More

    ರಾಜ್ಯದಲ್ಲಿ ಕೋವಿಡ್​ ನಂತರ ಮಕ್ಕಳ ಮರಣ ಪ್ರಮಾಣ ಏರಿಕೆ! ಆರು ತಿಂಗಳಲ್ಲಿ 5,167 ಮಕ್ಕಳ ಸಾವು

    ಬೆಂಗಳೂರು: ಕೋವಿಡ್​ ಸಾಂಕ್ರಾಮಿಕ ಕಳೆದ ನಂತರ ರಾಜ್ಯದಲ್ಲಿ ಮಕ್ಕಳ ಮರಣ ಪ್ರಮಾಣ ಹೆಚ್ಚಿದ್ದು, ಪ್ರಸಕ್ತ ಆರ್ಥಿಕ ವರ್ಷದ ಮೊದಲ ಆರು ತಿಂಗಳಲ್ಲಿ 5 ಸಾವಿರಕ್ಕೂ ಅಧಿಕ ಮಕ್ಕಳ ಸಾವು ಸಂಭವಿಸಿದೆ. ಆರೋಗ್ಯ ಇಲಾಖೆಯ ಆರೋಗ್ಯ ನಿರ್ವಹಣಾ ಮಾಹಿತಿ ವ್ಯವಸ್ಥೆಯಲ್ಲಿನ ಅಂಕಿ-ಅಂಶಗಳಿಂದ ಈ ಅಂಶ ಬಹಿರಂಗಗೊಂಡಿದೆ.

    2022r ಏಪ್ರಿಲ್​ 1 ರಿಂದ ಸೆಪ್ಟೆಂಬರ್​ 30ರ ಅವಧಿಯಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ 5,167 ಮಕ್ಕಳು ಮೃತಪಟ್ಟಿದ್ದಾರೆ. ಈ ಪೈಕಿ 3,648 ಮಕ್ಕಳು ಒಂದು ತಿಂಗಳೊಳಗಿನ ಶಿಶುಗಳು. ಇದನ್ನು ಗಮನಿಸಿದರೆ ಉಳಿದ ಅವಧಿಗೆ ಈ ಸಂಖ್ಯೆ 10 ಸಾವಿರ ಮೀರಬಹುದು ಎಂದು ಅಂದಾಜಿಸಲಾಗಿದ್ದು, ಆತಂಕ ಸೃಷ್ಟಿಸಿದೆ.

    ಅಂಕಿ ಅಂಶಗಳ ಪ್ರಕಾರ 2020-21ರಲ್ಲಿ (ಐದು ವರ್ಷದ ಒಳಗೆ) 9,120 ಮತ್ತು 2021-22ರಲ್ಲಿ 9,050 ಮಕ್ಕಳ ಸಾವು ಸಂಭವಿಸಿದೆ. ಕೋವಿಡ್​ ಪೂರ್ವದಲ್ಲಿ 2019-20ರಲ್ಲಿ 11,504, 2018-19ರಲ್ಲಿ 11,781, 2017-18ರಲ್ಲಿ 13,635 ಮಕ್ಕಳು ಸಾವನ್ನಪ್ಪಿವೆ.

    ಮಕ್ಕಳ ಸಾವಿಗೆ ಕಾರಣಗಳು: ಕೋವಿಡ್​ ಸಾಂಕ್ರಾಮಿಕ ಸಂದರ್ಭದಲ್ಲಿ ಮಕ್ಕಳ ಸಾವಿನ ಸಂಖ್ಯೆ ಕುಸಿದಿದ್ದರೂ, ನಂತರದಲ್ಲಿ ಏರಿಕೆಯಾಗಿದೆ. ಇದಕ್ಕೆ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕುಸಿತ ಹಾಗೂ ಅಪೌಷ್ಠಿಕತೆ ಹೆಚ್ಚಳ ಕಾರಣವಾಗಿರಬಹುದು. ಇದಲ್ಲದೆ ಕೋವಿಡ್​ ಸಂದರ್ಭದಲ್ಲಿ ರೆರಲ್​ ಮತ್ತು ಹೆರಿಗೆ ಆಸ್ಪತ್ರೆಗಳನ್ನು ಕೋವಿಡ್​ ಆಸ್ಪತ್ರೆಗಳಾಗಿ ಪರಿವರ್ತಿಸಿದ್ದರಿಂದ ಹೆರಿಗೆ ಸಂದರ್ಭದಲ್ಲಿ ಆಸ್ಪತ್ರೆಗಳ ಹುಡುಕಾಟ ನಡೆಸಲಾಗದೆ, ಕೆಲ ಗರ್ಭಿಣಿಯರಿಗೆ ಮನೆಯಲ್ಲಿಯೇ ಹೆರಿಗೆ ಮಾಡಿಸಿರುವುದು. ಪ್ರಸವಪೂರ್ವ ಮತ್ತು ನಂತರದಲ್ಲಿ ಶಿಶು ಆರೈಕೆ ಚಟುವಟಿಕೆಗಳು ಬಹುಕಾಲ ಸ್ಥಗಿತಗೊಂಡಿದ್ದವು. ಅಂಗನವಾಡಿ ಕೇಂದ್ರಗಳಿಂದ ಪೌಷ್ಟಿಕ ಆಹಾರ ಪೂರೈಕೆಯಲ್ಲಿನ ತೊಡಕುಗಳು. ಜೊತೆಗೆ ರಕ್ತಹಿನತೆ, ಅಪೌಷ್ಟಿಕತೆ, ಉಸಿರಾಟದ ತೊಂದರೆ, ಅತಿಸಾರದಂತಹ ಕಾರಣಗಳಿಂದ ಮಕ್ಕಳ ಸಾವು ಹೆಚ್ಚಾಗಿರಬಹುದು ಎನ್ನುತ್ತಾರೆ ಆರೋಗ್ಯ ಕಾರ್ಯಕರ್ತರು.

    ಸಾವಿರಕ್ಕೆ 21 ಮಕ್ಕಳ ಸಾವು: ಮಾದರಿ ನೋಂದಣಿ ವ್ಯವಸ್ಥೆ 2020ರ ಸಮೀಕ್ಷೆ ಪ್ರಕಾರ, ಕರ್ನಾಟಕದಲ್ಲಿ ಒಂದು ಸಾವಿರ (5 ವರ್ಷದೊಳಗಿನ) ಮಕ್ಕಳಲ್ಲಿ 21 ಮಕ್ಕಳು ಸಾವನ್ನಪ್ಪಿದ್ದಾರೆ. ಈ ಪ್ರಮಾಣ ಕೇರಳದಲ್ಲಿ 8 ಹಾಗೂ ತಮಿಳುನಾಡಿನಲ್ಲಿ 13 ಇದೆ. ಆದರೆ ಆಂಧ್ರಪ್ರದೇಶದಲ್ಲಿ 27 ಮತ್ತು ತೆಲಂಗಾಣದಲ್ಲಿ 23 ಇದೆ. ಇದು ಕರ್ನಾಟಕಕ್ಕಿಂತ ಹೆಚ್ಚಿದೆ. ಮಕ್ಕಳ ಸಾವಿನ ಪ್ರಮಾಣದಲ್ಲಿ ದಕ್ಷಿಣ ಭಾರತ ರಾಜ್ಯಗಳು ರಾಷ್ಟ್ರೀಯ ಸರಾಸರಿ 32ಕ್ಕಿಂತ ಕಡಿಮೆ ಇವೆ. ರಾಜ್ಯದಲ್ಲಿ ಒಂದು ಸಾವಿರಕ್ಕೆ ಒಂದು ವರ್ಷದೊಳಗಿನ ಮಕ್ಕಳ ಸಾವಿನ ಸಂಖ್ಯೆ 19 (ರಾಷ್ಟ್ರೀಯ ಸರಾಸರಿ 28) ನವಜಾತ ಶಿಶುಗಳ ಸಾವು 14 (ರಾಷ್ಟ್ರೀಯ ಸರಾಸರಿ 20) ಇದೆ. ಭಾರತ ಸರ್ಕಾರ ಸುಸ್ಥಿರ ಅಭಿವೃದ್ಧಿ ಗುರಿಯಲ್ಲಿ 2030ರ ವೇಳೆಗೆ ಮಕ್ಕಳ ಸಾವಿನ ಸಂಖ್ಯೆ 25ಕ್ಕೆ ಇಳಿಕೆ ಮಾಡಬೇಕು ಎಂದಿದೆ. ಆದರೆ ಕರ್ನಾಟಕ 8 ವರ್ಷಕ್ಕೂ ಮುಂಚೆಯೇ ಆ ಗುರಿ ತಲುಪಿದ್ದು, 21ಕ್ಕೆ ಇಳಿಕೆಯಾಗಿದೆ. ಇನ್ನೂ ಕಡಿಮೆ ಮಾಡುವ ನಿಟ್ಟಿನಲ್ಲಿ ಅರೋಗ್ಯ ಇಲಾಖೆ ಕಾರ್ಯಪ್ರವೃತ್ತವಾಗಿದೆ.

    ಮಕ್ಕಳ ಸಾವು ತಡೆಗೆ ಆರೋಗ್ಯ ಇಲಾಖೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದು, ಮಕ್ಕಳ ಸಾವಿನ ಜೊತೆಗೆ ಕಾರಣ ಏನು ಎಂಬ ಮಾಹಿತಿ ಸಂಗ್ರಹಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯದ 31 ಜಿಲ್ಲೆಗಳಲ್ಲಿ 41 ನವಜಾತ ಶಿಶುಗಳ ವಿಶೇಷ ಆರೈಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಜಿಲ್ಲಾ, ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಮಕ್ಕಳ ಆರೋಗ್ಯ ತಪಾಸಣೆ ಮತ್ತು ಆರೈಕೆ ಕುರಿತು ತರಬೇತಿ ನೀಡುವ ಕಾರ್ಯಕ್ರಮಗಳನ್ನೂ ರೂಪಿಸಲಾಗಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

    ಮಕ್ಕಳ ಸಾವು ತಡೆಯಲು ಹೆರಿಗೆಯ ನಂತರ ತಾಯಿ ಮತ್ತು ಮಗು ಮನೆಗೆ ಹಿಂದಿರುಗಿದ ಬಳಿಕ ನವಜಾತ ಶಿಶುಗಳ ಆರೈಕೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ನಿಟ್ಟಿನಲ್ಲಿ ಪ್ರಸ್ತುತ 1.5 ತಿಂಗಳಿಗೆ ಸೀಮಿತವಿರುವ ಮಕ್ಕಳ ಆರೋಗ್ಯ ಮತ್ತು ಆರೈಕೆ (ಹೋಮ್​ ಬೇಸ್ಡ್​ ನ್ಯೂನಟಲ್​ ಕೇರ್​)ಕಾರ್ಯಕ್ರಮವನ್ನು ಈ ವರ್ಷದಿಂದ 1.5 ವರ್ಷಕ್ಕೆ ಹೆಚ್ಚಿಸಲು ಇಲಾಖೆ ಮುಂದಾಗಿದೆ.
    |ಡಾ. ಬಸವರಾಜ ಧಬಾಡಿ ಉಪನಿರ್ದೇಶಕ (ಮಕ್ಕಳ ಆರೋಗ್ಯ) ಆರೋಗ್ಯ ಇಲಾಖೆ

    ಎಲ್ಲೆಲ್ಲೂ ಒಕ್ಕಲಿಗ ವಧು-ವರರ ಸಮಾವೇಶದ್ದೇ ಮಾತು! ಬಾಳಸಂಗಾತಿ ಹುಡುಕಾಟಕ್ಕೆ ಬಂದ 13 ಸಾವಿರ ಮಂದಿಗೆ ಭಾರೀ ನಿರಾಸೆ…

    ಗಂಡನ ಮನೆಗೆ ಹೋಗವ್ವಾ… ಎಂದು ತಾಯಿ ಬುದ್ಧಿಮಾತು ಹೇಳಿದ್ದೇ ತಪ್ಪಾ? ಮನನೊಂದು ಸಾವಿನ ಮನೆಯ ಕದ ತಟ್ಟಿದ ಮಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts