ಇಷ್ಟದ ಬಟ್ಟೆ ಧರಿಸಲು ಬಿಡುತ್ತಿಲ್ಲ: ತಾಯಿಯ ವಿರುದ್ಧ ಪೊಲೀಸ್​ ಠಾಣೆಯ ಮೆಟ್ಟಿಲೇರಿದ ಬಾಲಕ!

Boys Complaint
Published on

ವಿಶಾಖಪಟ್ಟಣಂ: ನನ್ನಿಷ್ಟದ ಬಟ್ಟೆ ಧರಿಸಲು ಬಿಡುತ್ತಿಲ್ಲ ಎಂದು ಆರೋಪಿಸಿ ಬಾಲಕನೊಬ್ಬ ತನ್ನ ಮಲತಾಯಿ ವಿರುದ್ಧ ಪೊಲೀಸ್​ ಠಾಣೆಯ ಮೆಟ್ಟಿಲೇರಿರುವ ಘಟನೆ ಆಂಧ್ರ ಪ್ರದೇಶದ ಎಲ್ಲೂರು ಜಿಲ್ಲೆಯ ಕೊತ್ತಪೇಟೆಯಲ್ಲಿ ನಡೆದಿದೆ.

ಬಾಲಕ ದಿನೇಶ್​ ಅವರ ತಾಯಿ ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಅವರ ತಂದೆ ಮರು ಮದುವೆ ಆಗಿದ್ದು, ಅಂದಿನಿಂದ ದಿನೇಶ್​ಗೆ ಸಮಸ್ಯೆಗಳು ಆರಂಭವಾಗಿವೆಯಂತೆ. ಆಗಾಗ ದಿನೇಶ್​ ಅವರ ಮಲತಾಯಿ ಕಿರುಕುಳ ನೀಡುತ್ತಿದ್ದಾರೆ ಎಂದು ಬಾಲಕ ಆರೋಪಿಸಿದ್ದಾನೆ.

ಇತ್ತೀಚೆಗೆ ದಿನೇಶ್​ ಸ್ನೇಹಿತನ ಹುಟ್ಟುಹಬ್ಬ ಆಚರಣೆ ನಡೆಯಿತು. ಈ ಸಮಾರಂಭಕ್ಕೆ ತೆರಳಲು ದಿನೇಶ್​ ಸಿದ್ಧತೆ ಮಾಡಿಕೊಳ್ಳುತ್ತಿದ್ದನು. ಬಿಳಿ ಶರ್ಟ್​ ಕೊಡುವಂತೆ ಮಲತಾಯಿಯನ್ನು ಕೇಳಿದ್ದಾನೆ. ಆದರೆ, ಆಕೆ ಬಟ್ಟೆ ಕೊಡಲು ನಿರಾಕರಿಸಿದ್ದಲ್ಲದೆ, ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಹೋಗದಂತೆ ಬೆದರಿಕೆ ಹಾಕಿದ್ದಾಳೆ. ಇದರಿಂದ ಬೇಸರಗೊಂಡ ಬಾಲಕ ಬಟ್ಟೆ ಧರಿಸದೇ ಕೇವಲ ಟವೆಲ್​ನಲ್ಲೇ ಸೀದಾ ಎಲ್ಲೂರು ಟೌನ್​ ಪೊಲೀಸ್​ ಠಾಣೆಗೆ ತೆರಳಿ ಮಲತಾಯಿಯ ವಿರುದ್ಧ ದೂರು ನೀಡಿದ್ದಾನೆ.

ಬಾಲಕನ ಮಾತು ಕೇಳಿ ಪೊಲೀಸರೇ ಒಂದು ಕ್ಷಣ ಹುಬ್ಬೇರಿಸಿದರು. ಬಳಿಕ ಸರ್ಕಲ್​ ಇನ್ಸ್​ಪೆಕ್ಟರ್​ ಪಿ. ಚಂದ್ರಶೇಖರ್​ ಅವರು ತಕ್ಷಣ ಬಾಲಕನ ಪಾಲಕರನ್ನು ಠಾಣೆಗೆ ಕರೆಸಿ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ. ದಿನೇಶ್​ ಕಡೆಗಿನ ನಿಮ್ಮ ವರ್ತನೆಯನ್ನು ಬದಲಸಿಕೊಳ್ಳಿ ಎಂದು ಮಲತಾಯಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಹಾಗೇ ಪಾಲಕರ ಜೊತೆ ವಿನಯದಿಂದ ಮಾತನಾಡುವಂತೆ ದಿನೇಶ್​ಗೆ ಪೊಲೀಸರು ಹೇಳಿ ಕಳುಹಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net