನಿಟ್ಟಿನಲ್ಲಿ ಕೆಲಸ ಮಾಡತೊಡಗಿದರು. ಇವರ ಕೃಷಿ ಕಾರ್ಯಕ್ಕೆ ಪತ್ನಿ ಕೂಡ ಸಾಥ್ ನೀಡಿದ್ರು. ಹೀಗಾಗಿ ದಂಪತಿಗಳಿಬ್ಬರೂ ಸೇರಿ ಕೃಷಿಯಿಂದಲೇ ತಮಗೆ ಲಾಭವಿದೆ ಎಂದರಿತು ಕಳೆದ ಐದು ವರ್ಷಗಳಿಂದ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಬೆಳೆಯುವುದನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

    ಪೆನ್ಶನ್‌ಗಿಂತ ಹೆಚ್ಚು ಕೃಷಿ ಆದಾಯ: ಅಚ್ಯುತ್ ನಾಯ್ಕ ಈಗ ಸುಮಾರು ಎರಡೂವರೆ ಎಕರೆಗೂ ಹೆಚ್ಚು ಜಮೀನಿನಲ್ಲಿ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಒಂದು ಎಕರೆ ಭತ್ತದ ಗದ್ದೆ, 15 ಗುಂಟೆ ಪ್ರದೇಶದಲ್ಲಿ ಸವತೆಕಾಯಿ, ಹತ್ತು ಗುಂಟೆ ಜಾಗದಲ್ಲಿ ಬೆಂಡೆ, ಹತ್ತು ಗುಂಟೆ ಜಾಗದಲ್ಲಿ ಮಲ್ಲಿಗೆ ಹೂ, 15 ಗುಂಟೆಯಲ್ಲಿ ಅಡಿಕೆ ಮತ್ತು ತೆಂಗು ಅದರ ಜೊತೆಗೆ ಕಾಳು ಮೆಣಸು, ಇನ್ನೂ ಐದು ಗುಂಟೆಯಲ್ಲಿ ಅರಿಶಿಣ ಮತ್ತು ಹೀರೇಕಾಯಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇದೀಗ ಇವರ ಆದಾಯವು ಸರ್ಕಾರ ನೀಡುವ ಪೆನ್ಶನ್‌ಗಿಂತ ಜಾಸ್ತಿಯಾಗಿದೆ ಎಂದರೆ ಯಾರೂ ನಂಬುವುದಿಲ್ಲ.

    ಅಚ್ಯುತ್ ಅವರು ತಮ್ಮ ಜಮೀನಿನಲ್ಲಿ ವರ್ಷಕ್ಕೆ ಮೂರು ಬಾರಿ ಭತ್ತದ ಬೆಳೆಗಳನ್ನು ತೆಗೆಯುತ್ತಿದ್ದಾರೆ. ಅಚ್ಯುತ್ ನಾಯ್ಕ ಗಡಿಭದ್ರತಾ ಪಡೆಯಲ್ಲಿ ನಿವೃತ್ತರಾಗಿ ಬಂದ ಮೇಲೆ ಸರ್ಕಾರ 26 ಸಾವಿರ ರೂ. ಪೆನ್ಶನ್ ನೀಡುತ್ತಿದೆ. ಆದ್ರೆ ಅದಕ್ಕೂ ಹೆಚ್ಚಾಗಿ ವಿವಿಧ ಬೆಳೆಗಳಿಂದ ತಿಂಗಳ ಆದಾಯ ಗಳಿಸುತ್ತಿದ್ದೇನೆಂದು ಹೇಳ್ತಾರೆ ಅಚ್ಯುತ್. ಹಡೀನ ಗ್ರಾಮದ ತಮ್ಮ ಮನೆಯ ಸುತ್ತಮುತ್ತ ಉತ್ತಮವಾಗಿ ನೀರಿನ ಸೆಲೆಯಿದೆ. ಹೀಗಾಗಿ ವರ್ಷದುದ್ದಕ್ಕೂ ದಿನದ 24 ಗಂಟೆ ಕೂಡ ನೀರಿನ ಸಮೃದ್ಧತೆ ಇದೆ. ಒಂದು ವೇಳೆ ನೀರು ಕಡಿಮೆಯಾದರೂ ಆಯಾ ಕಾಲಕ್ಕೆ ಬೆಳೆಗಳನ್ನು ಹೊಂದಿಸಿಕೊಂಡು ಕೃಷಿ ಮಾಡುತ್ತಾ ಬಂದಿದ್ದಾರೆ.

    ಎಲ್ಲಿ ಮಾರಾಟ ಮಾಡುತ್ತಾರೆ?

    ಅಚ್ಯುತ್ ನಾಯ್ಕ ಬೆಳೆಯುತ್ತಿರುವ ಸಾವಯವ ತರಕಾರಿಗೆ ಉತ್ತಮ ಬೇಡಿಕೆ ಇದೆ. ಭಟ್ಕಳದಲ್ಲಿಯೇ ಇವರು ತಾವು ಬೆಳೆದ ತರಕಾರಿಗೆ ಮಾರುಕಟ್ಟೆ ಕಂಡುಕೊಂಡಿದ್ದಾರೆ. ಪ್ರತಿ ದಿನಕ್ಕೆ
    ನೂರೈವತ್ತರಿಂದ ಇನ್ನೂರು ಬೆಂಡೆಕಾಯಿ, 350 ಸವತೆಕಾಯಿ ತೆಗೆಯುತ್ತಾರೆ. ಪ್ರತಿ ದಿನ ನಾಲ್ಕರಿಂದ ಐದು ಸಾವಿರ ರೂಪಾಯಿ ತರಕಾರಿಯಿಂದ ಗಳಿಸ್ತಾರೆ. ನಾಲ್ಕೈದು ತಿಂಗಳ ತರಕಾರಿಯಿಂದಲೇ ಮೂರೂವರೆ ಲಕ್ಷದಿಂದ ನಾಲ್ಕು ಲಕ್ಷ ರೂ.ವರೆಗೆ ಆದಾಯ ಗಳಿಸ್ತಾರೆ.

    ರೈತರು ಸಾವಯವ ಕೃಷಿ ಮಾಡಿದ್ರೆ ಒಳ್ಳೆಯದು ಎಂದು ಹೇಳುವ ಅಚ್ಯುತ್ ನಾಯ್ಕ ಕಡಿಮೆ ಖರ್ಚಿನಿಂದ ಹೆಚ್ಚಿನ ಆದಾಯ ಗಳಿಸಬಹುದು ಎನ್ನುತ್ತಾರೆ. ಊರಿನಲ್ಲಿಯೇ ಸಿಗುವ ಸಗಣಿ ಗೊಬ್ಬರವನ್ನು ಬಳಸಿ ತರಕಾರಿ ಬೆಳೆಗಳನ್ನು ಬೆಳೆಯುತ್ತಾರೆ. ಗಿಡಕ್ಕೆ ಉತ್ತಮ ಇಳುವರಿ ಬರಬೇಕೆಂದು ಸ್ವಲ್ಪ ಮಟ್ಟದ ರಾಸಾಯನಿಕ ಹಾಕಿದ್ದೇವೆಂದು ಹೇಳುತ್ತಾರೆ. ಇದರ ಜೊತೆಗೆ ಕೋಳಿ ಗೊಬ್ಬರ, ಕೊಟ್ಟಿಗೆ ಗೊಬ್ಬರ ಮತ್ತು ಸುಡುಮಣ್ಣನ್ನ ಬಳಸಿಯೇ ಕೃಷಿ ಮಾಡಿದ್ದಾರೆ. ಎಲ್ಲವೂ ಕೂಡ ತಾವೇ ಸ್ವತಃ ಜಾಗರೂಕತೆ ವಹಿಸಿ ಮಕ್ಕಳಂತೆ ಪ್ರತಿಯೊಂದು ಗಿಡದ ಆರೈಕೆ ಮಾಡ್ತಾರೆ. ಗಿಡಗಳಿಗೆ ನೀರು ಹಾಯಿಸುವುದು, ಗೊಬ್ಬರ ಕೊಡುವುದು, ಕಳೆ ತೆಗೆಯುವುದು ಸೇರಿ ಎಲ್ಲವನ್ನೂ ಇವರೇ ನೋಡಿಕೊಳ್ತಾರೆ. ಹೀಗಾಗಿ ಇವರ ಜಮೀನಿನಲ್ಲಿ ವಿವಿಧ ರೀತಿಯ ತರಕಾರಿ ಬೆಳೆಗಳು ನಳನಳಿಸುವಂತಾಗಿದೆ. ತಾವು ನಂಬಿದ ಕೃಷಿ ತನ್ನ ಕೈಬಿಟ್ಟಿಲ್ಲ ಎನ್ನುತ್ತಾರೆ ಅಚ್ಯುತ್ ನಾಯ್ಕ.

    ಗೊಬ್ಬರವೂ ಅಲ್ಲೇ ಸಿಗುತ್ತೆ: ಒಂದು ಸೀಜನ್‌ನಲ್ಲಿ ತರಕಾರಿ ಬೆಳೆ ಕೊನೆಯಾಗುವಾಗ ಟೈಂ ವೇಸ್ಟ್ ಮಾಡದೇ ಅದೇ ಹಸಿರು ಗಿಡವನ್ನು ಕೊಚ್ಚಿ ನೆಲಕ್ಕೆ ಮುಚ್ಚಿದರೆ ಅದೇ ಗೊಬ್ಬರವಾಗುತ್ತದೆ. ಆಗ ಅದರಲ್ಲಿ ಮಣ್ಣು ಹಾಕಿ ಪುನಃ ಅಲ್ಲಿಯೇ ಬೀಜ ಬಿತ್ತುತ್ತಾರೆ. ತಿಂಗಳೊಳಗೆ ಮತ್ತೆ ಅದೇ ಜಾಗದಲ್ಲಿ ಹೊಸ ಗಿಡಗಳು ಹುಟ್ಟಿಕೊಳ್ಳುತ್ತವೆ ಎಂಬ ಸಿಂಪಲ್ ಟ್ರಿಕ್ಸೃ್ ನೀಡುತ್ತಾರೆ.

    ಕೃಷಿಯಲ್ಲಿ ಖುಷಿ ಇದೆ ಎನ್ನುವ ನಿವೃತ್ತ ಯೋಧ ಅಚ್ಯುತ್ ನಾಯ್ಕ, ಗಡಿ ಭದ್ರತಾ ಪಡೆಯಿಂದ ನಿವೃತ್ತರಾಗಿ ಬಂದ ನಂತರ ಎಲ್ಲಿಯಾದರೂ ಕೆಲಸ ಮಾಡಬಹುದಿತ್ತು. ಆರಾಮಾಗಿ ಇರಬಹುದಿತ್ತು. ಆದರೆ ತಮ್ಮ ಕುಟುಂಬ ನಂಬಿಕೊಂಡು ಬಂದಿರುವ ಕೃಷಿಯನ್ನು ಶುರು ಮಾಡಿದರು. ಉತ್ತರಕನ್ನಡ ಜಿಲ್ಲೆಯಲ್ಲಿರುವ ಕೃಷಿಕರು ತುಂಡು ಭೂಮಿಯನ್ನು ಹೊಂದಿರುತ್ತಾರೆ. ಇರುವ ತುಂಡು ತುಂಡು ಭೂಮಿಯಲ್ಲಿಯೇ ಅಲ್ಪಸ್ವಲ್ಪ ತರಕಾರಿ ಬೆಳೆಗಳನ್ನಾದರೂ ಬೆಳೆದರೂ ಮನೆ ಖರ್ಚಿಗೋ ಅಥವಾ ಉಪಜೀವನಕ್ಕೋ ಆಸರೆಯಾಗುತ್ತದೆ.

    ಗಡಿಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಊರಿಗೆ ಬಂದಿದ್ದ ಅಚ್ಯುತ್ ನಾಯ್ಕ ತಮ್ಮ ಕುಟುಂಬದವರು ಮಾಡುತ್ತಿದ್ದ ಕೃಷಿ ಜಮೀನಿನಲ್ಲಿ ಉತ್ತಮ ಬೆಳೆ ಬೆಳೆದಿರುವುದಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ತಮ್ಮ ತಮ್ಮ ಮನೆಗಳಿಗೆ ದೂರದೂರಿನಲ್ಲಿರುವ ತಮ್ಮ ಸಂಬಂಧಿಕರಿಗೆ, ಆತ್ಮೀಯರಿಗೆ ತರಕಾರಿಯನ್ನು ಖರೀದಿಸಿಕೊಂಡು ಹೋಗುತ್ತಿದ್ದಾರೆ. ಇವರ ಕೃಷಿ ಪ್ರೇಮಕ್ಕೆ ಶಹಬ್ಬಾಸ್ ಹೇಳ್ತಿದ್ದಾರೆ.

    ಒಟ್ಟಿನಲ್ಲಿ ನಿವೃತ್ತ ಯೋಧ ಅಚ್ಯುತ್ ನಾಯ್ಕ ಅವರು ಮಾಡಿದ ಕೃಷಿಗೆ ಸುತ್ತಮುತ್ತಲ ಗ್ರಾಮದ ರೈತರು ಖುಷಿ ಪಡುತ್ತಿದ್ದಾರೆ. ಅವರ ಶಿಸ್ತು, ಕೆಲಸದ ಬಗ್ಗೆ ಇರುವ ಶ್ರದ್ಧೆ ನಿಜಕ್ಕೂ ಅವರ ಕೃಷಿ ಪ್ರೇಮವನ್ನು ತೋರಿಸುತ್ತದೆ. ನಿವೃತ್ತರಾಗಿ ವಿಶ್ರಾಂತಿ ಜೀವನ ಕಳೆಯುವ ಬದಲಿಗೆ ತಮ್ಮ ಕೃಷಿ ಕಾಯಕಕ್ಕೆ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ.

    ಸಂಪರ್ಕ ವಿಳಾಸ: ಅಚ್ಯುತ್ ನಾಯ್ಕ, ಪ್ರಗತಿಪರ ಕೃಷಿಕ, ನಿವೃತ್ತ ಬಿಎಸ್‌ಎಫ್ ಯೋಧ, ಗ್ರಾಮ: ಹಡಿನ, ತಾಲೂಕು: ಭಟ್ಕಳ, ಜಿಲ್ಲಾ ಉತ್ತರಕನ್ನಡ. ಮೊಬೈಲ್: 9113542014

    ಬೇಡಜಂಗಮರಿಗೆ ಜಾತಿ ಪ್ರಮಾಣಪತ್ರಕ್ಕೆ ಶಿಫಾರಸು: ಶಾಸಕರ ವಿರುದ್ಧ ಪ್ರತಿಭಟನೆ ನಡೆಸಿದ ಪರಿಶಿಷ್ಟರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts