More

    ಮಗನ ಮನೆಗೆ ಅಪ್ಪ-ಅಮ್ಮ ಬಂದದ್ದೇ ತಪ್ಪಾ? ಸೊಸೆಯ ಕಾಟ ಸಹಿಸದೆ ಸಾವಿನ ಮನೆಯ ಕದ ತಟ್ಟಿದ ಅತ್ತೆ, ಮಗನೂ ದುರಂತ ಅಂತ್ಯ..!

    ಬೆಂಗಳೂರು: ಇತ್ತೀಚೆಗೆ ತಂದೆ ಅನಾರೋಗ್ಯಕ್ಕೆ ಒಳಗಾಗಿ ಹಾಸಿಗೆ ಹಿಡಿದ್ದರು. ತಾಯಿಗೂ ವಯಸ್ಸಾಗಿತ್ತು. ಹಾಗಾಗಿ ತನ್ನ ಮನೆಗೆ ಪಾಲಕರನ್ನು ಮಗ ಕರೆತಂದು ಮನೆಯಲ್ಲಿ ಆರೈಕೆ ಮಾಡುತ್ತಿದ್ದ. ಇದನ್ನು ಸಹಿಸದ ಸೊಸೆ ತವರು ಮನೆಗೆ ಪದೇಪದೆ ಹೋಗುತ್ತಿದ್ದಳು. ‘ನಾವೇ ಜೀವನ ಸಾಗಿಸಲು ಕಷ್ಟವಾಗುತ್ತಿದೆ. ಅಂತಹದ್ದರಲ್ಲಿ ನಿನ್ನ ತಾಯಿ-ತಂದೆಯನ್ನು ಕರೆದುಕೊಂಡು ಬಂದಿದ್ದೀಯಾ?’ ಎಂದು ಜಗಳ ತೆಗೆದಿದ್ದಳಂತೆ. ಇದೇ ವಿಷ್ಯಕ್ಕೆ ಮಗ-ಸೊಸೆ ನಡುವೆ ಮನಸ್ತಾಪ ಉಂಟಾಗಿತ್ತು. ಇದನ್ನೆಲ್ಲಾ ಗಮನಿಸಿದ ಅತ್ತೆ, ಸೊಸೆಯ ಕಾಟ ಸಹಿಸಲಾಗದೆ ತಾನು ಯಾರಿಗೂ ಭಾರವಾಗುವುದು ಬೇಡ ಎಂದು ಸಾವಿನ ಮನೆಯ ಕದ ತಟ್ಟಿದ್ದಾರೆ. ಇದನ್ನು ನೋಡಿದ ಮಗ, ಅಮ್ಮನ ಹಾದಿಯನ್ನೇ ಹಿಂಬಾಲಿಸಿ ದುರಂತ ಅಂತ್ಯ ಕಂಡಿದ್ದಾನೆ…

    ಇಂತಹ ಹೃದಯವಿದ್ರಾವಕ ಘಟನೆ ಹೆಗ್ಗನಹಳ್ಳಿ ಕ್ರಾಸ್​ ಬಳಿಯ ಶ್ರೀಗಂಧನಗರದಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದೆ. ಭಾಗ್ಯಮ್ಮ (57) ಮತ್ತು ಇವರ ಪುತ್ರ ಶ್ರೀನಿವಾಸ್​ (33) ಮೃತ ದುರ್ದೈವಿಗಳು. ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ಮೂಲದ ಶ್ರೀನಿವಾಸ್​, ಔಷಧ ಮಾರಾಟ ಕಂಪನಿ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದ. 8 ವರ್ಷಗಳ ಹಿಂದೆ, ಶ್ರೀಗಂಧನಗರದ ಸಂಧ್ಯಾ ಎಂಬಾಕೆಯನ್ನು ಪ್ರೀತಿಸಿ ಮದುವೆ ಆಗಿದ್ದರು. ಸಂಧ್ಯಾ ಸಹ ಬಿ.ಟೆಕ್​ ಓದಿ ಖಾಸಗಿ ಕಂಪನಿಯಲ್ಲಿ ನೌಕರಿ ಮಾಡುತ್ತಿದ್ದಾರೆ. ಈ ದಂಪತಿಗೆ 6 ವರ್ಷದ ಪುತ್ರ ಇದ್ದಾನೆ.

    ಸಂಧ್ಯಾಗೆ ಪಾಲಕರು ತಮ್ಮ ಮನೆಯ ಪಕ್ಕದಲ್ಲಿಯೇ ಸೈಟ್​ ಕೊಟ್ಟಿದ್ದರು. ಶ್ರೀನಿವಾಸ್​, ತನ್ನ ಸ್ವಂತ ಖರ್ಚಿನಲ್ಲಿ ಮನೆ ನಿರ್ಮಾಣ ಮಾಡಿಕೊಂಡು ಪತ್ನಿ- ಮಗನೊಂದಿಗೆ ನೆಲೆಸಿದ್ದ. ಸೆಕ್ಯೂರಿಟಿ ಗಾರ್ಡ್​ ಆಗಿದ್ದ ಶ್ರೀನಿವಾಸ್​ರ ತಂದೆ ಸಿದ್ದಾಪುರದಲ್ಲಿ ನೆಲೆಸಿದ್ದರು. ತಾಯಿ ಗೃಹಿಣಿಯಾಗಿದ್ದರು.

    ಇತ್ತೀಚೆಗೆ ತಂದೆ ಅನಾರೋಗ್ಯಕ್ಕೆ ಒಳಗಾಗಿ ಹಾಸಿಗೆ ಹಿಡಿದ್ದರು. ಒಂದು ತಿಂಗಳ ಹಿಂದೆ ತಂದೆ-ತಾಯಿಯನ್ನು ಬೆಂಗಳೂರಿಗೆ ಕರೆತಂದು ಮನೆಯಲ್ಲಿ ಶ್ರೀನಿವಾಸ್​ ಆರೈಕೆ ಮಾಡುತ್ತಿದ್ದರು. ಅತ್ತೆ- ಮಾವನ ಮನೆಗೆ ಬಂದರೆ ಸಂಧ್ಯಾ, ತವರು ಮನೆಗೆ ಹೋಗುತ್ತಿದ್ದಳು. ಅದರಲ್ಲಿಯೂ ಅತ್ತೆ-ಮಾವ ಮನೆಗೆ ಬಂದು ನೆಲೆಸಿದ್ದ ಕಾರಣಕ್ಕೆ ವಿರೋಧ ವ್ಯಕ್ತಪಡಿಸಿದ್ದಳು. ನಾವೇ ಜೀವನ ಸಾಗಿಸಲು ಕಷ್ಟವಾಗುತ್ತಿದೆ. ಅದರಲ್ಲಿ ತಾಯಿ, ತಂದೆಯನ್ನು ಕರೆದುಕೊಂಡು ಬಂದಿದ್ದೀಯ ಎಂದು ಜಗಳ ತೆಗೆದಿದ್ದಳು. ಇದೇ ವಿಚಾರಕ್ಕೆ ದಂಪತಿ ನಡುವೆ ಪದೇಪದೆ ಕಿತ್ತಾಟ ಆಗುತ್ತಿತ್ತು. ಸಮೀಪದಲ್ಲಿ ಇದ್ದ ತವರು ಮನೆಗೆ ಸಂಧ್ಯಾ ಹೋಗುತ್ತಿದ್ದಳು.

    ಈ ಎಲ್ಲವನ್ನೂ ಗಮನಿಸಿದ ಭಾಗ್ಯಮ್ಮ, ಮಲಗುವ ಕೋಣೆಯಲ್ಲಿ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ನೋಡಿ ಮಗನೂ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೂ ಮುನ್ನ ಸ್ನೇಹಿತರಿಗೆ ಕಾಲ್​ ಮಾಡಿದ್ದ ಶ್ರೀನಿವಾಸ್​, ಊರಿನಿಂದ ತಂದೆ-ತಾಯಿಯನ್ನು ಕರೆತಂದ ಕಾರಣಕ್ಕೆ ಪತ್ನಿ ಮತ್ತು ಆಕೆಯ ಸಹೋದರ ಹಾಗೂ ಪಾಲಕರು ಜಗಳ ಮಾಡಿ ಚಿತ್ರಹಿಂಸೆ ಕೊಡುತ್ತಿದ್ದಾರೆ ಎಂದು ನೋವು ತೋಡಿಕೊಂಡಿದ್ದ ಎನ್ನಲಾಗಿದೆ.

    ಭಾನುವಾರ ಮಧ್ಯಾಹ್ನ 12 ಗಂಟೆಯಲ್ಲಿ ತಾಯಿ- ಮಗ ಆತ್ಮಹತ್ಯೆ ಮಾಡಿಕೊಂಡಿದ್ದು, ಮನೆಗೆ ಶ್ರೀನಿವಾಸ್​ ಪತ್ನಿ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. ರಾಜಗೋಪಾಲನಗರ ಪೊಲೀಸರು ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.

    ಗಂಡನ ಮನೆಗೆ ಹೋಗವ್ವಾ… ಎಂದು ತಾಯಿ ಬುದ್ಧಿಮಾತು ಹೇಳಿದ್ದೇ ತಪ್ಪಾ? ಮನನೊಂದು ಸಾವಿನ ಮನೆಯ ಕದ ತಟ್ಟಿದ ಮಗಳು

    ಜಾತ್ರೆಯಂತಾದ ಒಕ್ಕಲಿಗರ ವಧು-ವರರ ಸಮಾವೇಶ: 25 ಸಾವಿರಕ್ಕೂ ಹೆಚ್ಚು ಮಂದಿ ಭಾಗಿ, ವಧು ನೋಂದಣಿ ಸಂಖ್ಯೆ ಕೇವಲ 250…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts