More

    ನಾಡಿನತ್ತ ಮತ್ತೆ ಕಾಡಾನೆಗಳ ಹಿಂಡು

    ಚಿಕ್ಕಮಗಳೂರು: ಕಾಫಿ ನಾಡಿನಲ್ಲಿ ಒಂದು ತಿಂಗಳಿನಿಂದ ಕಡಿಮೆಯಾಗಿದ್ದ ಕಾಡಾನೆ ಹಾವಳಿ ಮತ್ತೆ ಆರಂಭಗೊಂಡಿದೆ. ಕಾಡಿನಲ್ಲಿದ್ದ ಆನೆಗಳು ಒಂದೊಂದಾಗಿ ನಾಡಿನತ್ತ ಬರಲಾರಂಭಿಸಿದ್ದು, ಕಾರ್ಮಿಕರು ಹಾಗೂ ಎಸ್ಟೇಟ್ ಮಾಲೀಕರಲ್ಲಿ ಜೀವಭಯ ಹುಟ್ಟಿಸಿವೆ.
    ಮೂಡಿಗೆರೆ, ಆಲ್ದೂರು ಹಾಗೂ ಚಿಕ್ಕಮಗಳೂರು ಭಾಗದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಲಾರಂಭಿಸಿದೆ. ಪ್ರಸಕ್ತ ವರ್ಷವೇ ಆಲ್ದೂರು ಭಾಗದಲ್ಲಿಯೇ ಕಾಡಾನೆ ದಾಳಿಗೆ ಮೂವರು ಪ್ರಾಣ ತೆತ್ತಿದ್ದಾರೆ. ಇದೀಗ ಮತ್ತೆ ಕಾಡಾನೆಗಳ ಹಾವಳಿ ಆರಂಭಗೊಂಡಿರುವುದು ಜನರಲ್ಲಿ ಮತ್ತೆ ಆತಂಕ ಉಂಟು ಮಾಡಿದೆ.
    ಕಂಚಿನಕಲ್ಲು ದುರ್ಗ ಹಾಗೂ ಸಾರಗೋಡು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ 20ರಿಂದ 24 ಕಾಡಾನೆಗಳು ಇರುವ ಸಾಧ್ಯತೆ ಇದೆ. ಈ ಆನೆಗಳು ಹಲವು ವರ್ಷಗಳಿಂದ ಇವೆ. ಅರಣ್ಯ ವ್ಯಾಪ್ತಿಯಲ್ಲಿಯೇ ವಾಸಿಸುತ್ತಿದ್ದು ಆಗಾಗ ಕಾಡಿನಿಂದ ನಾಡಿನತ್ತ ಬಂದು ದಾಳಿ ಮಾಡುತ್ತಿವೆ. ಇದೀಗ ಕಂಚಿನಕಲ್ಲು ದುರ್ಗದಿಂದ ಆನೆಯೊಂದು ನಾಡಿನತ್ತ ಬಂದ ಪರಿಣಾಮ ಕಾರ್ಮಿಕನೋರ್ವ ಪ್ರಾಣ ಕಳೆದುಕೊಂಡಿದ್ದಾನೆ.
    ಕಂಚಿನಕಲ್ಲು ದುರ್ಗಾ ಹಾಗೂ ಸಾರಗೋಡು ಅರಣ್ಯ ಪ್ರದೇಶದಲ್ಲಿರುವ ಆನೆಗಳು ಮುಂಗಾರು ಆರಂಭ ಪೂರ್ವ ಹಾಗೂ ಮುಂಗಾರು ವೇಳೆಯಲ್ಲಿ ಸಾಮಾನ್ಯವಾಗಿ ಕಾಡಿನಿಂದ ನಾಡಿನತ್ತ ಆಗಮಿಸುತ್ತವೆ. ಪ್ರಮುಖವಾಗಿ ಬೈನೆ, ಬಾಳೆ, ಹಲಸು ಅರಸಿ ನಾಡಿನತ್ತ ಒಂಟಿಯಾಗಿಯೇ ಬರುವ ಆನೆಗಳು ಎದುರು ಸಿಕ್ಕವರ ಮೇಲೆ ದಾಳಿ ನಡೆಸಲು ಹಿಂದೇಟು ಹಾಕುವುದಿಲ್ಲ. ಇದೇ ಕಾರಣದಿಂದಾಗಿಯೇ ಕೆಸುವಿನಕಲ್ ಕಾಫಿ ಎಸ್ಟೇಟ್‌ನಲ್ಲಿ ಕಾರ್ಮಿಕನ ಮೇಲೆ ಕಾಡಾನೆ ದಾಳಿ ನಡೆಸಿರುವ ಸಾಧ್ಯತೆ ಇದೆ.
    ಬೇಸಿಗೆಯಲ್ಲಿ ಕಾಡಿನ ಮಧ್ಯದಲ್ಲಿಯೇ ಇರುವ ಆನೆಗಳು ಪ್ರತಿವರ್ಷವೂ ಮುಂಗಾರು ಆರಂಭಕ್ಕೆ ಮುನ್ನ ನಾಡಿನತ್ತ ಬರಲಾರಂಭಿಸುತ್ತವೆ. ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆಯುವ ವಿವಿಧ ಬೆಳೆಗಳನ್ನು ಅರಸಿ ಆನೆಗಳು ಕಾಡಿನಿಂದ ಈ ಅವಧಿಯಲ್ಲಿ ಹೊರಗೆ ಬರುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ಎಸ್ಟೇಟ್ ಮಾಲೀಕರು ಹಾಗೂ ಕೂಲಿ ಕಾರ್ಮಿಕರು ಮತ್ತು ಸ್ಥಳೀಯ ನಿವಾಸಿಗಳು ಎಚ್ಚರದಿಂದ ಓಡಾಡಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts