More

    ಸುಪ್ರೀಂಕೋರ್ಟ್ ಅಂಗಳದಲ್ಲಿ ಇವಿಎಂ ಸಮರ; ಆಯೋಗದಿಂದ ವಿರೋಧ

    ನವದೆಹಲಿ: ವಿವಿಪ್ಯಾಟ್ ಸ್ಲಿಪ್​ಗಳನ್ನು ಮತದಾರರಿಗೆ ನೀಡಿದರೆ ಅದರ ದುರುಪಯೋಗವಾಗುವ ಸಾಧ್ಯತೆಯಿದೆ ಎಂದು ಭಾರತೀಯ ಚುನಾವಣೆ ಆಯೋಗ (ಇಸಿಐ) ಗುರುವಾರ ಕಳವಳ ವ್ಯಕ್ತಪಡಿಸಿದೆ.

    ಇವಿಎಂ ಮತದಾನ ಪದ್ಧತಿಗೆ ಪ್ರತಿಪಕ್ಷಗಳ ವಿರೋಧದ ನಡುವೆ, ವಿವಿಪ್ಯಾಟ್​ನೊಂದಿಗೆ ಇವಿಎಂ ಮೂಲಕ ಚಲಾಯಿಸಲಾಗುವ ಪ್ರತಿಯೊಂದು ಮತದ ಸಂಪೂರ್ಣ ಪರಿಶೀಲನೆ (ಕ್ರಾಸ್ ವೆರಿಫಿಕೇಶನ್) ನಡೆಸಬೇಕೆಂದು ಆಗ್ರಹಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ವೇಳೆ ಆಯೋಗ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ವಿಚಾರಣೆ ನಡೆಸಿದ ನ್ಯಾ. ಸಂಜೀವ್ ಖನ್ನಾ ಮತ್ತು ನ್ಯಾ. ದೀಪಂಕರ್ ದತ್ತಾ ಇದ್ದ ಪೀಠ, ತೀರ್ಪನ್ನು ಕಾಯ್ದಿರಿಸಿತು.

    ಈ ನಡುವೆ, ಕೇರಳದ ಕಾಸರಗೋಡಿನಲ್ಲಿ ನಡೆದ ಅಣಕು ಮತದಾನದ ವೇಳೆ ನಾಲ್ಕು ವಿದ್ಯುನ್ಮಾನ ಮತ ಯಂತ್ರಗಳು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಒಂದು ಮತವನ್ನು ಹೆಚ್ಚುವರಿಯಾಗಿ ದಾಖಲಿಸಿವೆ ಎಂಬ ಆರೋಪದ ಬಗ್ಗೆ ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಆಯೋಗಕ್ಕೆ ಸೂಚಿಸಿತು. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾಮ್್ಸರ್ (ಎಡಿಆರ್) ಪರವಾಗಿ ಹಾಜರಾದ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಮಾಡಿದ್ದ ಆಪಾದನೆಗೆ ಪ್ರತಿಕ್ರಿಯಿಸಿದ ಕೋರ್ಟ್, ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯ ಇರಬೇಕು ಎಂದು ಹೇಳಿತಲ್ಲದೆ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಕೈಗೊಂಡಿರುವ ಕ್ರಮಗಳನ್ನು ವಿವರಿಸುವಂತೆ ಆಯೋಗಕ್ಕೆ ನಿರ್ದೇಶಿಸಿತು.

    ಮತದಾರರು ವಿವಿಪ್ಯಾಟ್​ಗಳನ್ನು ಪಡೆಯಬಹುದೇ ಎಂದೂ ಕೋರ್ಟ್ ಪ್ರಶ್ನಿಸಿತು. ಇವಿಎಂನಿಂದಾಗಿ ವಂಚನೆಯಾಗುತ್ತಿದೆ ಎಂಬ ಆರೋಪಗಳನ್ನು ಪ್ರಸ್ತಾಪಿಸಿದ ನ್ಯಾ. ಸಂಜೀವ್ ಖನ್ನಾ ಮತ್ತು ನ್ಯಾ. ದೀಪಂಕರ್ ದತ್ತಾ ಇದ್ದ ಪೀಠ, ‘ಏನು ನಡೆಯಬಾರದೆಂದು ನಿರೀಕ್ಷಿಸಲಾಗುತ್ತಿದೆಯೋ ಆ ವಿಚಾರದಲ್ಲಿ ಯಾರಲ್ಲೂ ಅನುಮಾನ ಇರುವುದು ಬೇಡ’ ಎಂದು ಹೇಳಿತು.

