More

    ಪ್ರತ್ಯೇಕ ವಿವಿ ಸಕಾಲಿಕ ಚಿಂತನೆ: ಮೀನುಗಾರರ ಮಕ್ಕಳಿಗೆ ಶೈಕ್ಷಣಿಕ ಪ್ರಗತಿಗೆ ನೆರವು

    ಮೀನುಗಾರರ ಹಿತದೃಷ್ಟಿಯಿಂದ ಪ್ರತ್ಯೇಕ ವಿವಿ ಸ್ಥಾಪನೆ, ಪ್ರತ್ಯೇಕ ಸಚಿವಾಲಯ, ಮಾರುಕಟ್ಟೆ ಒದಗಿಸಲು ಮತ್ಸ್ಯವಾಹಿನಿ, ವಾಣಿಜ್ಯ ಬಂದರುಗಳ ನಿರ್ವಣದಂತಹ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಕರ್ನಾಟಕ ರಾಜ್ಯವನ್ನು ಮೀನುಗಾರಿಕೆಯಲ್ಲಿ ಮೊದಲ ಸ್ಥಾನಕ್ಕೆ ತರುವ ಚಿಂತನೆ ಮಾಡಿರುವುದು ಮೀನುಗಾರರನ್ನು ಆರ್ಥಿಕವಾಗಿ ಸಶಕ್ತಗೊಳಿಸುವ ನಿಟ್ಟಿನಲ್ಲಿ ಸೂಕ್ತ ಹಾಗೂ ಸಕಾಲಿಕ ಚಿಂತನೆಯಾಗಿದೆ.

    ಬೀದರ್​ನಲ್ಲಿರುವ ಪಶು ಸಂಗೋಪನೆ ಮತ್ತು ಮೀನುಗಾರಿಕೆ ವಿಶ್ವವಿದ್ಯಾಲಯದಡಿ ಈಗ ಮಂಗಳೂರಿನಲ್ಲಿ ಮೀನುಗಾರಿಕೆ ಕಾಲೇಜು ಕಾರ್ಯನಿರ್ವಹಿಸುತ್ತಿದೆ. ಮೀನುಗಾರಿಕೆಗೆ ಪ್ರತ್ಯೇಕ ವಿವಿ ಆರಂಭಿಸಿದರೆ ಮೀನುಗಾರರಿಗೆ ಸಹಾಯವಾಗಬಹುದು ಎನ್ನುವ ಉದ್ದೇಶದಿಂದ ಪ್ರತ್ಯೇಕ ವಿವಿ ಆಲೋಚನೆ ಮತ್ತು ಕಾರವಾರದಲ್ಲಿ ಮೀನುಗಾರಿಕೆ ಕಾಲೇಜು ಆರಂಭದಂತಹ ನಿರ್ಧಾರಗಳು ಪೂರಕವಾಗಿವೆ.

    ಸ್ವತಃ ಮೀನುಗಾರಿಕೆ ವೃತ್ತಿಯಿಂದ ಬಂದಿರುವ ಸಚಿವ ಮಂಕಾಳ ವೈದ್ಯ ಅವರು ಅನುಭವದ ಆಧಾರದ ಮೇಲೆ ಯೋಜನೆಗಳನ್ನು ರೂಪಿಸಿರುವುದರಿಂದ ಮೀನುಗಾರರ ಅಭಿವೃದ್ಧಿಗೆ ಇವುಗಳು ಪೂರಕವಾಗಿಯೇ ಇರುತ್ತವೆ ಎಂದು ನಿರೀಕ್ಷಿಸಬಹುದಾಗಿದೆ. ‘ವಿಜಯವಾಣಿ’ ಆಯೋಜಿಸಿದ್ದ ಸಂವಾದದಲ್ಲಿ ಈ ನಿಟ್ಟಿನಲ್ಲಿ ಉದ್ದೇಶಿತ ಯೋಜನೆಗಳನ್ನು ಹಂಚಿಕೊಂಡ ಅವರು, ಗುರಿ ಕೇವಲ ಮಾತಿಗೆ ಸೀಮಿತವಾಗದಿರಬಾರದು ಎಂಬ ಕಾರಣಕ್ಕಾಗಿ ಕಾರ್ಯಸಾಧುವಾದ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುವ ಸಂಕಲ್ಪ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

    ಇಲಾಖೆಯಿಂದ ಸರ್ಕಾರಕ್ಕೆ ಆದಾಯದ ಮೂಲ ಕಂಡುಕೊಳ್ಳುವುದಕ್ಕಿಂತ ಮೀನುಗಾರರನ್ನು ಆರ್ಥಿಕವಾಗಿ ಮೇಲಕ್ಕೆತ್ತುವ ಆಶಯ ಅವರದ್ದಾಗಿದೆ. ಮೂರು ವಾಣಿಜ್ಯ ಬಂದರುಗಳನ್ನು ನಿರ್ಮಾಣ ಮಾಡುವ ಸಂಕಲ್ಪ ಮಾಡಿದ್ದಾರೆ. ಒಂದೊಂದು ಬಂದರು ಸಾವಿರಾರು ಮೀನುಗಾರ ಕುಟುಂಬಗಳಿಗೆ ಬದುಕು ಕಟ್ಟಿಕೊಡಲಿದೆ. ಪ್ರತಿ ಬಂದರಿನಿಂದ ಸರ್ಕಾರಕ್ಕೂ ಒಂದು ಕೋಟಿ ರೂ. ಆದಾಯ ಬರಲಿದೆ. ಈ ಆದಾಯವನ್ನೂ ಮೀನುಗಾರರ ಹಿತರಕ್ಷಣೆಗೆ ಪೂರಕವಾಗಿ ವಿನಿಯೋಗ ಮಾಡುವ ಚಿಂತನೆಯೂ ಅವರದ್ದಾಗಿದೆ. ಮೀನುಗಾರರ ಮಕ್ಕಳು ಮೀನುಗಾರಿಕೆಯಲ್ಲೇ ಮುಂದುವರಿಯಬೇಕು ಎಂಬುದಕ್ಕಿಂತ ಶೈಕ್ಷಣಿಕ ಮುಖ್ಯವಾಹಿನಿಗೆ ಸೇರ್ಪಡೆಯಾಗಿ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಪೂರಕವಾಗುವಂತೆ ಯೋಜನೆ ರೂಪಿಸಲು ಮುಂದಾಗಿರುವುದು ಮಹತ್ವದ ಸಂಗತಿಯಾಗಿದೆ.

    ಮೀನುಗಾರಿಕೆ ನಾಡ ದೋಣಿಗಳಿಗೆ ಹೈಬ್ರಿಡ್ ಇಂಜಿನ್ ಒದಗಿಸುವ ಚಿಂತನೆಯಿಂದ ಇಂಧನ ಸಮಸ್ಯೆಗೆ ಸ್ವಲ್ಪ ಪರಿಹಾರ ಸಿಗಬಹುದು. ರಾಜ್ಯದಲ್ಲಿ ಅಂದಾಜು ಎಂಟು ಸಾವಿರ ನಾಡ ದೋಣಿಗಳು ಸೀಮೆ ಎಣ್ಣೆ ಅವಲಂಬಿಸಿವೆ. ಪ್ರಸ್ತುತ ಸೀಮೆ ಎಣ್ಣೆ ಸಬ್ಸಿಡಿಗೆಂದು ಸರ್ಕಾರ ವರ್ಷಕ್ಕೆ 100 ಕೋಟಿ ರೂ. ವೆಚ್ಚ ಮಾಡುತ್ತಿದೆ, ಹೀಗಾಗಿ ಸರ್ಕಾರದಿಂದಲೇ ಹೈಬ್ರಿಡ್ ಇಂಜಿನ್ ಖರೀದಿಸುವ ಹಾಗೂ ಕಂಪನಿಗಳು ಮುಂದೆ ಬಂದರೆ ಸರ್ಕಾರ ಬೆಂಬಲವಾಗಿ ನಿಲ್ಲುವ ಆಲೋಚನೆ ಉತ್ತಮವಾದುದಾಗಿದೆ.

    ಯಾವುದಕ್ಕೂ ನಾಳೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದಾ?; ವ್ಯಕ್ತಿಯೊಬ್ಬರಿಂದ ಆತಂಕಕಾರಿ ಪೋಸ್ಟ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts