ಬೆಂಗಳೂರು: ಪೇಯಿಂಗ್ ಗೆಸ್ಟ್‌ನಲ್ಲಿ ರೂಮ್ ಬುಕ್ ಮಾಡುವ ನೆಪದಲ್ಲಿ ಪಿಜಿ ಮಾಲೀಕನಿಗೆ ಸೈಬರ್ ಕಳ್ಳರು 60 ಸಾವಿರ ರೂ. ವಂಚನೆ ಮಾಡಿದ್ದಾರೆ. ಶಾಂತಿನಗರದ ಪೇಯಿಂಗ್ ಗೆಸ್ಟ್ ಮಾಲೀಕ ಸತೀಶ್ ವಂಚನೆಗೆ ಒಳಗಾದವರು. ಕೇಂದ್ರ ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದು, ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಿಜಿ ಮಾಲೀಕರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ರೂಮ್ ಬುಕ್ ಮಾಡಬೇಕಿದೆ ಎಂದು ಕೇಳಿದ್ದಾರೆ. ಅದಕ್ಕೆ ಸತೀಶ್, ಬುಕ್ಕಿಂಗ್ ಶುಲ್ಕ 20 ಸಾವಿರ ರೂ. ಪಾವತಿಸಬೇಕೆಂದು ಹೇಳಿದ್ದಾರೆ. ಈ ಮೇರೆಗೆ ಅಪರಿಚಿತ ವ್ಯಕ್ತಿ 30 ಸಾವಿರ ರೂ. ಅನ್ನು ವ್ಯಾಲೆಟ್‌ನಲ್ಲಿ ವರ್ಗಾವಣೆ ಮಾಡಿರುವುದಾಗಿ ಮೊಬೈಲ್ ಸ್ಕ್ರೀನ್ ಶಾಟ್ ತೆಗೆದು ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿದ್ದ.
ಸ್ವಲ್ಪ ಹೊತ್ತಿಗೆ ಮತ್ತೆ ಕರೆ ಮಾಡಿ 10 ಸಾವಿರ ರೂ. ಹೆಚ್ಚಾಗಿ ವರ್ಗಾವಣೆ ಮಾಡಿದ್ದೇನೆ. ವಾಪಸ್ ಹೆಚ್ಚುವರಿ ಹಣ ಕಳುಹಿಸುವಂತೆ ಮನವಿ ಮಾಡಿದ್ದ. ಇದನ್ನು ನಂಬಿದ ಸತೀಶ್, ಅಪರಿಚಿತ ವ್ಯಕ್ತಿಯ ಮೊಬೈಲ್ ನಂಬರ್‌ಗೆ ವಾಪಸ್ 10 ಸಾವಿರ ರೂ. ಕಳುಹಿಸಿದ್ದರು. ಮತ್ತೆ ತುರ್ತಾಗಿ ಹಣ ಬೇಕಾಗಿದೆ ಎಂದು ಸಬೂಬು ಹೇಳಿ 50 ಸಾವಿರ ರೂ. ಅನ್ನು ಪೇಯಿಂಗ್ ಗೆಸ್ಟ್ ಮಾಲೀಕನ ಕಡೆಯಿಂದ ಪಡೆದು ಮೋಸ ಮಾಡಿದ್ದಾನೆ. ಈ ಬಗ್ಗೆ ಸಂತ್ರಸ್ತ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.