

ನವದೆಹಲಿ: ಭಾರತೀಯ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಎಲೆಕ್ಟೋರಲ್ ಬಾಂಡ್ ಮಹತ್ವದ ಸಂಗತಿಯಾಗಿದ್ದು, ಇತ್ತೀಚೆಗೆ ಇದು ಬಹಳ ಚರ್ಚೆಯಲ್ಲಿದೆ. ಈ ಮಧ್ಯೆ ಇದಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ಮಹತ್ವದ ನಿರ್ದೇಶನವನ್ನು ನೀಡಿದೆ.
ರಾಜಕೀಯ ಪಕ್ಷಗಳಿಗೆ ಎಲೆಕ್ಟೋರಲ್ ಬಾಂಡ್ ನೀಡುವ ಕುರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ನಲ್ಲಿ ಇಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರನ್ನೊಳಗೊಂಡ ಪಂಚಸದಸ್ಯ ಪೀಠ ವಿಚಾರಣೆ ನಡೆಸಿದೆ.
ರಾಜಕೀಯ ಪಕ್ಷಗಳಿಗೆ ಎಲೆಕ್ಟೋರಲ್ ಬಾಂಡ್ಗಳ ಮೂಲಕ ಅನಾಮಧೇಯವಾಗಿ ಫಂಡ್ ಸ್ವೀಕರಿಸುವಂಥ ಕೇಂದ್ರ ಸರ್ಕಾರದ ಎಲೆಕ್ಟೋರಲ್ ಬಾಂಡ್ ಸ್ಕೀಮ್ಗೆ ಸಂಬಂಧಿಸಿದಂತೆ ವಾದಗಳನ್ನು ಆಲಿಸಿರುವ ಪೀಠ ತನ್ನ ತೀರ್ಪನ್ನು ಕಾಯ್ದಿರಿಸಿದೆ.
ಆದರೆ ಭಾರತೀಯ ಚುನಾವಣಾ ಆಯೋಗಕ್ಕೆ ಮಹತ್ವದ ನಿರ್ದೇಶನವೊಂದನ್ನು ನೀಡಿದೆ. ಎಲ್ಲ ರಾಜಕೀಯ ಪಕ್ಷಗಳು ಸೆ. 30ರ ವರೆಗೆ ಎಲೆಕ್ಟೋರಲ್ ಬಾಂಡ್ ರೂಪದಲ್ಲಿ ಸ್ವೀಕರಿಸಿರುವ ಫಂಡ್ ವಿವರವನ್ನು ಮುಚ್ಚಿದ ಲಕೋಟೆಯಲ್ಲಿ 2 ವಾರಗಳ ಒಳಗಾಗಿ ನೀಡುವಂತೆ ಆಯೋಗಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.
ಸಿಜೆಐ ಡಿ.ವೈ. ಚಂದ್ರಚೂಡ್ ಅವರ ಜೊತೆಗೆ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ.ಆರ್. ಗವಾಯ್, ಜೆ.ಬಿ. ಪರ್ಡಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪಂಚಪೀಠ ಈ ನಿರ್ದೇಶನವನ್ನು ನೀಡಿದೆ.