    ಇವಿಎಂ ಮೂಲಕ ಚಲಾಯಿಸಿದ ಮತಗಳ ವಿವಿಪ್ಯಾಟ್ ವ್ಯವಸ್ಥೆ ಮೂಲಕ ಬರುವ ಮುದ್ರಿತ ಸ್ಲಿಪ್​ಗಳನ್ನು ಮತದಾರರಿಗೆ ಒದಗಿಸಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನೂ ಕೋರ್ಟ್ ನಡೆಸುತ್ತಿದೆ. ಆಯೋಗದ ವಕೀಲ ಮಣಿಂದರ್ ಸಿಂಗ್ ಮತ್ತು ಅದರ ಹಿರಿಯ ಅಧಿಕಾರಿಗಳು ಪ್ರಶ್ನೆಗಳಿಗೆ ಉತ್ತರಿಸಲು ಕೋರ್ಟ್​ನಲ್ಲಿದ್ದರು.

    ಮತದಾನ ಮಾಡಿದ ನಂತರ ಆಯಾ ಮತದಾರ ವಿವಿಪ್ಯಾಟ್ ಸ್ಲಿಪ್​ಅನ್ನು ಪಡೆದು ಅದನ್ನು ಒಂದು ಪೆಟ್ಟಿಗೆಯಲ್ಲಿ ಹಾಕಲು ಅವಕಾಶವಿರಬೇಕೆಂದು ಅರ್ಜಿದಾರರಲ್ಲಿ ಒಬ್ಬರ ಪರ ವಕೀಲರಾದ ನಿಜಾಂ ಪಾಶಾ ಹೇಳಿದರು. ಇಂಥ ಪ್ರಕ್ರಿಯೆಯಿಂದ ಮತದಾರರ ಗೋಪ್ಯತೆ ಮೇಲೆ ಪರಿಣಾಮ ಉಂಟಾಗುವುದಿಲ್ಲವೇ ಎಂದು ನ್ಯಾ. ಖನ್ನಾ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಪಾಷಾ, ‘ಮತದಾರರ ಗೋಪ್ಯತೆಯನ್ನು ಮತದಾರರ ಹಕ್ಕನ್ನು ಸೋಲಿಸಲು ಬಳಸಬಾರದು’ ಎಂದು ವಾದಿಸಿದರು.

    ಬೆಳಕು ಸದಾ ಇರಬೇಕು: ವಿಚಾರಣೆ ವೇಳೆ ಮಧ್ಯ ಪ್ರವೇಶಿಸಿದ ಪ್ರಶಾಂತ್ ಭೂಷಣ್, ವಿವಿಪ್ಯಾಟ್ ಯಂತ್ರದ ಮೇಲೆ ಬೆಳಕು ಈಗಿರುವ ಏಳು ಸೆಕೆಂಡ್​ಗೆ ಬದಲು ಯಾವಾಗಲೂ ಇರಬೇಕು ಎಂದು ಹೇಳಿದರು. ಈ ಹಂತದಲ್ಲಿ ಯಂತ್ರದ ಗಾಜನ್ನು ಬದಲಾಯಿಸಲು ಆಗದಿದ್ದರೆ ಬೆಳಕು ನಿರಂತರವಾಗಿ ಬೀರುವಂತಿರಬೇಕು ಎನ್ನುವುದು ಒಂದು ಸಂಭಾವ್ಯ ಪರಿಹಾರವಾಗಿದೆ. ಹಾಗೆ ಮಾಡಿದರೆ ವಿವಿಪ್ಯಾಟ್ ಸ್ಲಿಪ್ ತುಂಡಾಗಿ ಬೀಳುವುದನ್ನು ಮತದಾರರು ನೋಡಬಹುದಾಗಿದೆ ಎಂದು ಭೂಷಣ್ ಹೇಳಿದರು. ಕೇರಳದ ಅಣಕು ಮತದಾನದ ವೇಳೆ ಬಿಜೆಪಿಗೆ ಹೆಚ್ಚುವರಿ ಮತ ದಾಖಲಾಗಿರುವ ಪ್ರಕರಣವನ್ನು ಭೂಷಣ್ ಕೋರ್ಟ್ ಗಮನಕ್ಕೆ ತಂದರು. ಆದರೆ, ಈ ವರದಿ ಸಂಪೂರ್ಣ ಸುಳ್ಳು ಎಂದು ಆಯೋಗದ ವಕೀಲರು ಹೇಳಿದರು.ಮತ ಎಣಿಕೆ ಪ್ರಕ್ರಿಯೆಗೆ ಹೆಚ್ಚಿನ ವಿಶ್ವಾಸಾರ್ಹತೆ ತರಲು ಒಂದು ಪ್ರತ್ಯೇಕ ಪರಿಶೋಧನೆ (ಆಡಿಟ್) ವ್ಯವಸ್ಥೆ ಇರುವುದು ಅಗತ್ಯ ಎಂದು ಅರ್ಜಿದಾರರ ಪರವಾಗಿ ಭಾಗವಹಿಸಿದ್ದ ಇನ್ನೊಬ್ಬ ವಕೀಲ ಸಂಜಯ್ ಹೆಗ್ಡೆ ಕೂಡ ಪ್ರತಿಪಾದಿಸಿದರು.

    ಇವಿಎಂ ತಯಾರಕರಿಗೂ ಗೊತ್ತಿರದು: ಯಾವ ಗುಂಡಿಯನ್ನು (ಬಟನ್) ಯಾವ ಪಕ್ಷಕ್ಕೆ ನಿಯೋಜಿಸಲಾಗುತ್ತದೆ ಅಥವಾ ಯಾವ ಯಂತ್ರವನ್ನು ಯಾವ ರಾಜ್ಯ ಅಥವಾ ಕ್ಷೇತ್ರಕ್ಕೆ ಹಂಚಿಕೆ ಮಾಡಲಾಗುತ್ತದೆ ಎನ್ನುವುದು ಇವಿಎಂ ತಯಾರಿಸುವ ಕಂಪನಿಗೆ ಕೂಡ ಗೊತ್ತಿರುವುದಿಲ್ಲ ಎಂದು ಕೋರ್ಟ್​ಗೆ ಆಯೋಗ ವಿವರಿಸಿತು. ಚುನಾವಣೆಗೂ ಏಳು ದಿನದ ಮುನ್ನ, ಚಿಹ್ನೆಗಳ ಚಿತ್ರಗಳನ್ನು ವಿವಿಪ್ಯಾಟ್ ಯಂತ್ರದ 4 ಎಂಬಿ ಫ್ಲ್ಯಾಷ್ ಮೆಮರಿಗೆ ಅಪ್​ಲೋಡ್ ಮಾಡಲಾಗುತ್ತದೆ. ಅಭ್ಯರ್ಥಿಗಳು ಅಥವಾ ಅವರ ಪ್ರತಿನಿಧಿಗಳ ಸಮ್ಮುಖದಲ್ಲಿ ಈ ಪ್ರಕ್ರಿಯೆ ನಡೆಯುತ್ತದೆ.

    ಚುನಾವಣಾ ಆಯೋಗದ ವಾದ ಏನು?: ಮತದಾನದ ನಂತರ ವಿವಿಪ್ಯಾಟ್ ಸ್ಲಿಪ್​ಅನ್ನು ಮತದಾರ ಪಡೆಯಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಆಯೋಗ, ಹಾಗೆ ಮಾಡಿದರೆ ಮತದಾನದ ಗೋಪ್ಯತೆಯೊಂದಿಗೆ ರಾಜಿ ಮಾಡಿಕೊಂಡಂತಾಗುತ್ತದೆ. ಬೂತ್​ನ ಹೊರಗಡೆ ದುರುಪಯೋಗ ಆಗಬಹುದು ಎಂದಿತು. ಆದರೆ, ಇತರರು ಅದನ್ನು ಹೇಗೆ ಬಳಸುತ್ತಾರೆ ಎನ್ನುವುದನ್ನು ಹೇಳಲಾಗದು ಎಂದೂ ಹೇಳಿತು.

    ಬದಲಾವಣೆ ಅಸಾಧ್ಯ: ಫರ್ಮ್​ವೇರ್ ಮತ್ತು ಪ್ರೋಗ್ರಾಂ ಮೇಲೆ ಕಾರ್ಯ ನಿರ್ವಹಿಸುವ ಮತ ಯಂತ್ರಗಳನ್ನು ಬದಲಾಯಿಸಲು ಆಗುವುದಿಲ್ಲ. ಇವಿಎಂಗಳನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಸ್ಟ್ರಾಂಗ್​ರೂಮ್ಳಲ್ಲಿ ಭದ್ರಪಡಿಸಿ ಇಡಲಾಗುತ್ತದೆ ಎಂದು ವಿವರಿಸಲಾಯಿತು.

    ಆಯೋಗದ ವಿವರಣೆ: ವಿವಿಪ್ಯಾಟ್ ಘಟಕವು ಕಾಗದದ ಸ್ಲಿಪ್ ಮುದ್ರಿಸುವ ನಿಯಂತ್ರಣವನ್ನು ಇವಿಎಂನ ಕಂಟ್ರೋಲ್ ಕಮಾಂಡ್ ಹೊಂದಿರುತ್ತದೆ ಎಂದು ಕೋರ್ಟ್​ಗೆ ಆಯೋಗದ ಪ್ರತಿನಿಧಿ ಹೇಳಿದರು. ಈ ಸ್ಲಿಪ್ ಅಂತಿಮವಾಗಿ ಸೀಲ್ ಮಾಡಲಾದ ಪೆಟ್ಟಿಗೆಯಲ್ಲಿ ಬೀಳುವ ಮುನ್ನ ಮತದಾರರಿಗೆ 7 ಸೆಕೆಂಡ್ ಕಾಲ ಕಾಣಿಸುತ್ತದೆ. ಯಂತ್ರಗಳನ್ನು ಮತದಾನಕ್ಕೂ ಮುನ್ನ ಎಂಜಿನಿಯರ್​ಗಳ ಸಮ್ಮುಖದಲ್ಲಿ ಪರಿಶೀಲಿಸಲಾಗುತ್ತದೆ ಎಂದರು. ವಿವಿಪ್ಯಾಟ್ ಪ್ರಿಂಟರ್​ನಲ್ಲಿ ಯಾವುದಾದರೂ ಸಾಫ್ಟ್​ವೇರ್ ಇರುತ್ತದೆಯೇ ಎಂದು ಕೋರ್ಟ್ ಪ್ರಶ್ನಿಸಿದಾಗ, ಇಲ್ಲವೆಂದು ಆಯೋಗ ಉತ್ತರಿಸಿತು.

    ಎಲ್​ಡಿಎಫ್ ದೂರು: ಕೇರಳದ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ನಡೆಸಲಾದ ಅಣಕು ಮತದಾನದ ವೇಳೆ ಇವಿಎಂನಲ್ಲಿ ದಾಖಲಾದ ಮತವು ತಪ್ಪಾಗಿ ಬಿಜೆಪಿ ಅಭ್ಯರ್ಥಿಗೆ ಹೋಗುತ್ತಿದೆ ಎಂದು ಮಾರ್ಕ್ಸ್​ವಾದಿ ಕಮ್ಯೂನಿಸ್ಟ್ ಪಕ್ಷ ನೇತೃತ್ವದ ಎಲ್​ಡಿಎಫ್ ಆರೋಪಿಸಿದೆ. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ ಎಂದು ಹಿರಿಯ ಸಿಪಿಐ (ಎಂ) ಮುಖಂಡ ಕೆ.ಪಿ. ಸತೀಶ್ಚಂದ್ರನ್ ತಿಳಿಸಿದ್ದಾರೆ. ಎರಡರಿಂದ ಮೂರು ಮತಯಂತ್ರಗಳಲ್ಲಿ ಈ ರೀತಿಯ ದೋಷ ಕಂಡು ಬಂದಿರುವುದಾಗಿ ಅವರು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts