More

    ಎಲ್ಲೆಲ್ಲೂ ಒಕ್ಕಲಿಗ ವಧು-ವರರ ಸಮಾವೇಶದ್ದೇ ಮಾತು! ಬಾಳಸಂಗಾತಿ ಹುಡುಕಾಟಕ್ಕೆ ಬಂದ 13 ಸಾವಿರ ಮಂದಿಗೆ ಭಾರೀ ನಿರಾಸೆ…

    ನಾಗಮಂಗಲ: ಆದಿಚುಂಚನಗಿರಿ ಮಠದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಒಕ್ಕಲಿಗ ವಧು-ವರರ ಸಮಾವೇಶದ ಬಗ್ಗೆಯೇ ಎಲ್ಲೆಡೆ ಚರ್ಚೆಯಾಗುತ್ತಿದೆ. ಬಾಳಸಂಗಾತಿ ಹುಡುಕಾಟಕ್ಕೆ ಸರತಿ ಸಾಲಿನಲ್ಲಿ ನಿಂತು ತಾಸುಗಟ್ಟಲೇ ಕಾದ 13 ಸಾವಿರ ಯುವಕರು ನಿರಾಸೆಯಿಂದ ಮನೆಗೆ ಹಿಂತಿರುಗಿದ್ದಾರೆ. ಇದಕ್ಕೆ ಕಾರಣವೂ ಇದೆ. ವಧು-ವರರ ಸಮಾವೇಶದಕ್ಕೆ ಆಗಮಿಸಿದ ವಧುಗಳ ಸಂಖ್ಯೆ ಕೇವಲ 250! ಆದರೆ ವರರ ಸಂಖ್ಯೆ 13 ಸಾವಿರಕ್ಕೂ ಹೆಚ್ಚು!

    ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಸಮಾಜ ಸಂಪರ್ಕ ವೇದಿಕೆ ಮತ್ತು ರಾಜ್ಯ ಚುಂಚಾದ್ರಿ ಮಹಿಳಾ ಒಕ್ಕೂಟದಿಂದ ಆಯೋಜಿಸಿದ್ದ ವಧು-ವರರ ಸಮಾವೇಶಕ್ಕೆ ನಿರೀಕ್ಷೆಗೂ ಮೀರಿ ಜನರು ಆಗಮಿಸಿದ್ದರು. ಪರಿಣಾಮ, ಮಠದ ಆವರಣ ಜಾತ್ರೆಯಂತಾಗಿತ್ತು. ಮಾತ್ರವಲ್ಲದೆ, ಕಾಲಿಡಲೂ ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿತ್ತು. ಈ ನಡುವೆ, ವರರ ಸಂಖ್ಯೆಯನ್ನು ಕೇಳಿದ ವಧುವಿನ ಕಡೆಯವರು ಮೌನವಾದರೆ, ಇತ್ತ ವರನ ಕಡೆಯವರು ಬರಿಗೈಯಲ್ಲಿ ವಾಪಸ್ಸಾಗುವಂತಾಯಿತು.

    ಮದುವೆಯಾಗುವ ಕನಸು ಹೊತ್ತು ಬಂದವರ ಪೈಕಿ ಬಹುತೇಕರು ಗ್ರಾಮೀಣ ಭಾಗದವರೇ ಆಗಿದ್ದರು. ಬಾಳಸಂಗಾತಿ ಹುಡುಕಾಟಕ್ಕೆ ಸರತಿ ಸಾಲಿನಲ್ಲಿ ನಿಂತು ಕಾದವರಿಗೆ ನಿರಾಸೆಯಾಯಿತು. ಈ ಸಮಾವೇಶದ ವಿಡಿಯೋಗಳನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಪರಿಣಾಮ, ಕೆಲವೇ ಗಂಟೆಗಳಲ್ಲಿ ಸಾಕಷ್ಟು ವೈರಲ್​ ಆಯಿತು. ಮಾತ್ರವಲ್ಲದೆ, ಎಲ್ಲಿ ನೋಡಿದರೂ ಸಮಾವೇಶದ ಬಗ್ಗೆಯೇ ಮಾತು ಕೇಳಿಬರುತ್ತಿವೆ.

    ಪರ-ವಿರೋಧ ಚರ್ಚೆ: ಸಮಾವೇಶದಲ್ಲಿ ನೋಂದಣಿ ಮಾಡಿಕೊಂಡಿದ್ದ ವಧು-ವರರ ಸಂಖ್ಯೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ನೋಂದಣಿ ಮಾಡಿಕೊಂಡಿರುವವರ ಪೈಕಿ ಹೆಚ್ಚಿನ ಸಂಖ್ಯೆಯಲ್ಲಿ ರೈತರ ಮಕ್ಕಳಿದ್ದಾರೆ. ಆದರೆ, ಅವರಿಗೆ ಹೆಣ್ಣು ಕೊಡಲು ಹಿಂದೆ-ಮುಂದೆ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ದುರಂತ. ಗಂಡು ಬೇಕೆಂಬ ಆಸೆಯಿಂದ ಹೆಣ್ಣು ಭ್ರೂಣಹತ್ಯೆ ಮಾಡಿದ್ದರ ಪರಿಣಾಮದಿಂದ ಪ್ರಸ್ತುತ ಸಮಸ್ಯೆ ಎದುರಾಗಿದೆ ಎಂಬ ವಿಷಯವೂ ಪ್ರಸ್ತಾಪವಾಗುತ್ತಿದೆ.

    ಗಂಡನ ಮನೆಗೆ ಹೋಗವ್ವಾ… ಎಂದು ತಾಯಿ ಬುದ್ಧಿಮಾತು ಹೇಳಿದ್ದೇ ತಪ್ಪಾ? ಮನನೊಂದು ಸಾವಿನ ಮನೆಯ ಕದ ತಟ್ಟಿದ ಮಗಳು

    ಮಗನ ಮನೆಗೆ ಅಪ್ಪ-ಅಮ್ಮ ಬಂದದ್ದೇ ತಪ್ಪಾ? ಸೊಸೆಯ ಕಾಟ ಸಹಿಸದೆ ಸಾವಿನ ಮನೆಯ ಕದ ತಟ್ಟಿದ ಅತ್ತೆ, ಮಗನೂ ದುರಂತ ಅಂತ್ಯ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts